ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಕ್ಕೆ ‘ಮಾಯಾ’ ಮ್ಯಾಟ್‌ನ ಯೋಗ!

Last Updated 24 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ಭಾರತವೆಂದರೆ ಹಾವಾಡಿಗರ, ಅನಕ್ಷರಸ್ಥರ, ಮಂತ್ರವಾದಿಗಳ ದೇಶ ಎಂಬ ಕಲ್ಪನೆ ಇತ್ತಂತೆ ಪಾಶ್ಚಾತ್ಯರಲ್ಲಿ; ಆದರೆ ಇಲ್ಲಿನ ವೈಜ್ಞಾನಿಕ, ಸಾಹಿತ್ಯಿಕ, ಸಂಶೋಧನಾತ್ಮಕ, ಆರ್ಥಿಕ, ಆಧ್ಯಾತ್ಮಿಕ ಬೆಳವಣಿಗೆಗಳು ಜಗತ್ತಿಗೆ ಭಾರತದ ವಿಶಿಷ್ಟತೆಯನ್ನು ಸಾರಿದವು. ಹೀಗೆ ಭಾರತದಿಂದ ಜಗತ್ತು ಪಡೆದ ಪ್ರೀತಿಯ ಕೊಡುಗೆಯೇ ಯೋಗ.

ಯೋಗ ಎಂಬ ಪದಕ್ಕೆ ವಿಸ್ತೃತ ಅರ್ಥವಿದ್ದರೂ ‘ಯೋಗಾಸನ’ ಎಂಬ ಅರ್ಥದಲ್ಲಿ ಎಲ್ಲೆಲ್ಲೂ ಪ್ರಚಲಿತ. ಮೈಮನಸ್ಸನ್ನು ಸರಿದಾರಿಗೆ ತರುವ ಯೋಗವನ್ನು ಕಲಿಯಲು ಏನೇನು ಬೇಕು? ಮುಖ್ಯವಾಗಿ ಯೋಗವನ್ನು ಕಲಿಸಲು ಗುರು ಬೇಕು; ಒಂದು ಜಮಖಾನವೋ ಯೋಗಮ್ಯಾಟೋ ಬೇಕು ಅಂತೀರಾ? ಈಗಂತೂ ಯೋಗಗುರುಗಳು ಟಿ.ವಿ. ಪರದೆಯ ಮೂಲಕವೇ ತರಬೇತಿಯನ್ನು ನೀಡುತ್ತಿದ್ದಾರೆ. ಫೋನ್ ಆ್ಯಪ್‌ಗಳಲ್ಲಿಯೂ ಪ್ರತ್ಯಕ್ಷರಾಗುತ್ತಿದ್ದಾರೆ. ಇನ್ನು ಮ್ಯಾಟ್ ಬೇಕಾದ್ರೆ ಇದ್ದೇ ಇವೆಯಲ್ಲ, ಡೆಕಥ್ಲಾನ್‌, ಅಮೆಜಾನ್!

ಈ ಕೋವಿಡ್‌ ಕೊಡಮಾಡಿದ ಅನಿವಾರ್ಯ ಕರ್ಮವಾದ ಲಾಕ್‌ಡೌನ್‌ನಲ್ಲಿ ಬಹುಶಃ ಎರಡೇ ವಸ್ತುಗಳು ಹೆಚ್ಚು ಮಾರಾಟವಾದಂತೆ ತೋರುತ್ತದೆ; ಎರಡೂ ವಿರುದ್ಧ ದಿಕ್ಕಿನವು. ಎಂದರೆ, ನಿಮ್ಮನ್ನು ದಪ್ಪ ಮಾಡುವ ಝೊಮ್ಯಾಟೋ, ಸ್ವಿಗ್ಗಿಗಳ ಬಗೆಬಗೆಯ ತಿನಿಸುಗಳು; ಮತ್ತೊಂದು ನಿಮ್ಮನ್ನು ತೆಳ್ಳಗಾಗಿಸೋ ಸೈಕಲ್‌ಗಳು, ಯೋಗಚಾಪೆಗಳು. ಆದರೂ ಯೋಗವನ್ನು ಮಾಡುವಾಗ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಲವಾದರೂ ‘ಯೋಗಾಸನದ ಭಂಗಿ ಸರಿಯಿದೆಯೇ? ಕೈ ಎಷ್ಟು ನೀಳ ಚಾಚಬೇಕು? ತಲೆ ಎಷ್ಟು ಬಗ್ಗಿಸಬೇಕು?’ – ಮುಂತಾದ ಪ್ರಶ್ನೆಗಳು ತಲೆಹೊಕ್ಕಿರುತ್ತವೆ. ಯೋಗವನ್ನು ಮಾಡುತ್ತ ಮಾಡುತ್ತ ಎದುರಿಗಿರುವ ಅಥವಾ ಟಿ.ವಿ. ಪರದೆಯ ಮೇಲಿರುವ ಯೋಗಗುರುವನ್ನು ನೋಡುತ್ತಾ ಯೋಗಾಸನದ ಭಂಗಿಯನ್ನು ಸರಿಪಡಿಸಿಕೊಳ್ಳುವುದು ಒಂದು ಸರ್ಕಸ್ಸೇ ಸರಿ. ಈ ಸಮಸ್ಯೆಗೆ ಉತ್ತರವಾಗಿ ಬಂದಿರುವುದೇ ಸ್ಮಾರ್ಟ್‌ ಯೋಗಮ್ಯಾಟ್.

‘ಯೋಗಿಫೈ’ (YogiFi) ಎಂಬ ಹೆಸರಿನ ಈ ಸ್ವಂತ ಬುದ್ಧಿಯ ಯೋಗಮ್ಯಾಟ್, ಸಂವೇದಕಗಳನ್ನು (ಸೆನ್ಸರ್) ಬಳಸಿ, ಕೃತಕ ಬುದ್ಧಿಮತ್ತೆಯ ಸಹಾಯದಿಂದ ನಮಗೆ ಯೋಗವನ್ನು ಕಲಿಸುತ್ತದೆ. ಜೊತೆಗೆ, ನಮ್ಮ ಯೋಗಾಭ್ಯಾಸದ ಅಭಿವೃದ್ಧಿಯನ್ನು ದಾಖಲಿಸಿ, ವಿಶ್ಲೇಷಿಸುತ್ತದೆ ಕೂಡ. ಅದು ಹೇಗೆ ಸಾಧ್ಯ ಅಂತೀರಾ? ನಾವು ಧರಿಸುವ ಸ್ಮಾರ್ಟ್ ಸಾಧನಗಳಲ್ಲಿರುವಂತೆಯೇ ಇದರಲ್ಲೂ ಸೆನ್ಸಾರ್‌ಗಳು, ವಿದ್ಯುನ್ಮಾನ ಭಾಗಗಳೂ ಇರುತ್ತವೆ. ಅವು ನಮ್ಮ ಶಕ್ತಿ, ಸಮತೋಲನ, ಬಾಗಿ ಬಳುಕಲು ನಮಗಿರುವ ನಮ್ಯತೆ(ಫ್ಲೆಕ್ಸಿಬಿಲಿಟಿ)ಯಂತಹ ಅನೇಕ ಅಂಶಗಳನ್ನು ದಾಖಲಿಸುತ್ತದೆ. ಜೊತೆಗೆ, ನಾವು ಹೇಗೆ ನಮ್ಮ ಯೋಗಾಭ್ಯಾಸವನ್ನು ಉತ್ತಮಗೊಳಿಸಬಹುದು ಎಂಬುದನ್ನೂ ಮಾತಿನ ರೂಪದಲ್ಲಿ ಅಂದರೆ, ವರ್ಚುವಲ್ ಇನ್‌ಸ್ಟ್ರಕ್ಷನ್‌ ಮೂಲಕ ತಿಳಿಸುತ್ತದೆ.

ಹೌದು! ಇದು ಮಾತಾಡುವ ಮಾಯಾವಿ ಚಾಪೆಯೇ ಸರಿ. ಕೃತಕ ಬುದ್ಧಿಮತ್ತೆಯ ಸಹಾಯದಿಂದ ರೂಪಿತ ‘ಯೋಗಿಫೈ’ ಮ್ಯಾಟ್‌ ಅನ್ನು ಪ್ಲೇಸ್ಟೋರ್ /ಆ್ಯಪ್‌ ಸ್ಟೋರ್ಸ್‌ನ ಮೂಲಕ ಡೌನ್‌ಲೋಡ್‌ ಮಾಡಲಾದ ಯೋಗಿಫೈ ಆ್ಯಪ್‌ನೊಂದಿಗೆ ಬೆಸೆದರೆ ಸಾಕು – ನಿಮ್ಮ ಯೋಗಗುರು, ಯೋಗಸಾಥಿ ಮತ್ತು ಯೋಗಮ್ಯಾಟ್ – ಎಂದರೆ ‘ತ್ರೀ ಇನ್‌ ಒನ್‌’ - ತಯಾರೆಂದೇ ಅರ್ಥ.
ನಿಮ್ಮ ಯೋಗಾಸನಗಳ ಭಂಗಿ ಹೇಗಿರಬೇಕು, ಯಾವ ಆಸನ ಹೇಗೆ ಮಾಡಿದರೆ ಸರಿ, ನಿಮ್ಮ ಎತ್ತರ, ತೂಕ, ಆರೋಗ್ಯಸ್ಥಿತಿ, ಹೃದಯದ ಗತಿಗೆ ತಕ್ಕ ಹಾಗೆ ಯಾವ ಯೋಗಾಸನ ಸರಿ ಮತ್ತು ಅದರಿಂದ ಆಗಬಹುದಾದ ಅನುಕೂಲ – ಹೀಗೆ ಎಲ್ಲವನ್ನೂ ತಿಳಿಸಿ ಹೇಳುತ್ತದೆ, ಈ ಯೋಗಿಫೈ ಮ್ಯಾಟ್. ಪುರಾತನ ಜ್ಞಾನ ಮತ್ತು ನವೀನ ತಂತ್ರಜ್ಞಾನದ ಮಿಳಿತ ಎಂದು ಯೋಗಿಫೈ ಮ್ಯಾಟನ್ನು ಬಣ್ಣಿಸುತ್ತದೆ, ಇದನ್ನು ತಯಾರಿಸಿದ ಅಮೆರಿಕಾ ಮೂಲದ ಸ್ಟಾರ್ಟ್ಅಪ್ ಸಂಸ್ಥೆ. ಈ ಸಂಸ್ಥೆ, ತನ್ನ ಪರಿಸರಪ್ರಿಯ ರೀತಿನೀತಿಗಳಿಂದ ಹೊಸ ಆಶಾಕಿರಣವನ್ನು ಮೂಡಿಸಿದೆ.

ಯೋಗಿಫೈ ಮ್ಯಾಟ್‌ ಅನ್ನು ತಯಾರಿಸಲು ನೈಸರ್ಗಿಕ ರಬ್ಬರ್‌ ಅನ್ನೇ ಬಳಸಿರುವ ಈ ಸಂಸ್ಥೆ, ಈ ಪ್ರಾಡಕ್ಟ್ ಅನ್ನು ಪ್ಯಾಕ್ ಮಾಡಿ ನಿಮಗೆ ತಲುಪಿಸುವುದು ಕೂಡ ಪರಿಸರಸ್ನೇಹಿ ಸಾಮಗ್ರಿಯೊಳಗೇ. ಹೆಣ್ಣು ಅಥವಾ ಗಂಡಿನ ದನಿಯಲ್ಲಿ ಮಾತಾಡಬಲ್ಲ ಈ ಮ್ಯಾಟ್‌ ಅನ್ನು ನೀವು ನಿಮ್ಮ ಈಗಾಗಲೇ ಬಳಕೆಯಲ್ಲಿರುವ ಫಿಟ್ನೆಸ್ ಆ್ಯಪ್‌ಗಳು, ಗಾರ್ಮಿನ್, ಫಿಟ್ಬಿಟ್, ಎಮ್ಐ ಬ್ಯಾಂಡ್‌ಗಳಂತಹ ಸಾಧನಗಳೊಂದಿಗೆ ಬೆಸುಗೆ ಮಾಡಿಕೊಂಡು ಬಳಸಬಹುದು. ನಿಮಗೆ ಬೇಕಾದ ಸ್ಥಳೀಯ ಭಾಷೆಯಲ್ಲಿ ಕೂಡ ನಿಮ್ಮೊಂದಿಗೆ ಸಂವಹನ ನಡೆಸಿ, ಯೋಗಾಭ್ಯಾಸ ಮತ್ತು ಆರೋಗ್ಯ ಕಾಪಾಡಿಕೊಳ್ಳುವುದು ಸುಲಿದ ಬಾಳೆಯ ಹಣ್ಣಿನಂತೆ ಸುಲಭ ಎನಿಸುವಂತೆ ಮಾಡುತ್ತದೆ, ಯೋಗಿಫೈ ಮ್ಯಾಟ್.

ಇಷ್ಟೆಲ್ಲಾ ಪ್ರಯೋಜನಗಳನ್ನೊಳಗೊಂಡ ಯೋಗಮ್ಯಾಟ್ ಬೆಲೆ ಎಷ್ಟಿರಬಹುದು? ಇತರ ಯೋಗ ಮ್ಯಾಟ್‌ಗಳ ಬೆಲೆಗೇ ಸಿಗುವ ಈ ಸ್ಮಾರ್ಟ್ ಚಾಪೆಯು ನೋಡಲೂ ಹಾಗೇ ಇದ್ದು, ಅವುಗಳಂತೆಯೇ ಸುತ್ತಿ ಇಡಬಹುದಾಗಿದೆ ಕೂಡ. ಇದರಲ್ಲಿರುವ ಸಂವೇದಕಗಳು ಕಾರ್ಯನಿರ್ವಹಿಸಬೇಕಾದ್ದರಿಂದ, ಚಾರ್ಜ್ ಮಾಡಬೇಕಷ್ಟೇ. ಭಾರತವೂ ಸೇರಿದಂತೆ 17 ದೇಶಗಳಲ್ಲಿ ಈಗಾಗಲೇ ಲಭ್ಯವಿರುವ ಈ ಚತುರ ಚಾಪೆಯು, ಯೋಗಾಭ್ಯಾಸದ ಪಯಣವನ್ನು ನವನವೀನವಾಗಿಸಿದೆ.

ಹೆಚ್ಚಿನ ವಿವರಗಳಿಗೆ ನೋಡಿ: https://www.yogifi.fit/in/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT