ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನ | ಗರ್ಭ‍ಪಾತ ಮಾತ್ರೆ ತಗೊಳ್ಳುವ ಮುನ್ನ ಜಾಗ್ರತೆ

Published 28 ಜುಲೈ 2023, 23:47 IST
Last Updated 28 ಜುಲೈ 2023, 23:47 IST
ಅಕ್ಷರ ಗಾತ್ರ

ಡಾ. ವೀಣಾ ಎಸ್. ಭಟ್

1. ನನಗೆ 28 ವರ್ಷ. ಎರಡು ತಿಂಗಳು ಗರ್ಭಿಣಿಯಾದಾಗ ಈಗಲೇ ಮಗು ಬೇಡವೆಂದು ಮಾತ್ರೆ ತೆಗೆದುಕೊಂಡಿದ್ದೆ. ಆದರೆ ಮಾತ್ರೆ ಏನು ಕೆಲಸ ಮಾಡಿಲ್ಲ. ಈಗ ಸ್ಕ್ಯಾನಿಂಗ್ ಮಾಡಿಸಿದೆ. ನಾಲ್ಕು ತಿಂಗಳಾಗಿದೆ ಎಂದು ಹೇಳುತ್ತಿದ್ದಾರೆ. ಸ್ಕ್ಯಾನಿಂಗ್‌ ರಿಪೋರ್ಟ್‌ ಪ್ರಕಾರ ಏನು ತೊಂದರೆ ಇಲ್ಲ, ಮಗು ಚೆನ್ನಾಗಿದೆ ಎಂದು ಹೇಳಿದ್ದಾರೆ. ಆದರೆ, 5ತಿಂಗಳ ನಂತರ ಏನು ಎಂದು ಹೇಳೋಕೆ ಆಗಲ್ಲ ಎಂದೂ ಹೇಳುತ್ತಿದ್ದಾರೆ. ಮಗುವಿಗೆ ಏನು ತೊಂದರೆ ಆಗುವುದಿಲ್ಲವೇ, ತಿಳಿಸಿ ?

-ನೇತ್ರಾವತಿ, ಊರು ತಿಳಿಸಿಲ್ಲ.

ನೇತ್ರಾ ಅವರೇ, ನಿಮಗೀಗಾಗಲೇ 28ವರ್ಷಗಳು ಎಂದು ತಿಳಿಸಿದ್ದೀರಿ. ಆದರೆ, ಮದುವೆ ಯಾಗಿ ಎಷ್ಟು ವರ್ಷಗಳಾಯಿತು? ಮೊದಲಬಾರಿಗೆ ಗರ್ಭಿಣಿಯಾಗುತ್ತಿದ್ದೀರಾ? ಈ ಮಾಹಿತಿ ತಿಳಿಸಿಲ್ಲ.

ಮೊದಲನೆಯದಾಗಿ ನೀವು ಗರ್ಭಧರಿಸುವ ಮೊದಲೇ ಮುಂಜಾಗ್ರತೆಯಾಗಿ ಯಾವುದಾದರೂ ಸಂತಾನ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಳ್ಳಬಹುದಿತ್ತು. ಯಾಕೆಂದರೆ ಗರ್ಭಧಾರಣೆ ಒಂದು ಅಪೇಕ್ಷಿತ, ಯೋಜಿತ ಘಟನೆಯಾಗಿರಬೇಕೇ ಹೊರತು ಅನಪೇಕ್ಷಿತ ಅವಘಡವಾಗಬಾರದು.

ಮೊದಲ ಬಾರಿಗೆ ಗರ್ಭಧರಿಸುವಾಗ ನೀವಾಗಿ ನೀವೇ ಗರ್ಭಪಾತ ಮಾಡಿಸಿಕೊಂಡರೆ ಅಥವಾ ಗರ್ಭಪಾತ ಆಗುವ ಮಾತ್ರೆ ಸೇವಿಸಿದರೆ ಮುಂದೆ ತೊಡಕಾಗಬಹುದು. ಇಲ್ಲಿ, ನೀವು ಅಬಾರ್ಷನ್‌ಗಾಗಿ ಯಾವ ತರಹದ ಮಾತ್ರೆ ಬಳಸಿದ್ದೀರಿ ಎಂಬುದನ್ನು ತಿಳಿಸಿಲ್ಲ. ಕೆಲವರು ವೈದ್ಯರ ಸಲಹೆ ಇಲ್ಲದೇ ಅಬಾರ್ಷನ್ ಮಾತ್ರೆಗಳನ್ನು ನೇರವಾಗಿ ಔಷಧಿ ಅಂಗಡಿಯಿಂದ ತೆಗೆದುಕೊಳ್ಳುತ್ತಾರೆ. ಅದು ತಪ್ಪು. ಅಬಾರ್ಷನ್‌ಗಾಗಿ ಮಾತ್ರೆಗಳನ್ನು ಈ ರೀತಿ ತೆಗೆದುಕೊಂಡಾಗ ಒಮ್ಮೊಮ್ಮೆ ಗರ್ಭಾನಾಳದಲ್ಲೇನಾದರೂ ಗರ್ಭಹೊರೆದಿದ್ದರೆ (ಎಕ್ಟೋಪಿಕ್ ಗರ್ಭಧಾರಣೆ) ಒಳಗೆ ಗರ್ಭನಾಳ ಒಡೆದು ಹೋಗಿ ಪ್ರಾಣಾಂತಿಕ ವಾಗಬಹುದು.

ವೈದ್ಯರಾದರೆ, ಮೊದಲು ಗರ್ಭಧಾರಣೆಯು ಗರ್ಭಕೋಶದೊಳಗೆ ಆಗಿದಿಯೋ ಇಲ್ಲವೋ ಎಂದು ಸ್ಕ್ಯಾನಿಂಗ್‌ ಮಾಡಿ ನೋಡಿ, ನಂತರ ಗರ್ಭಪಾತದ ಮಾತ್ರೆ ಕೊಡುತ್ತಾರೆ. ಎಷ್ಟೋ ಬಾರಿ ಅಂಥವರಲ್ಲಿ ರಕ್ತಸ್ರಾವಾವು ಆಗಿರುತ್ತದೆ. ಆಗ ಅವರು ತಮಗೆ ಅಬಾರ್ಷನ್ ಆಗಿದೆ ಎಂದು ನಿರಾಳವಾಗುವಂತಿಲ್ಲ. ಇಂಥವರಲ್ಲಿ ಒಮ್ಮೊಮ್ಮೆ ಗರ್ಭಾಧಾರಣೆ ಮುಂದುವರಿದಿರುವ ಸಾಧ್ಯತೆ ಇರುತ್ತದೆ. ಹಾಗಾಗಿ, ನೀವೆಯೋ ಅಥವಾ ವೈದ್ಯರ ಸಲಹೆಯಮೇರೆಗೆ ಗರ್ಭಪಾತದ ಮಾತ್ರೆ ತೆಗೆದುಕೊಂಡರೂ 15ದಿನದೊಳಗೆ ಮತ್ತೆ ವೈದ್ಯರನ್ನು ಭೇಟಿ ಮಾಡಿ. ಸ್ಕ್ಯಾನಿಂಗ್‌ ಮಾಡಿಸಿ ಸಂಪೂರ್ಣ ಗರ್ಭಪಾತ ಆಗಿರುವುದನ್ನು ಖಚಿತಪಡಿಸಿಕೊಳ್ಳುವುದು ಸೂಕ್ತ ಹಾಗೂ ಅವಶ್ಯಕ. ‌

ಗಮನಿಸಿ; ಅಬಾರ್ಷನ್‌ ಮಾತ್ರೆ ತೆಗೆದುಕೊಂಡಾಗ ಶೇ 97ರಷ್ಟು ಜನರಿಗೆ 6 ರಿಂದ 8ವಾರದೊಳಗಿನ ಗರ್ಭದ ಅವಧಿಯಾಗಿದ್ದರೆ ಸಹಜವಾಗಿ 48ರಿಂದ72 ತಾಸಿನೊಳಗೆ ಗರ್ಭಪಾತವಾಗುತ್ತದೆ. ನೀವು ಮಾತ್ರೆ ತೆಗೆದುಕೊಂಡರೂ(ಯಾವ ಮಾತ್ರೆ ಎಂದು ತಿಳಿಸಿಲ್ಲ) ಗರ್ಭಪಾತವಾಗದಿದ್ದಾಗ, ವೈದ್ಯರನ್ನು ಪುನಃ ಕಾಣಬೇಕಿತ್ತು. ಆದರೆ ತಡವಾಗಿ ವೈದ್ಯರಲ್ಲಿ ಹೋಗಿದ್ದೀರಿ. ನಿಮಗೀಗ 4ತಿಂಗಳಾಗಿದೆ. ಈಗ ನಿಮಗೆ ಹಾಗೂ ನಿಮ್ಮ ಮಗುವಿಗೆ ಏನಾದರೂ ಜನ್ಮಜಾತ ವೈಕಲ್ಯತೆಯಾಗುತ್ತದೆಯೋ ಎಂಬ ಆತಂಕವಿದೆ ಅಲ್ಲವೇ?

ನೋಡಿ, ಹಲವು ಅಧ್ಯಯನಗಳ ಪ್ರಕಾರ ಮಾತ್ರೆ ತೆಗೆದುಕೊಳ್ಳದೇ ಜನಿಸುವ ಶೇ 2ರಿಂದ3ರಷ್ಟು ಮಕ್ಕಳಲ್ಲಿ ನ್ಯೂನತೆ ಆಗಬಹುದು. ಇಂಥ ಮಾತ್ರೆಗಳಿಂದ ಅಂಥ ನ್ಯೂನತೆಯ ಸಂಭವನೀಯತೆ ಪ್ರಮಾಣ ಶೇ 1ರಿಂದ ಶೇ 2 ರಷ್ಟು‌ ಹೆಚ್ಚಾಗಬಹುದು. ನನ್ನ ಮೂರು ದಶಕಗಳ ವೈದ್ಯಕೀಯ ವೃತ್ತಿಯ ಅನುಭವದಲ್ಲಿ ಇಂಥ ಸಾಕಷ್ಟು ಪ್ರಕರಣಗಳಾಗಿವೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಹುಟ್ಟುವ ಮಗುವಿಗೆ ತೊಂದರೆ ಗಳಾಗಿಲ್ಲ. ಗರ್ಭಿಣಿ ಸೇವಿಸುವ ಔಷಧಗಳು ಭ್ರೂಣದ ಮೇಲೆ ಬೀರುವ ದುಷ್ಪರಿಣಾಮ ಗಳು, ಭ್ರೂಣದ ಬೆಳವಣಿಗೆ ಯಾವ ಹಂತದಲ್ಲಿದೆ ? ಔಷಧ ಯಾವರೀತಿಯದು? ಅದರ ಸಾಮರ್ಥ್ಯ ಹಾಗೂ ಸೇವಿಸುವ ಅವಧಿ ಜೊತೆಗೆ ತಾಯಿಯ ವಂಶವಾಹಿಯ ಗುಣಮಟ್ಟ ಎಲ್ಲವನ್ನೂ ಅವಲಂಬಿಸಿರುತ್ತದೆ.

ಗರ್ಭಕಟ್ಟಿ ಮೊದಲ 20 ದಿನಗಳಲ್ಲಿ ಮಾತ್ರೆ ಸೇವಿಸಿದಾಗ ಹೆಚ್ಚಿನ ಸಂದರ್ಭಗಳಲ್ಲಿ ಹುಟ್ಟುವಿನ ಮಗುವಿನಲ್ಲಿ ವೈಕಲ್ಯಗಳಾಗುವುದಿಲ್ಲ. ಆದರೆ ಗರ್ಭಧರಿಸಿ 3ರಿಂದ8 ವಾರದೊಳಗೆ ಮಾತ್ರೆ ಸೇವಿಸಿದ್ದರೆ ಭ್ರೂಣದ ಅವಯವಗಳು ಬೆಳೆಯುವ ಹಂತದಲ್ಲಿ ವೈಕಲ್ಯಗಳುಂಟಾಗುವ ಸಂಭವ ಹೆಚ್ಚು. ಗರ್ಭಕಟ್ಟಿ ಮೂರು ತಿಂಗಳಾದ ಮೇಲೆ ಅಂಗಾಂಗಗಳ ಬೆಳವಣಿಗೆ ಪೂರ್ಣವಾಗಿರುವಾಗ ಜನ್ಮದತ್ತ ವೈಕಲ್ಯಗಳು ಆಗದೇ ಇದ್ದರೂ ಹುಟ್ಟುವ ಮಗುವಿನ ಅಂಗಗಳ ಬೆಳವಣಿಗೆ ಹಾಗೂ ಕಾರ್ಯಗಳಲ್ಲಿ ಏರುಪೇರಾಗಬಹುದು. ಹಾಗಾಗಿ ಗರ್ಭಧರಿಸಿರುವಾಗ ಮಾತ್ರೆಗಳ ಸೇವನೆಯ ಬಗ್ಗೆ ಎಚ್ಚರವಹಿಸಿ. ನೀವು ಇನ್ನೊಮ್ಮೆ 5ತಿಂಗಳಿಗೆ ವಿವರವಾದ ಭ್ರೂಣದ ಸ್ಕ್ಯಾನಿಂಗ್ ಮಾಡಿಸಿ. ನಿಮಗೆ ಒಳ್ಳೆಯದಾಗಲಿ. ಆರೋಗ್ಯವಂತ ಮಗು ಜನಿಸಲಿ.

2. ನನ್ನ ವಯಸ್ಸು 30 ವರ್ಷಗಳು. ಪತ್ನಿ ವಯಸ್ಸು 22 ವರ್ಷಗಳು. ನಾವು ಮದುವೆ ಆಗಿ 7ತಿಂಗಳಾಗಿದೆ. ಇನ್ನೂ ಮಕ್ಕಳಾಗಿಲ್ಲ. ನನ್ನ ಹೆಂಡತಿ ದಪ್ಪ ಇದ್ದಾರೆ. ಪ್ರತಿ ತಿಂಗಳು ಸ್ವಲ್ಪ ತಡವಾಗಿ ಮುಟ್ಟಾಗುತ್ತಾಳೆ. ಮಗು ಪಡೆಯುವ ಮಾರ್ಗ ತಿಳಿಸಿ

ಉತ್ತರ: ನಿಮಗೆ ಮಕ್ಕಳಾಗುವ ಚಿಕಿತ್ಸೆ ಪಡೆಯಲು ವೈದ್ಯರನ್ನು ಕಾಣಲು ಇನ್ನೂ ಎರಡು ಮೂರು ತಿಂಗಳು ಕಾಯಬಹುದು. ಅಷ್ಟರಲ್ಲಿ ನೀವು ನಿಮ್ಮ ಮಡದಿಗೆ ತೂಕ ಇಳಿಸಿಕೊಳ್ಳಲು ಉತ್ತೆಜಿಸಿ.

ಎಷ್ಟೊ ಬಾರಿ ಕೇವಲ ಶೇ 5 ರಿಂದ ಶೇ 10ರಷ್ಟು ತೂಕ ಕಡಿಮೆ ಮಾಡಿಕೊಂಡಾಗಲೂ ಮಹಿಳೆಯರಲ್ಲಿ ಅಂಡಾಣು ಉತ್ಪಾದನೆಯ ಪ್ರಕ್ರಿಯೆ ಉತ್ತಮಗೊಂಡು ಸಹಜ ಗರ್ಭಧಾರಣೆಯಾಗುತ್ತದೆ. ಆದ್ದರಿಂದ ಗರ್ಭಧಾರಣೆಗೂ ಮೊದಲು ತೂಕ ನಿರ್ವಹಣೆ ಮಾಡಿಕೊಂಡು ನಿತ್ಯ ಐದು ಮಿ.ಗ್ರಾಂ. ಫೋಲಿಕ್ ಆಸಿಡ್‌ ಮಾತ್ರೆಯನ್ನು ತೆಗೆದುಕೊಳ್ಳುವುದು ಒಳ್ಳೆಯದು. ಇದರಿಂದ ಮಗುವಿನಲ್ಲಿ ಕೆಲವು ನರವ್ಯೂಹದ ನ್ಯೂನತೆಗಳು ಉಂಟಾಗುವುದನ್ನು ತಡೆಯಬಹುದು.

ನನ್ನ ವಯಸ್ಸು 28. ನನಗೆ ‘ಸಿ’ ಸೆಕ್ಷನ್ ಹೆರಿಗೆಯಾಗಿತ್ತು. ಮಗುವಿನ ತೂಕ ಕಡಿಮೆಯಾಗಿ 15ನೇ ದಿನಕ್ಕೆ ಮಗು ತೀರಿ ಹೋಯಿತು. ಇನ್ನು ಯಾವಾಗ ನಾನು ಗರ್ಭ ಧರಿಸಬಹುದು? ಒಂದು ವರ್ಷದೊಳಗೆ ಗರ್ಭ ಧರಿಸಿದರೆ ತೊಂದರೆ ಆಗುತ್ತದಾ?

-ಹೆಸರು, ಊರು ತಿಳಿಸಿಲ್ಲ

ನೀವು ಮಗು ಕಳೆದುಕೊಂಡಿದ್ದಕ್ಕೆ ವಿಷಾದವಿದೆ. ನಿಮ್ಮ ಮಗು ಯಾವ ಕಾರಣಕ್ಕೆ ಮರಣಹೊಂದಿತು ಎಂದು ನೀವು ತಜ್ಞ ವೈದ್ಯರನ್ನು ವಿಚಾರಿಸಿದ್ದೀರಾ? ಸಂಬಂಧದಲ್ಲಿ ವಿವಾಹವಾಗಿದೆಯಾ? ಇದೆಲ್ಲಾ ಕಾರಣ ನೀವು ಹೇಳಿಲ್ಲ. ಇರಲಿ; ಸಿಸೇರಿಯನ್ ಗಾಯ ಸರಿಯಾಗಿ ಮಾಯಲು ಒಂದು ವರ್ಷ ಬೇಕು. ಮೊದಲ ಮಗು ಇದ್ದರೆ ಎರಡು ಮಕ್ಕಳ ನಡುವೆ ಅಂತರ ಕನಿಷ್ಠ ಎರಡರಿಂದ ಮೂರು ವರ್ಷ ಇರಬೇಕು. ಆ ಮಗುವಿಗೆ ಎದೆಹಾಲುಣಿಸಿ ಸರಿಯಾದ ಕಾಳಜಿ ಕೊಡಲಿಕ್ಕಾಗಿ ಈ ನಿಯಮವಷ್ಟೆ. ಆದರೆ, ಈಗ ಮಗು ಇಲ್ಲದಿರುವುದರಿಂದ ಒಂದು ವರ್ಷದ ಅಂತರದಲ್ಲಿ ಇನ್ನೊಂದು ಮಗು ಪಡೆಯಲು ಪ್ರಯತ್ನಿಸಿ. ಗರ್ಭಧರಿಸುವ ಮೊದಲು ನಿಮ್ಮ ದೇಹದ ತೂಕ ಹೆಚ್ಚಿದ್ದರೆ ನಿರ್ವಹಣೆ ಮಾಡಿಕೊಳ್ಳಿ. ರಕ್ತಹೀನತೆಯಿದ್ದರೆ ಸರಿಪಡಿಸಿಕೊಳ್ಳಿ. ನಿಯಮಿತವಾಗಿ ವೈದ್ಯರ ಸಂಪರ್ಕದಲ್ಲಿರಿ.

ಸ್ಪಂದನ.. ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ.ವೀಣಾ ಎಸ್‌. ಭಟ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT