ಸೋಮವಾರ, ಫೆಬ್ರವರಿ 24, 2020
19 °C
ಕೊರೊನಾವೈರಸ್ ಭೀತಿ

ವೈರಲ್ | ಭಾರತ ನೋಡಿ ಪಾಠ ಕಲಿಯಿರಿ, ನಮ್ಮ ಜೀವ ಉಳಿಸಿ: ಪಾಕ್ ವಿದ್ಯಾರ್ಥಿಗಳ ಅಳಲು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

‘ಭಾರತ ಸರ್ಕಾರ ತನ್ನ ರಾಯಭಾರ ಕಚೇರಿಯಿಂದ ವಾಹನ ಕಳಿಸಿ, ತನ್ನ ದೇಶದ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆಸಿಕೊಳ್ಳುತ್ತಿದೆ. ಬಾಂಗ್ಲಾದೇಶವೂ ತನ್ನ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆಸಿಕೊಳ್ಳುವ ಅಭಯ ನೀಡಿದೆ. ನಾವು ಪಾಕಿಸ್ತಾನಿಯರು ಮಾಡಿದ ತಪ್ಪೇನು? ನಮ್ಮನ್ನೇಕೆ ನಮ್ಮ ಸರ್ಕಾರ ಅನಾಥರನ್ನಾಗಿ ಪರದೇಶದಲ್ಲಿಯೇ ಸಾಯಲು ಬಿಟ್ಟುಬಿಟ್ಟಿದೆ? ಭಾರತ ಸರ್ಕಾರದ ಕ್ರಮಗಳನ್ನು ನೋಡಿಯಾದರೂ ಪಾಠ ಕಲಿಯಿರಿ ಇಮ್ರಾನ್ ಖಾನ್...’

– ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡ ಚೀನಾದ ವುಹಾನ್ ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪಾಕಿಸ್ತಾನದ ವಿದ್ಯಾರ್ಥಿಗಳ ಈ ವಿಡಿಯೊ ಟ್ವಿಟರ್‌ನ ಇಂಡಿಯಾ ಟ್ರೆಂಡ್‌ ಪಟ್ಟಿಯಲ್ಲಿಯೂ ಟಾಪ್‌ನಲ್ಲಿಯೇ ಇದೆ.

‘ವಿದೇಶಕ್ಕೆ ಹೋಗಿ, ಓದಿ, ದುಡಿದು ಸ್ವದೇಶಕ್ಕೆ ಹಣ ಕಳಿಸಿ. ಪಾಕಿಸ್ತಾನವನ್ನು ಸಂಪದ್ಭರಿತ ದೇಶ ಮಾಡಿ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು. ಅವರ ಮಾತನ್ನು ನಾವು ಗೌರವಿಸಿದೆವು. ಆದರೆ ನಮ್ಮ ಸರ್ಕಾರ ನಮ್ಮನ್ನು ಮರೆತೇ ಹೋಯಿತು’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಪಾಕಿಸ್ತಾನದ ಜನಪ್ರಿಯ ದಿನಪತ್ರಿಕೆ ‘ಡಾನ್’ ಸಹ ಇಂದು (ಫೆ.2) ಚೀನಾದಲ್ಲಿರುವ ಪಾಕಿಸ್ತಾನೀಯರ ಬಗ್ಗೆ ಸಂಪಾದಕೀಯ ಪ್ರಕಟಿಸಿದೆ. 

‘ಚೀನಾದಲ್ಲಿ 30 ಸಾವಿರ ಪಾಕಿಸ್ತಾನ್ ಪ್ರಜೆಗಳಿದ್ದಾರೆ. ವೈರಸ್ ಭೀತಿಯ ಕೇಂದ್ರ ನೆಲೆಯಾಗಿರುವ ವುಹಾನ್‌ನಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಆದರೆ ಅವರನ್ನು ವಾಪಸ್ ಕರೆತರಲು ಸಾಧ್ಯವೇ? ಅವರನ್ನು ಕರೆ ತಂದರೆ ನಿಗಾ ಘಟಕದಲ್ಲಿ (Quarantine Centre) ಕೆಲ ದಿನಗಳು ಉಳಿಸಿ, ಆರೋಗ್ಯ  ಕುಟುಂಬಗಳಿಗೆ ಕಳಿಸುವಂಥ ವ್ಯವಸ್ಥೆ ರೂಪಿಸಲು ಸರ್ಕಾರಕ್ಕೆ ಸಾಧ್ಯವೇ?’ ಎಂದು ಪ್ರಶ್ನಿಸಿದೆ.

ಇಮ್ರಾನ್‌ಖಾನ್ ಆಡಳಿತ ವೈಖರಿ ವ್ಯಂಗ್ಯ ಮಾಡಲು ಪಾಕಿಸ್ತಾನಿಯರು ಬಳಸಿರುವ ಚಿತ್ರ

ಏಕೆ ಹಿಂಜರಿಕೆ

‘ಡಾನ್’ ಸಂಪಾದಕೀಯದ ಪ್ರಕಾರ, ಪಾಕಿಸ್ತಾನದಲ್ಲಿ ನಿಗಾ ಘಟಕಗಳ ಸ್ಥಾಪನೆ ಅಸಾಧ್ಯ ಎನಿಸುವಂಥ ಪರಿಸ್ಥಿತಿ ಇರುವುದೇ ಪಾಕಿಸ್ತಾನವು ತನ್ನ ವಿದ್ಯಾರ್ಥಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಇರುವ ಮುಖ್ಯ ತೊಡಕು. ಆದರೆ ಪಾಕಿಸ್ತಾನದ ಪ್ರಜೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವ ಪೋಸ್ಟ್‌ಗಳು ಬೇರೆಯೇ ಕಥನ ಕಟ್ಟುತ್ತಿದೆ.

‘ಚೀನಾದೊಡನೆ ಪಾಕ್ ಸರ್ಕಾರಕ್ಕೆ ಹಲವು ಒಪ್ಪಂದಗಳಿವೆ. ಒಂದು ರೀತಿಯಲ್ಲಿ ನಾವು ಚೀನಾದ ಹಂಗಿನಲ್ಲಿದ್ದೇವೆ. ಚೀನಾ ಸರ್ಕಾರಕ್ಕೆ ಬೇಸರವಾಗಬಹುದು ಎನ್ನುವ ಕಾರಣ ಪ್ರಧಾನಿ ಇಮ್ರಾನ್ ಖಾನ್ ಚೀನಾದಲ್ಲಿರುವ ಪಾಕಿಸ್ತಾನಿಯರನ್ನು ತ್ಯಜಿಸಿಬಿಟ್ಟಿದ್ದಾರೆ’ ಎಂಬ ಆಕ್ರೋಶವನ್ನು ಪಾಕಿಸ್ತಾನಿಯರು ಸಾಮಾಜಿಕ ಮಾಧ್ಯಮಗಳಲ್ಲಿ ಹೊರಹಾಕಿದ್ದಾರೆ.

ತನ್ನ ವಿದ್ಯಾರ್ಥಿಗಳು ಸ್ವದೇಶಕ್ಕೆ ಕರೆಸಿಕೊಳ್ಳದ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ವಿರುದ್ಧ ಪಾಕಿಸ್ತಾನದ ವಿವಿಧೆಡೆ ಪ್ರತಿಭಟನೆಗಳು ಆರಂಭವಾಗಿದೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು