ಈ ಫಾರ್ಮ್‌ನಲ್ಲಿ ಕ್ಲಿಕ್ಕುಗಳು, ವ್ಯೂಗಳು ಬೆಳೆಯುತ್ತವೆ!

ಹಳ್ಳಿಯ ಜನ ಸಿಕ್ಕರೆ ನಾವು ಅವರನ್ನು ಮಾತಿಗೆಳೆಯುತ್ತಾ ನಿಮ್ಮ ಹೊಲದಲ್ಲಿ ಏನು ಬೆಳೆಯುತ್ತೀರಿ ಎಂದು ಕೇಳುತ್ತೇವೆ. ಅವರು ಹೊಲದಲ್ಲಿ ಬೆಳೆಯುವುದನ್ನು ಹೇಳುತ್ತಾ ಹೋಗುತ್ತಾರೆ. ಅದೇ ರೀತಿ ಡಿಜಿಟಲ್ ಜಗತ್ತಿನಲ್ಲಿಯೂ ಒಂದಷ್ಟು ಫಾರ್ಮ್‌ಗಳಿವೆ. ಅಲ್ಲೂ ಒಂದಷ್ಟು ಬೆಳೆಯುತ್ತವೆ ಎಂಬುದನ್ನು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು!
ಡಿಜಿಟಲ್‌ನಲ್ಲಿ ಇರುವ ಈ ಫಾರ್ಮ್‌ಗಳಿಗೆ ಕ್ಲಿಕ್ ಫಾರ್ಮ್‌ಗಳು ಎನ್ನುತ್ತೇವೆ. ಅದ್ಯಾವುದೋ ಸಿನಿಮಾ ಟ್ರೇಲರು ಬಿಡುಗಡೆಯಾದ ಎರಡು ಗಂಟೆಯಲ್ಲಿ ಎಷ್ಟೋ ಕೋಟಿ ವ್ಯೂಸ್ ಬಂತು, ಇದ್ಯಾವುದೋ ಸಿನಿಮಾ ಪೋಸ್ಟರ್ ರಿಲೀಸ್ ಆದ ಹಾಗೆಯೇ ಎರಡು ತಾಸಿನಲ್ಲಿ ಎಷ್ಟೋ ಲಕ್ಷ ಲೈಕ್ಸ್ ಬಂತು ಅಂತೆಲ್ಲ ಪ್ರಚಾರ ನೋಡಿ ಸಿನಿಮಾ ಭಯಂಕರ ಜನಪ್ರಿಯವಾಗಲಿದೆ ಎಂದು ನೀವು ಊಹಿಸಿಕೊಂಡಿರೋ ಈ ಕ್ಲಿಕ್ ಫಾರ್ಮ್‌ನ ಮೋಸಕ್ಕೆ ಬಲಿಬಿದ್ದಿರೆಂದೇ ಅರ್ಥ!
ಈ ಕ್ಲಿಕ್ ಫಾರ್ಮ್‌ಗಳಲ್ಲಿ ಲೈಕ್‌ಗಳು, ವ್ಯೂಸ್, ಪೋಸ್ಟ್ ಶೇರ್ ಮಾಡುವುದು, ರಿಟ್ವೀಟ್ ಮಾಡುವುದು ಸೇರಿದಂತೆ ಎಲ್ಲ ಕೆಲಸಗಳೂ ನಡೆಯುತ್ತವೆ. ಇಲ್ಲಿ ಒಂದು ಲೈಕ್‌ಗೆ, ಒಂದು ವ್ಯೂಗೆ, ಒಂದು ಪೋಸ್ಟ್ ಶೇರ್‌ಗೆ ಇಂತಿಷ್ಟು ದುಡ್ಡು ಎಂಬಂತೆ ದರ ನಿಗದಿಯಾಗಿರುತ್ತದೆ.
ಕ್ಲಿಕ್ ಫಾರ್ಮ್ ಹೇಗೆ ಕೆಲಸ ಮಾಡುತ್ತದೆ ?
ಕ್ಲಿಕ್ ಫಾರ್ಮ್‌ಗಳಲ್ಲಿ ಸಾಮಾನ್ಯವಾಗಿ ಎರಡು ವಿಧಗಳು. ಬಡ ದೇಶಗಳಲ್ಲಿ ಸ್ಥಾಪನೆಯಾಗುವ ಈ ಕ್ಲಿಕ್ ಫಾರ್ಮ್‌ಗಳಲ್ಲಿ ಸಾವಿರಾರು ಮೊಬೈಲ್ ಫೋನ್‌ಗಳನ್ನು ಇಟ್ಟುಕೊಂಡು, ಅದನ್ನು ಆಪರೇಟ್ ಮಾಡುವುದಕ್ಕೆ ಒಂದಷ್ಟು ಕಡಿಮೆ ಸಂಬಳಕ್ಕೆ ಕೂಲಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಅವರು ಈ ಎಲ್ಲ ಕೆಲಸಗಳನ್ನೂ ಮಾಡುತ್ತಾರೆ. ಇನ್ನೊಂದು ಸ್ವಲ್ಪ ಸುಧಾರಿತ ದೇಶಗಳಲ್ಲಿ ಸ್ಥಾಪನೆಯಾಗುವ ಕ್ಲಿಕ್ ಫಾರ್ಮ್‌ಗಳಲ್ಲಿ ವ್ಯಕ್ತಿಗಳ ಬದಲಿಗೆ ರೊಬೊಗಳು ಈ ಕೆಲಸ ಮಾಡುತ್ತವೆ. ಮೊಬೈಲ್‌ನಲ್ಲಿ ಅಕೌಂಟನ್ನು ತೆರೆದುಕೊಡಲಾಗುತ್ತದೆ. ಆ ಅಕೌಂಟ್‌ನಿಂದ ಲೈಕ್, ವ್ಯೂ, ಶೇರ್ ಎಲ್ಲವೂ ಮಾಡಲಾಗುತ್ತದೆ.
ಈ ಮೊಬೈಲ್ ಫೋನ್‌ಗಳು ಒಂದೇ ದೇಶದವು ಅಂತ ಗೊತ್ತಾಗದ ಹಾಗೆ ಪ್ರಾಕ್ಸಿ ಸರ್ವರ್‌ಗಳನ್ನು ಬಳಸಲಾಗುತ್ತದೆ ಮತ್ತು ಐಪಿ ಅಡ್ರೆಸ್‌ಗಳನ್ನು ಮರೆ ಮಾಡಲಾಗುತ್ತದೆ. ಬೇರೆ ದೇಶದಿಂದ ಲೈಕ್, ವ್ಯೂ ವಿಪರೀತ ಬಂದಾಕ್ಷಣ ಅನುಮಾನ ಬಂದು ಆ ಪೋಸ್ಟ್ ಅನ್ನು ಹೈಡ್ ಮಾಡಬಹುದಾದ ಸಾಧ್ಯತೆ ಇರುವುದರಿಂದ ಈ ವಿಧಾನವನ್ನು ಬಳಕೆ ಮಾಡಲಾಗುತ್ತದೆ.
ಇದಕ್ಕೆ ಕಾನೂನಿನ ಮಾನ್ಯತೆ ಇದೆಯೇ?
ಖಂಡಿತ ಅಲ್ಲ. ಯಾವ ದೃಷ್ಟಿಕೋನದಿಂದ ನೋಡಿದರೂ ಇದು ನೈತಿಕವಲ್ಲ. ಬಹುತೇಕ ದೇಶಗಳು ಇದನ್ನು ನಿಷೇಧಿಸಿವೆ. ಆದರೆ, ಡೇಟಾ ಕಾನೂನುಗಳು ಇನ್ನೂ ಕಟ್ಟುನಿಟ್ಟಾಗಿ ಇಲ್ಲದ ಹಲವು ದೇಶಗಳಿವೆ. ಅವುಗಳಲ್ಲಿ ಇವು ಯಥೇಚ್ಛವಾಗಿ ಕೆಲಸ ಮಾಡುತ್ತಿವೆ. 2017 ರಲ್ಲಿ ಥಾಯ್ಲೆಂಡ್‌ನಲ್ಲಿ ಅಲ್ಲಿನ ಪೊಲೀಸ್ ಇಲಾಖೆ ಒಂದು ಕ್ಲಿಕ್ ಫಾರ್ಮ್ ಮೇಲೆ ದಾಳಿ ಮಾಡಿದಾಗ, ಅಲ್ಲಿ 500 ಸ್ಮಾರ್ಟ್‌ಫೋನ್‌ಗಳು, 3.5 ಲಕ್ಷ ಸಿಮ್ ಕಾರ್ಡ್‌ಗಳು ಸಿಕ್ಕಿದ್ದವು. ಈ ಕ್ಲಿಕ್ ಫಾರ್ಮ್‌ನಲ್ಲಿ ಚೀನಾದ ವಿಚಾಟ್‌ನಲ್ಲಿ ವ್ಯೂ ಹೆಚ್ಚಿಸುವ ಕೆಲಸ ಮಾಡಲಾಗುತ್ತಿತ್ತು!
ಒಂದೆಡೆ ಕಾನೂನಿನ ಪ್ರಕಾರ ಇದು ಅಕ್ರಮವಾದರೆ, ಇನ್ನೊಂದೆಡೆ ನೈತಿಕವಾಗಿಯೂ ಇದು ಸರಿಯಲ್ಲ. ಇಷ್ಟು ವ್ಯೂ, ಕ್ಲಿಕ್ ಆಗಿದೆ ಎಂಬುದನ್ನು ಜನರಿಗೆ ಮರಳು ಮಾಡುವ ತಂತ್ರ ಇದು. ಇನ್ನಷ್ಟು ಜನರು ಈ ಲೆಕ್ಕ ನೋಡಿ ಮರುಳಾಗುತ್ತಾರೆ ಮತ್ತು ಇದಕ್ಕೆ ಮತ್ತೆಲ್ಲೋ ಮಾರುಕಟ್ಟೆ ಸೃಷ್ಟಿಯಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಈ ಕೆಲಸ ಮಾಡಲಾಗುತ್ತದೆ.
ಇನ್ನೊಂದೆಡೆ ಇಂಥ ಕೆಲಸಕ್ಕೆ ನೇಮಿಸಿಕೊಂಡಿರುವವರಿಗೆ ಅತ್ಯಂತ ಕಡಿಮೆ ಸಂಬಳ ನೀಡಲಾಗುತ್ತದೆ. ಒಂದು ಪುಟ್ಟ ಕೋಣೆಯಲ್ಲಿ ನೂರಾರು, ಸಾವಿರಾರು ಫೋನ್‌ಗಳನ್ನು ಇಟ್ಟುಕೊಂಡು ಈ ಕೆಲಸ ಮಾಡುತ್ತಿರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಇಂಥ ಸೆಟಪ್‌ಗಳನ್ನು ಮಾಡುವಾಗ ವೆಚ್ಚ ಕಡಿಮೆ ಮಾಡಿಕೊಳ್ಳಲು ಕದ್ದ ಸ್ಮಾರ್ಟ್‌ಫೋನ್‌ಗಳೇ ಬಳಕೆಯಾಗುತ್ತಿರುತ್ತವೆ.
ಯಾರು ಇದರ ಗ್ರಾಹಕರು?
ಸಾಮಾನ್ಯವಾಗಿ ಸಿನಿಮಾ ಮತ್ತು ಸಿನಿಮಾ ಸಂಬಂಧಿತ ಚಟುವಟಿಕೆಗಳಿಗೆ ಕ್ಲಿಕ್ ಫಾರ್ಮ್‌ನಲ್ಲಿ ಬೇಡಿಕೆ ಹೆಚ್ಚು. ಅದಲ್ಲದೆ, ಕಾರ್ಪೊರೇಟ್ ವಲಯದಲ್ಲಿ ಹೊಸ ಪ್ರಾಡಕ್ಟ್‌ಗಳನ್ನು ಬಿಡುಗಡೆ ಮಾಡಿದಾಗ ಜನರಿಗೆ ಅದನ್ನು ತಲುಪಿಸುವ ವೇಳೆ ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡಲಾಗುತ್ತದೆ. ಈ ಹಂತದಲ್ಲಿ ಉತ್ಪನ್ನದ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಮೂಡಿಸುವ ನೆವದಲ್ಲಿ ಈ ಕ್ಲಿಕ್ ಫಾರ್ಮ್‌ಗಳ ಮೊರೆ ಹೋಗುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಒಂದು ಅಕೌಂಟ್‌ಗೆ ಹಣ ಬರುವಂತಾಗುವ ಪರಿಸ್ಥಿತಿಗೆ ತುಂಬ ಸಮಯ ಬೇಕಾಗುತ್ತದೆ. ಉದಾಹರಣೆಗೆ, ಯೂಟ್ಯೂಬ್‌ನಲ್ಲಿ ಒಂದು ಚಾನೆಲ್‌ಗೆ ಮಾನಿಟೈಸಿಂಗ್‌ಗೆ ಸೈನ್ ಅಪ್ ಮಾಡಬೇಕು ಎಂದಾದರೆ ಹತ್ತೋ ಹದಿನೈದೋ ಸಾವಿರ ಸಬ್‌ಸ್ಕ್ರೈಬರ್‌ಗಳು, ಒಂದಷ್ಟು ಸಾವಿರ ವ್ಯೂ ಬೇಕು. ಆದರೆ, ಅಷ್ಟು ಸಂಖ್ಯೆಯನ್ನು ತಲುಪುವವರೆಗೆ ಕಾಯುವ ತಾಳ್ಮೆ ಹಲವರಲ್ಲಿ ಇರುವುದಿಲ್ಲ.
ಇಂಥ ಸಮಯದಲ್ಲಿ ಅವರ ನೆರವಿಗೆ ಈ ಕ್ಲಿಕ್ ಫಾರ್ಮ್‌ಗಳು ಬರುತ್ತವೆ. ದುಡ್ಡು ಕೊಟ್ಟು ಕ್ಲಿಕ್ ಪಡೆಯುತ್ತಾರೆ!
ಆದರೆ ಇತ್ತೀಚೆಗೆ ಈ ಕ್ಲಿಕ್ ಫಾರ್ಮ್‌ಗಳ ಕೆಲಸ ಸ್ವಲ್ಪ ಕಷ್ಟದ್ದಾಗಿದೆ. ಬಹುತೇಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರಂಗಳು ತಮ್ಮಲ್ಲಿರುವ ಬೋಟ್ ಸೃಷ್ಟಿ ಮಾಡಿದ ಖಾತೆಗಳನ್ನು ಅಳಿಸಿಹಾಕುತ್ತಿವೆ. ಜೊತೆಗೆ, ಹಠಾತ್ತನೆ ಕ್ಲಿಕ್ ಹೆಚ್ಚಳವಾಗಿ, ಅನುಮಾನ ಬಂದರೆ ಅಂಥ ಕ್ಲಿಕ್‌ಗಳನ್ನೆಲ್ಲ ಅಳಿಸಿ ಹಾಕುವ ಕ್ರಮಗಳನ್ನೂ ತೆಗೆದುಕೊಳ್ಳುತ್ತಿವೆ. ಇದರಿಂದಾಗಿ ಕ್ಲಿಕ್ ಫಾರ್ಮ್‌ಗಳ ಕಾರ್ಯನಿರ್ವಹಣೆ ಇನ್ನಷ್ಟು ಸಂಕೀರ್ಣವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.