ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆನ್‌ಲೈನ್‌ನಲ್ಲಿ ಖರೀದಿಸಿದ Hershey's ಚಾಕೊಲೇಟ್‌ ಸಿರಪ್‌ನಲ್ಲಿ ಸತ್ತ ಇಲಿ ಪತ್ತೆ

Published 19 ಜೂನ್ 2024, 10:34 IST
Last Updated 19 ಜೂನ್ 2024, 10:34 IST
ಅಕ್ಷರ ಗಾತ್ರ

ನವದೆಹಲಿ: ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಆಹಾರಗಳಲ್ಲಿ ಹುಳು, ಸತ್ತ ಪ್ರಾಣಿಗಳು ಸಿಗುತ್ತಿರುವ ವರದಿಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿವೆ. 

ಈ ನಡುವೆ ದಿನ ಬಳಕೆ ವಸ್ತು ಪೂರೈಕೆ ಮಾಡುವ ಆನ್‌ಲೈನ್‌ ಆ್ಯಪ್‌ ಜೆಪ್ಟೊದಲ್ಲಿ ತರಿಸಿದ್ದ ಹಾರ್ಷಿ ಚಾಕೊಲೇಟ್‌ ಸಿರಪ್‌ನಲ್ಲಿ ಸತ್ತ ಇಲಿಯೊಂದು ಪತ್ತೆಯಾಗಿದೆ ಎಂದು ಕುಟುಂಬವೊಂದು ದೂರಿದೆ. 

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪ್ರಮಿಶ್ರೀಧರ್‌ ಎನ್ನುವವರು ಈ ಮಾಹಿತಿ ಹಂಚಿಕೊಂಡಿದ್ದಾರೆ.

ವಿಡಿಯೊ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ಎಲ್ಲರ ಕಣ್ತೆರೆಸಲು ಈ ವಿಡಿಯೊ ಮಾಡಿದ್ದೇವೆ. ಕೇಕ್‌ನೊಂದಿಗೆ ತಿನ್ನಲು ಜೆಪ್ಟೊದಲ್ಲಿ ಹಾರ್ಷಿ ಚಾಕೊಲೇಟ್‌ ಸಿರಪ್‌ ಆರ್ಡರ್‌ ಮಾಡಿ ತರಿಸಿದ್ದೆವು. ಬಾಟಲ್‌ ತೆರೆದಾಗ ಆರಂಭದಲ್ಲಿ ದಪ್ಪನೆ ರೀತಿಯಲ್ಲಿ ಸಿರಪ್‌ ಕಂಡುಬಂದಿತ್ತು. ಅದರ ಜತೆಗೆ ಸಣ್ಣ ಸಣ್ಣ ಕೂದಲುಗಳು ಸಹ ಇದ್ದವು. ಅನುಮಾನದಿಂದ ಬಾಟಲಿಯಲ್ಲಿರುವ ಚಾಕೊಲೇಟ್‌ ಸಿರಪ್‌ ಅನ್ನು ಪೂರ್ತಿಯಾಗಿ ಪಾತ್ರೆಗೆ ಹಾಕಿ ನೋಡಿದಾಗ ಸತ್ತ ಇಲಿ ಮರಿ ಪತ್ತೆಯಾಗಿದೆ. ಈ ಬಗ್ಗೆ ದೂರು ನೀಡಿದರೂ ಕಂಪನಿ ಕಡೆಯಿಂದ ಯಾವುದೇ ಉತ್ತರವಿಲ್ಲ’ ಎಂದು ಬರೆದುಕೊಂಡಿದ್ದಾರೆ.

‘ದಯವಿಟ್ಟು ಆರ್ಡರ್‌ ಮಾಡಿ ತಿನ್ನುವ ಆಹಾರದ ಬಗ್ಗೆ ಎಚ್ಚರಿಕೆಯಿರಲಿ. ಅದರಲ್ಲೂ ಮಕ್ಕಳಿಗೆ ತಿನ್ನಲು ಕೊಡುವ ಮೊದಲು ಸರಿಯಾಗಿ ಪರಿಶೀಲಿಸಿಕೊಳ್ಳಿ ಎಂದು ಹೇಳಿರುವ ಅವರು,  ಈ ಬಗ್ಗೆ ಸರಿಯಾದ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದ್ದಾರೆ. 

‘ಅದೇ ಚಾಕೊಲೇಟ್‌ ಸಿರಪ್‌ ಕುಡಿದಿದ್ದ ಮೂವರು ಕುಟುಂಬ ಸದಸ್ಯರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಪೋಸ್ಟ್‌ಗೆ ಉತ್ತರಿಸಿರುವ ಹಾರ್ಷಿ ಕಂಪನಿ ‘ಈ ಬಗ್ಗೆ ಕ್ಷಮೆಯಾಚಿಸುತ್ತೇವೆ. ನೀವು ಖರೀದಿಸಿದ ಉತ್ಪನ್ನದ ಬ್ಯಾಚ್‌ ಸಂಖ್ಯೆಯನ್ನು ಕಳುಹಿಸಿ. ನಮ್ಮ ತಂಡದ ಸದಸ್ಯರು ನಿಮ್ಮನ್ನು ಸಂಪರ್ಕಿಸುತ್ತಾರೆ’ ಎಂದು ಹೇಳಿದ್ದು, ಇ–ಮೇಲ್‌ ಅನ್ನು ನಮೂದಿಸಿದ್ದಾರೆ.

ಹಾರ್ಷಿಗೆ ಪ್ರತಿ ಉತ್ತರ ನೀಡಿದ ಬಳಕೆದಾರರು ‘ನಿಮ್ಮ ಉತ್ಪನ್ನಗಳನ್ನು ಎಂದಿಗೂ ಬಳಸುವುದಿಲ್ಲ’ ಎಂದು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT