ಶನಿವಾರ, ಆಗಸ್ಟ್ 13, 2022
26 °C

ಐ.ಟಿ. ಅಂದರೆ ಉದ್ಯಮವಷ್ಟೇ ಅಲ್ಲ...

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

Prajavani

‘ಕುಟುಂಬದ ಜಮೀನಿನ ಒಡೆತನ ಸೀಮಿತ ಪ್ರಮಾಣದ್ದಾಗಿತ್ತು. ಆ ಜಮೀನಿಗೆ ಹಕ್ಕುದಾರರು ಒಬ್ಬರಿಗಿಂತ ಹೆಚ್ಚಿದ್ದರು. ಕೃಷಿ ಜಮೀನನ್ನೇ ನೆಚ್ಚಿಕೊಂಡರೆ ದೊಡ್ಡ ಮಟ್ಟದ ಶ್ರೀಮಂತಿಕೆ ಕಾಣಲಾಗುತ್ತಿರಲಿಲ್ಲ. ಆದರೆ, ಕಂಪ್ಯೂಟರ್‌ ವಿಜ್ಞಾನದಲ್ಲಿ ಎಂಜಿನಿಯರಿಂಗ್‌ ಅಧ್ಯಯನ ಮಾಡಲು ಸಾಧ್ಯವಾಗಿ, ಮಾಹಿತಿ ತಂತ್ರಜ್ಞಾನ (ಐ.ಟಿ.) ವಲಯದ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದರಿಂದ ಹಣ ಸಂಪಾದನೆಯ ವಿಚಾರದಲ್ಲಿ ಮಿತಿಗಳನ್ನು ಮೀರಲು ಸಾಧ್ಯವಾಯಿತು...’

–ಇದು ಉತ್ತರ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿಯೊಂದರ ಯುವಕನೊಬ್ಬನ ಕಥೆ. ನಾಡಿನ ಬೇರೆ ಬೇರೆ ಹಳ್ಳಿಗಳಿಂದ ಬಂದ ಹಲವು ಯುವಕ–ಯುವತಿಯರ ಕಥೆಯೂ ಹೌದು ಇದು. ಒಳ್ಳೆಯ ಸಂಬಳ, ವಾರಾಂತ್ಯದಲ್ಲಿ ಎರಡು ದಿನಗಳ ರಜೆ, ಮನೆಯಿಂದಲೇ ಕೆಲಸ ಮಾಡಬಹುದು ಎಂಬ ಹೊಸ ಕೆಲಸದ ಸಂಸ್ಕೃತಿ... ಇವೆಲ್ಲ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರ ಪಾಲಿಗೆ ಐ.ಟಿ. ಲೋಕವು ತೆರೆದಿಟ್ಟ ಹೊಸ ಸಾಧ್ಯತೆಗಳು. ಅಷ್ಟೇ ಅಲ್ಲ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌), ಇನ್ಫೊಸಿಸ್‌ನಂತಹ ಕಂಪನಿಗಳು ಸಣ್ಣ ಸಣ್ಣ ಹೂಡಿಕೆದಾರರ ಪಾಲಿಗೂ ಅಸಾಧಾರಣ ಪ್ರಮಾಣದಲ್ಲಿ ಸಂಪತ್ತು ಸೃಷ್ಟಿಸಿಕೊಟ್ಟವು. ಭಾರತವು ಆರ್ಥಿಕ ಉದಾರೀಕರಣಕ್ಕೆ ತೆರೆದುಕೊಂಡ ನಂತರದ ಕಾಲಘಟ್ಟದಲ್ಲಿ ಈ ಕಂಪನಿಗಳು ಸಂಪತ್ತು ಸೃಷ್ಟಿಸಿಕೊಡುವ ವಿಚಾರದಲ್ಲಿ ತಮಗೆ ತಾವೇ ಸಾಟಿ ಎಂಬಂತೆ ಬೆಳೆದುನಿಂತಿವೆ. ತಾವೂ ಬೆಳೆದಿವೆ, ತಮ್ಮನ್ನು ನಂಬಿದವರನ್ನೂ ಬೆಳೆಸಿವೆ.

‘90ರ ದಶಕದ ಆರ್ಥಿಕ ಸುಧಾರಣೆಗಳು ಹಾಗೂ ಐ.ಟಿ. ಉದ್ಯಮವು ಜೊತೆಯಾಗಿ ಲಕ್ಷಾಂತರ ಭಾರತೀಯರನ್ನು ಮಧ್ಯಮ ವರ್ಗದ ವ್ಯಾಪ್ತಿಗೆ ಮೇಲೆತ್ತಿದವು. ಅವರ ಪಾಲಿಗೆ ಇಡೀ ವಿಶ್ವವನ್ನು ತೆರೆದಿರಿಸಿದವು. 70 ಹಾಗೂ 80ರ ದಶಕಗಳಲ್ಲಿ ಸ್ವಂತ ಮನೆ ಹೊಂದುವುದು, ವಿದೇಶ ಪ್ರಯಾಣ, ಸ್ವಂತಕ್ಕೊಂದು ಕಾರು ಕೊಳ್ಳುವುದು... ಇಂಥವನ್ನೆಲ್ಲ ಬೆರಗಿನಿಂದ ಕಾಣಲಾಗುತ್ತಿತ್ತು. ಆದರೆ, ಕೆಲಸ ಮಾಡಲು ಸಿದ್ಧರಿರುವವರಿಗೆ ಇವೆಲ್ಲವನ್ನೂ ಐ.ಟಿ. ಉದ್ಯಮ ಮತ್ತು 90ರ ದಶಕದ ಸುಧಾರಣೆಗಳು ಮುಕ್ತವಾಗಿಸಿದವು. ದೇಶದ ಸಾಮಾನ್ಯರ ಪಾಲಿಗೆ ಅಷ್ಟೆಲ್ಲ ಸಿಕ್ಕಿದ್ದು ಅದೇ ಮೊದಲು’ ಎಂದು ಹೇಳುತ್ತಾರೆ ಬೆಂಗಳೂರಿನ ತಕ್ಷಶಿಲಾ ಇನ್‌ಸ್ಟಿಟ್ಯೂಷನ್‌ನ ನಿರ್ದೇಶಕ ನಿತಿನ್ ಪೈ.

ದೇಶದ ಐ.ಟಿ. ವಲಯವು ಒಟ್ಟು 43 ಲಕ್ಷ ಜನರಿಗೆ ಉದ್ಯೋಗ ನೀಡಿದೆ ಎಂಬ ವರದಿಗಳಿವೆ. ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ಉದ್ಯೋಗ ಕಲ್ಪಿಸಿದ್ದು ಮಾತ್ರವೇ ಅಲ್ಲದೆ, ಐ.ಟಿ. ವಲಯಕ್ಕೆ ಇನ್ನೊಂದು ಹೆಗ್ಗಳಿಕೆ ಇದೆ. ‘ನಾಸ್ಕಾಂ ಅಂದಾಜಿನ ಪ್ರಕಾರ ಐ.ಟಿ. ವಲಯದಲ್ಲಿ ಕೆಲಸ ಮಾಡುವವರ ಪೈಕಿ ಶೇಕಡ 34ರಷ್ಟು ಜನ ಮಹಿಳೆಯರು. ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಕಡಿಮೆ ಪ್ರಾತಿನಿಧ್ಯ ಇರುವ ಈ ದೇಶದಲ್ಲಿ ಐ.ಟಿ. ಮತ್ತು ಬಿಪಿಒ (ವಾಣಿಜ್ಯ ಪ್ರಕ್ರಿಯೆ ಹೊರಗುತ್ತಿಗೆ) ವಲಯ ಹೆಚ್ಚಿನ ಪ್ರಾತಿನಿಧ್ಯ ನೀಡಿದೆ’ ಎಂದು ತಕ್ಷಶಿಲಾ ಇನ್‌ಸ್ಟಿಟ್ಯೂಷನ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರಣಯ್ ಕೋಟಸ್ಥಾನೆ ಹೇಳುತ್ತಾರೆ.

ಐ.ಟಿ. ವಲಯವು ದೇಶದ ಕೆಳಮಧ್ಯಮ ಹಾಗೂ ಮಧ್ಯಮ ವರ್ಗಗಳ ಆಕಾಂಕ್ಷೆಗಳಿಗೆ ಸ್ಪಂದಿಸಿದೆ. ಭಾರತದ ಐ.ಟಿ. ಮತ್ತು ಬಿಪಿಒ ವಲಯವು ವಿಶ್ವದ ಇತರ ದೇಶಗಳ ಜೊತೆ ಸ್ಪರ್ಧಿಸುತ್ತಿದೆ. ವಿಶ್ವಕ್ಕೆ ತೆರೆದುಕೊಂಡ ಕಾರಣದಿಂದಾಗಿ ಈ ವಲಯವು ತನ್ನ ಉದ್ಯೋಗಿಗಳಲ್ಲಿನ ಸ್ಪರ್ಧಾತ್ಮಕತೆ ಮತ್ತು ವೃತ್ತಿಪರತೆಯನ್ನು ಹೆಚ್ಚಿಸಿದೆ ಎಂದು ಪ್ರಣಯ್ ವಿವರಿಸುತ್ತಾರೆ.

ಭಾರತ ಮೂಲದ ಐ.ಟಿ. ಉದ್ಯೋಗಿಗಳು ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಸಂಪಾದಿಸಿದ್ದಾರೆ. ಹಾಗೆಯೇ, ಭಾರತದ ಜಾತಿ ವ್ಯವಸ್ಥೆ ಕೂಡ ಅಲ್ಲಿ ಬಲವಾಗಿ ಬೇರೂರಿದೆ ಎಂಬ ಚರ್ಚೆಗಳು ನಡೆದಿವೆ. ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಐ.ಟಿ. ಉದ್ಯಮಗಳಲ್ಲಿ ಜಾತಿ, ಪ್ರದೇಶ ಆಧಾರಿತ ತರತಮ ಪ್ರಜ್ಞೆ ಕೆಲಸ ಮಾಡುತ್ತಿದೆಯೇ ಎಂಬ ಚರ್ಚೆಗಳೂ ಇವೆ. ಐ.ಟಿ. ಉದ್ಯಮ ಕೂಡ ಸಮಾಜದ ಒಂದು ಅಂಗವೇ ಆಗಿರುವ ಕಾರಣ, ಸಮಾಜದಲ್ಲಿ ಹಾಸುಹೊಕ್ಕಾಗಿರುವ ತರತಮ ಅಲ್ಲಿ ಇರುವುದಿಲ್ಲ ಎನ್ನಲಾಗದು. ‘ಪ್ರಾಥಮಿಕ ಶಿಕ್ಷಣದಿಂದ ಆರಂಭಿಸಿ ಉನ್ನತ ಶಿಕ್ಷಣದವರೆಗಿನ ಭಾರತದ ಶಿಕ್ಷಣ ವ್ಯವಸ್ಥೆಯು ಎಷ್ಟರಮಟ್ಟಿಗೆ ಎಲ್ಲರನ್ನೂ ಒಳಗೊಳ್ಳುವಂತೆ ಇದೆಯೋ, ದೇಶದ ಐ.ಟಿ. ಉದ್ಯಮ ಕೂಡ ಅಷ್ಟರಮಟ್ಟಿಗೆ ಮಾತ್ರ ಒಳಗೊಳ್ಳುವಿಕೆಯನ್ನು ಸಾಧಿಸಬಹುದು’ ಎಂದು ಈ ಚರ್ಚೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎ. ನಾರಾಯಣ. ಆದರೆ, ನಿರ್ದಿಷ್ಟವಾಗಿ ಎಷ್ಟರಮಟ್ಟಿನ ಒಳಗೊಳ್ಳುವಿಕೆಯು ಐ.ಟಿ. ಉದ್ಯಮದಲ್ಲಿ ಸಾಧ್ಯವಾಗಿದೆ ಎಂಬ ಬಗ್ಗೆ ವಿಸ್ತೃತ ಅಧ್ಯಯನಗಳು ಆಗಬೇಕಿವೆ ಎಂದು ಅವರು ಹೇಳಿದರು.

ಕರ್ನಾಟಕದ ಸಣ್ಣ ಊರುಗಳ ಯುವಕರು ಐ.ಟಿ. ಉದ್ಯಮದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಕಾರಣವಾಗಿದ್ದರ ಹಿಂದೆ ರಾಜ್ಯ ಸರ್ಕಾರ ಕಟ್ಟಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಎಂಬ ವ್ಯವಸ್ಥೆಯ ಕೊಡುಗೆಯೂ ಇದೆ. ಸಿಇಟಿ ಬರೆದು, ಒಳ್ಳೆಯ ಅಂಕ ಗಳಿಸಿದವರು, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಡಿಮೆ ಶುಲ್ಕ ಪಾವತಿಸಿ ಎಂಜಿನಿಯರಿಂಗ್ ಪದವಿ ಪಡೆಯಲು ಸಾಧ್ಯವಾಯಿತು. ಆ ಪದವಿ ಪಡೆದಿದ್ದರಿಂದಾಗಿ, ಐ.ಟಿ. ಉದ್ಯಮದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ‘ಐ.ಟಿ. ಉದ್ಯಮ ಪ್ರವರ್ಧಮಾನಕ್ಕೆ ಬರುತ್ತಿದ್ದ ಹೊತ್ತಿನಲ್ಲಿ ಕರ್ನಾಟಕದಲ್ಲಿನ ಸಿಇಟಿ ವ್ಯವಸ್ಥೆಯು ಕೆಳಮಧ್ಯಮ ಮತ್ತು ಮಧ್ಯಮ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ನೆರವಿಗೆ ಬಂತು. ಹಾಗೆಯೇ, ಟಿಸಿಎಸ್‌ನಂತಹ ಕಂಪನಿಗಳು ಜಿಲ್ಲಾ ಕೇಂದ್ರಗಳು ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಇರುವ ಎಂಜಿನಿಯರಿಂಗ್ ಕಾಲೇಜುಗಳಿಂದಲೂ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಶುರು ಮಾಡಿದ ಪರಿಣಾಮ, ಐ.ಟಿ. ಉದ್ಯಮದಲ್ಲಿ ಸಣ್ಣ ಸಣ್ಣ ಊರುಗಳ ಯುವಕರಿಗೂ ಅವಕಾಶಗಳು ದೊರೆತವು’ ಎನ್ನುವುದು ಲೇಖಕ, ಕನ್ನಡ ಪರ ಕಾರ್ಯಕರ್ತ ವಸಂತ ಶೆಟ್ಟಿ ಅವರ ಅನಿಸಿಕೆ. ಶೆಟ್ಟಿ ಅವರು ಈ ಹಿಂದೆ ಐ.ಟಿ. ಉದ್ಯೋಗಿ ಆಗಿದ್ದರು.

1993ರಲ್ಲಿ ಇನ್ಫೊಸಿಸ್ ಕಂಪನಿಯ ಒಂದು ಷೇರಿನ ಮೌಲ್ಯವು ₹ 95 ಆಗಿತ್ತು. ಆ ಸಂದರ್ಭದಲ್ಲಿ, ₹ 950 ಕೊಟ್ಟು ಇನ್ಫೊಸಿಸ್‌ನ 10 ಷೇರುಗಳನ್ನು ಖರೀದಿಸಿದ್ದರೆ, ಆ ಹೂಡಿಕೆಯ ಮೌಲ್ಯ ಈಗ ಸರಿಸುಮಾರು ₹ 58 ಲಕ್ಷ ಆಗಿರುತ್ತಿತ್ತು. ನೌಕರರಿಗೆ ಹೊಸ ಬದುಕನ್ನು ನೀಡಿದ್ದು ಮಾತ್ರವೇ ಅಲ್ಲದೆ, ತನ್ನನ್ನು ನಂಬಿ ಹೂಡಿಕೆ ಮಾಡಿದವರಿಗೆ ಕೂಡ ಐ.ಟಿ. ವಲಯದ ಕಂಪನಿಗಳು ಅಗಾಧ ಪ್ರಮಾಣದಲ್ಲಿ ಸಂಪತ್ತು ಸೃಷ್ಟಿಸಿಕೊಟ್ಟಿವೆ ಎಂದು ಹೇಳುತ್ತಾರೆ ಇಂಡಿಯನ್‌ಮನಿ ಡಾಟ್‌ಕಾಂ ಸಂಸ್ಥೆಯ ಉಪಾಧ್ಯಕ್ಷ ಎಂ.ಎಸ್. ಶರತ್.

ಕೈತುಂಬ ಸಂಬಳ ತಂದುಕೊಡುವ ವಿಚಾರದಲ್ಲಿ, ಹೂಡಿಕೆದಾರರಿಗೆ ಸಂಪತ್ತು ತಂದುಕೊಡುವಲ್ಲಿ, ಲಕ್ಷಾಂತರ ಜನರಿಗೆ ಉದ್ಯೋಗ ನೀಡುವಲ್ಲಿ ಭಾರತದಲ್ಲಿ ತಕ್ಷಣಕ್ಕೆ ನೆನಪಾಗುವುದು ಐ.ಟಿ. ವಲಯವೇ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು