ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಪಾತ: ಮನಸ್ಸಿನ ಗಾಯ ಮಾಯಲು ಮಾತನಾಡಿ

Last Updated 6 ಫೆಬ್ರುವರಿ 2021, 1:29 IST
ಅಕ್ಷರ ಗಾತ್ರ

ಗರ್ಭಪಾತವೆಂಬುದು ಹೆಣ್ಣುಮಕ್ಕಳನ್ನು ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿಯೂ ಕುಗ್ಗಿಸಿಬಿಡುತ್ತದೆ. ಒಳಗೆ ಮಡುಗಟ್ಟಿರುವ ದುಃಖವನ್ನು ಬೇರೆಯವರ ಜೊತೆ ಹೇಳಿಕೊಂಡರೆ ಒಂದಿಷ್ಟು ನೋವನ್ನು ಮರೆಯಬಹುದು.

‘ಅದೊಂದು ದುರ್ದಿನ, ಮೂರು ತಿಂಗಳುಗಳ ಕಾಲ ಗರ್ಭದಲ್ಲಿ ಹೊತ್ತಿದ್ದ ಮಗು ನನ್ನ ಎಲ್ಲ ಕನಸುಗಳನ್ನು ನುಚ್ಚುನೂರು ಮಾಡಿ ಹೊರಟುಹೋಯಿತು. ಆ ಅನಿರೀಕ್ಷಿತ ಆಘಾತದಿಂದ ಎಷ್ಟು ಕುಸಿದು ಹೋಗಿದ್ದೆ ಎಂದರೆ ಪ್ರತಿ ಕ್ಷಣವೂ ಗರ್ಭಪಾತದ ನೋವು ಕಣ್ಣೀರಾಗಿ ಹರಿಯುತ್ತಿತ್ತು’ ಎನ್ನುವ ಧೃತಿ (ಹೆಸರು ಬದಲಿಸಲಾಗಿದೆ), ‘ಅಂತಹ ಪರಿಸ್ಥಿತಿ ಯಾವ ಯುವತಿಗೂ ಬರಬಾರದು. ದೈಹಿಕ ನೋವು ಕಡಿಮೆಯಾಗಬಹುದು, ಆದರೆ ಮನಸ್ಸಿಗಾದ ಗಾಯ ಮಾಯುವುದು ಕಷ್ಟ’ ಎನ್ನುತ್ತಾಳೆ.

ಈ ಗರ್ಭಪಾತ ಎನ್ನುವುದು ಮಹಿಳೆಯ ಪಾಲಿಗೆ ದುಃಸ್ವಪ್ನ ಇದ್ದಂತೆ; ಬದುಕಿನ ಪಥವನ್ನೇ ಬದಲಿಸಿಬಿಡುತ್ತದೆ; ಶಾಂತವಾಗಿ ಪುಟ್ಟ ಪುಟ್ಟ ಅಲೆಗಳನ್ನು ಎಬ್ಬಿಸುತ್ತ ನಿಂತಿದ್ದ ಕೊಳದ ನೀರಿಗೆ ಮಳೆಯ ನೀರು ರಭಸದಿಂದ ಹರಿದು ಅಲ್ಲೋಲಕಲ್ಲೋಲ ಮಾಡಿದಂತೆ. ತಾಯಿಯಾಗುವ ನಿರೀಕ್ಷೆಯಲ್ಲಿದ್ದವಳನ್ನು ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಕುಗ್ಗಿಸುವಂತಹ ಘಟನೆಯಿದು. ಎಷ್ಟೋ ಮಂದಿ ಯುವತಿಯರು ಸರ್ವಸ್ವವನ್ನೂ ಕಳೆದುಕೊಂಡಂತೆ ತೊಳಲಾಟ ಅನುಭವಿಸುವಂತಹ ಸಂಕಟದ ಸಂದರ್ಭವಿದು.

‘ಗರ್ಭಪಾತದ ನಂತರ ಮಹಿಳೆಗೆ ತನ್ನ ದುಃಖ ಮತ್ತು ನೋವನ್ನು ಬೇರೆಯವರ ಬಳಿ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ನೋವನ್ನು ತನ್ನೊಳಗೇ ಅದುಮಿಟ್ಟುಕೊಳ್ಳುತ್ತಾಳೆ. ಈ ರೀತಿ ಬಚ್ಚಿಟ್ಟುಕೊಂಡಷ್ಟೂ ದುಃಖ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗಲಾರದು. ಒಂಟಿತನ, ದುಗುಡ, ನಕಾರಾತ್ಮಕ ಭಾವನೆಗಳು ಹೆಚ್ಚಾಗಬಹುದು’ ಎನ್ನುತ್ತಾರೆ ಪ್ರಸೂತಿ ತಜ್ಞೆ ಡಾ.ವೈಶಾಲಿ ಎಂ.

ಎಷ್ಟೇ ಯತ್ನಿಸಿದರೂ ಗರ್ಭಪಾತವಾದ ಬಗ್ಗೆ ಪದೇ ಪದೇ ಆಲೋಚನೆ ಬರಬಹುದು. ಬೇರೆ ಗರ್ಭಿಣಿಯರನ್ನು ಅಥವಾ ಪುಟ್ಟ ಮಕ್ಕಳನ್ನು ನೋಡಿದಾಗ ದುಃಖ ಆವರಿಸಬಹುದು. ಪ್ರತಿ ವರ್ಷ ಆ ದಿನ ಬಂದಾಗ ಖಿನ್ನತೆ ಆವರಿಸಬಹುದು. ಕೆಲವೊಮ್ಮೆ ಮನೆಯವರ ಮೇಲೆ, ವೈದ್ಯರ ಮೇಲೆಯೂ ಕೋಪ ಬರಬಹುದು. ನಿಮ್ಮ ದೇಹದ ಮೇಲೆ ಹೇವರಿಕೆ ಉಂಟಾಗಬಹುದು. ಮತ್ತೆ ಗರ್ಭ ಧರಿಸಲು ಯತ್ನಿಸಿದಾಗ ವಿಫಲವಾದರೆ ಇನ್ನಷ್ಟು ಖಿನ್ನತೆಯಾಗಬಹುದು.

ದುಃಖ ಹಂಚಿಕೊಳ್ಳಿ

‘ಆದರೆ ನೋವನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳುವುದರಿಂದ, ಆತ್ಮೀಯರ ಬಳಿ ಚರ್ಚಿಸುವುದರಿಂದ ದುಃಖವನ್ನು ಕಡಿಮೆ ಮಾಡಿಕೊಳ್ಳಬಹುದು’ ಎನ್ನುವ ಆಪ್ತ ಸಮಾಲೋಚಕಿ ಪ್ರಮೀಳಾ ಎಸ್‌, ‘ಬ್ರಿಟನ್‌ ರಾಜಕುಮಾರ ಹ್ಯಾರಿಯ ಪತ್ನಿ ಮೇಘನ್‌ ಮಾರ್ಕಲ್ ತನಗಾದ ಗರ್ಭಪಾತ, ಅನುಭವಿಸಿದ ನೋವಿನ ಬಗ್ಗೆ ನ್ಯೂಯಾರ್ಕ್‌ ಟೈಮ್ಸ್‌ನಲ್ಲಿ ಲೇಖನ ಬರೆದರು. ಇದೇ ರೀತಿ ಬಹಳಷ್ಟು ಮಂದಿ ಹೆಣ್ಣುಮಕ್ಕಳು ತಮ್ಮ ಅನುಭವವನ್ನು ಬಹಿರಂಗವಾಗಿ ಹೇಳಿಕೊಳ್ಳಲು ಮುಂದೆ ಬರುತ್ತಿದ್ದಾರೆ’ ಎನ್ನುತ್ತಾರೆ.

ಇಂತಹ ನಡವಳಿಕೆಗೆ ವೈಯಕ್ತಿಕ ದುಃಖ ಒಂದು ಕಾರಣವಾದರೆ, ನಮ್ಮ ಸಮಾಜದಲ್ಲಿ ಗರ್ಭಪಾತದ ಕುರಿತಾಗಿ ಇರುವ ಕಳಂಕ ಇನ್ನೊಂದು ಕಾರಣ. ಯಾವುದೇ ಸಮುದಾಯ, ಸಂಸ್ಕೃತಿ ತೆಗೆದುಕೊಂಡರೂ ಇಂತಹ ಸಾಮಾಜಿಕ ಕಳಂಕ ಇರುವಂಥದ್ದೇ.

ಗರ್ಭಪಾತದ ನಂತರ ಚೇತರಿಸಿಕೊಳ್ಳುವುದು ಕಷ್ಟವಾದರೂ ತಜ್ಞರ ಸಲಹೆ, ಸಮಾಲೋಚನೆ ನೆರವಿಗೆ ಬರಬಹುದು.

*ಮನಸ್ಸಿನೊಳಗಿನ ನೋವನ್ನು ವ್ಯಕ್ತಪಡಿಸಿ. ಇದನ್ನು ಪ್ರತಿಯೊಬ್ಬರ ಬಳಿಯೂ ಹೇಳುವ ಅವಶ್ಯಕತೆಯಿಲ್ಲ. ಆತ್ಮೀಯರ ಬಳಿ ಹೇಳಿಕೊಳ್ಳಿ ಅಥವಾ ಡೈರಿಯಲ್ಲಿ ಬರೆದಿಡಿ.

*ಏನಾದರೂ ಸಮಸ್ಯೆಯಿಂದ ಗರ್ಭವಾತವಾಗಿದೆಯೇ ಅಥವಾ ಆ ಬಗ್ಗೆ ನಿರ್ಧಾರ ತೆಗೆದುಕೊಂಡು ವೈದ್ಯಕೀಯ ನೆರವು ಪಡೆದಿದ್ದೀರಾ ಎಂಬುದು ಕೂಡ ಮುಖ್ಯ. ಸಮಸ್ಯೆಯಿದ್ದರೆ ಮತ್ತೆ ಗರ್ಭ ಧರಿಸುವ ಬಗ್ಗೆ ವೈದ್ಯರ ಬಳಿ ಮಾತನಾಡಿ ಚಿಕಿತ್ಸೆ ಪಡೆದುಕೊಳ್ಳಿ. ನೀವೇ ನಿರ್ಧಾರ ಕೈಗೊಂಡು ಗರ್ಭಪಾತ ಮಾಡಿಸಿಕೊಂಡಿದ್ದರೆ, ಅದರ ಹಿಂದೆಯೂ ಕಾರಣಗಳಿರುತ್ತವೆ. ಹೀಗಾಗಿ ತಪ್ಪಿತಸ್ಥ ಭಾವನೆಯಿಂದ ಹೊರಬನ್ನಿ.

*ಇಂತಹ ನೋವು ಅನುಭವಿಸಿದವರು ಬ್ಲಾಗ್‌ನಲ್ಲಿ ಬರೆದ ಬರಹಗಳನ್ನು ಓದಿ. ಇದರಿಂದ ಈ ದುಃಖದಲ್ಲಿ ನೀವು ಒಂಟಿಯಲ್ಲ ಎಂಬ ಭಾವನೆಯಿಂದ ಹೊರಬರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT