ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖನಿದ್ರೆಗೆ ಹನ್ನೆರಡು ಸೂತ್ರಗಳು

Last Updated 1 ಮೇ 2020, 19:45 IST
ಅಕ್ಷರ ಗಾತ್ರ

ಈ ಲಾಕ್‌ಡೌನ್‌ ಸಂದರ್ಭದಲ್ಲಿ ನಿದ್ರಾಹೀನತೆಯಿಂದ ಬಳಲುವವರ ಸಂಖ್ಯೆ ಜಾಸ್ತಿಯಾಗಿದೆ. ಕೊರೊನಾ ಸೋಂಕಿನ ಭಯ, ಅನಿಶ್ಚಿತ ಭವಿಷ್ಯ, ಊಟ– ತಿಂಡಿಯಲ್ಲಿನ ಅಶಿಸ್ತು ಇದಕ್ಕೆ ಪ್ರಮುಖ ಕಾರಣ.

‘ಮುಂಚೆ ಅಲಾರ್ಮ್‌ ಇಟ್ಟುಕೊಂಡು ಏಳಬೇಕಿತ್ತು. ಆದರೆ ಕಳೆದ ಒಂದೂವರೆ ತಿಂಗಳಿಂದ ನಿದ್ರೆಯೇ ಸರಿಯಾಗಿ ಬರುತ್ತಿಲ್ಲ. ಮಧ್ಯರಾತ್ರಿ ನಂತರ ಕೊಂಚ ನಿದ್ರೆ ಬಂದರೂ ಕೆಟ್ಟ ಕನಸು ಬಿದ್ದು ಮಧ್ಯೆಮಧ್ಯೆ ಎಚ್ಚರವಾಗಿ ತೊಂದರೆಯಾಗುತ್ತಿದೆ’ ಎಂಬುದು 40ರ ಹರೆಯದ ಬ್ಯಾಂಕರ್‌ ವಿಜಯ್‌ಕುಮಾರ್‌ ಅಳಲು.

ಹೌದು, ಕೋವಿಡ್–19 ಪಿಡುಗು ಶುರುವಾದಾಗಿನಿಂದ ನಿದ್ರೆ ಬರುವುದಿಲ್ಲವೆಂದು ಹೇಳಿಕೊಳ್ಳುವವರ ಸಂಖ್ಯೆ ವೃದ್ಧಿಸಿದೆ ಎನ್ನುತ್ತದೆ ವರದಿ.

ನಿದ್ರಾಹೀನತೆಗೆ ಕಾರಣಗಳು

ಕೊರೊನಾ ಸೋಂಕು ತನಗೆ, ತನ್ನ ಕುಟುಂಬಕ್ಕೆ ಹರಡಬಹುದು ಎಂಬ ಆತಂಕ ಒಂದೆಡೆಯಾದರೆ, ಮಾಧ್ಯಮಗಳಲ್ಲಿ ಈ ಕುರಿತು ಬರುವ ಸುದ್ದಿಗಳು ಮನಸ್ಸನ್ನು ವಿಚಲಿತಗೊಳಿಸುವುದು ಇನ್ನೊಂದೆಡೆ.

ಬಹಳ ಸಕ್ರಿಯರಾಗಿದ್ದವರು ಒಮ್ಮೆಲೇ ಲಾಕ್‌ಡೌನ್‌ನಿಂದ ಮನೆಯಲ್ಲಿ ಕುಳಿತುಕೊಳ್ಳುವಂತಾದಾಗ ನಿದ್ರಾಹೀನತೆ ಕಾಡುವುದು ಸಾಮಾನ್ಯ. ಹಲವಾರು ಸಂಸ್ಥೆಗಳಲ್ಲಿ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ಕೊಟ್ಟಿದ್ದಾರೆ. ಆದರೆ ಇದು ಸಾಧ್ಯವಿರದಂತಹ ಉದ್ಯೋಗಗಳಲ್ಲಿರುವವರ ಸಂಖ್ಯೆಯೂ ಬಹಳಷ್ಟು.

ಮದ್ಯ ವ್ಯಸನಿಗಳಿಗೆ ಮದ್ಯ ಸಿಗುತ್ತಿಲ್ಲ. ಒಂದು ಹಂತದಲ್ಲಿ ಮನುಷ್ಯ ಮದ್ಯವಿಲ್ಲದೇ ಬಾಳಲು ಕಷ್ಟವಾಗುವ ಸ್ಥಿತಿ ತಲುಪುತ್ತಾನೆ. ಮದ್ಯವಿಲ್ಲದೆ ನಿದ್ದೆ ಬರುವುದಿಲ್ಲವೆಂಬುದು ಇದರ ಮೊದಲ ಲಕ್ಷಣ. ತೀವ್ರವಾದ ಮದ್ಯದ ಅವಲಂಬನೆ ಇರುವವರು ‘ಡೆಲಿರಿಯಂ ಟ್ರೆಮೆನ್ಸ್’ ಎಂಬ ಸ್ಥಿತಿಗೆ ಹೋಗಬಹುದು. ಕುಡಿತಕ್ಕೆ ದಾಸರಾಗಿರುವವರ ಕುಟುಂಬಗಳು ಇದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಉತ್ತಮ.

ಕೋವಿಡ್–19 ಅಪ್ಪಳಿಸುವ ಮೊದಲೇ ಜಗತ್ತಿನೆಲ್ಲೆಡೆ ವಿತ್ತ ವ್ಯವಸ್ಥೆ ಹದಗೆಟ್ಟಿತ್ತು. ಈ ಲಾಕ್‌ಡೌನ್‌ ನಂತರ ಅದರ ಪಾಡು ಊಹೆಗೂ ನಿಲುಕದಷ್ಟು ಕಷ್ಟವಾಗಿದೆ. ಸ್ವಂತ ಉದ್ದಿಮೆ ನಡೆಸುವವರು ತೆಗೆದುಕೊಂಡ ಸಾಲ, ಕಾರ್ಖಾನೆ- ಮನೆಗಳ ಬಾಡಿಗೆ, ನೌಕರರ ಸಂಬಳ.. ಇವನ್ನೆಲ್ಲ ಹೇಗೆ ಸಂಭಾಳಿಸುವುದೆಂದು ನಿದ್ದೆಗೆಟ್ಟರೆ, ನೌಕರರು ಮುಂದಿನ ತಿಂಗಳ ವೇತನ ಬರದಿದ್ದರೆ ಜೀವನ ನಿರ್ವಹಣೆ ಹೇಗೆ ಮಾಡುವುದೆಂಬ ಚಿಂತೆಯಿಂದ ನಿದ್ದೆಗೆಡುತ್ತಿದ್ದಾರೆ.

ದಿನಗೂಲಿ ನೌಕರರಿಗಂತೂ ದಿನದ ಆಹಾರವನ್ನು ಹೇಗೆ ಸಂಗ್ರಹಿಸಬೇಕು ಎಂಬ ಚಿಂತೆ ನಿದ್ದೆಗೆಡಿಸುತ್ತದೆ.

ರೋಗ ತಡೆಗಟ್ಟಲು ಮುಂಚೂಣಿಯಲ್ಲಿರುವ ಆರೋಗ್ಯ ಇಲಾಖೆಯ ಸಿಬ್ಬಂದಿ, ಪೊಲೀಸರು ಕರ್ತವ್ಯನಿರತರಾಗಿ ನಿದ್ದೆ ಬಿಟ್ಟರೆ, ಮಾಧ್ಯಮದವರು ಸುದ್ದಿ ತಲುಪಿಸುವ ಧಾವಂತದಲ್ಲಿ ನಿದ್ದೆ ಬಿಟ್ಟು ದುಡಿಯುತ್ತಿದ್ದಾರೆ.

ಸುಖನಿದ್ರೆಗೆ ಸೂತ್ರಗಳು

1. ಮನೆಯಲ್ಲಿದ್ದೂ ನಿದ್ದೆ ಬಾರದೆ ಒದ್ದಾಡುವವರು ದಿನನಿತ್ಯ ಒಂದೇ ಹೊತ್ತಿಗೆ ಮಲಗುವ ಮತ್ತು ಏಳುವ ಅಭ್ಯಾಸ ಮಾಡಿಕೊಳ್ಳಬೇಕು. ಕೆಲಸಕ್ಕೆ ಹೋಗುವಾಗ ದಿನನಿತ್ಯದ ಕೆಲಸಗಳು ಹೇಗೆ ನಡೆಯುತ್ತಿದ್ದವೋ ಹಾಗೆಯೇ ಸಮಯಕ್ಕೆ ಸರಿಯಾಗಿ ಮನೆಯಲ್ಲಿಯೂ ಇದ್ದು ದೈಹಿಕ ಗಡಿಯಾರ ಏರುಪೇರಾಗದಂತೆ ನೋಡಿಕೊಳ್ಳಿ. ಹಗಲು ಹೊತ್ತು ನಿದ್ದೆ ಮಾಡಬೇಡಿ.

2. ಆಲಸ್ಯಕ್ಕೆ ಎಡೆಗೊಡದೆ ಎದ್ದ ಕೂಡಲೇ ಎಲ್ಲ ಕೆಲಸ ಮುಗಿಸಿ ಕಚೇರಿಗೆ ಹೋಗುವಂತೆಯೇ ತಯಾರಾಗಿ. ಮನೆಯೊಳಗೆ ಸಾಕಷ್ಟು ಗಾಳಿ, ಬೆಳಕು ಬರುವಂತೆ ಕಿಟಕಿ– ಬಾಗಿಲುಗಳನ್ನು ತೆರೆದಿಡಿ.

3. ಯೋಗ, ಪ್ರಾಣಾಯಾಮ, ಭಜನೆ, ಪ್ರಾರ್ಥನೆಗಳನ್ನು ತಪ್ಪದೇ ಪ್ರತಿ ದಿನ ನಿಗದಿತ ಸಮಯದಲ್ಲಿ ಮಾಡಿ.

4. ಮನೆಯಲ್ಲೇ ಇದ್ದೇವೆಂದುಕೊಂಡು ಆರೋಗ್ಯಕರವಲ್ಲದ ತಿಂಡಿಗಳನ್ನು ಕುರುಕುತ್ತಾ ಮಂಚದ ಮೇಲೆ ಬಿದ್ದುಕೊಂಡಿರಬೇಡಿ.

5. ಮನೆಯವರೆಲ್ಲರೂ ಒಟ್ಟಿಗೇ ಕುಳಿತು ಬೆಳಗಿನ ತಿಂಡಿ, ಮಧ್ಯಾಹ್ನ-ರಾತ್ರಿಯ ಊಟಗಳನ್ನು ಮಾಡಿ. ಸಮಯದ ಪರಿಪಾಲನೆ ಮರೆಯಬೇಡಿ ಮತ್ತು ಆಹಾರ ಸಮತೋಲನದಲ್ಲಿರಲಿ.

6. ಮನಸ್ಸಿಗೆ ತೋಚಿದ ಖಾದ್ಯಗಳನ್ನು ಮಾಡಬೇಕೆಂದು ಮನೆಯವರಿಗೆ ಆಜ್ಞೆ ಮಾಡುವುದಕ್ಕಿಂತ ಅವರು ಪ್ರೀತಿ, ವಿಶ್ವಾಸದಿಂದ ಶ್ರಮಪಟ್ಟು ತಯಾರಿಸಿರುವ ಅಡುಗೆಯನ್ನು ಮೆಚ್ಚಿಕೊಳ್ಳಿ. ಇದು ಹೆಚ್ಚಾದ ಮನೆಗೆಲಸ, ಜವಾಬ್ದಾರಿಗಳಿಂದ ಬಸವಳಿಯುತ್ತಿರುವ ಮಹಿಳೆಯರ ನಿದ್ದೆಯನ್ನು ಸರಿ ಮಾಡುತ್ತದೆ.

7. ಅವ್ಯಾಹತವಾಗಿ ಬರುವ ಕೊರೊನಾ ಬಗೆಗಿನ ಟಿ.ವಿ. ಕಾರ್ಯಕ್ರಮಗಳಿಂದ ಮನಸ್ಸು ವಿಚಲಿತವಾಗದಂತೆ ನಿಗದಿತ ಸಮಯದಲ್ಲಿ ಅವಶ್ಯವಿದ್ದಷ್ಟು ಮಾತ್ರ ಸುದ್ದಿಗಳನ್ನು ನೋಡಿ.

8. ಧಾವಂತದ ದಿನಗಳಲ್ಲಿ ಮರೆತೇ ಬಿಟ್ಟಿದ್ದ ಓದು, ಬರಹ, ನೃತ್ಯ– ಸಂಗೀತ ಮೊದಲಾದ ಶಾಲಾದಿನಗಳ ಹವ್ಯಾಸಗಳನ್ನು ನೆನಪಿಸಿಕೊಂಡು ಮತ್ತೆ ಆರಂಭಿಸಿ.

9. ರಾತ್ರಿ ಊಟದ ನಂತರ ಮಲಗುವ ಮುನ್ನ ಜಾಲತಾಣಗಳನ್ನು ನೋಡುವುದಾಗಲಿ, ಟಿವಿ ನೋಡುವುದಾಗಲಿ ಮಾಡಬೇಡಿ. ಮಲಗುವ ಕೋಣೆಯನ್ನು ಪೂರ್ತಿ ಕತ್ತಲು ಮಾಡಿ ಕಣ್ಣು ಮುಚ್ಚಿ ಮಲಗಿಕೊಳ್ಳಿ. ನಿದ್ದೆ ಬಾರದೇ ಇರಬಹುದೆಂಬ ಯೋಚನೆಗೆ ಅವಕಾಶ ಯಾವತ್ತೂ ಕೊಡಬೇಡಿ.

10. ನಿಮ್ಮ ನಿದ್ರಾಹೀನತೆಗೆ ಮದ್ಯ ಸಿಗದಿರುವುದು ಕಾರಣವಾಗಿದ್ದರೂ ಅದನ್ನು ಹುಡುಕಿಕೊಂಡು ಹೊರಹೋಗಿ ನಿಮ್ಮ, ಮನೆಯವರ ಆರೋಗ್ಯಕ್ಕೆ ಕುತ್ತು ತಂದುಕೊಳ್ಳಬೇಡಿ. ನಿಮ್ಮ ದೇಹ ಮನಸ್ಸುಗಳನ್ನು ನಿಗ್ರಹಿಸಲು ಕಲಿಯಿರಿ.

11. ನಿದ್ದೆ ಕಡಿಮೆಯಾಗುವಂತಹ ಮಾನಸಿಕ ತೊಂದರೆಗಳಿಗೆ ಮೊದಲಿನಿಂದಲೇ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಮಾನಸಿಕ ತಜ್ಞರನ್ನು ಸಂಪರ್ಕಿಸಿ. ಅನಗತ್ಯವಾಗಿ ನಿದ್ದೆ ಮಾತ್ರೆಗೆ ಮೊರೆ ಹೋಗಬೇಡಿ.

(ಲೇಖಕಿ ಬೆಂಗಳೂರಿನಲ್ಲಿ ತಜ್ಞ ವೈದ್ಯೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT