ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್ ಜಿಯೊಮಾರ್ಟ್ ಕಾರ್ಯಾಚರಣೆ ಆರಂಭ: ಸಮೀಪದ ಕಿರಾಣಿ ಅಂಗಡಿಗಳಿಂದಲೇ ಡೆಲಿವರಿ

Last Updated 27 ಏಪ್ರಿಲ್ 2020, 11:33 IST
ಅಕ್ಷರ ಗಾತ್ರ

ಮುಂಬೈ: ಫೇಸ್‌ಬುಕ್‌ನೊಂದಿಗೆ ₹43,574 ಕೋಟಿ ಹೂಡಿಕೆ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ರಿಯಲಯನ್ಸ್‌ ಇಂಡಸ್ಟ್ರೀಸ್‌ ರಿಟೇಲ್‌ ಮಾರುಕಟ್ಟೆಯಲ್ಲಿ ವಿಸ್ತರಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ. 'ಜಿಯೊಮಾರ್ಟ್‌' ಅಧಿಕೃತವಾಗಿ ಕಾರ್ಯಾರಂಭಿಸಿದೆ.

ವರದಿಗಳ ಪ್ರಕಾರ ಪ್ರಸ್ತುತ ಜಿಯೊಮಾರ್ಟ್‌, ಮುಂಬೈ ಉಪನಗರ ಪ್ರದೇಶದ ನವಿ ಮುಂಬೈ, ಠಾಣೆ ಹಾಗೂ ಕಲ್ಯಾಣ್‌ನಲ್ಲಿ ಲಭ್ಯವಿದೆ. ದೇಶದ ವಿವಿಧ ಭಾಗಗಳಿಗೆ ಶೀಘ್ರದಲ್ಲೇ ಸೇವೆ ಲಭ್ಯವಾಗಲಿದೆ.

ದಿನಸಿ, ಆಹಾರ ಪದಾರ್ಥಗಳನ್ನುಮನೆ ಬಾಗಿಲಿಗೆ ತಲುಪಿಸುವ ಸೇವೆಯನ್ನು ಜಿಯೊಮಾರ್ಟ್‌ ಮೂಲಕ ಆರಂಭಿಸಿದೆ. ಜಿಯೊಮಾರ್ಟ್‌ ಸೇವೆ ಪಡೆಯಲು ಅಧಿಕೃತ ವಾಟ್ಸ್ಆ್ಯಪ್‌ ಸಂಖ್ಯೆ 88500 08000 ಮೊಬೈಲ್‌ ಫೋನ್‌ನಲ್ಲಿ ಉಳಿಸಿಕೊಳ್ಳಬೇಕು. ಜಿಯೊಮಾರ್ಟ್‌ ವಾಟ್ಸ್‌ಆ್ಯಪ್‌ ಚಾಟ್‌ನಲ್ಲಿ 'ಹಾಯ್‌' ಎಂಬಸಂದೇಶ ಕಳಿಸಿದರೆ, ಪ್ರತಿಕ್ರಿಯೆ ಮೂಲಕ ಲಿಂಕ್‌ ಕಳುಹಿಸುತ್ತದೆ. ಆ ಲಿಂಕ್‌ ಕ್ಲಿಕ್‌ ಮಾಡಿದರೆ, ಜಿಯೊಮಾರ್ಟ್‌ ಪುಟಕ್ಕೆ ಸಂಪರ್ಕಿಸುತ್ತದೆ.

ಅಲ್ಲಿ ಗ್ರಾಹಕರು ವಿಳಾಸ, ಮೊಬೈಲ್‌ ಸಂಖ್ಯೆ ಸೇರಿದಂತೆ ಕೆಲವು ವಿವರಗಳನ್ನು ಭರ್ತಿ ಮಾಡಬೇಕು. ನೇರವಾಗಿ ಜಿಯೊಮಾರ್ಟ್‌ ಪುಟಕ್ಕೆ‌ ಭೇಟಿ ನೀಡಿ ಸಹ ನೋಂದಣಿ ಮಾಡಿಕೊಳ್ಳಬಹುದು. ವಿವರಗಳು ನಮೂದಿಸಿದ ಬಳಿಕ ಗ್ರಾಹಕರಿಗೆ ಲಭ್ಯವಿರುವ ಸಾಮಗ್ರಿಗಳ ಪಟ್ಟಿ ತೆರೆದುಕೊಳ್ಳುತ್ತದೆ. ಅಗತ್ಯ ವಸ್ತುಗಳನ್ನು ಆಯ್ಕೆ ಮಾಡಿ ಆರ್ಡರ್‌ ಮಾಡುತ್ತಿದ್ದಂತೆ ಸಮೀಪದ ಕಿರಾಣಿ ಅಂಗಡಿಗೆ ಮಾಹಿತಿ ರವಾನೆಯಾಗುತ್ತದೆ. ಗ್ರಾಹಕರಿಗೆ ಕಿರಾಣಿ ಅಂಗಡಿಯ ಹೆಸರು, ಸಂಪರ್ಕ ಸಂಖ್ಯೆ ಸೇರಿದಂತೆ ವಿವರ ತಲುಪುತ್ತದೆ ಹಾಗೂ ಗ್ರಾಹಕರ ವಿವರ ಅಂಗಡಿಯವರಿಗೆ ತಲುಪಿರುತ್ತದೆ.

ಪ್ರಸ್ತುತ ಮುಂಬೈನ ಕೆಲ ಭಾಗಗಳಲ್ಲಿ ಕಾರ್ಯಾಚರಿಸುತ್ತಿದ್ದು, ಎರಡು ದಿನಗಳ ಒಳಗೆ ಆರ್ಡರ್‌ ಸಿದ್ಧವಿರುತ್ತದೆ. ಸಮೀಪದ ಅಂಗಡಿಗಳಿಂದ ಅದನ್ನು ಪಡೆದುಕೊಳ್ಳಬಹುದು. ಕಿರಾಣಿ ಅಂಗಡಿಗಳ ಮೂಲಕ ರಿಲಯನ್ಸ್‌ ತನ್ನದೇ ಆದ ಖಾಸಗಿ ಬ್ರ್ಯಾಂಡ್‌ಗಳ ಹೆಸರಿನಲ್ಲಿ ವಸ್ತುಗಳನ್ನು ಮಾರಾಟ ಮಾಡುವ ಯೋಜನೆ ಹಾಕಿಕೊಂಡಿದೆ. ಬೆಸ್ಟ್‌ ಫಾರ್ಮ್‌, ಗುಡ್‌ ಲೈಫ್‌, ಮಸ್ತಿ ಓಯ್, ಕೆಫೆ, ಎನ್ಜೊ, ಮಾಪ್ಜ್‌, ಎಕ್ಸ್‌ಪೆಲ್ಜ್‌ ಹಾಗೂ ಹೋಂ ಒನ್‌ ಹೆಸರುಗಳಲ್ಲಿ ಮಾರಾಟ ಮಾಡಲಿದೆ.

ಮುಂಬರುವ ದಿನಗಳಲ್ಲಿ ಭಾರತದ ಸುಮಾರು 3 ಕೋಟಿ ಸಣ್ಣ ಕಿರಾಣಿ ಅಂಗಡಿಗಳಿಗೆ ಡಿಜಿಟಲ್‌ ವಹಿವಾಟು ನಡೆಸಲು ಜಿಯೊಮಾರ್ಟ್‌ ಮತ್ತು ವಾಟ್ಸ್‌ಆ್ಯಪ್‌ ಸಹಕಾರಿಯಾಗಲಿವೆ ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಡೆಟ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಹೇಳಿದ್ದಾರೆ.

ಇದರಿಂದಾಗಿ ನಿತ್ಯ ಬಳಕೆ ವಸ್ತುಗಳನ್ನು ಅತಿ ಕಡಿಮೆ ಸಮಯದಲ್ಲಿ ಸಮೀಪದ ಅಂಗಡಿಗಳಿಂದ ಡೆಲಿವರಿ ಪಡೆಯಬಹುದಾಗುತ್ತದೆ. ಡಿಜಿಟಲ್‌ ತಂತ್ರಜ್ಞಾನಗಳ ಬಳಕೆ ಮೂಲಕ ಕಿರಾಣಿ ಅಂಗಡಿಗಳು ತಮ್ಮ ವ್ಯಾಪಾರ ವಿಸ್ತರಿಸಿಕೊಳ್ಳಬಹುದು ಹಾಗೂ ಹೊಸ ಉದ್ಯೋಗಗಳ ಸೃಷ್ಟಿಗೂ ಅವಕಾಶವಾಗಲಿದೆ ಎಂದು ಮುಕೇಶ್‌ ಅಂಬಾನಿ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT