ಸೋಮವಾರ, ಜುಲೈ 26, 2021
24 °C

ಕ್ಯಾನ್ಸರ್ ಗಡ್ಡೆ ಪರೀಕ್ಷೆಗೆ ‘ವಿಆರ್‌ 3ಡಿ’ ತಂತ್ರಜ್ಞಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಕ್ಯಾನ್ಸರ್ ಬಗ್ಗೆ ವಿಸ್ತೃತವಾಗಿ ಅರಿತುಕೊಳ್ಳಲು ಹಾಗೂ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕೇಂಬ್ರಿಜ್ ವಿಜ್ಞಾನಿಗಳು ಹೊಸ ವಿಧಾನವನ್ನು ಪರಿಚಯಿಸಿದ್ದಾರೆ. 

ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ‘ಮಿಥ್ಯಾವಾಸ್ತವ 3ಡಿ ಮಾದರಿ’ಯು (ವಿಆರ್‌) ಕ್ಯಾನ್ಸರ್ ಗಡ್ಡೆಗಳ ಒಳಗೆ ನುಸುಳಿಹೋಗಿ, ಅದರ ವಿವಿಧ ಆಯಾಮಗಳ ಮಾಹಿತಿಯನ್ನು ನೀಡುತ್ತದೆ. 

ಈ ವಿಧಾನದಲ್ಲಿ ಸಂಗ್ರಹಿಸಿದ ರೋಗಿಯ ಕ್ಯಾನ್ಸರ್ ಗಡ್ಡೆಯ ಮಾದರಿಯನ್ನು ಆಳವಾದ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪ್ರತಿ ಜೀವಕೋಶವನ್ನೂ ಅಧ್ಯಯನ ಮಾಡಲಾಗುತ್ತದೆ. 

‘ಈತನಕ ಯಾರೂ ಕೂಡಾ ಕ್ಯಾನ್ಸರ್ ಗಡ್ಡೆಗಳನ್ನು ಇಷ್ಟು ಆಳವಾಗಿ ಅಧ್ಯಯನಕ್ಕೆ ಒಳಪಡಿಸಿರಲಿಲ್ಲ. ಇದು ಕ್ಯಾನ್ಸರ್ ಅನ್ನು ನೋಡುವ ಹೊಸ ದೃಷ್ಟಿಕೋನ’ ಎಂದು ಬ್ರಿಟನ್‌ನ ಕೇಂಬ್ರಿಜ್ ಸಂಸ್ಥೆಯ ಕ್ಯಾನ್ಸರ್ ಅಧ್ಯಯನ ವಿಭಾಗದ (ಸಿಆರ್‌ಯುಕೆ) ನಿರ್ದೇಶಕ ಗ್ರೆಗ್ ಹಾನನ್ ಹೇಳಿದ್ದಾರೆ. 

ಅಧ್ಯಯನ ಹೇಗೆ?

ಕ್ಯಾನ್ಸರ್‌ ಗಡ್ಡೆಯ ಒಂದು ಘನ ಮಿಲಿಮೀಟರ್‌ ಅಳತೆಯ ತುಣುಕಿನಲ್ಲಿ ಸುಮಾರು ಒಂದು ಲಕ್ಷ ಜೀವಕೋಶಗಳಿರುತ್ತವೆ. ಈ ತುಣುಕನ್ನು ಅತ್ಯಂತ ತೆಳುವಾಗಿ ಕತ್ತರಿಸಲಾಗುತ್ತದೆ. ಮಾರ್ಕರ್‌ ಮೂಲಕ ಅವುಗಳಿಗೆ ಬಣ್ಣ ನೀಡಿ, ಅಣುಗಳ ರಚನೆ ಹಾಗೂ ಹಾಗೂ ಡಿಎನ್‌ಎ ಗುಣಲಕ್ಷಣಗಳನ್ನು ಅರಿಯಬಹುದು. 

ಈ ತಂತ್ರಜ್ಞಾನದ ಮೂಲಕ ಸೂಜಿಮೊನೆಯಷ್ಟು ಗಾತ್ರದ ಜೀವಕೋಶದ ಮಾದರಿಯನ್ನು ಹಲವು ಮೀಟರ್‌ಗಳಷ್ಟು ಗಾತ್ರಕ್ಕೆ ಹಿಗ್ಗಿಸಿ ನೋಡಬಹುದು.

ಕ್ಯಾನ್ಸರ್ ದೂರ ಮಾಡುವ ಕುಲಾಂತರಿ ಸಸ್ಯ

ಕ್ಯಾನ್ಸರ್‌ಗೆ ಕಾರಣವಾಗುವ ಕಣಗಳನ್ನು ನಮ್ಮ ಸುತ್ತಲಿನ ವಾತಾವರಣದಿಂದ ನಿರ್ಮೂಲನೆ ಮಾಡುವ ಕುಲಾಂತರಿ ಸಸ್ಯಗಳನ್ನು (ವಂಶವಾಹಿ ಪರಿವರ್ತಿತ ತಳಿ) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಗಾಳಿಯಲ್ಲಿರುವ ದೂಳು ಹಾಗೂ ಅಲರ್ಜಿ ಉಂಟುಮಾಡುವ ಚಿಕ್ಕ ಕಣಗಳನ್ನು ಶೋಧಿಸುವ ಸಾಧನಗಳು, ಸೂಕ್ಷ್ಮಕಣಗಳನ್ನು ಪತ್ತೆಹಚ್ಚಲಾರವು.

ಕ್ಲೊರೊಫಾರ್ಮ್, ಬೆಂಜೀನ್‌ನಂತಹ ಅಪಾಯಕಾರಿ ಸೂಕ್ಷ್ಮ ಕಣಗಳು ಕ್ಯಾನ್ಸರ್‌ನೊಂದಿಗೆ ನಂಟು ಹೊಂದಿವೆ. ಇಂತಹ ಕಣಗಳನ್ನು ಶೋಧಿಸುವ ಕುಲಾಂತರಿ ಸಸ್ಯಗಳನ್ನು ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಎನ್ವಿರಾನ್ಮೆಂಟಲ್ ಸೈನ್ಸ್ ಅಂಡ್ ಟೆಕ್ನಾಲಜಿ ಪತ್ರಿಕೆಯಲ್ಲಿ ಈ ವರದಿ ಪ್ರಕಟವಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು