ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಗೂಗಲ್‌ ಏಕಸ್ವಾಮ್ಯದ ಜಾಲದಲ್ಲಿ ಜಗತ್ತು

Last Updated 28 ನವೆಂಬರ್ 2020, 12:14 IST
ಅಕ್ಷರ ಗಾತ್ರ

ಕಂಡಿದ್ದಕ್ಕೆಲ್ಲಾ ಗೂಗಲ್‌ ಮಾಡುವುದು, ಇರುವುದೆಲ್ಲವನ್ನೂ ಗೂಗಲ್‌ ಡ್ರೈವ್‌ನಲ್ಲಿ ಇಡುವ ರೂಢಿಯನ್ನು ಬಿಡುವ ಬಗ್ಗೆ ನಾವು ಗಮನ ಕೊಡಬೇಕಾದ ತುರ್ತು ಎದುರಾಗಿದೆ. ಇಲ್ಲವಾದರೆ, ನಮ್ಮದೇ ಮಾಹಿತಿ ನೋಡಬೇಕಾದರೂ ಅದಕ್ಕೆ ದುಡ್ಡು ಕೊಡಬೇಕಾದ ಸ್ಥಿತಿ ಬರಲಿದೆ. ಇದರ ಮುನ್ಸೂಚನೆ ಎನ್ನುವಂತೆ ಗೂಗಲ್‌ ಡ್ರೈವ್‌ ಅನ್ನು ಆಗಾಗ್ಗೆ ಬಳಸದೇ ಇದ್ದರೆ ಅದರಲ್ಲಿರುವ ಫೈಲ್‌ಗಳನ್ನು ಡಿಲೀಟ್‌ ಮಾಡುವುದಾಗಿ ಹೇಳಿದೆ. ಈ ತರಹದ್ದೇ ಇನ್ನೂ ಹಲವು ನಿರ್ಧಾರಗಳನ್ನು ಗೂಗಲ್‌ ಭವಿಷ್ಯದಲ್ಲಿ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ನಮ್ಮ ಮಾಹಿತಿಗಳ ರಕ್ಷಣೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ.

ಸರ್ಚ್ ಎಂಜಿನ್, ಬ್ರೌಸರ್, ಜಿ–ಮೇಲ್, ಯುಟ್ಯೂಬ್, ಒಎಸ್‌, ಆ್ಯಪ್‌ ಸ್ಟೋರ್ ಹೀಗೆ ತಂತ್ರಜ್ಞಾನ ಜಗತ್ತಿನ ಪ್ರತಿಯೊಂದು ಕಡೆಯೂ ಗೂಗಲ್‌ ಏಕಸ್ವಾಮ್ಯ ಹೊಂದಿದೆ. ಹೀಗಾಗಿ ಆನೆ ನಡೆದಿದ್ದೇ ದಾರಿ ಎನ್ನುವಂತೆ ವರ್ತಿಸುತ್ತಿದೆ. ವ್ಯಾಪಾರಿ ಮನೋಧರ್ಮವೇ ಹಾಗೆ. ಗ್ರಾಹಕರನ್ನು ಸೆಳೆಯಲು ಆರಂಭದಲ್ಲಿ ಒಂದು ಕೊಂಡರೆ ಒಂದು ಉಚಿತ, ಅಗ್ಗದ ದರ, ಭಾರಿ ರಿಯಾಯಿತಿ ನೀಡುತ್ತವೆ. ಒಂದಷ್ಟು ಗ್ರಾಹಕರು ಖಾಯಂ ಆಗುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ ನಿಧಾನವಾಗಿ ಅವೆಲ್ಲವನ್ನೂ ಹಿಂದಕ್ಕೆ ಪಡೆಯಲು ಶುರುಮಾಡುತ್ತವೆ. ಅಷ್ಟರಲ್ಲೇ ನಮ್ಮ ಮನಸ್ಥಿತಿಯೂ ಅಲ್ಲಿಗೆ ಒಗ್ಗಿಕೊಂಡಿರುತ್ತದೆ. ಇದೀಗ ಗೂಗಲ್‌ ಮಾಡಹೊರಟಿರುವುದೂ ಇದೇ ರೀತಿ. ಜಗತ್ತಿಗೇ ಎಲ್ಲವನ್ನೂ ಉಚಿತವಾಗಿ ನೀಡುತ್ತಿದ್ದ ಕಂಪನಿ, ತನ್ನನ್ನು ಬಿಟ್ಟರೆ ಬೇರಾರೂ ಇಲ್ಲ ಎನ್ನುವುದು ಮನವರಿಕೆ ಆಗಿರುವುದರಿಂದ ಮಿತಿಗಳನ್ನು ಹೇರಲು ಆರಂಭಿಸಿದೆ.

ಗೂಗಲ್‌ ಡ್ರೈವ್‌: ಬಳಸಿ ಇಲ್ಲವೇ ಕಳೆದುಕೊಳ್ಳುವಿರಿ!

ಪ್ರತಿಯೊಬ್ಬರೂ ಗೂಗಲ್‌ ಡ್ರೈವ್‌ ಹೊಂದಿರುತ್ತೇವೆ. ನಮ್ಮ ಫೈಲ್‌ಗಳನ್ನು ಅದರಲ್ಲಿ ಇಡಲು ಈ ಸೇವೆಯನ್ನು ಗೂಗಲ್‌ ಒದಗಿಸಿದೆ. ಈ ಸೇವೆಯಲ್ಲಿ ಕೆಲವು ಬದಲಾವಣೆಗಳನ್ನು ಗೂಗಲ್‌ ಮಾಡಿದೆ. ಗೂಗಲ್‌ ಡ್ರೈವ್‌ ಅನ್ನು ಆಗಾಗ್ಗೆ ಬಳಸದೇ ಇದ್ದರೆ ನಿಮ್ಮ ಫೈಲ್‌ಗಳನ್ನು ಡಿಲೀಟ್‌ ಮಾಡುವುದಾಗಿ ಎಚ್ಚರಿಕೆ ನೀಡಿದೆ.

ಜಾಗ ಎಂದಮೇಲೆ ಅದು ಡಿಜಿಟಲ್‌ ರೂಪದಲ್ಲಿ ಇರಲಿ ಭೌತಿಕವಾಗಿದ್ದಾಗಿರಲಿ ತನ್ನದೇ ಆದ ಮೌಲ್ಯ ಹೊಂದಿರುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಗೂಗಲ್‌ ಈ ನಿರ್ಧಾರಕ್ಕೆ ಬಂದಿದೆ. ದೀರ್ಘಕಾಲದವರೆಗೆ ಬಳಸದೇ ಇರುವ ಅಥವಾ ಮರೆತುಹೋಗಿರುವ ಖಾತೆಗಳು, ಬಹಳ ವರ್ಷದವರೆಗೆ ಗೂಗಲ್‌ ಡ್ರೈವ್‌ ಒಳಹೊಕ್ಕು ತಮ್ಮ ಫೈಲ್‌ಗಳನ್ನು ನೋಡದೇ ಇರುವವರು ಇನ್ನುಮುಂದೆ ಹಾಗೆ ಮಾಡಲಾಗುವುದಿಲ್ಲ ಎಂದು ತಿಳಿಸಿದೆ.

‘ಗ್ರಾಹಕರ ಖಾತೆಗಳಿಗೆ ನಾವು ಹೊಸ ನಿಯಮ ಪರಿಚಯಿಸುತ್ತಿದ್ದೇವೆ. ಜಿಮೇಲ್‌, ಗೂಗಲ್‌ ಡಾಕ್ಸ್‌, ಶೀಟ್‌, ಸ್ಲೈಡ್ಸ್‌, ಡ್ರಾಯಿಂಗ್‌, ಫಾರ್ಮಸ್‌, ಜಾಮ್‌ಬೋರ್ಡ್‌ ಫೈಲ್ಸ್‌, ಫೊಟೊದಲ್ಲಿ ಯಾವುದಾದರು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಸೇವೆಗಳಿಗೆ ಎರಡು ವರ್ಷಗಳವರೆಗೆ ಬಳಸದೇ ಇದ್ದರೆ ಅಂತಹ ಸೇವೆಯಲ್ಲಿ ಇರುವ ನಿಮ್ಮೆಲ್ಲಾ ಮಾಹಿತಿಯನ್ನೂ ಗೂಗಲ್‌ ಡಿಲೀಟ್‌ ಮಾಡಬಹುದಾಗಿದೆ. ತಕ್ಷಣವೇ ಇದನ್ನು ಜಾರಿಗೊಳಿಸುವುದಿಲ್ಲ. 2021ರ ಜೂನ್‌ 1ರಿಂದ ಇದು ಅನ್ವಯಿಸಲಿದೆ’ ಎಂದು ಹೇಳಿದೆ.

ನಿಮ್ಮ ಅತ್ಯಮೂಲ್ಯ ಮಾಹಿತಿಗಳನ್ನು ಕಾಪಾಡಿಕೊಳ್ಳಬೇಕು ಎಂದಾದರೆ ಆಗಾಗ್ಗೆ ಜಿ–ಮೇಲ್‌, ಗೂಗಲ್‌ ಫೊಟೊ ಮತ್ತು ಗೂಗಲ್‌ ಡ್ರೈವ್‌ಗೆ ಭೇಟಿ ನೀಡುತ್ತಿರಿ ಎಂದಿದೆ. ನಿಮ್ಮ ಫೈಲ್‌ಗಳನ್ನು ಕಸದ ಬುಟ್ಟಿಗೆ ಎಸೆಯುವ ಮುನ್ನ ಇಮೇಲ್‌ ಮತ್ತು ನೋಟಿಫಿಕೇಷನ್‌ ಕಳುಹಿಸಿ ಎಚ್ಚರಿಸಲಿದೆ. ಎರಡು ವರ್ಷಗಳ ಅವಧಿಯಲ್ಲಿ ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ಗೂಗಲ್‌ ಸೇವೆಗಳನ್ನು ಬಳಸುವುದು ಅನಿವಾರ್ಯವಾಗಿದೆ.

ಇದೇನೊ ಹೊಸ ವೈಶಿಷ್ಟ್ಯವಲ್ಲ. ಇನ್‌ಆ್ಯಕ್ಟೀವ್‌ ಅಕೌಂಟ್‌ ಮ್ಯಾನೇಜರ್‌ ಎನ್ನುವುದು ಈಗಾಗಲೇ ಇದೆ. ನೀವು ಕಾಲವಾದ ನಂತರ ನಿಮ್ಮ ಮಾಹಿತಿಗಳನ್ನು ಗೂಗಲ್‌ ಹೊಂದುವುದು ಬೇಡ ಎಂದಾದರೆ ಆ ಆಯ್ಕೆಯನ್ನು ನಿರ್ದಿಷ್ಟ ಸಮಯಕ್ಕೆ ಕೆಲಸ ಮಾಡುವಂತೆ ಮಾಡಬಹುದು. ಬೇಡದೇ ಇರುವುದನ್ನು ಆಗಾಗ್ಗೆ ಡಿಲೀಟ್‌ ಮಾಡುತ್ತಾ ಹೋದರೆ ಹೊಸತನ್ನು ಇಡಲು ಜಾಗ ಸಿಗುತ್ತದೆ. ನಾವು ಮರೆತುಹೋಗಿ ಅವನ್ನು ಗೂಗಲ್‌ ಡಿಲೀಟ್‌ ಮಾಡಿದ ಮೇಲೆ ಪಶ್ಚಾತ್ತಾಪ ಪಡುವುದು ತಪ್ಪಲಿದೆ

ಗೂಗಲ್‌ ಫೊಟೊಗೂ ಮಿತಿ: ಗೂಗಲ್‌ ಫೊಟೊ ಆ್ಯಪ್‌ನಲ್ಲಿ ಅನಿಯಮಿತ ಗರಿಷ್ಠ ಗುಣಮಟ್ಟದ ಫೊಟೊ ಮತ್ತು ವಿಡಿಯೊವನ್ನು ಉಚಿತವಾಗಿ ಇಡುವುದಕ್ಕೆ ಇನ್ನುಮುಂದೆ ಅವಕಾಶ ಇರುವುದಿಲ್ಲ. ಗೂಗಲ್‌ ಫೊಟೊದಲ್ಲಿ 15ಜಿಬಿ ಉಚಿತ ಡೇಟಾ ಮಿತಿ ಇದೆ, ಆದರೆ, 2021ರ ಜೂನ್‌ 1ರಿಂದ ಹೊಸದಾಗಿ ಗರಿಷ್ಠ ಗುಣಮಟ್ಟದ ಫೊಟೊವನ್ನು ಗೂಗಲ್‌ ಫೊಟೊದಲ್ಲಿ ಸಂಗ್ರಹಿಸಿ ಇಟ್ಟರೆ ಅದಕ್ಕೆ ಹಣ ಕೊಡಬೇಕಾಗಲಿದೆ. ಗೂಗಲ್‌ ಫೊಟೊ ಆ್ಯಪ್‌ನಲ್ಲಿ ದಿನಕ್ಕೆ 2,800 ಕೋಟಿ ಹೊಸ ಫೊಟೊ ಮತ್ತು ವಿಡಿಯೊಗಳು ಅಪ್‌ಲೋಡ್‌ ಆಗುತ್ತಿವೆ ಎಂದು ಗೂಗಲ್‌ ಫೊಟೊ ಟ್ವೀಟ್‌ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮುಂದಿನ ದಿನಗಳಲ್ಲಿ ಈಗಿರುವ ಉಚಿತ ಸೇವೆಗಳು ಸಿಗುವುದಿಲ್ಲ ಎನ್ನುವುದಕ್ಕೆ ಸ್ಪಷ್ಟ ಸೂಚನೆಯನ್ನು ಗೂಗಲ್‌ ನೀಡುತ್ತಿದೆ. ಹಾಗಾಗಿ ನಮ್ಮ ಡೇಟಾಗಳನ್ನು ಸುಮ್ಮನೇ ಗೂಗಲ್‌ ಡ್ರೈವ್‌ನಲ್ಲಿ ಕಸದಂತೆ ತುಂಬಿಡುವ ಬದಲಿಗೆ ಅಗತ್ಯವಾಗಿದ್ದನ್ನು ಮಾತ್ರವೇ ಇಟ್ಟು, ಆಗಾಗ್ಗೆ ಅವನ್ನು ಗಮನಿಸುತ್ತಿರುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT