ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಹುಷಾರ್... ಹಂತಕರ ಕೈಗೆ ಎಐ ಅಸ್ತ್ರ

ಇರಾನ್ ಪರಮಾಣು ವಿಜ್ಞಾನಿ ಹತ್ಯೆಗೆ ಕೃತಕ ಬುದ್ಧಿಮತ್ತೆ ಬಳಕೆ
Last Updated 9 ಡಿಸೆಂಬರ್ 2020, 14:33 IST
ಅಕ್ಷರ ಗಾತ್ರ

ಪತ್ನಿಯೊಂದಿಗೆ ಹೊರಟಿದ್ದ ಇರಾನ್‌ನ ಪರಮಾಣು ವಿಜ್ಞಾನಿಯ ಹಣೆಗೆ ಕೇವಲ ಒಂದು ಬಂದೂಕು 13 ಗುಂಡು ಹಾರಿಸಿ ಕೊಂದಿದೆ. ಬಂದೂಕನ್ನು ಯಾರೋ ಒಬ್ಬ ವ್ಯಕ್ತಿ ಹಿಡಿದು ದಾಳಿ ನಡೆಸಲಿಲ್ಲ. ಬದಲಿಗೆ ಖಾಲಿ ವಾಹನದಲ್ಲಿ ಬಂದೂಕು ಇಟ್ಟು, ಉಪಗ್ರಹ ಮೂಲಕ ನಿಯಂತ್ರಿಸಿ ಹತ್ಯೆ ಮಾಡಲಾಗಿದೆ. ದಾಳಿಯ ನಿಖರತೆ ಹೇಗಿತ್ತೆಂದರೆ, ಪಕ್ಕದಲ್ಲೇ ಕೂತಿದ್ದ ಪತ್ನಿಗೆ ಒಂದಿಷ್ಟೂ ಗಾಯಗಳಾಗಿಲ್ಲ. ತಂತ್ರಜ್ಞಾನ ಆಧಾರಿತ ಈ ದಾಳಿಇಡೀ ಜಗತ್ತನ್ನೇ ನಿಬ್ಬೆರಗಾಗಿಸುವುದರ ಜತೆಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇರಾನ್‌ನ ಪರಮಾಣು ತಜ್ಞ ಮೊಸೆನ್ ಫಕೀರ್‌ಝಾದೆ ಸುಪ್ರಸಿದ್ಧ ವಿಜ್ಞಾನಿ. ಇರಾನಿನ ಪರಮಾಣು ಬಾಂಬ್ ತಯಾರಿಕೆಯ ಯೋಜನೆ ‘ಪ್ರಾಜೆಕ್ಟ್ ಹಮಾದ್‌’ನ ರೂವಾರಿಯೂ ಹೌದು. ಯೋಜನೆಯು ಕಾರಣಾಂತರಗಳಿಂದ 2003ರಲ್ಲಿ ರದ್ದಾಗಿತ್ತು. ಇವರನ್ನೇ ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಸ್ವಯಂಚಾಲಿತ ಸ್ಮಾರ್ಟ್ ಬಂದೂಕು ಬಳಸಿ ಕೃತಕ ಬುದ್ಧಿಮತ್ತೆ ಮತ್ತು ಇಮೇಜ್ ಪ್ರೊಸೆಸಿಂಗ್‌ ಮೂಲಕ ಮೊಸೆನ್ ಅವರ ಮುಖವನ್ನು ಕ್ಯಾಮೆರಾ ಗುರುತಿಸಿ, ಅವರ ಹಣೆಗೆ ಗುರಿ ಇಟ್ಟು ಗುಂಡುಹಾರಿಸಿದೆ. ಇಷ್ಟು ಮಾತ್ರವಲ್ಲ, ಸಾಕ್ಷಿಯನ್ನು ಒಂದಿನಿತೂ ಬಿಡದಂತೆ, ಬಂದೂಕು ಇರಿಸಿದ್ದ ಪಿಕ್‌ಅಪ್‌ ಕ್ಷಣಮಾತ್ರದಲ್ಲಿ ಸ್ಫೋಟಗೊಂಡು ಕರಕಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ ಬಳಸಿದ ಈ ದಾಳಿ, ಈವರೆಗೂ ನಡೆದಿರುವ ದಾಳಿಗಳಲ್ಲೇ ಹೊಸತು. ಹೀಗಾಗಿ ಇಡೀ ವಿಜ್ಞಾನ ಹಾಗೂ ತಂತ್ರಜ್ಞಾನ ಲೋಕವೇ ಈ ಕುರಿತು ದಿಗ್ಭ್ರಮೆ ವ್ಯಕ್ತಪಡಿಸಿದೆ.

ಇಲ್ಲಿ ಚರ್ಚೆ ಇರುವುದು ‘ಹಂತಕರು’ ಎಂಬ ಭೌತಿಕ ವ್ಯಕ್ತಿಯೇ ಇಲ್ಲದೆ ಕೇವಲ ಒಂದು ಬಂದೂಕು, ಎಲ್ಲಿಯೋ ಕುಳಿತ ವ್ಯಕ್ತಿಯು ಉಪಗ್ರಹ ಬಳಸಿ ನೀಡಿದ ಆದೇಶವನ್ನು ಸ್ವೀಕರಿಸಿ ಅದರಂತೆಯೇ ಹತ್ಯೆ ನಡೆಸಿದೆ. ಇಷ್ಟು ಮಾತ್ರವಲ್ಲಿ ಇಲ್ಲಿ ಬಳಕೆಯಾಗಿರುವ ಕೃತಕ ಬುದ್ಧಿಮತ್ತೆ, ಇಮೇಜ್‌ ಪ್ರೊಸೆಸ್ಸಿಂಗ್ ಹಾಗೂ ಉಪಗ್ರಹಗಳು ಇಂಥ ಕೃತ್ಯಗಳಿಗೂ ಬಳಕೆಯಾದರೆ ಭವಿಷ್ಯದ ಪಾಡೇನು? ಎಂಬ ಪ್ರಶ್ನೆಯೊಂದು ಇಡೀ ತಂತ್ರಜ್ಞಾನ ಲೋಕವನ್ನೇ ಕಾಡುತ್ತಿದೆ.

ದೂರದಲ್ಲಿ ಬರುತ್ತಿದ್ದ ಮೊಸೆನ್‌ ಅವರ ಮುಖ ಚಹರೆಯನ್ನು ಕ್ಯಾಮೆರಾ ಮೂಲಕ ಗುರುತಿಸಿ, ವಾಹನದ ವೇಗವನ್ನು ಗ್ರಹಿಸಿ ಅವರ ತಲೆಗೆ ಗುರಿ ಇಟ್ಟು ಗುಂಡುಗಳ ಸುರಿಮಳೆಗರೆದಿದೆ. ಕೃಷಿಗೆ, ಆರೋಗ್ಯ ಕ್ಷೇತ್ರದಲ್ಲಿ, ವ್ಯವಹಾರ ಕ್ಷೇತ್ರದಲ್ಲಿ ಬಳಕೆಯಾಗಬೇಕಿದ್ದ ಕೃತಕ ಬುದ್ಧಿಮತ್ತೆ, ಹತ್ಯೆಗೂ ಬಳಕೆಯಾಗಿರುವುದು ಭವಿಷ್ಯದ ಕುರಿತು ಗಂಭೀರವಾಗಿ ಚಿಂತೆಗೀಡು ಮಾಡುವಂತೆ ಮಾಡಿದೆ.

ಈ ವಿಜ್ಞಾನಿಯೇ ಏಕೆ ಗುರಿ?
ಮೊಸೆನ್ ಫಕೀರ್‌ಝಾದೆ ಅವರ ಇರಾನ್‌ ಸೇನೆಯ ಹೊಸ ಅನ್ವೇಷಣೆ ಹಾಗೂ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿದ್ದರು. ಜತೆಗೆ ಇರಾನಿನ ಪರಮಾಣು ಯೋಜನೆ ಅನುಷ್ಠಾನದಲ್ಲೂ ಇವರದ್ದು ಪ್ರಮುಖ ಪಾತ್ರವಿತ್ತು. ಭೌತವಿಜ್ಞಾನದ ಈ ಸಂಶೋಧಕ ಇರಾನಿನ ಪರಮಾಣು ಬಾಂಬ್ ನಿರ್ಮಾಣದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದರು. ಆದರೆ 2003ರಲ್ಲಿ ಈ ಯೋಜನೆ ರದ್ದಾಯಿತು ಎಂದು ಅಂತರರಾಷ್ಟ್ರೀಯ ಪರಮಾಣು ಇಂಧನ ಮೂಲಗಳು ತಿಳಿಸಿವೆ. ಆದರೆ ಇರಾನ್ ಗೋಪ್ಯವಾಗಿ ತನ್ನ ಪರಮಾಣು ಕಾರ್ಯಗಳನ್ನು ನಡೆಸುತ್ತಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು 2018ರಲ್ಲಿ ಆರೋಪ ಮಾಡಿದ್ದು ಮತ್ತಷ್ಟು ಚರ್ಚೆಗೆ ಕಾರಣವಾಗಿತ್ತು.

2003ರಲ್ಲಿ ರದ್ದುಗೊಂಡಿದ್ದ ‘ಪ್ರಾಜೆಕ್ಟ್ ಅಮಾದ್’ ಕಾರ್ಯಾಚರಣೆಯನ್ನು ಫಕೀರ್‌ಝಾದೆ ಮರಳಿ‌ ಆರಂಭಿಸಿದ್ದಾರೆ ಎಂದು ಕೆಲವೊಂದು ದಾಖಲೆ ಸಹಿತ ನೆತನ್ಯಾಹು ದೂರಿದ್ದರು. ಆದರೆ ಇರಾನ್‌ ನಡೆಸುತ್ತಿದೆ ಎನ್ನಲಾದ ಪರಮಾಣು ಯೋಜನೆಗೆ ಪೂರ್ಣ ವಿರಾಮ ಹಾಕುವ ಭಾಗವಾಗಿ ಮೊಸೆನ್ ಹತ್ಯೆ ನಡೆಯಿತೇ ಎಂಬುದು ಎಂಬ ಪ್ರಶ್ನೆಯೂ ಜಾಗತಿಕ ಮಟ್ಟದಲ್ಲಿ ಚರ್ಚೆಯಲ್ಲಿದೆ.

ಸ್ಟೀಫನ್ ಹಾಕಿನ್ಸ್‌ ಕೂಡಾ ಎಚ್ಚರಿಸಿದ್ದರು
ಆದರೆ ಇಂಥದ್ದೊಂದು ತಂತ್ರಜ್ಞಾನವು ಹಂತಕರು ಹಾಗೂ ಭಯೋತ್ಪಾದಕರ ಕೈ ಸೇರಿದರೆ ಭದ್ರತೆ ಮತ್ತು ಸುರಕ್ಷತೆ ಎಲ್ಲಿರಲಿದೆ ಎಂಬ ಚರ್ಚೆ ತೀವ್ರ ಕಾವು ಪಡೆದುಕೊಂಡಿದೆ. ಇಂಥ ಚರ್ಚೆ ನಡೆಯುತ್ತಿರುವುದು ಈಗ ಮಾತ್ರವಲ್ಲ. 2015ರಲ್ಲೇ ಪ್ರಸಿದ್ಧ ವಿಜ್ಞಾನ ಸ್ಟೀಫನ್ ಹಾಕಿನ್ಸ್ ಅವರು ಕೃತಕ ಬುದ್ಧಿಮತ್ತೆ ಎಂಬ ಬ್ರಹ್ಮಾಸ್ತ್ರದ ಬಳಕೆ ಕುರಿತು ಕಳವಳ ವ್ಯಕ್ತಪಡಿಸಿದ್ದರ.

ಇದಕ್ಕೆ ಪುಷ್ಟಿ ಎಂಬಂತೆ ಸುಮಾರು ಒಂದು ಸಾವಿರ ವಿಜ್ಞಾನಿಗಳು ಬಹಿರಂಗ ಪತ್ರವನ್ನು ಬರೆದು, ಕೃತಕ ಬುದ್ಧಿಮತ್ತೆಯನ್ನು ಸೇನೆಯಲ್ಲಿ ಬಳಸದಂತೆ ನಿರ್ಬಂಧಿಸಬೇಕು ಎಂದು ಒತ್ತಾಯಿಸಿದ್ದರು. ಮನುಷ್ಯನ ಮುಖಗವನ್ನು ಗ್ರಹಿಸಿ, ಒಂದು ಮಿಲಿ ಮೀಟರ್ ವ್ಯತ್ಯಾಸವೂ ಇಲ್ಲದೆ ಕರಾರುವಕ್ಕಾಗಿ ಗುರಿ ಇಡಬಲ್ಲ ಕೃತಕ ಬುದ್ಧಿಮತ್ತೆ ಮತ್ತು ಇಮೇಜ್‌ ಪ್ರೊಸೆಸ್ಸಿಂಗ್‌ ತಂತ್ರಜ್ಞಾನವು ಪ್ರತಿಯೊಬ್ಬರಿಗೂ ಸುಲಭವಾಗಿ ಸಿಗುವಂತಾದರೆ, ಜಾಗತಿಕ ಭದ್ರತೆಯ ವಿಷಯವನ್ನು ಊಹಿಸುವುದೂ ಕಷ್ಟ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದರು.

ಕೃತಕ ಬುದ್ಧಿಮತ್ತೆಯ ಜತೆಗೆ ಮಷಿನ್ ಲರ್ನಿಂಗ್‌, ಸ್ಮಾರ್ಟ್ ಗನ್‌ ಇತ್ಯಾದಿ ಹೊಸ ಹೊಸ ತಂತ್ರಜ್ಞಾನ ಸಕಲ ಜೀವರಾಶಿಗಳಿಗೂ ಮಾರಕ. ಎಲ್ಲೋ ಕುಳಿತ ವ್ಯಕ್ತಿ ಇಂಥ ತಂತ್ರಜ್ಞಾನದ ಬಳಕೆಯಿಂದ ಜಗತ್ತಿನ ಮತ್ಯಾವುದೋ ಮೂಲೆಯಲ್ಲಿ ಕಾರ್ಯಾಚರಣೆ ನಡೆಸಬಹುದಾದಷ್ಟು ಸರಳವಾಗಿದೆ. ಇದಕ್ಕೆ ಪೂರಕವಾಗಿ ಮೊಬೈಲ್ ಹಾಗೂ ಇನ್ನಿತರ ಗ್ಯಾಜೆಟ್‌ಗಳ ಬಳಕೆಯಿಂದ ವ್ಯಕ್ತಿಯ ಎಲ್ಲಾ ಮಾಹಿತಿ ಕ್ಲೌಡ್‌ನಲ್ಲಿ ಶೇಖರಣೆಯಾಗುತ್ತಿದೆ.

ಮೋಸೆನ್ ಅವರ ಹತ್ಯೆಯಲ್ಲೂ ಅವರು ಇರುವ ಸ್ಥಳ, ಹೊರಡುವ ಸಮಯ, ಗುರಿ ಇರಿಸಿದ್ದ ಜಾಗಕ್ಕೆ ಬರುವ ಸಮಯ, ಕಾರಿನ ವೇಗ ಎಲ್ಲವನ್ನೂ ಗ್ರಹಿಸಿ ಉಪಗ್ರಹದ ಮೂಲಕ ನಿಯಂತ್ರಿಸಲಾಗುತ್ತಿದ್ದ ಬಂದೂಕಿಗೆ ಸಂದೇಶ ನೀಡಲಾಗುತ್ತಿತ್ತು. ಅದನ್ನು ಆಧರಿಸಿ ಅದು ಗುಂಡಿನ ಮಳೆಗರೆಯಿತು ಎಂದೆನ್ನಲಾಗಿದೆ.

ಈ ಘಟನೆಯಿಂದಾಗಿ ಕೃತಕ ಬುದ್ಧಿಮತ್ತೆ ಎಂಬುದು ಒಂದು ಪರಮಾಣು ಸ್ಥಾವರವಿದ್ದಂತೆ. ಅದರಿಂದ ಎಷ್ಟು ಪ್ರಯೋಜನ ಪಡೆಯುತ್ತೇವೆಯೋ, ಅದರಿಂದ ಆಗುವ ಅಪಾಯವೂ ಅಷ್ಟೇ ಬೀಕರವಾಗಿರಲಿದೆ ಎಂಬ ಮಾತು ಈಗ ಇನ್ನಷ್ಟು ಪ್ರಸ್ತುತವೆನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT