ಸೋಮವಾರ, ನವೆಂಬರ್ 29, 2021
20 °C

ಜಸ್ಟ್‌ ಮ್ಯೂಸಿಕ್‌– 34: ಸಂಗೀತ ವಿಜ್ಞಾನಿಗೆ ಡಾ.ರಾಜ್‌ ಸ್ಪರ್ಶ!

 

ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಆಧಾರದ ಮೇಲೆ ರಂಗ ಸಂಗೀತಕ್ಕೆ ಬಣ್ಣ ತುಂಬಿರುವ ಪಂ.ದೀಪಕ್‌ ಪರಮಶಿವನ್‌ ಅವರು ಬಹುಶ್ರುತ ವಿದ್ವಾಂಸರು. ವೃತ್ತಿ ರಂಗಭೂಮಿ ಸಂಗೀತ ದಿಗ್ಗಜ ಆರ್‌.ಪರಮಶಿವನ್‌ ಅವರ ಪುತ್ರರಾಗಿರುವ ದೀಪಕ್‌, ತಂದೆಯ ಅಷ್ಟೂ ಸಂಗೀತ ಜ್ಞಾನವನ್ನು ತಮ್ಮೊಳಗೆ ತುಂಬಿಕೊಂಡಿದ್ದಾರೆ.

ವೃತ್ತಿ ರಂಗಭೂಮಿ ವಿನಾಶದ ಅಂಚು ತಲುಪಿರುವ ಈ ಹೊತ್ತಿನಲ್ಲಿ ದೀಪಕ್‌ ಅವರು ವೃತ್ತಿ ರಂಗಭೂಮಿಯ ರಂಗ ಸಂಗೀತಕ್ಕೆ ಹೊಸ ರೂಪ ಕೊಟ್ಟಿದ್ದಾರೆ. 40, 50ರ ದಶಕದ ನಾಟಕಗಳ ರಂಗಗೀತೆ ಹಾಡಿ ಆಶ್ಚರ್ಯ ಸೃಷ್ಟಿಸುತ್ತಾರೆ. ದೇಶದ ಕೆಲವೇ ಕೆಲವು ಸಾರಂಗಿವಾದಕರಲ್ಲಿ ಡಾ.ದೀಪಕ್‌ ಕೂಡ ಒಬ್ಬರಾಗಿದ್ದಾರೆ. ವೀಣೆ ನುಡಿಸಾಣಿಕೆಯಲ್ಲೂ ತಮ್ಮ ಪ್ರತಿಭೆ ತೋರಿದ್ದಾರೆ. ಬೆಂಗಳೂರು ಆಕಾಶವಾಣಿಯಲ್ಲಿ ಬಿ ಹೈ ಶ್ರೇಣಿ ವೀಣಾ ವಾದಕರಾಗಿದ್ದಾರೆ.

 

ಶೈಕ್ಷಣಿಕವಾಗಿಯೂ ಅವರ ಸಾಧನೆ ಆಶ್ಚರ್ಯ ಮೂಡಿಸುತ್ತದೆ. ಆರ್‌.ವಿ.ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿಇ ಪದವಿ, ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನಲ್ಲಿ ಚಿನ್ನದ ಪದಕದೊಂದಿಗೆ ಎಂ.ಟೆಕ್‌–ಪಿಎಚ್‌ಡಿ ಪದವಿ, ಬಾಂಬೆ ಐಐಟಿಯಲ್ಲಿ ಹವಾಮಾನ ವಿಜ್ಞಾನಿ, ಮಾಧು ಸ್ಕೂಲ್‌ ಆಫ್‌ ಮ್ಯಾಥಮ್ಯಾಟಿಕ್ಸ್‌ನಲ್ಲಿ ಸಂಸ್ಕೃತ– ಗಣಿತ ತಜ್ಞನಾಗಿ ಕೆಲಸ ಮಾಡಿದ್ದಾರೆ. ಈಗ ಅವರು ಕೆನಡದ ಯೂನಿವರ್ಸಿಟಿ ಆಫ್‌ ಆಲ್ಬೆರ್ಟಾದಲ್ಲಿ ಹವಾಮಾನ ವಿಜ್ಞಾನಿಯಾಗಿದ್ದಾರೆ. ಎರಡು ಪಿ.ಎಚ್‌ಡಿ ಮುಗಿಸಿರುವ ಅವರು 3ನೇ ಪಿ.ಎಚ್‌ಡಿ ಮಾಡುತ್ತಿದ್ದಾರೆ.

 

ಪಾಶ್ಚಾತ್ಯ ಸಂಗೀತದಲ್ಲೂ ತಮ್ಮ ಪ್ರತಿಭೆ ತೋರಿರುವ ಅವರು ಹಲವು ಆಲ್ಬಂ ಹೊರ ತಂದಿದ್ದಾರೆ. ವಿವಿಧ ದೇಶಗಳಲ್ಲಿ ಖ್ಯಾತನಾಮ ಸಂಗೀತಗಾರರಿಗೆ ಸಾರಂಗಿ ಸಾಥಿಯಾಗಿದ್ದಾರೆ. ಇಂತಹ ಡಾ.ದೀಪಕ್‌ ಪರಮಶಿವನ್‌ ಅವರ ಹಿತಾನುಭವನ ಈ ವಾರದ ‘ಜಸ್ಟ್‌ ಮ್ಯೂಸಿಕ್‌’ನಲ್ಲಿದೆ.