ಸೋಮವಾರ, ಫೆಬ್ರವರಿ 24, 2020
19 °C
ಮಾಹಿತಿ–ತಂತ್ರಜ್ಞಾನ

ನವಯುಗದ ಮಹಾಗುರು ಗೂಗಲ್‌ಗೆ ಈಗ 21 ವರ್ಷ

ಹೇಮಂತ್‌ ಕುಮಾರ್‌ ಎಸ್‌. Updated:

ಅಕ್ಷರ ಗಾತ್ರ : | |

ಮನೆಯೇ ಮೊದಲ ಶಾಲೆ, ಜನನಿ ತಾನೇ ಮೊದಲ ಗುರು. ಹಾಗೆಯೇ ಅಂತರ್ಜಾಲ, ಕಂಪ್ಯೂಟರ್, ಸ್ಮಾರ್ಟ್‌ ಫೋನ್‌ಗಳ ಜಗತ್ತಿನಲ್ಲಿ ಸಕಲ ವಿಚಾರಗಳನ್ನು ಕ್ಷಣ ಮಾತ್ರದಲ್ಲಿ ತೆರೆದಿಡುವ ‘ಗೂಗಲ್’ ಈ ನವಯುಗದ ಮಹಾಗುರು! ಇಂದು ಗೂಗಲ್‌ಗೆ 21ನೇ ಸಂಭ್ರಮ. 

ಅನುಮಾನವಿರಲಿ, ಗೊಂದಲ ಸುಳಿಯಲಿ, ಎಲ್ಲದಕ್ಕೂ ಆ ಮಹಾಗುರು ಮಾರ್ಗ ತೋರುತ್ತಾರೆ. ಬಳಕೆದಾರರು ಇದನ್ನೇ ಅಂತಿಮ ಎಂದು ನಂಬುವ ಮಟ್ಟಕ್ಕೆ ತಲುಪಿಬಿಟ್ಟಿದ್ದಾರೆ. ಹೀಗೆ ನಿತ್ಯ ಬದುಕಿನಲ್ಲಿ ಅಂಗೈನಲ್ಲಿ ಮಾಹಿತಿ ತಂದು ಸುರಿಯುವ ಗೂಗಲ್‍ ಸಂಗ್ರಹ ಬುತ್ತಿಯಾಗಿ ಮಾತ್ರ ಉಳಿದಿಲ್ಲ. ತಂತ್ರಜ್ಞಾನ ಬಹುತೇಕ ಎಲ್ಲ ವಿಭಾಗಗಳಲ್ಲಿಯೂ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದೊಂದಿಗೆ ಇಡೀ ಜಗತ್ತಿನ ಜೀವನ ಕ್ರಮದ ಮೇಲೂ ಗೂಗಲ್ ಬೀರಿರುವ ಪ್ರಭಾವ ಬಹು ದೊಡ್ಡದು.

ಗೂಗಲ್‌ ಸಿಇಒ ಸುಂದರ್ ಪಿಚೈ 

ಭಾರತೀಯ ಮೂಲದ ಸುಂದರ್ ಪಿಚೈ ಗೂಗಲ್ ಸಂಸ್ಥೆಯ ಪ್ರಮುಖ ಸ್ಥಾನದಲ್ಲಿದ್ದಾರೆ. ಅಂತರ್ಜಾಲ ವಿಸ್ತರಣೆಯಂತಹ ಅನೇಕ ಕಾರ್ಯಕ್ರಮಗಳಲ್ಲಿ ಗೂಗಲ್ ಸರ್ಕಾರದೊಂದಿಗೆ ಕೈಜೋಡಿಸಿದೆ. ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸಂಪರ್ಕ ನೀಡುವ ಯೋಜನೆ ಯಶಸ್ವಿಗೊಳಿಸಲು ನಿರಂತರ ಪ್ರಯತ್ನದಲ್ಲಿದೆ. ಜಗತ್ತಿನ ಅತಿ ದೊಡ್ಡ ಅಂತರ್ಜಾಲ ಹುಡುಕುತಾಣ (ಸರ್ಚ್ ಎಂಜಿನ್) ಕೃತಕ ಬುದ್ಧಿಮತ್ತೆ ವ್ಯವಸ್ಥೆಯ ಮೂಲಕ ಪ್ರತಿ ಬಳಕೆದಾರನ ಚಟುವಟಿಕೆಗಳ ಮೇಲೆ ನಿಗಾವಹಿಸುತ್ತಿರುವ ಬಗ್ಗೆ ಆಗಾಗ್ಗೆ ದೂಷಣೆಗೂ ಒಳಗಾಗಿದೆ.

ಚಾಲಕ ರಹಿತ ಕಾರು, ಕೇಳಿಸಿಕೊಂಡು ಮರು ನುಡಿಯುವ ಮತ್ತು ಕೇಳಿದ್ದನ್ನು ಹುಡುಕಿ ಹೇಳುವ ಗೂಗಲ್‌ ಅಸ್ಟಿಸ್ಟಂಟ್‌, ಗೂಗಲ್‌ ಹೋಂ, ಗೂಗಲ್‌ ಪಿಕ್ಸೆಲ್‌ ಸ್ಮಾರ್ಟ್‌ಫೋನ್‌, ಆ್ಯಂಡ್ರಾಯ್ಡ್‌ ಒಎಸ್‌ ಮತ್ತು ಅಪ್ಲಿಕೇಷನ್‌ಗಳು, ಅಂತರ್ಜಾಲ ವಿಡಿಯೊ ವೇದಿಕೆ ಯೂಟ್ಯೂಬ್‌, ಗೂಗಲ್‌ ಡಾಕ್ಸ್‌,...ಹೀಗೆ ಗೂಗಲ್‌ ಹಿಂದಿಗಿಂತಲೂ ಈಗ ಎಲ್ಲೆಲ್ಲೂ ಕಾಣಸಿಗುತ್ತದೆ. 

ಗೂಗಲ್‌ ಸ್ಮಾರ್ಟ್‌ ಸ್ಪೀಕರ್‌

ಸೆಪ್ಟೆಂಬರ್‌ 2019ರವರೆಗೆ ಗೂಗಲ್‌ನ ಒಟ್ಟು ಮೌಲ್ಯ ₹21.26 ಲಕ್ಷ ಕೋಟಿ ಹಾಗೂ ಅದರ ಮಾತೃ ಸಂಸ್ಥೆ ಆಲ್ಫಬೆಟ್ ಮೌಲ್ಯ ₹63.80 ಲಕ್ಷ ಕೋಟಿಯಾಗಿದೆ. ಈ ಮೂಲಕ ಆ್ಯಪಲ್‌ ಮತ್ತು ಅಮೆಜಾನ್‌ ನಂತರದಲ್ಲಿ ಆಲ್ಫಬೆಟ್‌ ಸ್ಥಾನ ಪಡೆದಿದೆ.  

ಗೂಗಲ್ ಆರಂಭವಾಗಿದ್ದು..

ಅಮೆರಿಕದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಆಂತರಿಕ ಸಂವಹನ ಸಂಪರ್ಕವಾಗಿ ಬಳಕೆಯಾಗುತ್ತಿದ್ದ ಅಂತರ್ಜಾಲ ವ್ಯವಸ್ಥೆ, ಮುಂದೆ ಜಾಗತಿಕ ಮಟ್ಟದಲ್ಲಿ ವಿಸ್ತರಿಸಿಕೊಂಡಿತು. ಅಲ್ಲಿನ ಸ್ಟಾನ್‍ಫೋರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್‌ಗೆ ಅಂತರ್ಜಾಲದೊಳಗಿನ ಮಾಹಿತಿಯನ್ನು ಸುಲಭವಾಗಿ ವರ್ಗೀಕರಿಸುವ ವ್ಯವಸ್ಥೆಯೊಂದನ್ನು ರೂಪಿಸುವ ಆಸಕ್ತಿ ಇತ್ತು. ಈ ಮಹಾತ್ವಾಕಾಂಕ್ಷೆಯೊಂದಿಗೆ ಸ್ನೇಹಿತರು ಹೆಜ್ಜೆ ಹಾಕುತ್ತಾ, 1996ರಲ್ಲಿ ‘ಬ್ಯಾಕ್‍ರಬ್’ ಎಂಬ ಹುಡುಕು ತಾಣ (ಸರ್ಚ್ ಎಂಜಿನ್) ಆರಂಭಿಸಿದರು. ಮುಂದೆ ಇದೇ ಗೂಗಲ್ ಸರ್ಚ್‌ ಎಂಜಿನ್ ಆರಂಭಕ್ಕೆ ತಳಹದಿಯಾಯಿತು. 1998 ರಲ್ಲಿ 1 ಲಕ್ಷ ಡಾಲರ್ ಹೂಡಿಕೆಯೊಂದಿಗೆ ‘ಗೂಗಲ್’ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ಸರ್ಚ್ ಎಂಜಿನ್ ಕಾರ್ಯಾರಂಭಿಸಿತು.

ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್‌

ಗೂಗಲ್ ಎರಡು ದಶಕಗಳಲ್ಲಿ ಜಗತ್ತಿನ ನೋಟವನ್ನೇ ಬದಲಿಸಿದೆ. ಇದರೊಂದಿಗೆ ಗೂಗಲ್ ಮತ್ತು ಅದರ ಮಾತೃ ಸಂಸ್ಥೆ ಆಲ್ಫಾಬೆಟ್, ಚಾಲಕ ರಹಿತ ಕಾರು ಅಭಿವೃದ್ಧಿಯಿಂದ ಹಿಡಿದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗಿನ ವಿವಾದಗಳವರೆಗೂ ಸುದ್ದಿಯಲ್ಲಿದೆ. ‘ಹುಡುಕುವುದು’ ಎಂಬ ಪದಕ್ಕೆ ಗೂಗಲ್ ಪರ್ಯಾಯ ಪದವಾಗುವಷ್ಟು ಬೆಳವಣಿಗೆ ಕಂಡಿತು. ಇದಕ್ಕೂ ಮುನ್ನ ‘ಯಾಹೂ’ ಪ್ರಮುಖ ಸರ್ಚ್ ಎಂಜಿನ್ ಆಗಿತ್ತು. 2000ರಲ್ಲಿ ಗೂಗಲ್‍ನ್ನು ಯಾಹೂ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸಿತು. 300 ಕೋಟಿ ಡಾಲರ್‌ಗಳಿಗೆ ಗೂಗಲ್ ತನ್ನದಾಗಿಸಿಕೊಳ್ಳುವ ಪ್ರಸ್ತಾಪ ಇಟ್ಟಿತ್ತಾದರೂ, ಅದಕ್ಕಿಂತ ಹೆಚ್ಚು ಮೌಲ್ಯ ಹೊಂದಿರುವ ಗೂಗಲ್, ಮಾರಾಟಕ್ಕೆ ಒಪ್ಪಲಿಲ್ಲ. ಅಲ್ಲಿಂದ ಮುಂದೆ ಗೂಗಲ್ ತನ್ನದೇ ಆದ ಹಲವು ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಿದೆ.

ಜಾಲ ತಾಣಗಳಲ್ಲಿ ನಿರ್ದಿಷ್ಟ ವಿಷಯಗಳನ್ನು ಹುಡುಕಲು ಲ್ಯಾರಿ ಮತ್ತು ಸೆರ್ಗಿ ಆಲ್ಗಾರಿದಮ್ ರೂಪಿಸಿದರು. ಈ ಮೂಲಕ ಜಗತ್ತಿನ ಅತಿ ಸಮರ್ಥ ಹುಡುಕುವ ವ್ಯವಸ್ಥೆಯಾಗಿ ಗೂಗಲ್ ಅಭಿವೃದ್ಧಿ ಕಂಡಿತು. ಪ್ರಸ್ತುತ ಕೀವರ್ಡ್(ನಿರ್ದಿಷ್ಟ ಪದ)ಗಳ ಮೂಲಕ ಮಾಹಿತಿ ಹುಡುಕುವುದನ್ನು ಮತ್ತಷ್ಟು ವ್ಯವಸ್ಥಿತಗೊಳಿಸಲಾಗಿದೆ.  ಭಾರತೀಯ ಭಾಷೆಗಳಲ್ಲಿಯೇ ಸರ್ಚ್‌ ಮಾಡುವ ಸೌಲಭ್ಯ ಕಲ್ಪಿಸಿದೆ. ಇಂಗ್ಲಿಷ್‌ ಹಾಗೂ ಭಾರತೀಯ ಪ್ರಾದೇಶಿಕ ಭಾಷೆಗಳ ನಡುವಣ ಲಿಪ್ಯಂತರ ಮತ್ತು ಭಾಷಾಂತರ ಸೌಕರ್ಯಕ್ಕೂ ಸೌಲಭ್ಯ ನೀಡಿದೆ. ಬಹು ಚರ್ಚಿತ, ಹುಡುಕಾಡಿದ ವಿಷಯಗಳು ‘ಗೂಗಲ್ ಟ್ರೆಂಡ್’ ಆಗಿ ಕಾಣ ಸಿಗುತ್ತಿವೆ. ಗೂಗಲ್ ಆಡ್‍ಸೆನ್ಸ್ ಮೂಲಕ ಜಾಹೀರಾತುಗಳಿಗೆ ತೆರೆದುಕೊಂಡು ಹಣಗಳಿಕೆ ದಾರಿ ಮಾಡಿದೆ ಹಾಗೂ ಅದರ ಪ್ರಮುಖ ಆದಾಯ ಮೂಲವೂ ಆಗಿದೆ.

ಜಿ–ಮೇಲ್‌ ಜತೆ ಮತ್ತಷ್ಟು ಸೇವೆ

ಪ್ರತಿ ಗೂಗಲ್ ಬಳಕೆದಾರನೂ ಸಾಮಾನ್ಯವಾಗಿ ಜಿ-ಮೇಲ್ ಖಾತೆ ಹೊಂದಿರುತ್ತಾರೆ. ಜಿಮೇಲ್ ಮೂಲಕ ಬಳಕೆದಾರರೊಂದಿಗೆ ಸಂಸ್ಥೆ ಸಂಪರ್ಕ ಸಾಧಿಸಲು ಅನುವಾಗಿದೆ. ಇನ್ನೂ ಅಪರಿಚಿತ ಸ್ಥಳಗಳಲ್ಲಿ ಗೊಂದಲಗಳಿಲ್ಲದೆ ಸಂಚರಿಸಲು, ನಿಗದಿ ಸ್ಥಳಗಳಿಗೆ ಸರಿಯಾದ ಮಾರ್ಗದಲ್ಲಿ ಸಾಗಲು, ಟ್ರಾಫಿಕ್ ಬಗ್ಗೆ ಮಾಹಿತಿ ಪಡೆಯಲು ಗೂಗಲ್ ಮ್ಯಾಪ್ ಜಿಪಿಎಸ್ ಬಲದೊಂದಿಗೆ ಕಾರ್ಯಾಚರಿಸುತ್ತಿದೆ.

ಗೂಗಲ್‌ ಸ್ವಯಂಚಾಲಿತ ಕಾರು

ಸ್ಟ್ರೀಟ್ ವ್ಯೂ, ಕನ್ನಡಕದಲ್ಲಿ ಮಾಹಿತಿ ಪೂರೈಸುವ ‘ಗೂಗಲ್ ಗ್ಲಾಸ್’, ಗೂಗಲ್ ಬುಕ್ಸ್, ಗೂಗಲ್ ಇಮೇಜಸ್, ಮೈಕ್ರೋಸಾಫ್ಟ್ ಆಫೀಸ್‍ಗೆ ಪರ್ಯಾಯವಾಗಿ ಗೂಗಲ್ ಡಾಕ್ಸ್, ಕ್ರೋಮ್ ಒಎಸ್, ಪ್ರಮುಖ ವ್ಯಕ್ತಿ ಮತ್ತು ಘಟನೆಗಳನ್ನು ನೆನಪಿಸುವ ಹಾಗೂ ಗೌರವಿಸುವ ‘ಡೂಡಲ್’, ಗೂಗಲ್ ಕಾರ್, ಗೂಗಲ್ ಪಿಕ್ಸೆಲ್ ಮೊಬೈಲ್, ಗೂಗಲ್ ಅಸಿಸ್ಟಂಟ್, ಹೀಗೆ ಗೂಗಲ್‍ನ ವ್ಯಾಪ್ತಿ ವಿಸ್ತರಿಸುತ್ತಲೇ ಇದೆ. ತನ್ನ ಉದ್ಯೋಗಿಗಳಿಗೆ ಕಾರ್ಯನಿರ್ವಹಿಸಲು ನೀಡಿರುವ ಸಮಯದ ಸ್ವತಂತ್ರ ಹಾಗೂ ಸಾಂಪ್ರದಾಯಿಕ ಕಚೇರಿ ಶೈಲಿಗಿಂತ ಭಿನ್ನವಾದ ಗೂಗಲ್ ಕ್ಯಾಂಪಸ್ ಕೂಡ ಗಮನ ಸೆಳೆದಿದೆ.

‘ಆ್ಯಂಡ್ರಾಯಿಡ್‌’ ವ್ಯೂಹ

ಸ್ಮಾರ್ಟ್ ಫೋನ್‍ಗಳಲ್ಲಿ ಗೂಗಲ್ ತನ್ನ ಅಧಿಪತ್ಯ ಸ್ಥಾಪಿಸಲು ಪ್ರಮುಖ ಅಸ್ತ್ರ ಅಥವಾ ವ್ಯೂಹವಾಗಿ ‘ಆ್ಯಂಡ್ರಾಯಿಡ್‌ ಆಪರೇಟಿಂಗ್ ಸಿಸ್ಟಮ್(ಒಎಸ್)ನ್ನು ಬಳಸಿಕೊಳ್ಳುತ್ತಿದೆ. ಆ್ಯಪಲ್ ಐಫೋನ್‍ಗಳನ್ನು ಹೊರತು ಪಡಿಸಿ ಸ್ಮಾರ್ಟ್‌ ಫೋನ್‍ಗಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಒಎಸ್ ’ಆಂಡ್ರಾಯ್ಡ್’. ಇದನ್ನು ಬಳಸುವ ಸಂಸ್ಥೆಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಿರುವುದರಿಂದ ಸ್ಮಾರ್ಟ್ ಫೋನ್ ಉತ್ಪಾದನಾ ಸಂಸ್ಥೆಗಳು ಇದನ್ನೇ ನೆಚ್ಚಿಕೊಂಡಿವೆ. ‘ಆ್ಯಂಡ್ರಾಯಿಡ್‌ನೊಂದಿಗೆ ಗೂಗಲ್ ತನ್ನ ಕ್ರೋಮ್, ಯುಟ್ಯೂಬ್, ಜಿಮೇಲ್, ಗೂಗಲ್ ಫೋಟೋಸ್, ಗೂಗಲ್ ಪೇ ಹಾಗೂ ಪ್ಲೇಸ್ಟೋರ್ ರೀತಿಯ ಹಲವು ಅಪ್ಲಿಕೇಷನ್‍ಗಳನ್ನು ಒಎಸ್ ಜತೆಯಲ್ಲಿಯೇ ಸ್ಥಾಪಿಸುವ ವ್ಯವಸ್ಥೆ ಮಾಡಿದೆ. ಹೀಗಾಗಿ ಪ್ರತಿ ಸ್ಮಾರ್ಟ್ ಫೋನ್‍ನಲ್ಲಿಯೂ ಗೂಗಲ್ ಗುಂಗು ಇದ್ದದ್ದೇ.

ಪ್ರಾಜೆಕ್ಟ್ ನವಲೇಖಾ

ಭಾರತದ ಪ್ರಾದೇಶಿಕ ಭಾಷೆಗಳ ಬಳಕೆದಾರರಿಗೆ ಅವರದೇ ಭಾಷೆಯಲ್ಲಿ ಜಗತ್ತಿನ ಮಾಹಿತಿಯನ್ನು ಸುಲಭ ಹಾಗೂ ಸರಿಯಾಗಿ ಸಿಗುವ ನಿಟ್ಟಿನಲ್ಲಿ ನವಲೇಖಾ ಎಂಬ ವೇದಿಕೆಯನ್ನು ಗೂಗಲ್ ಹೊರತಂದಿದೆ. ಮುದ್ರಣ ಆವೃತ್ತಿ ಹೊಂದಿರುವ ಪತ್ರಿಕೆ ಮತ್ತು ಮ್ಯಾಗಜೀನ್‍ಗಳು ಈ ವ್ಯವಸ್ಥೆಯೊಂದಿಗೆ ತಮ್ಮಲ್ಲಿರುವ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಆನ್‍ಲೈನ್ ಮೂಲಕ ಪ್ರಕಟಿಸಬಹುದಾಗಿದೆ.

ಗೂಗಲ್‍ಗೆ ಜಗತ್ತಿನ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಭಾರತದಲ್ಲಿ ಶೇ 50ರಷ್ಟು ಅಂತರ್ಜಾಲ ಬಳಕೆದಾರರು ಮೊಬೈಲ್ ಮೂಲಕವೇ ಮಾಹಿತಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಅಂತರ್ಜಾಲ ಸಾಗರದಲ್ಲಿ ಇಂಗ್ಲಿಷ್‍ನಲ್ಲಿರುವ ಮಾಹಿತಿಯ ಶೇ 1ರಷ್ಟು ಮಾತ್ರ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ. ಈ ಮಾಹಿತಿ ಅಂತರ ಕಡಿಮೆ ಮಾಡಿ ಪ್ರಾದೇಶಿಕ ಭಾಷೆಗಳಲ್ಲಿಯೇ ಎಲ್ಲ ಮಾಹಿತಿ ದೊರೆಯುವಂತೆ ಮಾಡುವುದು ನವಲೇಖಾ ಉದ್ದೇಶವಾಗಿದೆ. ಭಾರತದಲ್ಲಿರುವ 1.35 ಲಕ್ಷ ಪ್ರಕಟಣಾಕಾರರಲ್ಲಿ ಶೇ 90ರಷ್ಟು ಪ್ರಕಟಣಾಕಾರರು ಆನ್‍ಲೈನ್ ಪ್ರಕಟಣೆಗಾಗಿ ವೆಬ್‍ಸೈಟ್‍ಗಳನ್ನು ಹೊಂದಿಲ್ಲ ಎಂದು ಗೂಗಲ್ 2018ರಲ್ಲಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು