ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಿಸುವ ಛಲ ಅಚಲವಾಗಿರಲಿ..

Last Updated 24 ಫೆಬ್ರುವರಿ 2020, 5:17 IST
ಅಕ್ಷರ ಗಾತ್ರ

‘ಸಾಧಿಸಬೇಕೆಂಬ ಛಲ ಅಚಲವಾಗಿದ್ದಾಗ ಯಾವ ಸಮಸ್ಯೆಯೂ ನಿಮ್ಮನ್ನು ತಡೆಯಲಾಗದು’ ಎನ್ನುವ ಮಾತಿಗೆ ಬೆಂಗಳೂರಿನ ಉದ್ಯಮಿ ಹೇಮಾ ಹತ್ತಂಗಡಿ ಅವರ ಸಾಧನೆಯೇ ಸಾಕ್ಷಿ. ಡಿಜಿಟಲ್ ಮೀಟರ್‌ಗಳನ್ನು ತಯಾರಿಸುವ ಕಾನ್ಜೆರ್ವ್ ಕಂಪನಿಯ ಸಿಇಒ ಆದಾಗ ಹೇಮಾ ಅವರ ಮುಂದಿದ್ದ ಸವಾಲು ಹತ್ತು–ಹಲವು. ಆದರೆ, ಭವಿಷ್ಯದ ಬಗ್ಗೆ ಭರವಸೆ ಇಟ್ಟು ಸ್ವಂತ ಹಾದಿಯಲ್ಲಿ ಹೆಜ್ಜೆ ಹಾಕಿದ ಹೇಮಾ ಅವರು ಕೇವಲ 12 ವರ್ಷಗಳಲ್ಲೇ ಕಂಪನಿಯ ವಹಿವಾಟನ್ನು ₹ 100 ಕೋಟಿಗೆ ತಂದರು. ಓದಿದ್ದಕ್ಕೂ ವೃತ್ತಿಗೂ ಪರಸ್ಪರ ಸಂಬಂಧವೇ ಇಲ್ಲದ ತಾಂತ್ರಿಕ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ ಹೇಮಾ ತಮ್ಮ ಸಾಧನೆಯ ಏಳು–ಬೀಳುಗಳನ್ನು ‘ಲಿಫ್ಟ್‌–ಆಫ್’ ಕೃತಿಯಲ್ಲಿ ದಾಖಲಿಸಿದ್ದಾರೆ.

2009ರಲ್ಲಿ ಕಾನ್ಜೆರ್ವ್‌ ಕಂಪನಿಯನ್ನು ಷ್ನೇಯ್ಡರ್ ಎಲೆಕ್ಟ್ರಿಕಲ್‌ಗೆ ಮಾರಾಟ ಮಾಡಿದ ಹೇಮಾ, ತಾಂತ್ರಿಕ ಕ್ಷೇತ್ರವನ್ನು ಬದಿಗಿಟ್ಟು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪುರುಷ ಪ್ರಧಾನವೇ ಆಗಿದ್ದ ತಾಂತ್ರಿಕ ಕ್ಷೇತ್ರದಲ್ಲಿನ ತಮ್ಮ ಪಯಣದ ಹಾದಿಯನ್ನು ಹೇಮಾ ‘ಗೆಳತಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಕಂಪನಿಯೊಂದರ ಸಿಇಒ ಆದಾಗ ನಿಮ್ಮ ಮುಂದಿದ್ದ ಸವಾಲುಗಳೇನು?

ನಾನು ಓದಿದ್ದು ಬಿ.ಕಾಂ, ಎಂಬಿಎ (ಮಾರ್ಕೆಟಿಂಗ್‌). ಕಂಪನಿಯಲ್ಲಿ ಫ್ರೆಶರ್ ಆಗಿದ್ದೆ. 1996ರಲ್ಲಿ ಇನ್ನೂ ಐಟಿ ಕಂಪನಿಗಳು ಇಷ್ಟೊಂದು ಇರಲಿಲ್ಲ. ಮತ್ತೊಂದು ಸಂಗತಿಯೆಂದರೆ ಇಂತಹ ತಾಂತ್ರಿಕ ಕ್ಷೇತ್ರದಲ್ಲಿ ಪುರುಷರೇ ಅಧಿಕ ಸಂಖ್ಯೆಯಲ್ಲಿದ್ದರು. ಕೆಲವು ಡೀಲರ್‌ಗಳೊಂದಿಗೆ ವ್ಯವಹರಿಸುವಾಗ ‘ನೀವೇಕೆ ಬಂದ್ರಿ? ನಿಮ್ಮ ಗಂಡ ಎಲ್ಲಿ?’ ಅಂತಲೇ ಪ್ರಶ್ನಿಸುತ್ತಿದ್ದರು. ಕ್ಷೇತ್ರಕ್ಕೆ ತಕ್ಕ ಎಂಜಿನಿಯರಿಂಗ್ ಓದು ಕೂಡಾ ಇರಲಿಲ್ಲ. ನನ್ನ ಮಾವ ನಿವೃತ್ತಿ ನಂತರ ಬಂದ ಹಣವನ್ನು ಹಾಕಿ ಕಂಪನಿ ಆರಂಭಿಸಿದ್ದರು. ಮಾರ್ಕೆಟಿಂಗ್ ಜವಾಬ್ದಾರಿ ನನ್ನದಾಗಿತ್ತು. ಆದರೆ, ಸಮಸ್ಯೆಗಳನ್ನು ಎದುರಿಸುವ ಅಚಲ ಆತ್ಮವಿಶ್ವಾಸ, ನಾಳೆಯ ಭರವಸೆ ನನ್ನ ಕೈಹಿಡಿದಿದ್ದರಿಂದ ಸವಾಲುಗಳನ್ನು ಎದುರಿಸಲು ಸಾಧ್ಯವಾಯಿತು.

ಮಹಿಳೆ ಎನ್ನುವುದೇ ನಿಮ್ಮ ವೃತ್ತಿಗೆ ತೊಡಕಾಗಿತ್ತೇ?

ಆರಂಭದಲ್ಲಿ ಇದು ಕಾಡಿತ್ತು. ಏಕೆಂದರೆ ಈ ಕ್ಷೇತ್ರ ಪುರುಷ ಪ್ರಧಾನವಾಗಿತ್ತು. ಪುರುಷ ಬಾಸ್ ಇದ್ದಾಗ ಸುಲಭವಾಗಿ ಸೂಚನೆ ಪಾಲಿಸುವ ನೌಕರರಿಗೆ ಅದೇ ಮಹಿಳಾ ಬಾಸ್‌ನಿಂದ ಸೂಚನೆ ಪಾಲಿಸುವುದು ಸರಳವೆನಿಸುತ್ತಿರಲಿಲ್ಲ. ಇವುಗಳನ್ನೆಲ್ಲ ಮೀರಲು ಪತಿ ಅಶೋಕ ಹತ್ತಂಗಡಿ ಮತ್ತು ಕುಟುಂಬದವರು ಬೆಂಬಲಿಸಿದರು. ಪತಿಯ ನೆರವು ಪಡೆದು ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ ಪುಸ್ತಕಗಳನ್ನು ಓದಿ ತಾಂತ್ರಿಕವಾಗಿ ಅಪ್‌ಡೇಟ್ ಆದೆ. ಕಂಪನಿ ಮತ್ತು ಮಾರುಕಟ್ಟೆ ಎರಡೂ ಕಡೆ ವ್ಯವಹಾರಕ್ಕೆ ಅಗತ್ಯವಾದ ತಾಂತ್ರಿಕ ಭಾಷೆಯಲ್ಲೇ ಮಾತನಾಡತೊಡಗಿದಾಗ ಇತರರೂ ನನ್ನ ಮಾತು ಕೇಳುವಂತಾದರು.

ನಿಮ್ಮ ಪುಸ್ತಕದಲ್ಲಿ ಬ್ಯುಸಿನೆಸ್‌ನಲ್ಲಿ ನೈತಿಕತೆ ಕುರಿತಂತೆ ಬರೆದಿದ್ದೀರಿ. ಇದರ ಕುರಿತು ಹೇಳಿ..

ನಮ್ಮ ಕಂಪನಿಯನ್ನು ಹೇಗೆ ಎತಿಕ್ಸ್‌ ಪ್ರಕಾರ ನಡೆಸಿದೆವು ಎಂದು ಬರೆದಿದ್ದೇನೆಯೇ ಹೊರತು ಬೇರೆಯವರಿಗೆ ಸಲಹೆ ನೀಡಿಲ್ಲ. ನಾನು ಕಂಪನಿಯ ನೌಕರರನ್ನು ಕುಟುಂಬದ ಸದಸ್ಯರಂತೆ ಪರಿಗಣಿಸಿದ್ದೆ. ನೌಕರರೂ ನಮ್ಮ ಕೈಬಿಡಲಿಲ್ಲ. ಅದುವೇ ಕಂಪನಿಯನ್ನು ₹100 ಕೋಟಿಯಷ್ಟು ವಹಿವಾಟಿನತ್ತ ಬೆಳೆಸಿತು. ಲಂಚ ಮತ್ತು ಆಮಿಷಗಳಿಗೆ ಬಲಿಯಾಗಬಾರದು ಎನ್ನುವುದು ನಮ್ಮ ಕಂಪನಿಯ ನಿಯಮವಾಗಿತ್ತು. ಗುರಿ ಮುಟ್ಟದಿದ್ದರೂ ಪರವಾಗಿಲ್ಲ, ಆದರೆ ಲಂಚ ಕೊಟ್ಟು ವ್ಯವಹಾರ ಮಾಡಬಾರದು ಎಂಬುದು ನಮ್ಮ ಪಾಲಿಸಿಯಾಗಿತ್ತು.ಆರ್ಥಿಕ ವಿದ್ಯಮಾನ, ಅವಕಾಶಗಳನ್ನು ಪರಿಗಣಿಸಿ ನಮ್ಮ ಕಂಪನಿಯನ್ನು ಷ್ನೇಯ್ಡರ್ ಎಲೆಕ್ಟ್ರಿಕಲ್‌ಗೆ ಮಾರಾಟ ಮಾಡಿದೆ. ಆ ಕಂಪನಿ ಕೂಡಾ ನಮ್ಮ ಮೌಲ್ಯ ಮತ್ತು ಸಾಮಾಜಿಕ ಬದ್ಧತೆ ಅಳವಡಿಸಿಕೊಂಡಿದೆ.

ಈಗ ನವೋದ್ಯಮದಲ್ಲಿ (ಸ್ಟಾರ್ಟ್‌ಅಪ್‌) ತೊಡಗಿಸಿಕೊಂಡಿದ್ದೀರಿ..

ಹೌದು. ಕೆಲಕಾಲ ಬ್ಯುಸಿನೆಸ್ ಸ್ಟಾರ್ಟ್‌ಅಪ್‌ ಮಾಡಿದೆ. ಆದರೆ, ಕಮರ್ಷಿಯಲ್ ಮತ್ತು ಲಾಭ ತರುವ ಸ್ಟಾರ್ಟ್‌ಅಪ್‌ಗಳಿಗಿಂತ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದೇ ನನಗೆ ಹೆಚ್ಚು ಇಷ್ಟ.ಭಾರತದಲ್ಲಿ ನವೋದ್ಯಮಕ್ಕೆ ಉತ್ತೇಜನ ನೀಡುವಂತಹ ವಾತಾವರಣವಿದೆ. ಸರ್ಕಾರ ತಂತ್ರಜ್ಞಾನ ಪೂರೈಸುವ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ ಎಂಬುದು ನನ್ನ ಅನಿಸಿಕೆ.

‘ಲಿಫ್ಟ್ ಆಫ್’ ಬಗ್ಗೆ ಹೇಳಿ...

ನಾನು ಯಾವುದೇ ಸೂಪರ್ ಸ್ಟಾರ್ ಅಥವಾ ಸೆಲೆಬ್ರಿಟಿ ಅಲ್ಲ. ನಾನೊಬ್ಬ ಸಾಮಾನ್ಯ ಹೆಣ್ಣುಮಗಳಷ್ಟೇ. ಬಾಲ್ಯದಲ್ಲಿ ತಂದೆ–ತಾಯಿ ಕಲಿಸಿದ ಪಾಠ, ನನ್ನನ್ನು ಕೈಹಿಡಿದು ನಡೆಸಿದ ಬಗೆ, ಕಂಪನಿಯ ಪ್ರತಿ ವಿಭಾಗದಲ್ಲಿ ಮಾಡಿದ ಬದಲಾವಣೆ ಇತ್ಯಾದಿಗಳನ್ನೆಲ್ಲಾ ‘ಲಿಫ್ಟ್ ಆಫ್‌’ನಲ್ಲಿ ಬರೆದಿದ್ದೇನೆ. ಇದನ್ನು ಬರೀ ಎಂಬಿಎ ವಿದ್ಯಾರ್ಥಿಗಳಷ್ಟೇ ಅಲ್ಲ, ಗೃಹಿಣಿಯರೂ ಓದಬೇಕೆಂಬುದು ನನ್ನಾಸೆ.

ಉದ್ಯಮದಲ್ಲಿ ತೊಡಗಿಸಿಕೊಳ್ಳುವವರಿಗೆ ಏನು ಹೇಳಲು ಬಯಸುವಿರಿ?

ವೃತ್ತಿ ಮತ್ತು ಕುಟುಂಬ ಎರಡೂ ಕಡೆಗಳಲ್ಲಿ ಭವಿಷ್ಯ ಕರಾಳವೆನಿಸಿದಾಗ ಎಂದಿಗೂ ಭರವಸೆ ಕಳೆದುಕೊಳ್ಳಬೇಡಿ. ಇಂದಿಗಿಂತ ನಾಳೆ ಚೆನ್ನಾಗಿರುತ್ತದೆ ಎನ್ನುವ ಭರವಸೆ ಇರಲಿ. ಕನಸು ಕಾಣುವುದಿದ್ದರೆ ದೊಡ್ಡಮಟ್ಟದಲ್ಲಿಯೇ ಕಾಣಿ. ಆ ಕನಸು ನನಸಾಗಲು ಶ್ರಮಿಸಿ, ಆಗ ಮಾತ್ರ ಯಶಸ್ಸು ನಿಮ್ಮದಾಗುತ್ತದೆ. ಮುಖ್ಯವಾಗಿ ನಿಮಗೆ ಯಾರು ಬೆಂಬಲ ನೀಡುತ್ತಾರೋ ಅಂಥವರ ಜತೆ ಸದಾ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

ಇಂದಿನ ಯುವಜನರಿಗೆ ಹೇಳುವುದೇನೆಂದರೆ, ಕೆಲಸಕ್ಕೆ ಸೇರಿದ ಒಂದು ವರ್ಷದಲ್ಲೇ ಪ್ರಮೋಷನ್, ಹೆಚ್ಚಿನ ಸಂಬಳ ನಿರೀಕ್ಷಿಸಬೇಡಿ. ಯಶಸ್ಸು ಮತ್ತು ಪ್ರಸಿದ್ಧಿಗೆ ಹಾತೊರೆಯಬೇಡಿ. ಶ್ರಮಪಡಿ ಮತ್ತು ತಾಳ್ಮೆಯಿಂದ ಇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT