ಬುಧವಾರ, ಸೆಪ್ಟೆಂಬರ್ 23, 2020
21 °C

ಇದು ಅಮರ ಪ್ರೇಮ ಕತೆ: ಬದುಕಿನಾಚೆಗೂ ಒಂದಾದ ಶತಾಯುಷಿ ದಂಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದಾಗಿ ಬಾಳಿ, ಒಂದಾಗಿ ಸಾಯಬೇಕೆಂಬುದು ಈ ಜಗತ್ತಿನ ಪ್ರತಿ ಪ್ರೇಮ ಜೋಡಿಯ ಕನಸಾಗಿರುತ್ತದೆ. ಆ ಕನಸು ನನಸಾಗಿರುವ ಭಾವುಕ ಘಟನೆಯೊಂದು ತಮಿಳುನಾಡಿನ ಪುದುಕೋಟ್ಟೈ ಜಿಲ್ಲೆಯ ಕುಪ್ಪಕ್ಕುಡಿ ಎಂಬ ಹಳ್ಳಿಯಲ್ಲಿ ನಡೆದಿದೆ. 104 ವರ್ಷದ ತನ್ನ ಪತಿಯನ್ನು ಕಳೆದುಕೊಂಡ ಒಂದು ಗಂಟೆಯ ನಂತರ ನೂರು ವರ್ಷದ ಅಜ್ಜಿಯೂ ಸಹ ಪ್ರಾಣಬಿಟ್ಟಿದ್ದಾಳೆ.  ಸರಿಸುಮಾರು 75 ವರ್ಷಗಳ ಕಾಲ ಕೂಡಿ ಬದುಕು ಸವೆಸಿದವರು ಪಿಚಾಯಿ ಅಜ್ಜಿ ಮತ್ತು ವೆಟ್ರಿವೇಲ್‌ ತಾತ.

ಮೊನ್ನೆ ಮಂಗಳವಾರ (ನ.12) ರಾತ್ರಿ 104 ವರ್ಷದ ವೆಟ್ರಿವೇಲ್‌ ತಾತನಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರ ಮಕ್ಕಳು, ಮೊಮ್ಮಕ್ಕಳು ತಾತನನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಲು ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆ ತಲುಪುವಷ್ಟರಲ್ಲೇ ತಾತನ ಉಸಿರು ನಿಂತಿದೆ. ವೈದ್ಯರು ತಾತನ ಸಾವನ್ನು ದೃಢಪಡಿಸಿದ್ದಾರೆ. ತಾತನ ಜೀವರಹಿತ ದೇಹವನ್ನು ಕುಪ್ಪಕ್ಕುಡಿ ಆದಿ ದ್ರಾವಿಡ ಕಾಲೋನಿಯಲ್ಲಿರುವ ಅವರ ಮನೆಗೆ ತಂದಿದ್ದಾರೆ. ತಾತನ ಜೀವರಹಿತ ದೇಹ ನೋಡಿದ ಪಿಚಾಯಿ ಅಜ್ಜಿ ಆಘಾತ ತಾಳದೇ ಕುಸಿದು ಬಿದ್ದಿದ್ದಾಳೆ. ಆ ನಂತರ ಅಜ್ಜಿಯ ದೇಹ ಪರೀಕ್ಷೆಗೆ ಹತ್ತಿರದ ವೈದ್ಯರು ಬಂದಿದ್ದಾರೆ. ಅಷ್ಟರಲ್ಲಾಗಲೇ ಅಜ್ಜಿಯ ಪ್ರಾಣ ತಾತನನ್ನು ಹಿಂಬಾಲಿಸಿದೆ. ಪತಿಯ ಸಾವಿನ ಒಂದು ಗಂಟೆಯ ನಂತರ ತಾನೂ ಸಹ ಮರಣ ಹೊಂದಿದ್ದಾಳೆ ಪಿಚಾಯಿ ಅಜ್ಜಿ. 

‘ಆಸ್ಪತ್ರೆಯಿಂದ ತರಲಾಗಿದ್ದ ನನ್ನ ತಾತನ ಮೃತ ಶರೀರದ ಮುಂದೆ ನಿಂತು ಅಳಲು ಪ್ರಾರಂಭಿಸಿದ ಅಜ್ಜಿ ಕೆಲ ಕ್ಷಣಗಳಲ್ಲೇ ಮೂರ್ಚೆ ಹೋದರು. ನಾವು ಅವಳನ್ನು ಅಲ್ಲಾಡಿಸಿ ಮಾತನಾಡಿಸಲು ಪ್ರಯಿತ್ನಿಸಿದೆವು. ಆದರೆ, ಅಜ್ಜಿ ಪ್ರತಿಕ್ರಿಯಿಸಲಿಲ್ಲ. ಅವಳ ಆರೋಗ್ಯ ಪರೀಕ್ಷಿಸಲು ಹತ್ತಿರ ವೈದ್ಯರನ್ನು ಕರೆದೆವು. ಅಜ್ಜಿಯ ನಾಡಿಮಿಡಿತ ಪರೀಕ್ಷಿಸಿದ ವೈದ್ಯರು ಅವಳ ಸಾವನ್ನು ದೃಢಪಡಿಸಿದರು. ತಾತ ಸತ್ತು ಒಂದು ಗಂಟೆಗೆ ಅಜ್ಜಿಯೂ ತೀರಿಹೋದಳು,’ ಎಂದು ನೋವಿನಿಂದಲೇ ಮಾತನಾಡಿದ್ದಾನೆ ಮೊಮ್ಮಗ ಕುಮಾರವೇಲ್‌.

ಅಜ್ಜಿ–ತಾತನಿಗೆ ಆರು ಮಕ್ಕಳು, 23 ಮೊಮ್ಮಕ್ಕಳು ಹಾಗೂ ಹಲವು ಮರಿ ಮೊಮ್ಮಕ್ಕಳಿದ್ದಾರೆ. ಇಂತದೊಂದು ಅಮರ ಪ್ರೇಮ ಸಾರುವ ಘಟನೆ ಇವರೆಲ್ಲರಿಗೂ ಅಚ್ಚರಿಭರಿತ ದುಃಖ ತಂದಿದೆ. 

ಬದುಕಿನ ಕೊನೆಯವರೆಗೂ ಒಂದಾಗಿ ಬಾಳಿ, ಬದುಕಿನಾಚೆಗೂ ಒಂದಾಗಿ ಸಾಗುವ ಇರಾದೆ ಅವರಿಬ್ಬರಲ್ಲಿತ್ತಾ ಎಂಬುದು ಅವರಿಗಷ್ಟೇ ತಿಳಿದಿರಬಹುದು... ಅಲ್ಲವೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು