ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಪ್ರವಾಹ: ಯುಎಇ ನೆರವು ಸಿಗಲು ಮೋದಿ ಕಾರಣ; ಸುಳ್ಳು ಸುದ್ದಿ ವೈರಲ್ !

Last Updated 22 ಆಗಸ್ಟ್ 2018, 11:37 IST
ಅಕ್ಷರ ಗಾತ್ರ

ಬೆಂಗಳೂರು:'ಪ್ರಧಾನಿ ಮೋದಿಜಿಯ ಶ್ರಮದಿಂದಾಗಿ ನಮಗೆ ದುಬೈಯಿಂದ₹700 ಕೋಟಿ ಧನ ಸಹಾಯ ದೊರೆತಿದೆ- ಪಿಣರಾಯಿ ವಿಜಯನ್ 'ಎಂದು ವಿಡಿಯೊ ಶೀರ್ಷಿಕೆ ನೀಡಿ Modi Followers ಎಂಬ ಫೇಸ್‍ಬುಕ್ ಪುಟದಲ್ಲಿ ಪಿಣರಾಯಿ ವಿಜಯನ್ ಅವರ ವಿಡಿಯೊವೊಂದು ಅಪ್‍ಲೋಡ್ ಆಗಿದೆ. ಮೋದಿ ವಿರೋಧಿಗಳ ಬಾಯಿ ಮುಚ್ಚಿಸಿದ ಕೇರಳ ಮುಖ್ಯಮಂತ್ರಿ. ಖುದ್ದು ಯು.ಎ. ಇ ಅಧಿಕಾರಿಗಳ ಜತೆ ಮಾತನಾಡಿದ್ದರು ನಮ್ಮ ಪ್ರಧಾನಿ ಮೋದಿ ಎಂಬ ಟಿಪ್ಪಣಿಯೂ ಇಲ್ಲಿದೆ.

ಆಗಸ್ಟ್ 21ರಂದು ಪಿಣರಾಯಿ ವಿಜಯನ್ ಅವರು ನಡೆಸಿದ ಸುದ್ದಿಗೋಷ್ಠಿಯ ವಿಡಿಯೊದ ಒಂದು ಸಣ್ಣ ತುಣುಕನ್ನು Modi Followers ಪುಟದಲ್ಲಿ ಶೇರ್ ಮಾಡಲಾಗಿದೆ.ನಿಜ ಸಂಗತಿ ಏನೆಂದರೆ ಯುಎಇ ನೆರವು ಸಿಗಲು ಮೋದಿ ಕಾರಣ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಲ್ಲಿಯೂ ಹೇಳಿಲ್ಲ.

ಪಿಣರಾಯಿ ಹೇಳಿದ್ದೇನು?
ಯುಎಇ ಸರ್ಕಾರ ನಮ್ಮ ಈ ದುಃಖದಲ್ಲಿ ಭಾಗಿಯಾಗಲು, ಸಹಾಯ ಮಾಡಲು ತಯಾರಿದೆ.ಈ ವಿಷಯವನ್ನು ನಮ್ಮ ಪ್ರಧಾನಿ ಅವರ ಬಳಿ ಯುಎಇ ದೊರೆ ಮತ್ತು ಡೆಪ್ಯುಟಿ ಸುಪ್ರೀಂ ಕಮಾಂಡರ್ ಶೇಖ್ ಮೊಹಮ್ಮದ್ ಬಿನ್ ಸಯ್ಯದ್ ಅಲ್ ನೆಹಯಾನ್ ಮಾತನಾಡಿದ್ದಾರೆ. ನಮಗೆ ಯುಎಇಯಿಂದ ಸಹಾಯ ನೀಡಲು ಅವರು ತೀರ್ಮಾನಿಸಿರುವ ಮೊತ್ತ ₹700 ಕೋಟಿ. ನಮ್ಮ ದುಃಖವನ್ನು ಅರಿತು ಅವರು ನೀಡಿದ ಸಹಾಯ ಭರವಸೆ ಇದಾಗಿದೆ . ಹೀಗೊಂದು ತೀರ್ಮಾನ ತೆಗೆದುಕೊಳ್ಳಲು ನೆರವಾದ ಯುಎಇ ಅಧ್ಯಕ್ಷ ಶೇಖ್ ಖಾಲಿಫಾ ಬಿನ್ ಸಯ್ಯದ್ ಅಲ್ ನೆಹ್‌ಯಾನ್, ಅದೇ ರೀತಿ ಉಪಾಧ್ಯಕ್ಷ, ಪ್ರಧಾನಿಯೂ ಆಗಿರುವ ಶೇಖ್ ಮೊಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೋಮ್, ಅದರ ಜತೆಗೆ ಪ್ರಧಾನಿಯವರೊಂದಿಗೆ ಮಾತುಕತೆ ನಡೆಸಲು ನೆರವಾದಅಬುದಾಬಿ ಡೆಪ್ಯುಟಿ ಸುಪ್ರೀಂ ಕಮಾಂಡರ್, ದೊರೆ ಶೇಖ್ ಮೊಹಮ್ಮದ್ ಬಿನ್ ಸಯ್ಯದ್ ಅಲ್ ನೆಹಯಾನ್ ಇವರಿಗೆ ಮತ್ತು ಯುಎಇ ಸರ್ಕಾರಕ್ಕೆ ನಮ್ಮ ರಾಜ್ಯದ ಜನರ ಪರವಾಗಿ ಕೃತಜ್ಞತೆ ಹೇಳುತ್ತೇನೆ.

ಈ ವಿಷಯಗಳನ್ನು ಪ್ರಧಾನಿಯವರೊಂದಿಗೆ ಮಾತನಾಡಿದ್ದಾರೆ ಎಂಬ ವಿಷಯವನ್ನೂಇಷ್ಟು ಮೊತ್ತಗಳನ್ನು ನಮಗೆ ನೀಡುತ್ತಾರೆ ಎಂಬುದನ್ನು ಇಂದು ಬೆಳಗ್ಗೆ ಬಕ್ರೀದ್ ಹಬ್ಬದ ಶುಭಾಶಯ ಹೇಳಲು ಹೋದಾಗ ದೊರೆ ಶೇಖ್ ಮೊಹಮ್ಮದ್ ಬಿನ್ ಸಯ್ಯದ್ ಅಲ್ ನೆಹಯಾನ್ ಅವರು ನಮ್ಮ ಉದ್ಯಮಿ ಶ್ರೀ.ಯೂಸಫಲಿ ಅವರಲ್ಲಿ ಹೇಳಿದ್ದಾರೆ . ಪ್ರಧಾನಿಯವರಲ್ಲಿ ಈ ಬಗ್ಗೆ ಮಾತನಾಡಿದ್ದು, ಯುಎಇ ಯಿಂದಬರುವ ನೆರವು ಮತ್ತು ಜಗತ್ತೇ ನಮಗೆ ಸಹಾಯಕ್ಕೆ ನಿಂತಿದೆ ಎಂಬ ಸಂಗತಿನಮಗೆ ಮತ್ತಷ್ಟು ಚೈತನ್ಯ ತುಂಬಿದೆ ಎಂದು ಪಿಣರಾಯಿ ಹೇಳಿದ್ದಾರೆ.

ಈ ವಿಡಿಯೊಗೆ ಪೂರಕ ಎಂಬಂತೆ ಪೋಸ್ಟ್ ಕಾರ್ಡ್ ಕನ್ನಡ ಕೇರಳಕ್ಕೆ ಕೇಂದ್ರ ಕೊಟ್ಟಿದ್ದು 500 ಕೋಟಿ ಮಾತ್ರನಾ? ದುಬೈ 700 ಕೋಟಿ ಕೊಟ್ಟಿದ್ದು ಹೇಗೆ? ಮೋದಿಯನ್ನು ಟೀಕಿಸುವ ವಿರೋಧಿಗಳಿಗೆ ದಿಟ್ಟ ಉತ್ತರ ನೀಡಿದ ಕೇರಳ ಮುಖ್ಯಮಂತ್ರಿ ವೀಡಿಯೋ ವೈರಲ್! ಎಂಬ ಸುದ್ದಿ ಪ್ರಕಟಿಸಿದೆ.

ಪ್ರಸ್ತುತ ಸುದ್ದಿಯಲ್ಲಿದಿಟ್ಟ ಉತ್ತರ ನೀಡಿದ ಕೇರಳ ಮುಖ್ಯಮಂತ್ರಿ..! ಎಂಬ ಉಪ ಶೀರ್ಷಿಕೆಯಡಿಯಲ್ಲಿ ಈ ರೀತಿ ಬರೆಯಲಾಗಿದೆ

"ಇಂತಹಾ ಟೀಕೆಗಳು ಯಾವಾಗ ಹರಿದು ಬಂತೋ ಅಂದೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಎಲ್ಲಾ ಟೀಕೆಗಳಿಗೂ ದಿಟ್ಟ ಉತ್ತರವನ್ನು ನೀಡಿದ್ದಾರೆ. ಕೇರಳದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ “ಯುಎಇ ರಾಜ ಶೇಕ್ ಮಹಮ್ಮದ್ ಬಿನ್ ಝಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ನಮ್ಮ ರಾಜ್ಯಕ್ಕೆ 700 ಕೋಟಿ ಸಹಾಯಧನವನ್ನು ನೀಡಿದ್ದಾರೆ. ಇದು ಲಭಿಸಿದ್ದು ನಮ್ಮ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಶ್ರಮದಿಂದಾಗಿ. ಪ್ರಧಾನಿ ಮೋದಿಯವರು ದುಬೈ ಅಧಿಕಾರಿಗಳು ಹಾಗೂ ಸರಕಾರವನ್ನು ನಿರಂತರವಾಗಿ ಸಂಪರ್ಕಿಸಿದ್ದರ ಪರಿಣಾಮದಿಂದಾಗಿ ಇಂದು ಈ ಸಹಾಯ ದೊರಕಿದೆ. ನಾವು ದುಬೈ ರಾಜ ಹಾಗೂ ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಇದು ಮೋದಿಯನ್ನು ಏನೂ ಕೊಟ್ಟಿಲ್ಲ ಎಂದು ಟೀಕಿಸುತ್ತಿದ್ದ ವಿರೋಧಿಗಳ ಬಾಯಿ ಮುಚ್ಚುವಂತೆ ಮಾಡಿದೆ. ಸದಾ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರಕಾರವನ್ನು ಟೀಕಿಸುತ್ತಲೇ ಇರುವ ಟೀಕಾಕಾರರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಮರ್ಥ ಉತ್ತರವನ್ನು ನೀಡಿದ್ದು ವಿರೋಧಿಗಳಿಗೆ ಗರ ಬಡಿದಂತಾಗಿದೆ.”

ಪಿಣರಾಯಿ ಅವರ ಸುದ್ದಿಗೋಷ್ಠಿ ವಿಡಿಯೊ ಅರ್ಥ ಮಾಡಿಕೊಂಡರೆ ಪೋಸ್ಟ್ ಕಾರ್ಡ್ ಸುದ್ದಿಯಲ್ಲಿ ಬರೆದದ್ದು ಸುಳ್ಳುಎಂಬುದು ತಿಳಿಯುತ್ತದೆ.

ಪಿಣರಾಯಿ ಹೇಳಿದ್ದು ಒಂದು ಮೋದಿ ಬೆಂಬಲಿಗರು ಅರ್ಥ ಮಾಡಿದ್ದು ಇನ್ನೊಂದು!
ಅಂದಹಾಗೆ ಪಿಣರಾಯಿ ಮಲಯಾಳಂನಲ್ಲಿ ಹೇಳಿದ ಮಾತುಗಳನ್ನು ಮೋದಿ ಬೆಂಬಲಿಗರುತಮ್ಮ ಅನುಕೂಲಕ್ಕೆ ತಕ್ಕಂತೆ ಕನ್ನಡಾನುವಾದ ಮಾಡಿ ಹರಿಯಬಿಟ್ಟಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ.Modi Followers ಪುಟದಲ್ಲಿ ಈ ವಿಡಿಯೊಗೆ ಬಂದ ಕಾಮೆಂಟುಗಳನ್ನು ಗಮನಿಸಿದರೆ ಸುಳ್ಳುಸುದ್ದಿ ಬಗ್ಗೆ ನೆಟ್ಟಿಗರು ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ತಿಳಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT