ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಕ್ರೀಟ್‌ ಪರೀಕ್ಷೆಗೆ ಪ್ರೋಬ್‌

Published : 5 ಏಪ್ರಿಲ್ 2022, 21:30 IST
ಫಾಲೋ ಮಾಡಿ
Comments

ಬೆಂಗಳೂರಿನಲ್ಲಂತೂ ‘ವೈಟ್ ಟಾಪಿಂಗ್’ ಎಂಬುದು ಎಲ್ಲರಿಗೂ ಯಾವುದಾದರೂ ಒಂದು ಸಂದರ್ಭದಲ್ಲಿ ತಿಳಿದಿರುವ ಸಂಗತಿ. ಊರಿನೊಳಗಿನ ಪ್ರಮುಖ ರಸ್ತೆಗಳಲ್ಲಿದ್ದಿದ್ದರೂ ಹೊರ ವರ್ತುಲ ರಸ್ತೆಯಲ್ಲಿ ಸಂಚರಿಸಿದರೆ ವೈಟ್ ಟಾಪಿಂಗ್‌ನಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. ವೈಟ್ ಟಾಪಿಂಗ್ ಎಂಬುದು ಕಾಂಕ್ರೀಟ್‌ನಿಂದ ಕೂಡಿರುವ ರಸ್ತೆಗೆ ಬಂದಿರುವ ಹೆಸರು. ಇನ್ನು ಈಚೆಗೆ ಯಾವುದೇ ಕಟ್ಟಡಗಳನ್ನು ನೋಡಿದರೂ ಅವನ್ನು ಕಾಂಕ್ರೀಟ್‌ನಿಂದ ಕಟ್ಟಿರುತ್ತಾರೆ. ಬರಿ ಕಟ್ಟಡಗಳಲ್ಲದೆ ಸೇತುವೆಗಳನ್ನು, ಅಣೆಕಟ್ಟುಗಳನ್ನು ಕೂಡ ಕಾಂಕ್ರೀಟ್‌ನಿಂದ ಕಟ್ಟಲಾಗುತ್ತದೆ. ಕಾಂಕ್ರೀಟ್ ನಿರ್ಮಿತ ಕಟ್ಟಡಗಳಾಗಲಿ, ಸೇತುವೆಗಳಾಗಲಿ ಅಥವಾ ರಸ್ತೆಗಳಾಗಲಿ ಇವೆಲ್ಲದರಲ್ಲಿ ಸಿಮೆಂಟ್‌ನ ಜೊತೆ ಉಕ್ಕಿನ ರೀಬಾರ್‌ಗಳನ್ನು ಕಾಂಕ್ರೀಟ್ ರಚನೆಯನ್ನು ಬಲವರ್ಧಿಸಲು ಬಳಸಲಾಗುತ್ತದೆ.

ಆದರೆ ಕಾಂಕ್ರೀಟ್‌ನಲ್ಲಿರುವ ಉಕ್ಕಿನ ರೀಬಾರ್‌ಗಳು ಹಲವಾರು ಕಾರಣಗಳಿಂದ ತುಕ್ಕು ಹಿಡಿಯುತ್ತದೆ. ಇದರಿಂದ ಕಾಂಕ್ರೀಟ್ ರಚನೆಯ ಬಲ ಕ್ಷೀಣಿಸುತ್ತದೆ. ಕಾಂಕ್ರೀಟ್ ರಚನೆಯಲ್ಲಿ ನೀರಿನ ಸೋರಿಕೆ, ರಾಸಾಯನಿಕಗಳ ಸಂಪರ್ಕ, ತಪ್ಪಾದ ಲವಣಾಂಶ ಮತ್ತು ಆಮ್ಲೀಯತೆಯಂತಹ ಹಲವಾರು ಅಂಶಗಳು ಉಕ್ಕಿನ ರೀಬಾರ್‌ಗಳು ತುಕ್ಕು ಹಿಡಿಯುವುದಕ್ಕೆ ಕಾರಣವಾಗಬಹುದು. ಸಾಧಾರಣವಾಗಿ ಎಲ್ಲ ಉಕ್ಕಿನ ರೀಬಾರ್‌ಗಳಿಗೆ ಅಂಟಿಕೊರೊಸಿವ್ ಲೇಪನಗಳನ್ನು ಬಳಸಿದ್ದರೂ ಇವು ತುಕ್ಕಿಗೆ ಒಳಗಾಗುತ್ತವೆ. ಹಾಗಾಗಿ ನಮ್ಮ ಆರೋಗ್ಯವನ್ನು ಸಕಾಲಿಕವಾಗಿ ಪರೀಕ್ಷಿಸಿದಂತೆ, ಕಾಂಕ್ರೀಟ್‌ನಲ್ಲಿ ಸಕಾಲದಲ್ಲಿ ತುಕ್ಕು ಪತ್ತೆ ಹಚ್ಚುವುದು ಅನಿವಾರ್ಯವಾಗಿದೆ. ಇದನ್ನು ಮುಂಚಿತವಾಗಿಯೇ ಕಂಡುಹಿಡಿದು ಸೂಕ್ತ ಕ್ರಮವನ್ನು ಕೈಗೊಂಡರೆ ಮುಂದೆ ಆಗುವ ಅನಾಹುತಗಳನ್ನು ತಡೆಗಟ್ಟಬಹುದು.

ಕಾಂಕ್ರೀಟ್‌ನಲ್ಲಿ ಹುದುಗಿರುವ ರೆಬಾರ್‌ಗಳಲ್ಲಿನ ತುಕ್ಕು ಪ್ರಮಾಣವನ್ನು ಮಾಪಿಸಲು ವಿಜ್ಞಾನಿಗಳು ಒಂದು ಹೊಸ ತಪಾಸಕವನ್ನು ಅಭಿವೃದ್ಧಿಪಡಿಸಿದ್ದಾರೆ. ಮಾಪನವನ್ನು ಮಾಡಲು ಇದನ್ನು ಕಾಂಕ್ರೀಟ್ ರಚನೆಯ ಮೇಲ್ಮೈಯಲ್ಲಿರಿಸಿ ಪರೀಕ್ಷೆ ಮಾಡಬಹುದು. ಇದಕ್ಕೆಂದೇ ಬೇಕಾಗುವ ಪ್ರೋಬ್ ಮತ್ತು ಸಂವೇದಕ ವಿನ್ಯಾಸ ಸುಧಾರಣೆಯಿಂದ ಹೊಸ ಸಿಗ್ನಲ್ ಪ್ರೊಸೆಸಿಂಗ್ ತಂತ್ರಗಳನ್ನು ರೂಪಿಸಿ ಸಾಧಾರಣ ಮಾಪನ ತಂತ್ರಗಳಿಗಿಂತ ಹೆಚ್ಚು ಸೂಕ್ಷ್ಮ ಮತ್ತು ನಿಖರವಾಗಿ ಮಾಪನ ಮಾಡಲು ಸಾಧ್ಯವಾಗುತ್ತದೆ. ಇದಕ್ಕೆ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಭಾಗಶಃ ಧನಸಹಾಯ ಕೂಡ ಲಭಿಸಿದೆ.

ಕಾಂಕ್ರೀಟ್‌ನ ಒಳಗಿರುವ ಉಕ್ಕಿನಲ್ಲಿ ತುಕ್ಕು ಹಿಡಿದಿರುವುದೇ ಎಂದು ಪರೀಕ್ಷಿಸಲು ಪ್ರಸ್ತುತವಾಗಿ ಅರ್ಧ-ಕೋಶದ ಸಂಭಾವ್ಯ ಮಾಪನ ವಿಧಾನವನ್ನು ಬಳಸಲಾಗುತ್ತದೆ. ಈ ವಿಧಾನದಲ್ಲಿ ಮಾಪಿಸುವ ಉಪಕರಣ ಉಕ್ಕಿನ ಸಂಪರ್ಕ ಹೊಂದುವಷ್ಟು ಕಾಂಕ್ರೀಟ್ ರಚನೆಯನ್ನು ಕೊರೆಯಬೇಕಾಗುತ್ತದೆ. ಇದರಿಂದ ತುಕ್ಕು ಹಿಡಿದ ಮತ್ತು ತುಕ್ಕು ಹಿಡಿಯದ ಉಕ್ಕಿನಲ್ಲಿ ಉಂಟಾಗುವ ಎಲೆಕ್ಟ್ರೋಕೆಮಿಕಲ್ ಗುಣಲಕ್ಷಣಗಳ ಬದಲಾವಣೆಯನ್ನು ವೋಲ್ಟೇಜ್ ವ್ಯತ್ಯಾಸದಿಂದ ಗುರುತಿಸಲಾಗುತ್ತದೆ. ಆದರೆ ಈ ವಿಧಾನವು ಕಾಂಕ್ರೀಟ್ ರಚನೆಯನ್ನು ತೊಂದರೆಗೊಳಿಸುವುದರ ಜೊತೆ ತುಕ್ಕು ಆಗಿರುವ ಸಂಭವನೀಯ ಅಂದಾಜನ್ನು ಮಾತ್ರ ತಿಳಿಸುತ್ತದೆಯೆ ಹೊರತು ತುಕ್ಕು ಆಗಿರುವ ಪ್ರಮಾಣವನ್ನು ತಿಳಿಸುವುದಿಲ್ಲ.

ಯಾವುದೇ ರೀತಿಯಲ್ಲಿ ಕಾಂಕ್ರೀಟ್ ರಚನೆಯನ್ನು ತೊಂದರೆಗೊಳಿಸದ ಪರೀಕ್ಷಾ ವಿಧಾನಗಳು ಸಾಧ್ಯವೇ ಎಂದು ಸಂಶೋಧನೆಯಲ್ಲಿ ತೊಡಗಿದ ತಂತ್ರಜ್ಞರು, ತುಕ್ಕನ್ನು ಪತ್ತೆ ಹಚ್ಚಲು ವಸ್ತುವಿನ ವಿದ್ಯುತ್, ಕಾಂತೀಯ ಅಥವಾ ಅಕೌಸ್ಟಿಕ್ ಗುಣಲಕ್ಷಣಗಳಲ್ಲಿನ ಬದಲಾವಣೆಗಳನ್ನು ಪರೀಕ್ಷಿಸಿದ್ದಾರೆ.

ತುಕ್ಕು ಹಿಡಿದಿರುವ ವ್ಯಾಪ್ತಿಯನ್ನು ನೇರವಾಗಿ ಅಳೆಯಲು ಪಲ್ಸ್ ಎಡ್ಡಿ ಕರೆಂಟ್ ಮಾಪನ ವಿಧಾನವನ್ನು ಪ್ರಸ್ತುತ ಸಂಶೋಧನೆಯಲ್ಲಿ ಬಳಸಿದ್ದಾರೆ. ಸುರುಳಿಯ ಮೂಲಕ ಹಾದುಹೋಗುವ ಕರೆಂಟ್ ಪಲ್ಸ್ ಕಾಂತೀಯ ಕ್ಷೇತ್ರವನ್ನು ಸೃಷ್ಟಿಸುತ್ತದೆ. ಅಂತಹ ಸುರುಳಿಯನ್ನು ಲೋಹದ ಮಾದರಿಯ ಬಳಿ ಇರಿಸಿದಾಗ, ಈ ಕಾಂತೀಯ ಕ್ಷೇತ್ರವು ಮಾದರಿಯಲ್ಲಿ ಎಡ್ಡಿ ಪ್ರವಾಹಗಳನ್ನು ಉಂಟುಮಾಡುತ್ತದೆ. ಸುರುಳಿಯಿಂದ ಉತ್ಪತ್ತಿಯಾಗುವ ಮೂಲ ಕಾಂತಕ್ಷೇತ್ರವನ್ನು ವಿರೋಧಿಸುವ ದ್ವಿತೀಯಕ ಕಾಂತೀಯ ಕ್ಷೇತ್ರವನ್ನು ಎಡ್ಡಿ ಪ್ರವಾಹಗಳು ಉತ್ಪಾದಿಸುತ್ತವೆ. ಪ್ರೋಬ್ ಒಳಗಿನ ಕಾಂತೀಯ ಕ್ಷೇತ್ರ ಸಂವೇದಕವು ದ್ವಿತೀಯ ಕಾಂತೀಯ ಕ್ಷೇತ್ರವನ್ನು ಪತ್ತೆ ಮಾಡುತ್ತದೆ ಮತ್ತು ಕಾಂತೀಯ ಕ್ಷೇತ್ರದ ಬಲಕ್ಕೆ ಪ್ರತಿಕ್ರಿಯೆಯಾಗಿ ವೋಲ್ಟೇಜ್ ಅನ್ನು ಉತ್ಪಾದಿಸುತ್ತದೆ. ತುಕ್ಕು ಹಿಡಿಯುವುದರಿಂದ ಉಕ್ಕಿನ ಮೇಲ್ಮೈಯಲ್ಲಿ ನಿರೋಧಕ ಪದರ ರಚನೆಯಾಗುವುದರಿಂದ, ಎಡ್ಡಿ ಪ್ರವಾಹದ ಶಕ್ತಿಯು ಕಡಿಮೆಯಾಗುತ್ತದೆ. ಸಂವೇದಕವು ಸೆನ್ಸರ್‌ ಇದನ್ನು ಕಡಿಮೆಯಾದ ದ್ವಿತೀಯಕ ಕಾಂತೀಯ ಕ್ಷೇತ್ರದ ಸಾಮರ್ಥ್ಯದ ಸಹಿ ಎಂದು ಪತ್ತೆ ಮಾಡುತ್ತದೆ.

ಪಲ್ಸ್ ಎಡ್ಡಿ ಕರೆಂಟ್ ವಿಧಾನವನ್ನು ವಾಣಿಜ್ಯಿಕವಾಗಿ ತೈಲ, ಅನಿಲ ಮತ್ತು ನೀರಿನ ಪೈಪ್‌ಲೈನ್‌ಗಳನ್ನು ಪರೀಕ್ಷಿಸಲು ಬಳಸಲಾಗುತ್ತದೆ. ಇಲ್ಲಾದರೆ ಒಂದು ಪ್ರೋಬ್ ಅನ್ನು ಪೈಪ್‌ನ ಮೇಲ್ಮೈಗೆ ಹತ್ತಿರದಲ್ಲಿ ಅಥವಾ ನೇರವಾಗಿ ಇರಿಸಬಹುದು. ಆದರೆ ಉಕ್ಕಿನ ರೆಬಾರ್‌ಗಳು ಕಾಂಕ್ರೀಟ್‌ನೊಳಗೆ ಕೆಲವೊಮ್ಮೆ ಆಳವಾಗಿ ಸೇರಿರುತ್ತದೆ. ಹಾಗಾಗಿ ಕಾಂಕ್ರೀಟ್ ರೆಬಾರ್‌ಗಳಲ್ಲಿ ತುಕ್ಕನ್ನು ಪತ್ತೆಹಚ್ಚಲು ಈ ವಿಧಾನವನ್ನು ಬಳಸುವುದು ಸವಾಲಾಗಿದೆ. ಇದಲ್ಲದೆ, ರಿಬಾರ್‌ಗಳು ಪೈಪ್‌ಗಳಿಗಿಂತ ತೆಳ್ಳಗಿರುತ್ತವೆ ಮತ್ತು ಕಡಿಮೆ ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುತ್ತದೆ. ಆದ್ದರಿಂದ ಇದಕ್ಕೆ ಹೆಚ್ಚಿನ ಸೂಕ್ಷ್ಮತೆ ಮತ್ತು ದುಬಾರಿ ಶೋಧಕಗಳು ಬೇಕಾಗುತ್ತವೆ. ಇದಕ್ಕೆಂದೇ, ಸಂಶೋಧಕರು ದುಬಾರಿಯಲ್ಲದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿಕೊಂಡು ಉನ್ನತ-ಕಾರ್ಯಕ್ಷಮತೆಯ ಪ್ರೋಬ್ ಅನ್ನು ವಿನ್ಯಾಸಗೊಳಿಸಿದ್ದು, ಇದು ಕಡಿಮೆ ವೆಚ್ಚದ ಪರಿಹಾರವಾಗಿದೆ.

ಆನಿಸೊಟ್ರೊಪಿಕ್ ಮ್ಯಾಗ್ನೆಟೋರೆಸಿಟಿವ್ (AMR, ಎಎಂಆರ್) ಸಂವೇದಕ ಎಂದು ಕರೆಯಲ್ಪಡುವ ಹೆಚ್ಚು ಸೂಕ್ಷ್ಮವಾದ ಮ್ಯಾಗ್ನೆಟಿಕ್ ಫೀಲ್ಡ್ ಸಂವೇದಕವನ್ನು ಬಳಸಿಕೊಂಡು ಸಂಶೋಧಕರು ಪರೀಕ್ಷೆಯ ಸೂಕ್ಷ್ಮತೆಯನ್ನು ಸುಧಾರಿಸಿದ್ದಾರೆ. ಎಎಂಆರ್ ಸಂವೇದಕ ಔಟ್‌ಪುಟ್ ಸಿಗ್ನಲ್‌ನಿಂದ ತುಕ್ಕು ಆಗಿರುವ ವ್ಯಾಪ್ತಿಯನ್ನು ಗುರುತಿಸಲು ಬಳಸಬಹುದಾದ ವೈಶಿಷ್ಟ್ಯಗಳನ್ನು ಗಣನೆ ಮಾಡಲು ಪ್ರಿನ್ಸಿಪಲ್ ಕಾಂಪೊನೆಂಟ್ ಅನಾಲಿಸಿಸ್ ಎಂಬ ತಿಳಿದಿರುವ ಗಣಿತದ ತಂತ್ರವನ್ನು ಬಳಸುವ ಹೊಸ ಸಿಗ್ನಲ್ ಪ್ರೊಸೆಸಿಂಗ್ ವಿಧಾನವನ್ನು ಅವರು ಕಂಡುಹಿಡಿದಿದ್ದಾರೆ.

ಪ್ರಯೋಗಾಲಯದಲ್ಲಿ ಕೃತಕವಾಗಿ ತುಕ್ಕು ಹಿಡಿದಿರುವ ರೆಬಾರ್‌ಗಳ ಮೇಲೆ ಪರೀಕ್ಷೆಯನ್ನು ನಡೆಸಲಾಗಿದೆ. ಏಕೆಂದರೆ ನೈಸರ್ಗಿಕ ತುಕ್ಕನ್ನು ಅಭಿವೃದ್ಧಿಗೊಳ್ಳಲು ಹಲವು ವರ್ಷಗಳು ಬೇಕಾಗುತ್ತವೆ. ಪರೀಕ್ಷೆಯಿಂದ 5.5 ಸೆಂ.ಮೀ. ದೂರದಲ್ಲಿ ರಿಬಾರ್‌ನಲ್ಲಿ ತುಕ್ಕನ್ನು ಪತ್ತೆ ಮಾಡಬಹುದೆಂದು ಸಂಶೋಧಕರು ಗಮನಿಸಿದರು. ಇದು ತುಕ್ಕಿನ ವ್ಯಾಪ್ತಿಯ ಪರೀಕ್ಷೆಯಲ್ಲಿಯ ಇದುವರೆಗೆನ ಯಾವುದೇ ರೀತಿಯ ‘ಕಾಂಕ್ರೀಟ್ ರಚನೆಯನ್ನು ತೊಂದರೆಗೊಳಿಸದ ಪರೀಕ್ಷಾ ವಿಧಾನ’ಗಳಲ್ಲಿ ಇದುವರೆಗೆ ವರದಿ ಮಾಡಲಾಗಿರುವುದಕ್ಕಿಂತಲೂ ಇದು ಹೆಚ್ಚು ನಿಖರವಾದದ್ದು.

ಕಟ್ಟಟಗಳು, ರಸ್ತೆಗಳು, ಸೇತುವೆಗಳು – ಇವುಗಳ ನಿರ್ಮಾಣದಲ್ಲಿ ಭಾಗಿಗಳಾಗುವ ಹಲವು ಹಂತದ ವೃತ್ತಿಪರರು ಈ ಸಾಧನವನ್ನು ಬಳಸಿ, ತಮ್ಮ ‘ಕಾಂಕ್ರೀಟ್‌ ನಿರ್ಮಾಣ’ದಲ್ಲಿ ಉಂಟಾಗಿರುವ ತುಕ್ಕಿನ ಪ್ರಮಾಣವನ್ನು ನೇರವಾಗಿ ಅಳೆಯಬಹುದು. ತುಕ್ಕಿನಿಂದ ಉಂಟಾಗುವ ಅಪಾಯಗಳಿಂದ ಪಾರಾಗಲು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಆಗ ಸಾಧ್ಯವಾಗುತ್ತದೆ.

ಬೆಂಗಳೂರಿನ ತುಮಕೂರು ರಸ್ತೆಯ ಫ್ಲೈ ಓವರ್‌ನಲ್ಲಿ ಕಾಣಿಸಿಕೊಂಡಿರುವ ತೊಂದರೆಯನ್ನು ಪತ್ತೆಹಚ್ಚಲು ಇದು ಸೂಕ್ತವೇ ಎಂಬುದನ್ನು ತಜ್ಞರೇ ಅಧ್ಯಯನ ನಡೆಸಿ ತಿಳಿಸಬೇಕು. ಒಂದಂತೂ ನಿಜ, ಹೇಗೆ ಸ್ಕ್ಯಾನಿಂಗ್‌ ಪರೀಕ್ಷೆಯು ನಮ್ಮ ಶರೀರದ ಆಂತರಿಕ ಸ್ಥಿತಿಯನ್ನು ತಿಳಿಸುವುದೋ, ಹಾಗೆಯೇ ಕಾಂಕ್ರೀಟ್ ಒಳಗಿರುವ ಉಕ್ಕಿನಲ್ಲಿ ತುಕ್ಕು ಹಿಡಿದಿದೆಯೇ ಎಂಬುದನ್ನು ಈ ಪ್ರೋಬ್‌ ತಿಳಿಸಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT