ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020ರಲ್ಲಿ ಗೂಗಲ್‌ನ ಪಿಚೈಗೆ ₹ 1,707 ಕೋಟಿ ಮೌಲ್ಯದ ಷೇರು, ₹ 14.22 ಕೋಟಿ ವೇತನ

Last Updated 21 ಡಿಸೆಂಬರ್ 2019, 7:49 IST
ಅಕ್ಷರ ಗಾತ್ರ

ಸ್ಯಾನ್‌ಫ್ರಾನ್ಸಿಸ್ಕೊ: ಗೂಗಲ್‌ ಮಾತೃ ಸಂಸ್ಥೆ ಆಲ್ಫಾಬೆಟ್‌ ಇಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಜವಾಬ್ದಾರಿ ವಹಿಸಿರುವ ಭಾರತೀಯ–ಅಮೆರಿಕನ್‌ ಸುಂದರ್‌ ಪಿಚೈ (47) ಅವರಿಗೆ ಕಂಪನಿ ಮುಂದಿನ ಮೂರು ವರ್ಷಗಳಿಗೆ ₹ 1,707 ಕೋಟಿ (240 ಮಿಲಿಯನ್‌ ಡಾಲರ್‌) ಸ್ಟಾಕ್‌ ಅವಾರ್ಡ್ಸ್‌ ನೀಡಲಿದೆ.

2020ರಿಂದ ಪಿಚೈ ವಾರ್ಷಿಕ ವೇತನವಾಗಿ ₹ 14.22 ಕೋಟಿ (2 ಮಿಲಿಯನ್‌ ಡಾಲರ್‌) ಪಡೆಯಲಿದ್ದಾರೆ. ಕಳೆದ ವರ್ಷ ಆಲ್ಫಾಬೆಟ್‌ ಸಿಇಒ ಆಗಿ ಲ್ಯಾರಿ ಪೇಜ್‌ ₹ 7.11 ಕೋಟಿ (1 ಮಿಲಿಯನ್‌ ಡಾಲರ್‌) ವೇತನ ಪಡೆದಿದ್ದರು.

ವೇತನದೊಂದಿಗೆ ಮೂರು ವರ್ಷ ಕಾರ್ಯಕ್ಷಮತೆ ಆಧಾರದಲ್ಲಿ ಕೋಟಿ ₹ 1,707 ಕೋಟಿ ಮೌಲ್ಯದ ಕಂಪನಿಯ ಷೇರುಗಳನ್ನು ಪಿಚೈ ಪಡೆಯಲಿದ್ದಾರೆ.

ಆ್ಯಪಲ್‌ ಸಿಇಒ ಆಗಿ ಟಿಮ್‌ ಕುಕ್‌ ನೇಮಕಗೊಂಡಾಗ ನಿಗದಿಯಾಗಿದ್ದ ಒಟ್ಟು ಕೊಡುಗೆ ₹ 2,674 ಕೋಟಿ (376 ಮಿಲಿಯನ್ ಡಾಲರ್‌) ಎಂದು ಈಕ್ವಿಲಾರ್‌ ಸಂಸ್ಥೆ ಹೇಳಿದೆ.

ಗೂಗಲ್‌ ಸಹ–ಸಂಸ್ಥಾಪಕರಾದ ಲ್ಯಾರಿ ಪೇಜ್‌ ಮತ್ತು ಸೆರ್ಗಿ ಬ್ರಿನ್‌ ಇತ್ತೀಚೆಗಷ್ಟೇ ಆಲ್ಫಾಬೆಟ್‌ನ ಆಡಳಿತಾತ್ಮಕ ಹೊಣೆಗಾರಿಕೆಗಳಿಂದ ಬಿಡುವು ಪಡೆಯುತ್ತಿರುವುದಾಗಿ ಘೋಷಿಸಿದ್ದರು. 21 ವರ್ಷಗಳ ಹಿಂದೆ ಪೇಜ್‌ ಮತ್ತು ಬ್ರಿನ್‌ ಸ್ಥಾಪಿಸಿದ ಕಂಪನಿಯ ಜವಾಬ್ದಾರಿಯನ್ನು ಪಿಚೈಗೆ ವಹಿಸಿದರು. ಗೂಗಲ್‌ ಸಿಇಒ ಹೊಣೆಯ ಜತೆಗೆ ಹೆಚ್ಚುವರಿಯಾಗಿ ಇಡೀ ಆಲ್ಭಾಬೆಟ್‌ ಆಡಳಿತ ನಿರ್ವಹಣೆಯನ್ನೂ ಪಿಚೈ ನಡೆಸಿದ್ದಾರೆ.

ಹದಿನೈದು ವರ್ಷ ಗೂಗಲ್‌ನಲ್ಲಿ ಕಳೆದಿರುವ ಪಿಚೈ, ಪ್ರಸ್ತುತ ಗೂಗಲ್‌ನ ಅತ್ಯಂತ ವಿಶ್ವಾಸಿಯಾಗಿ ಹಾಗೂ ಸಾರ್ವಜನಿಕ ವಲಯದಲ್ಲೂ ಉತ್ತಮ ಸ್ಪಂದನೆ ಹೊಂದಿದ್ದಾರೆ. 2015ರಲ್ಲಿ ಅವರು ಗೂಗಲ್‌ ಸಿಇಒ ಆದಾಗ ಪಡೆದಿದ್ದ ವಾರ್ಷಿಕ ವೇತನ ₹ 4.64 ಕೋಟಿ (6,52,500 ಡಾಲರ್‌). ನಂತರದಲ್ಲಿ ₹ 1,415 ಕೋಟಿ (199 ಮಿಲಿಯನ್‌ ಡಾಲರ್‌) ಮೌಲ್ಯದ ಷೇರುಗಳನ್ನು ಕಂಪನಿ ಕಾರ್ಯಕ್ಕೆ ಮೆಚ್ಚಿ ನೀಡಿತ್ತು. 2018ರಲ್ಲಿ ಪಿಚೈ ಪಡೆದಿರುವ ಒಟ್ಟು ವೇತನ ಸುಮಾರು ₹13.51 ಕೋಟಿ (1.9 ಮಿಲಿಯನ್‌ ಡಾಲರ್‌).

ಗೂಗಲ್‌ ಕ್ರೋಮ್‌ ಬ್ರೌಸರ್‌ನ್ನು ಯಶಸ್ವಿಗೊಳಿಸಲು ಶ್ರಮಿಸಿದವರಲ್ಲಿ ಸುಂದರ್‌ ಪಿಚೈ ಪ್ರಮುಖ ವ್ಯಕ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT