ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟ್ಟ ಮಾತು ಕೇಳದಂತೆ ಮಾಡಲೂ ಬಂದಿದೆ ಮೈಕ್ರೊಫೋನ್!

ನಿಮ್ಮ ಬೈಗುಳ ನಮಗೆ ಕೇಳಿಸದು!
Last Updated 28 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ರಾಜಕೀಯ ಸಭೆ–ಸಮಾರಂಭಗಳಲ್ಲಿ ಪರಸ್ಪರ ಆರೋಪಗಳ ಭರದಲ್ಲಿ ರಾಜಕೀಯ ನಾಯಕರ ಅವಾಚ್ಯ ಶಬ್ದಗಳು ಸಾಮಾನ್ಯವಾಗಿಬಿಟ್ಟಿವೆ. ಟಿ.ವಿ. ಕಾರ್ಯಕ್ರಮಗಳಲ್ಲಿ, ಬಹಿರಂಗ ವೇದಿಕೆಗಳಲ್ಲಿ ಕೆಟ್ಟ ಪದಗಳನ್ನು ಕೇಳಿಸಿಕೊಳ್ಳಲು ಸಭ್ಯರಿಗೆ ಖಂಡಿತ ಮುಜುಗರವಾಗಬಹುದು. ಟಿವಿ ಪ್ರಸಾರಗಳಲ್ಲಿ ಇಂಥ ಮಾತುಗಳಿಗೆ ಬೀಪ್ ಸೌಂಡ್ ಹಾಕುವುದಕ್ಕೆ ಅವಕಾಶವಿದ್ದರೂ, ನೇರಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ಹಾಗೆ ಮಾಡುವುದು ಸಾಧ್ಯವಾಗದು. ಆದರೆ ಮಾತನಾಡುವವರ ಬಾಯಿಗೆ ಬೀಗ ಹಾಕಲಂತೂ ಸಾಧ್ಯವಿಲ್ಲವಷ್ಟೆ. ಆದರೆ ಅವರ ಅನುಚಿತ ಮಾತುಗಳು ಇತರರ ಕಿವಿಗೆ ಬೀಳದಂತೆ ಖಂಡಿತ ತಡೆಯಬಹುದು. ಈ ಸಮಸ್ಯೆಗೆ ಪರಿಹಾರವಾಗಿಯೇ ವಿಶೇಷ ಮೈಕ್ರೊಫೋನ್ ಒಂದನ್ನು ತಯಾರಿಸಲಾಗಿದೆ.

ದುಬೈ ಡಿಜೈನರ್ ಜಿನಾ ಅಹ್ಮದ್ ಎಂಬುವವರು ‘ಥೆಮಿಸ್’ ಹೆಸರಿನ ಆ್ಯಂಟಿ ಅಫೆನ್ಸಿವ್ ಸ್ಪೀಕರ್ ತಯಾರಿಸಿದ್ದಾರೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ನೆರವಿನಿಂದ ಕಾರ್ಯನಿರ್ವಹಿಸುವ ಈ ಉಪಕರಣವು ಕೆಟ್ಟ ಪದಗಳನ್ನು ಗುರುತಿಸುತ್ತವೆ; ಅವು ಕೇಳುಗರ ಕಿವಿಗೆ ಬೀಳದಂತೆ ಸ್ವಯಂಚಾಲಿತವಾಗಿ ಮ್ಯೂಟ್ ಮಾಡುತ್ತದೆ. ಸಮಾಜಕ್ಕೆ ಉಪಯೋಗಕಾರಿಯಾದ ಈ ಸಾಧನ ಶೀಘ್ರ ಮಾರುಕಟ್ಟೆಗೆ ಪೂರ್ಣಪ್ರಮಾಣದಲ್ಲಿ ಬಳಕೆಗೆ ಬರಬೇಕಿದೆ. ಕೆಟ್ಟ ಪದಗಳಿಂದ ಉಂಟಾಗುವ ಪರಿಸರ ಮಾಲಿನ್ಯ ಆದಷ್ಟು ಬೇಗ ನಿಯಂತ್ರಣಕ್ಕೆ ಬರಲಿ ಎಂದು ಹಾರೈಸೋಣ.

ಮುಖಕ್ಕೂ ಮಾತಿಗೂ ಕೋಟಿ ಬೆಲೆ

ರೋಬೊಟಿಕ್ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ನಿತ್ಯ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇವೆ. ಈ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿರುವ ರಷ್ಯಾದ ಪ್ರೋಮೊಬೋಟ್ ಸಂಸ್ಥೆಯು ಮನುಷ್ಯರ ಮುಖ, ಧ್ವನಿ ಮೇಲಿನ ಹಕ್ಕುಸ್ವಾಮ್ಯ ಪಡೆಯಲು ಮುಂದಾಗುತ್ತಿದೆ. 2019ರಿಂದ ಈ ಸಂಸ್ಥೆ ಹುಮನ್ಯಾಡ್ ರೋಬೊಗಳ ತಯಾರಿಯಲ್ಲಿ ಮಗ್ನವಾಗಿದೆ. ಈ ರೋಬೊಗಳನ್ನು ಮತ್ತಷ್ಟು ಅಭಿವೃದ್ಧಿ ಮಾಡುವ ಸಲುವಾಗಿ ಆಸಕ್ತರ ಮುಖ ಹಾಗೂ ಧ್ವನಿ ಮೇಲಿನ ಹಕ್ಕುಸ್ವಾಮ್ಯ ಪಡೆದು ಅವನ್ನು ರೋಬೊಗಳಿಗೆ ಜೋಡಿಸಲು ಶ್ರಮಿಸುತ್ತಿದೆ. ಇದರಿಂದ ರೋಬೊಗಳು ಹೆಚ್ಚು ನೈಜವಾಗಿ ಕಾಣುತ್ತವೆ ಎಂಬುದು ಸಂಸ್ಥೆಯ ಆಲೋಚನೆ. ಇದಕ್ಕಾಗಿ 25 ವರ್ಷ ಮೇಲ್ಪಟ್ಟವರು ತಮ್ಮ ಧ್ವನಿ ಹಾಗೂ ಮುಖಚಹರೆಯನ್ನು ತಮ್ಮ ಸಂಸ್ಥೆಗೆ ಮಾರಿಕೊಳ್ಳುವ ಅವಕಾಶ ಕಲ್ಪಿಸುತ್ತಿದೆ. ಇದಕ್ಕೆ ಸುಮಾರು ಎರಡು ಲಕ್ಷ ಡಾಲರ್ (ಸುಮಾರು ರೂ. 1.5 ಕೋಟಿ) ನೀಡುವುದಾಗಿ ಪ್ರಕಟಿಸಿದೆ. ಆದರೆ ಈ ಅವಕಾಶ ಅಷ್ಟು ಸುಲಭವಲ್ಲ. ಇದಕ್ಕಾಗಿ ಸಂಸ್ಥೆ ಹಲವು ಷರತ್ತುಗಳನ್ನು ವಿಧಿಸಿದೆ. ಹಲವು ಪರೀಕ್ಷೆಗಳನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ನೂರಾರು ಗಂಟೆ ಭಾಷಣಸ್ಪರ್ಧೆ, ಮುಖಚಹರೆಗಾಗಿ ಒಂದಷ್ಟು ದಿನ ಫೋಟೊಶೂಟ್‌ – ಹೀಗೆ ಕೆಲವು ಸ್ಪರ್ಧೆಗಳಲ್ಲಿ ಭಾಗವಹಿಸಬೇಕಾಗುತ್ತದೆ ಎಂದು ತಿಳಿಸಿದೆ. ಈ ಎಲ್ಲ ಸ್ಪರ್ಧೆ, ಪರೀಕ್ಷೆಗಳಲ್ಲಿ ಉತ್ತೀರ್ಣರಾದರವರ ಮುಖ ಮತ್ತು ಮಾತುಗಳು ಕೋಟಿಗಟ್ಟಲೇ ಸಂಪಾದಿಸುತ್ತವೆ! ನಮ್ಮ ಮುಖಕ್ಕೂ ಮಾತಿಗೂ ಬೆಲೆ ಇದೆ ಎಂದು ತಂತ್ರಜ್ಞಾನ ತೋರಿಸಿಕೊಡುತ್ತಿದೆ.

ಶುದ್ಧವಾಗಲಿ ಗಾಳಿ!

ಸ್ವಚ್ಛಗಾಳಿ ಸೇವಿಸಿದರೆ ಮಾತ್ರ ಆರೋಗ್ಯ ಚೆನ್ನಾಗಿರುತ್ತದೆ ಎಂಬುದು ತಿಳಿದಿರುವ ಸಂಗತಿಯೇ. ಆದರೆ ಮಿತಿಮೀರಿದ ವಾಯುಮಾಲಿನ್ಯದಿಂದಾಗಿ ಈಗ ಶುದ್ಧವಾಯು ಕೂಡ ಮರೀಚಿಕೆಯಾಗುತ್ತಿದೆ. ಮಹಾನಗರಗಳಲ್ಲಿ ವಾಸಿಸುತ್ತಿರುವವ ರಿಗಂತೂ ಮನೆಯಲ್ಲೂ ಒಳ್ಳೆಯ ಗಾಳಿ ಸಿಗುವುದು ದುಸ್ತರವೇ ಆಗುತ್ತಿದೆ. ಇದಕ್ಕೆ ಪರಿಹಾರವಾಗಿ ಏರ್ ಪ್ಯೂರಿಫೈಯರ್ ಉಪಕರಣಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಈ ನಿಟ್ಟಿನಲ್ಲಿ ಹೊಸ ಪ್ರಯೋಗ ಮಾಡಿರುವ ಯುರೋಪ್‌ನ ಏಸ್ಪೆನ್ ಸಂಸ್ಥೆ ಹೆಚ್ 13 ಹೆಪಾ ಯುವಿಸ್ ಜೆರ್ಮಿ ಸೈಡಲ್ ಏರ್ ಪ್ಯೂರಿಫೈಯರ್ ಹೆಸರಿನ ಹೊಸ ಪರಿಕರವನ್ನು ತಯಾರಿಸಿದೆ. ಏರ್ ಕೂಲರ್ ರೀತಿ ತಣ್ಣನೆ ಗಾಳಿ ನೀಡುವ ಜತೆಗೆ, ಗಾಳಿಯಲ್ಲಿನ ಹಾನಿಕಾರಕ ಕ್ರಿಮಿಗಳನ್ನು ನೇರಳಾತೀತ ಕಿರಣಗಳ ಮೂಲಕ ಕೊಲ್ಲುತ್ತದೆ. ಸುಮಾರು ಸಾವಿರ ಚದರ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ಗಾಳಿಯನ್ನು ಸ್ವಚ್ಛ ಮಾಡುವ ಸಾಮರ್ಥ್ಯ ಈ ವಿಶೇಷ ಉಪಕರಣಕ್ಕಿದೆ. ನಾವು ಮತ್ತು ನಮ್ಮ ಪರಿಸರ ಸ್ವಚ್ಛವಾಗಿರಲು ಈ ಉಪಕರಣ ಮುಂದಿನ ದಿನಗಳಲ್ಲಿ ಕಾರಣವಾಗಬಹುದು.

ಕ್ಷಣಗಳಲ್ಲೇ ಮಾಸ್ಕ್ ಸ್ವಚ್ಛ!

ಕೊರೊನಾ ಹಾವಳಿಯಿಂದಾಗಿ ಮಾಸ್ಕ್ ಇಲ್ಲದೆ ಮನೆಯಿಂದ ಹೊರಗಡೆ ಕಾಲಿಡುವ ಪರಿಸ್ಥಿತಿ ಇಲ್ಲ. ಬಳಕೆಗೊಂಡ ಮಾಸ್ಕ್‌ಗಳ ನಿರ್ವಹಣೆ ಕೂಡ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಬಳಸಿ ಬೀಸಾಡುವ ಮಾಸ್ಕ್‌ಗಳಿಗಿಂತ ಪುನರ್ಬಳಕೆಯಾಗುವಂಥ ಮಾಸ್ಕ್‌ಗಳಿಗೆ ಹೆಚ್ಚು ಬೇಡಿಕೆ ಇದೆ. ಆದರೆ ಪುರುಸೊತ್ತಿಲ್ಲದ ಹಲವರಿಗೆ ಇವನ್ನು ಸ್ವಚ್ಛಗೊಳಿಸಿಕೊಂಡು ಬಳಸಿಕೊಳ್ಳುವುದು ಸ್ವಲ್ಪ ಕಷ್ಟವೇ. ಈ ಸಮಸ್ಯೆಗೆ ಪರಿಹಾರವೆಂಬಂತೆ ‘ಶಾನಿಕೇಸ್’ ಹೆಸರಿನ ಹೊಸ ಬಗೆಯ ಉಪಕರಣವನ್ನು ತಯಾರಿಸಲಾಗಿದೆ. ನೋಡಲು ವಾಟರ್ ಬಾಟಲ್‌ನಂತೆ ಕಾಣುವ ಈ ಪರಿಕರದ ಮುಚ್ಚಳವನ್ನು ತೆಗೆದು, ಅದರೊಳಗೆ ಬಳಸಿದ ಮಾಸ್ಕ್ ಇಡಬೇಕು. ಬಳಿಕ ಸ್ವಿಚ್ ಆನ್ ಮಾಡಿದರೆ ಸಾಕು ಕ್ಷಣಗಳಲ್ಲೇ ಮಾಸ್ಕ್‌ ಸ್ವಚ್ಛವಾಗುತ್ತದೆ. ಈ ಪರಿಕರದಲ್ಲಿ ಬಿಡುಗಡೆಯಾಗುವ ನೇರಳಾತೀತ ಕಿರಣಗಳು ಮಾಸ್ಕ್‌ ಮೇಲಿರುವ ಕ್ರಿಮಿಗಳನ್ನು ಕೊಲ್ಲುತ್ತವೆ. ಕೇವಲ ಮಾಸ್ಕ್‌ಗಳಷ್ಟೇ ಅಲ್ಲದೆ, ಕರವಸ್ತ್ರಗಳನ್ನೂ ಇದರಲ್ಲಿ ಸ್ವಚ್ಛಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT