ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆನ್ಸಿಲ್‌ ಕದ್ದಿದ್ದಕ್ಕೆ ಸಹಪಾಠಿ ವಿರುದ್ಧ ದೂರು ದಾಖಲಿಸಲು ಬಂದ ವಿದ್ಯಾರ್ಥಿಗಳು!

Last Updated 27 ನವೆಂಬರ್ 2021, 10:47 IST
ಅಕ್ಷರ ಗಾತ್ರ

ಕರ್ನೂಲ್‌: ಸಹಪಾಠಿಯೊಬ್ಬನ ವಿರುದ್ಧ ಪೆನ್ಸಿಲ್‌ ಕಡ್ಡಿಗಳನ್ನು ಕದ್ದಿದ್ದಾನೆಂದು ದೂರು ದಾಖಲಿಸಲು ವಿದ್ಯಾರ್ಥಿಗಳ ಗುಂಪು ಪೊಲೀಸ್‌ ಠಾಣೆಗೆ ಬಂದ ವಿಚಿತ್ರ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಕರ್ನೂಲ್‌ ಜಿಲ್ಲೆಯ ಪೆದ್ದ ಕಡುಬುರು ಪೊಲೀಸ್‌ ಠಾಣೆಗೆ ಪ್ರಾಥಮಿಕ ಶಾಲೆಯ ಮಕ್ಕಳು ಆಗಮಿಸಿ, ಸಹಪಾಠಿ ವಿರುದ್ಧ ದೂರು ದಾಖಲಿಸುವಂತೆ ವಿನಂತಿ ಮಾಡಿದ್ದಾರೆ. ಈ ಸಂದರ್ಭ ದೂರು ಹೇಳಿದ ವಿದ್ಯಾರ್ಥಿ, ಆರೋಪ ಹೊತ್ತ ವಿದ್ಯಾರ್ಥಿ ಸೇರಿದಂತೆ ಉಳಿದ ಸಹಪಾಠಿಗಳು ಜೊತೆಗಿದ್ದರು. ವಿದ್ಯಾರ್ಥಿಗಳು ದೂರು ನೀಡುತ್ತಿರುವ ವಿಡಿಯೊವನ್ನು ಆಂಧ್ರ ಪ್ರದೇಶ ಪೊಲೀಸ್‌ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದೆ.

'ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೂ ಕೂಡ ಆಂಧ್ರ ಪ್ರದೇಶದ ಪೊಲೀಸರನ್ನು ನಂಬಿದ್ದಾರೆ. ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ನೆರವು ನೀಡುವ ವಿಚಾರದಲ್ಲಿ ಆಂಧ್ರ ಪೊಲೀಸರು ಸದಾ ಸಿದ್ಧಹಸ್ತರು. ಇಂಡಿಯನ್‌ ಪೊಲೀಸ್‌ ಫೌಂಡೇಷನ್‌ನ ಸಮೀಕ್ಷಾ ವರದಿಯಂತೆ ಸ್ಮಾರ್ಟ್‌ ಪೊಲೀಸಿಂಗ್‌ನಲ್ಲಿ ಆಂಧ್ರ ಪೊಲೀಸರು ದೇಶಕ್ಕೆ ನಂ.1' ಎಂದು ಆಂಧ್ರ ಪ್ರದೇಶ ಪೊಲೀಸರು ಟ್ವೀಟ್‌ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

ಕೆಲವು ದಿನಗಳಿಂದ ಸಹಪಾಠಿ (ಹಸಿರು ಬಣ್ಣದ ಅಂಗಿ ಧರಿಸಿದಾತ) ತನ್ನ ಪೆನ್ಸಿಲ್‌ನ ಕಡ್ಡಿಗಳನ್ನು ಕೇಳದೆಯೇ ತೆಗೆದುಕೊಳ್ಳುತ್ತಿದ್ದಾನೆ. ಹಾಗಾಗಿ ಆತನ ವಿರುದ್ಧ ದೂರು ದಾಖಲಿಸಿಕೊಳ್ಳಬೇಕು ಎಂದು ಪೊಲೀಸರಿಗೆ ವಿನಂತಿಸಿದ್ದಾನೆ. ಇಬ್ಬರು ವಿದ್ಯಾರ್ಥಿಗಳು ದೂರು-ಪ್ರತಿದೂರು ಹೇಳುವ ಸಂದರ್ಭ ಹಿಂಬದಿ ನಿಂತ ಸಹಪಾಠಿಗಳು ನಗುತ್ತ ನಿಂತಿರುವುದು ವಿಡಿಯೊದಲ್ಲಿದೆ.

ಈ ಸಂದರ್ಭ ಪೊಲೀಸರು ವಿದ್ಯಾರ್ಥಿಗಳನ್ನು ಗದರದೆ, ತಾಳ್ಮೆಯಿಂದ ಅವರ ದೂರುಗಳನ್ನು ಕೇಳಿಸಿಕೊಂಡಿದ್ದಾರೆ. ಬಳಿಕ ದೂರು ನೀಡಿದರೆ ಏನು ಸಂಭವಿಸುತ್ತದೆ? ಆರೋಪ ಎದುರಿಸುತ್ತಿರುವ ಸಹಪಾಠಿ ಜೈಲು ಸೇರಿದರೆ ಆತನ ಜೀವನ ಹೇಗೆ ಹಾಳಾಗುತ್ತದೆ ಎಂಬುದನ್ನೆಲ್ಲ ವಿದ್ಯಾರ್ಥಿಗಳಿಗೆ ವಿವರಿಸಿ ಹೇಳಿದ್ದಾರೆ. ಬಳಿಕ ಇಬ್ಬರಿಗೂ ಕೈಕುಲುಕುವಂತೆ ಹೇಳಿ, ಸ್ನೇಹಿತರಾಗಿರುವಂತೆ ಬುದ್ಧಿ ಹೇಳಿ ಕಳುಹಿಸಿದ್ದಾರೆ. ಆಂಧ್ರ ಪೊಲೀಸರ ನಡೆಯನ್ನು ನೆಟ್ಟಿಗರು ಮೆಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT