ಗುರುವಾರ , ನವೆಂಬರ್ 14, 2019
22 °C

ಸಿಐ ಈಗ ಸಂಸದ; ಮೇಲಧಿಕಾರಿಯಿಂದ ಸೆಲ್ಯೂಟ್ ಸ್ವೀಕರಿಸುತ್ತಿರುವ ಫೋಟೊ ವೈರಲ್

Published:
Updated:

ಹೈದರಾಬಾದ್: ಹಿರಿಯ ಪೊಲೀಸ್ ಅಧಿಕಾರಿಗೆ ಸೆಲ್ಯೂಟ್ ಹೊಡೆದಿದ್ದ ಆಂಧ್ರ ಪ್ರದೇಶದ ಪೊಲೀಸ್ ಇನ್ಸ್‌ಪೆಕ್ಟರ್ ಈಗ ಅದೇ ಪೊಲೀಸ್ ಅಧಿಕಾರಿಗಳು ತನಗೆ ಸೆಲ್ಯೂಟ್ ಹೊಡೆಯುವಂತೆ ಮಾಡಿದ್ದಾರೆ. ಆಂಧ್ರದ ಸರ್ಕಲ್ ಇನ್ಸ್‌ಪೆಕ್ಟರ್  ಗೋರಂಟ್ಲ ಮಾಧವ್ ಈಗ ಸಂಸದ. ಅನಂತಪುರ ಜಿಲ್ಲೆಯ ಹಿಂದೂಪುರ್ ಲೋಕಸಭಾ ಕ್ಷೇತ್ರದಿಂದ ಮಾಧವ್ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಸಂಸದರಾದ ನಂತರ ಮಾಧವ್ ಅವರ ಹಳೆಯ ಬಾಸ್ , ಸಿಐಡಿ ಡೆಪ್ಯುಟಿ ಸುಪರಿಟೆಂಡೆಂಟ್ ಆಫ್ ಪೊಲೀಸ್ ಮೆಹಬೂಬ್ ಪಾಷಾ, ನೂತನ ಸಂಸದರಿಗೆ ಸೆಲ್ಯೂಟ್ ಹೊಡೆಯುತ್ತಿರುವ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪೊಲೀಸ್ ಸಿಬ್ಬಂದಿಗಳೊಂದಿಗೆ ಇರುವ ಪಾಶಾ ಮತ್ತು ಮಾಧವ್ ನಗುತ್ತಾ ಸೆಲ್ಯೂಟ್ ಹೊಡೆಯುತ್ತಿರುವ  ಫೋಟೊ ಇದಾಗಿದೆ. 

ಕದಿರಿ ಸಿಐ ಆಗಿದ್ದ ಮಾಧವ್ ಹಿಂದೂಪುರ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಟಿಡಿಪಿ ಸಂಸದ ಕ್ರಿಸ್ತಪ್ಪ ನಿಮ್ಮಲ ಅವರನ್ನು 1,40,748 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

ಮತ ಎಣಿಕೆ ಕೇಂದ್ರದ ಹೊರಗೆ ಕ್ಲಿಕ್ಕಿಸಿದ ಫೋಟೊ ಇದಾಗಿದೆ. ವೈರಲ್ ಫೋಟೊ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಧವ್, ನಾನು ಮೊದಲು ಡೆಪ್ಯುಟಿ ಎಸ್‌ಪಿ ಅವರಿಗೆ ಸೆಲ್ಯೂಟ್  ಹೊಡೆದೆ. ನಾನು ಅವರನ್ನು ಗೌರವಿಸುತ್ತೇನೆ. ನಾವಿಬ್ಬರೂ ಪರಸ್ಪರ ಗೌರವಿಸುತ್ತೇವೆ ಎಂದು ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
 

ಪ್ರತಿಕ್ರಿಯಿಸಿ (+)