ಗುರುವಾರ , ಮಾರ್ಚ್ 23, 2023
28 °C

ಚಿಪ್‌ಗಳ ರಾಜ್ಯದಲ್ಲಿ ಪ್ಲಾಸ್ಟಿಕ್‌ ಚಿಪ್‌ ನರ್ತನ

ಕ್ಷಮಾ ವಿ. ಭಾನುಪ್ರಕಾಶ್ Updated:

ಅಕ್ಷರ ಗಾತ್ರ : | |

Prajavani

ಎಆರ್‌ಎಂ ಪ್ಲಾಸ್ಟಿಕ್ ಚಿಪ್. ಇದನ್ನು ಪ್ಲಾಸ್ಟಿಕ್‌ನಿಂದ ಮಾಡಿರುವುದರಿಂದ, ಇದು ನಮ್ಯತೆಯ ಪ್ರತಿರೂಪ. ಹೀಗಾಗಿ ಇದನ್ನು ಬಾಗಿಸಬಹುದು, ಬಳುಕಿಸಬಹುದು, ಮಡಚಿ ಬಿಡಬಹುದು.

ಕಾಲ ನಿಜವಾಗಿಯೂ ಬದಲಾಗಿಹೋಗಿದೆ. ಅಂದೊಂದಿತ್ತು ಕಾಲ! ಎಲ್ಲವೂ ಬೃಹತ್. ಬೃಹತ್ತಾದ ಅಂಗಳವಿರುವ ಮನೆಗಳು, ಬೃಹತ್ತಾದ ಒರಳು, ಬೃಹತ್ತಾದ ದಾಸ್ತಾನು ಹಗೇವು, ಆ ಕಾಲದ ರೇಡಿಯೊ, ಟಿ.ವಿ., ಹೊಲಿಗೆಯಂತ್ರದಂತಹ ಎಲ್ಲ ಮಶೀನ್‌ಗಳೂ ದೊಡ್ಡ ಗಾತ್ರವೇ! ಅಷ್ಟೇ ಏಕೆ ಮೊದಲಿಗೆ ತಯಾರಾದ ಚಾರ್ಲ್ಸ್ ಬ್ಯಾಬೇಜ್‌ನ ಮೊಟ್ಟಮೊದಲ ಕಂಪ್ಯೂಟರ್ ಇರಬಹುದು, ಅದಕ್ಕೆ ಮೂಲವೆಂಬಂತಿದ್ದ ಗಣಿತತಜ್ಞ ಆಲನ್ ಟ್ಯೂರಿಂಗ್‌ನ ಮಶೀನ್ ಇರಬಹುದು, ಇಡಿಯ ಕೋಣೆಯ ಗಾತ್ರದ್ದೇ. ಮೊಬೈಲ್‌ ಫೋನ್‌ಗಳೂ ಮೊದಲು ಮಾರುಕಟ್ಟೆಗೆ ಕಾಲಿಟ್ಟಾಗ ಅವುಗಳ ಭಾರ, ಗಾತ್ರ ಕಡಿಮೆಯೇನಿರಲಿಲ್ಲ. ಇದಕ್ಕೆಲ್ಲಾ ಒಂದು ಕಾರಣವಿರಲೇಬೇಕಲ್ಲಾ? ಹೇಗೆ ತುಂಬು ಕುಟುಂಬದ ಹೆಚ್ಚು ಜನರಿಗೆ ದೊಡ್ಡ ಮನೆ, ದೊಡ್ಡ ದಾಸ್ತಾನು, ದೊಡ್ಡ ಪಾತ್ರೆ–ಪರಡ ಬೇಕೋ, ದೊಡ್ಡ ದೊಡ್ಡ ಅನೇಕ ಭಾಗಗಳನ್ನು ಒಳಗೊಂಡು ತಯಾರಾದ ಮಶೀನ್‌ಗಳಿಗೂ ದೊಡ್ಡ ಗಾತ್ರವಿರುವುದು, ಭಾರವಿರುವುದು ಸಹಜ. ಆದರೆ ಸಂಶೋಧನೆಗಳು, ಅನ್ವೇಷಣೆಗಳು ನಡೆಯುತ್ತಾ ಸಾಗಿದ ಹಾಗೆ, ಸುಧಾರಣೆಗಳು ಎಲ್ಲಾ ಕ್ಷೇತ್ರಗಳಲ್ಲೂ ಬಂದು, ಕಡಿಮೆ ಜಾಗ ಆಕ್ರಮಿಸುವ, ವೇಗವಾಗಿ ಕಾರ್ಯನಿರ್ವಹಿಸುವ ಮಶೀನ್‌ಗಳ ರಾಜ್ಯಭಾರ ಪ್ರಾರಂಭವಾಯಿತು. ಅದರ ಫಲಿತಾಂಶವೇ ವರ್ಷವರ್ಷಕ್ಕೂ ಹೊರಬರುತ್ತಿರುವ ಸ್ಮಾರ್ಟ್ ಮಶೀನ್‌ಗಳಾದ ಟಿವಿ, ಲ್ಯಾಪ್‌ಟಾಪ್‌, ಟ್ಯಾಬ್, ಫೋನ್, ಧರಿಸಬಲ್ಲ ಬ್ಯಾಂಡ್‌ನ ನವನವೀನ ಆವೃತ್ತಿಗಳು

ಈ ಎಲ್ಲ ಮಶೀನ್‌ಗಳ ಹೊಸ ವರ್ಶನ್‌ಗಳನ್ನು ಮೀರಿಸಬಲ್ಲ ಸಾಧ್ಯತೆಯೊಂದು ಕಂಡುಬಂದಿದೆ. ಅದೇನಾದರೂ ಸಾಧ್ಯವಾಗಿಬಿಟ್ಟರೆ ಅಂಗೈಯಲ್ಲಿ ಅಡಗಿರುವ ಸ್ಮಾರ್ಟ್‌ ಫೋನ್‌ಗಳನ್ನು ಬೆರಳಿನಂಚಿಗೆ ಮಡಚಿ ಇಡಬಹುದು, ಹೆಬ್ಬೆಟ್ಟಿನ ಗಾತ್ರದ ಸ್ಮಾರ್ಟ್‌ ಬ್ಯಾಂಡ್‌ ಅನ್ನು ಪುಟ್ಟ ಮಾತ್ರೆಗಿಂತ ಚಿಕ್ಕದಾಗಿ ಕುಗ್ಗಿಸಬಹುದು. ಇದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಎಆರ್‌ಎಂ ಸಂಸ್ಥೆಯು ಸಂಪೂರ್ಣವಾಗಿ ಪ್ಲಾಸ್ಟಿಕ್ ಎಆರ್‌ಎಂ ಚಿಪ್‌ಗಳನ್ನು ರೂಪಿಸಿದೆ. ಇದರಲ್ಲಿ ಹೊಸದೇನಿದೆ ಎಂದಿರಾ? ಈಗಾಗಲೇ ಮೈಕ್ರೋಚಿಪ್‌ಗಳ ಬಳಕೆ ಇದೆಯಲ್ವೇ? ಆ ಮೈಕ್ರೋಚಿಪ್‌ಗಳು ಎಷ್ಟೇ ಪುಟ್ಟವಾದ್ರೂ, ಅದರ ಪ್ರಮುಖ ಅಂಶ ಸಿಲಿಕಾನ್. ಸಿಲಿಕಾನ್ ಎಆರ್‌ಎಂ ಚಿಪ್‌ಗಳು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಸಹ, ಆ ಚಿಪ್ ಇರುವ ಭಾಗವನ್ನು ಮಾತ್ರ ಮಡಚುವ ಅವಕಾಶವಿಲ್ಲ. ಅದು ಫೋಲ್ಡೆಬಲ್ ಟ್ಯಾಬ್ ಆಗಿರಬಹುದು, ಮಡಚಬಲ್ಲ ಫೋನ್ ಆಗಿರಬಹುದು, ಅದರೊಳಗೆ ಅಡಗಿರುವ ಚಿಪ್ ಮಾತ್ರ ಇದ್ದ ಹಾಗೆ ಇರಬೇಕಾಗಿತ್ತು. ಆದರೆ, ತಂತ್ರಜ್ಞಾನ ಜಗತ್ತಿನಲ್ಲಿ ದಿನದಿನಕ್ಕೂ ಬದಲಾಗುವ ಸತ್ಯಗಳಲ್ಲಿ ಇದೂ ಒಂದು ಎಂದು ಸಾಬೀತು ಮಾಡಿರುವುದು ಎಆರ್‌ಎಂ ಪ್ಲಾಸ್ಟಿಕ್ ಚಿಪ್. ಇದನ್ನು ಪ್ಲಾಸ್ಟಿಕ್‌ನಿಂದ ಮಾಡಲಾಗಿರುವುದರಿಂದ, ಇದು ನಮ್ಯತೆಯ ಪ್ರತಿರೂಪ. ಹೀಗಾಗಿ ಇದನ್ನು ಬಾಗಿಸಬಹುದು, ಬಳುಕಿಸಬಹುದು, ಮಡಚಿಬಿಡಬಹುದು. ಹಾಗಾಗಿ, ಇದನ್ನು ಒಳಗೊಂಡ ಸ್ಮಾರ್ಟ್ ಸಾಧನವು ಮತ್ತಷ್ಟು ಮಗದಷ್ಟು ಕಿರಿದಾಗಲು ಇನ್ಯಾವುದೇ ಅಂಕೆಶಂಕೆಯಿಲ್ಲ.

ಈ 32 ಬಿಟ್‌ನ ಎಆರ್‌ಎಂ ಪ್ಲಾಸ್ಟಿಕ್ ಚಿಪ್, ಅತ್ಯಂತ ಮೂಲಭೂತ ಆವೃತ್ತಿಯಾದ ಕಾರ್ಟೆಕ್ಸ್ ಎಂ. 0 ಪ್ರೊಸೆಸರ್ ವಿನ್ಯಾಸದ ಮೇಲೆ ಆಧರಿತ ರಚನೆಯಾಗಿದ್ದು, ರ್‍ಯಾಮ್‌ನ 128 ಬೈಟ್‌ಗಳು ಮತ್ತು ರೋಮ್‌ನ 456 ಬೈಟ್‌ಗಳನ್ನು ಬಳಸುತ್ತದೆ. ಈ ಹಿಂದೆ ವಿನ್ಯಾಸಗೊಳಿಸಲಾದ ಇದೇ ರೀತಿಯ ಚಿಪ್‌ಗಳಿಗಿಂತ 12 ಪಟ್ಟು ಉತ್ಕೃಷ್ಟವಾಗಿ ಇದು ಕಾರ್ಯನಿರ್ವಹಿಸಲಿದೆ ಎನ್ನುತ್ತಾರೆ, ಇದರ ತಯಾರಕರು. ತಾಂತ್ರಿಕವಾಗಿ ಇಷ್ಟೆಲ್ಲಾ ಅನುಕೂಲತೆಯಿರುವ ಈ ಚಿಪ್ ಅನ್ನು ಕಾಗದದಿಂದ ಹಿಡಿದು ಪ್ಲಾಸ್ಟಿಕ್ ಬ್ಯಾಗ್‌ಗಳವರೆಗೆ, ವಿವಿಧ ಬಗೆಯ ಆಹಾರ ಪ್ಯಾಕೇಜಿಂಗ್ ಸಾಮಗ್ರಿಗಳಿಂದ ಮೊದಲ್ಗೊಂಡು ಬ್ಯಾಂಡೇಡ್‌ನಂತಹ ವೈದ್ಯಕೀಯ ಕ್ಷೇತ್ರದ ಪುಟ್ಟ ಪುಟ್ಟ ಅಗತ್ಯತೆಗಳೊಳಗೂ ಸೇರಿಸಬಹುದಾಗಿದೆ. ಇದರಿಂದ ಆರೋಗ್ಯಕ್ಷೇತ್ರವನ್ನು ಸುಧಾರಿಸಲು, ವಿವಿಧ ಜೀವಿಗಳ ಜೀವನಚಕ್ರವನ್ನು ಅಧ್ಯಯನಿಸಲು, ಸಾಮಾಜಿಕ ಬದಲಾವಣೆಗಳನ್ನು ದಾಖಲಿಸಲು, ವಾಣಿಜ್ಯಿಕ ಏರುಪೇರುಗಳನ್ನು ವಿಶ್ಲೇಷಿಸಲು – ಹೀಗೆ ಎಲ್ಲೆಡೆಯೂ ಎಆರ್‌ಎಂ ಪ್ಲಾಸ್ಟಿಕ್‌ ಚಿಪ್‌ಗಳ ಬಳಕೆ ಸಾಧ್ಯ ಎಂಬುದು ಅಚ್ಚರಿದಾಯಕ, ಭರವಸೆದಾಯಕ ಎನ್ನುತ್ತಾರೆ, ಎಆರ್‌ಎಂ ಸಂಶೋಧಕರು.

ಆದರೂ, ನಮ್ಮ ನಿಮ್ಮ ಕೈಯಲ್ಲಿನ ಚತುರ ಸಾಧನಗಳ ಭಾಗವಾಗಿ ಬರಲು ಈ ಎಆರ್‌ಎಂ ಪ್ಲಾಸ್ಟಿಕ್‌ ಚಿ‍‍ಪ್‌ಗಳಿಗೆ ಒಂಚೂರು ಕಾಲಾವಕಾಶ ಬೇಕಿದೆ. ಇದಕ್ಕೆ ಕಾರಣ, ಮಾರುಕಟ್ಟೆಯಲ್ಲಿ ಉತ್ಕೃಷ್ಟವೆನಿಸಿರುವ ಸ್ನಾ‍ಪ್‌ ಡ್ರ್ಯಾಗನ್ 888 ಚಿಪ್‌ಗೆ ಹೋಲಿಸಿದರೆ, ಅದರ 3 ಗಿಗಾ ಹರ್ಟ್ಸ್‌ ವೇಗಕ್ಕಿಂತ ಇದರ  29 ಕಿಲೋ ಹರ್ಟ್ಸ್‌ ಕ್ಲಾಕ್ ಸ್ಪೀಡ್ ಬಹಳ ಕಡಿಮೆ. ಅಷ್ಟೇ ಅಲ್ಲ, ಇದೇ ಎಆರ್‌ಎಂ ವಿನ್ಯಾಸದ ಸಿಲಿಕಾನ್ ಚಿಪ್ ಕೇವಲ 10 ಮೈಕ್ರೋವಾಟ್‌ಗಳಷ್ಟು ಶಕ್ತಿ ಬಳಸುವಾಗ, ಎಆರ್‌ಎಂ ಪ್ಲಾಸ್ಟಿಕ್‌ ಚಿಪ್‌ಗಳು 20 ಮಿಲಿವ್ಯಾಟ್‌ಗಳಷ್ಟು ಶಕ್ತಿ ಬಳಸುತ್ತದೆಯೆಂದರೆ ಅದು ಲಾಭದಾಯಕವಲ್ಲ. ಆದರೆ ಈ ಎಆರ್‌ಎಂ ಪ್ಲಾಸ್ಟಿಕ್‌ ಚಿಪ್‌ಗಳು ಕೊಡಮಾಡುವ ಅನುಕೂಲತೆಗಳಿಗೆ ಹೋಲಿಸಿದರೆ ಇದು ದೊಡ್ಡ ಮಾತೇನಲ್ಲ. ಹಾಗಾಗಿ, ಕೊಂಚ ಸುಧಾರಣೆಗಳ ನಂತರ, ಇರುವ ಸವಾಲುಗಳಿಗೆ ಉತ್ತರ ಕಂಡುಕೊಂಡು ನಿಮ್ಮೆದುರಿಗೆ ಹಾಜರ್ ಆಗಲಿದೆ ಪಳಗಿದ ನೃತ್ಯಪಟುವಿನಂತೆ ಬಾಗಬಲ್ಲ, ಬಳುಕಬಲ್ಲ ಸ್ಮಾರ್ಟ್ ಸಾಧನಗಳು ಮತ್ತು ಅದಕ್ಕೆ ಕಾರಣವಾಗಿ ಅದರೊಳಗೆ ಅಡಗಿ ಕುಳಿತ ಎಆರ್‌ಎಂ ಪ್ಲಾಸ್ಟಿಕ್‌ ಚಿಪ್‌ಗಳು. ಆ ಹೊಸ ಸಾಧ್ಯತೆಗಳಿಗೆ ಎದುರು ನೋಡೋಣ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು