ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಅಂತರಂಗ | ದಾಂಪತ್ಯದ್ರೋಹಕ್ಕೆ ನಲುಗಿದ ಗಂಡ: ಪರಿಹಾರವೇನು?

ಅಕ್ಷರ ದಾಮ್ಲೆ
Published : 22 ಮಾರ್ಚ್ 2025, 0:30 IST
Last Updated : 22 ಮಾರ್ಚ್ 2025, 0:30 IST
ಫಾಲೋ ಮಾಡಿ
Comments
ಪ್ರ

ನಾನು ಮದುವೆಯಾಗಿದ್ದಾಕೆ ಇತರರೊಡನೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಾಳೆ. ನಾನು ಕೆಲಸದ ನಿಮಿತ್ತ ಕಚೇರಿಗೆ ಅಥವಾ ಬೇರೆ ಊರಿಗೆ ಹೋದಂತಹ ಸಂದರ್ಭದಲ್ಲಿ ಯಾರು ಯಾರೋ ಗಂಡಸರು ಮನೆಗೆ ಬರುತ್ತಾರೆ. ಕೇಳಿದರೆ, ಅಲ್ಲಗಳೆಯುತ್ತಾಳೆ. ಜೊತೆಗೆ ಇನ್ನೊಮ್ಮೆ ಈ ರೀತಿ ಪ್ರಶ್ನೆ ಮಾಡಿದರೆ, ನನ್ನ ಮೇಲೆ ಮತ್ತು ನನ್ನ ತಂದೆ – ತಾಯಿಯ ಮೇಲೆ ಕೇಸ್ ಹಾಕುವುದಾಗಿ ಬೆದರಿಸಿದ್ದಾಳೆ. ಆಕೆಯ ತಂದೆ – ತಾಯಿಯೊಡನೆ ಮಾತನಾಡಿಯೂ ಪ್ರಯೋಜನವಾಗಿಲ್ಲ. ನಿತ್ಯವೂ ಭಯದಿಂದ ಇರುವ ವಾತಾವರಣ ನಿರ್ಮಾಣವಾಗಿದೆ. ನೆರೆಹೊರೆಯವರು ನನ್ನ ವ್ಯಕ್ತಿತ್ವದ ಮೇಲೂ ಪ್ರಶ್ನೆ ಎತ್ತಿದ್ದಾರೆ. ನಾನು ಎಲ್ಲ ರೀತಿಯಿಂದಲೂ ಸರಿ ಇದ್ದರೂ ಈ ರೀತಿಯ ಮಾನಸಿಕ ತೊಳಲಾಟಗಳಿಂದ ಒದ್ದಾಡುತ್ತಿದ್ದೇನೆ. ಯಾರಲ್ಲಿ ಹೇಳಿಕೊಳ್ಳಲಿ ಎಂದು ಗೊತ್ತಾಗುತ್ತಿಲ್ಲ. ಗಂಡಸರ ಅಳಲನ್ನು ಕೇಳುವವರಾರು?

ನಾನು ಮದುವೆಯಾಗಿದ್ದಾಕೆ ಇತರರೊಡನೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಾಳೆ. ನಾನು ಕೆಲಸದ ನಿಮಿತ್ತ ಕಚೇರಿಗೆ ಅಥವಾ ಬೇರೆ ಊರಿಗೆ ಹೋದಂತಹ ಸಂದರ್ಭದಲ್ಲಿ ಯಾರು ಯಾರೋ ಗಂಡಸರು ಮನೆಗೆ ಬರುತ್ತಾರೆ. ಕೇಳಿದರೆ, ಅಲ್ಲಗಳೆಯುತ್ತಾಳೆ. ಜೊತೆಗೆ ಇನ್ನೊಮ್ಮೆ ಈ ರೀತಿ ಪ್ರಶ್ನೆ ಮಾಡಿದರೆ, ನನ್ನ ಮೇಲೆ ಮತ್ತು ನನ್ನ ತಂದೆ - ತಾಯಿಯ ಮೇಲೆ ಕೇಸ್ ಹಾಕುವುದಾಗಿ ಬೆದರಿಸಿದ್ದಾಳೆ. ಆಕೆಯ ತಂದೆ - ತಾಯಿಯೊಡನೆ ಮಾತನಾಡಿಯೂ ಪ್ರಯೋಜನವಾಗಿಲ್ಲ. ನಿತ್ಯವೂ ಭಯದಿಂದ ಇರುವ ವಾತಾವರಣ ನಿರ್ಮಾಣವಾಗಿದೆ. ನೆರೆಹೊರೆಯವರು ನನ್ನ ವ್ಯಕ್ತಿತ್ವದ ಮೇಲೂ ಪ್ರಶ್ನೆ ಎತ್ತಿದ್ದಾರೆ. ನಾನು ಎಲ್ಲ ರೀತಿಯಿಂದಲೂ ಸರಿ ಇದ್ದರೂ ಈ ರೀತಿಯ ಮಾನಸಿಕ ತೊಳಲಾಟಗಳಿಂದ ಒದ್ದಾಡುತ್ತಿದ್ದೇನೆ. ಯಾರಲ್ಲಿ ಹೇಳಿಕೊಳ್ಳಲಿ ಎಂದು ಗೊತ್ತಾಗುತ್ತಿಲ್ಲ. ಗಂಡಸರ ಅಳಲನ್ನು ಕೇಳುವವರಾರು?

ಇದು ನಮ್ಮ ಇಂದಿನ ಸಮಾಜದ ದುರಂತ. ಹೆಂಗಸರ ಮೇಲೆ ನಡೆಯುತ್ತಿದ್ದ ಶೋಷಣೆಯನ್ನು ತಡೆದು ನ್ಯಾಯ ಒದಗಿಸಬೇಕು ಎಂದು ಕಾನೂನನ್ನು ಮಹಿಳಾ ಪರವಾಗಿ ಮಾಡಿದರೆ, ಅದನ್ನೇ ಅನೇಕ ಮಹಿಳೆಯರು ದುರ್ಬಳಕೆ ಮಾಡುತ್ತಿದ್ದಾರೆ. ತಾನು ಹೆಣ್ಣು ಮತ್ತು ತನಗೆ ಕಾನೂನಾತ್ಮಕ ಸುರಕ್ಷತೆ ಇದೆ ಎನ್ನುವ ಕಾರಣದಿಂದ ಸ್ವೇಚ್ಛಾಚಾರದ ಅನೇಕ ಘಟನೆಗಳು ನಡೆಯುತ್ತಿವೆ. ಮಾತ್ರವಲ್ಲ ಕೌಟುಂಬಿಕ ನ್ಯಾಯಾಲಯಗಳಲ್ಲೂ ಈ ರೀತಿಯ ಅನೇಕ ಪ್ರಕರಣಗಳು ಕಾಣಸಿಗುತ್ತವೆ. ಒಂದು ಕಡೆ ಮಹಿಳೆಯರ ಮೇಲೆ ಇನ್ನೂ ದೌರ್ಜನ್ಯ ನಡೆಯುತ್ತಿದ್ದರೆ, ಇನ್ನೊಂದು ಕಡೆ ಮಹಿಳೆಯರಿಂದಲೂ ದೌರ್ಜನ್ಯಗಳು ನಡೆಯುತ್ತಿವೆ.

ಇತ್ತೀಚೆಗೆ ಅನೇಕ ಸಾಮಾಜಿಕ ಜಾಲತಾಣಗಳಲ್ಲೂ ಪುರುಷರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಕಾಣಬಹುದು. ಇದು ಕೇವಲ ಕೌಟುಂಬಿಕ ವಿಷಯಗಳಲ್ಲಿ ಅಲ್ಲದೇ, ಸಾಮಾಜಿಕ ಮತ್ತು ವೃತಿಪರ ಸಂದರ್ಭಗಳಲ್ಲೂ ಕಾಣಬಹುದು. ಉದಾಹರಣೆಗೆ, ಒಬ್ಬ ಮಹಿಳೆ ದೆಹಲಿಯ ಬಳಿ ಇರುವ ಗುರ್‌ಗಾಂವ್‌ನಲ್ಲಿ ಟ್ಯಾಕ್ಸಿ ಚಾಲಕನಿಗೆ ಬಾಡಿಗೆ ಹಣ ಕೊಡದೆ, ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಎಂದು ಆರೋಪಿಸುತ್ತೇನೆ ಎಂದು ಬೆದರಿಸಿದ ಘಟನೆಯೂ ವರದಿಯಾಗಿತ್ತು. ಅನೇಕ ಸಂಸ್ಥೆಗಳಲ್ಲಿ ಮಹಿಳೆಯರು ಪುರುಷರ ಮೇಲೆ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪವನ್ನು ಮಾಡಿ ಅವರ ಉದ್ಯೋಗಕ್ಕೆ ಕುತ್ತು ಉಂಟಾಗುವಂತೆಯೂ ಮಾಡಿದ ಘಟನೆಗಳು ಕಂಡುಬಂದಿವೆ. ಇಂತಹ ಅನೇಕ ಸಂದರ್ಭಗಳಲ್ಲಿ ಮಹಿಳೆ ಮಾಡಿದ ಆರೋಪಕ್ಕೆ ತಥ್ಯವನ್ನು ಹುಡುಕುವ ಬದಲು, ಅದನ್ನು ಹಾಗೆಯೇ ನಂಬುವ ಕಾರಣದಿಂದಾಗಿ, ಇದರ ದುರ್ಬಳಕೆ ಆಗುತ್ತಿದೆ. ಇದರಿಂದ ಕೇವಲ ಪುರುಷರಿಗಷ್ಟೇ ಅಲ್ಲ, ನಿಜವಾಗಿ ಬಲಿಪಶುಗಳಾಗಿರುವ ಮಹಿಳೆಯರಿಗೂ ಅನ್ಯಾಯವಾಗುತ್ತಿದೆ. ಯಾಕೆಂದರೆ, ಕಾಲಾನುಕ್ರಮದಲ್ಲಿ ಜನ ಪ್ರತಿಯೊಬ್ಬ ಮಹಿಳೆಯ ಆರೋಪವನ್ನೂ ಸಂಶಯದ ದೃಷ್ಟಿಯಿಂದಲೇ ನೋಡುವಂತಾಗಿದೆ. ಹಾಗಿದ್ದೂ ಕೂಡಾ ಸಾಧಾರಣವಾಗಿ ’ತಪ್ಪಿತಸ್ಥ’ ಎಂಬ ಹಣೆಪಟ್ಟಿ ಮೊದಲಿಗೆ ಗಂಡಸರ ಮೇಲೆಯೇ ಆರೋಪಿತವಾಗುತ್ತದೆ.

ಕೌಟುಂಬಿಕ ವಿಚಾರಕ್ಕೆ ಬರುವುದಾದರೆ, ಅನೇಕ ಗಂಡಸರು ನಾಲ್ಕು ಗೋಡೆಗಳ ಮಧ್ಯದಲ್ಲಿ ವಿವಿಧ ರೀತಿಯ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. ಎಷ್ಟೋ ಮಹಿಳೆಯರು ಗಂಡಸರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆಗೆ ಒಳಪಡಿಸುತ್ತಿದ್ದಾರೆ. ಮತ್ತು ಪ್ರಶ್ನೆಯಲ್ಲಿ ಹೇಳಿದಂತೆ ನ್ಯಾಯಾಂಗದ ಬೆದರಿಕೆಯನ್ನೂ ಒಡ್ಡುತ್ತಿದ್ದಾರೆ. ಒಂದು ರೀತಿಯಲ್ಲಿ ನೋಡುವುದಾದರೆ ಅತೀವ ಧೈರ್ಯದಿಂದಲೇ ತಪ್ಪನ್ನು ಮಾಡುತ್ತಿದ್ದಾರೆ. ಆಮೇಲೆ ಕ್ರೌರ್ಯದ ವಿಚಾರ ಬಂದಾಗ ತಾನು ಹೆಣ್ಣು, ಸೌಮ್ಯ ಸ್ವಭಾವದವಳು ಎಂಬ ಚಿತ್ರಣವನ್ನು ಬಿಂಬಿಸುತ್ತಾಳೆ. ಹೀಗಾಗಿ ಅನೇಕ ಗಂಡಸರು ಅಡಕತ್ತರಿಯಲ್ಲಿ ಸಿಕ್ಕಿದ ಪರಿಸ್ಥಿತಿಗೆ ಒಳಗಾಗಿದ್ದಾರೆ. ಮಾತ್ರವಲ್ಲ ಇದರಿಂದಾಗಿ ತೀವ್ರವಾದ ಮಾನಸಿಕ ಅಸ್ವಸ್ತತೆಗೆ ಒಳಗಾಗುತ್ತಾರೆ. ಅನೇಕರು ಖಿನ್ನತೆ, ಉದ್ವೇಗ, ಅಸಹಾಯಕತೆ, ಚಿಂತೆ, ನಿದ್ರಾಹೀನತೆ, ಭೀತಿ ಮುಂತಾದ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮಾತ್ರವಲ್ಲ, ತಮ್ಮ ಅಳಲನ್ನು ತೋಡಿಕೊಳ್ಳಲು ಅಥವಾ ಅದಕ್ಕೆ ಪರಿಹಾರ ಸಿಗುವ ಸಾಧ್ಯತೆ ಕಡಮೆ ಎಂದು ಕಂಡುಬಂದಾಗ ಹತಾಶರಾಗಿ ಆತ್ಮಹತ್ಯೆಯಂತಹ ತೀವ್ರತೆರನಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಬಹಳ ವರ್ಷಗಳಿಂದ ಈ ರೀತಿಯ ಘಟನೆಗಳು ನಡೆಯುತ್ತಾ ಬಂದಿವೆಯಾದರೂ, ಕಳೆದ ವರ್ಷ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಅವರ ಆತ್ಮಹತ್ಯೆಯ ಘಟನೆಯ ನಂತರ, ಅನೇಕ ಪುರುಷರ ಹಕ್ಕುಗಳ ಕಾರ್ಯಕರ್ತರು ದೇಶದೆಲ್ಲೆಡೆ ದನಿ ಎತ್ತಿದರು. ಆದರೂ ಅಂತಹ ಘಟನೆಗಳು ಮುಂದುವರಿಯುತ್ತಲೇ ಇವೆ. ಬೆಂಗಳೂರಿನಲ್ಲಿ ಪೋಲಿಸ್ ಹೆಡ್ ಕಾನ್ಸ್‍ಟೇಬಲ್ ತಿಪ್ಪಣ್ಣ, ಮುಂಬೈಯಲ್ಲಿ ನಿಶಾಂತ್ ತ್ರಿಪಾಠಿ ಹೀಗೆ ದೇಶದೆಲ್ಲೆಡೆ ಈ ರೀತಿಯ ಅನೇಕ ಘಟನೆಗಳು ವ್ಯಾಪಕವಾಗಿ ವರದಿಯಾಗಿವೆ. ಅಂಕಿ ಅಂಶಗಳ ಪ್ರಕಾರ ಸರಾಸರಿಯಾಗಿ, ಕಳೆದ ಎಂಟು ವರ್ಷಗಳಲ್ಲಿ (2015 ರಿಂದ 2022), ಪ್ರತಿ ವರ್ಷ ಸುಮಾರು 1,01,188 ಪುರುಷರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ, ಆದರೆ 43,314 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವುಗಳಲ್ಲಿ ಶೇಕಡಾ 23.06ರಷ್ಟು ಆತ್ಮಹತ್ಯೆಗಳಿಗೆ ಮುಖ್ಯ ಕಾರಣ ಕೌಟುಂಬಿಕ ಸಮಸ್ಯೆಗಳಾಗಿವೆ.

ಇಂತಹ ಪರಿಸ್ಥಿತಿ ನಮ್ಮ ಮುಂದಿರುವಾಗ, ಈ ಜಟಿಲ ಸಮಸ್ಯೆಯನ್ನು ಕೇವಲ ಮಾನಸಿಕ ಆರೋಗ್ಯದ ದೃಷ್ಟಿಯಿಂದ ನೋಡುವುದಷ್ಟೇ ಅಲ್ಲದೆ, ಸಾಮಾಜಿಕ ಆರೋಗ್ಯ, ಮತ್ತು ನ್ಯಾಯಾಂಗದ ದೃಷ್ಟಿಯಿಂದಲೂ ನೋಡುವ ಅಗತ್ಯವಿದೆ. ಯಾಕೆಂದರೆ, ಮಹಿಳೆಯರಿಂದಾಗುವ ದೌರ್ಜನ್ಯಗಳಿಂದ ಮತ್ತು ಸುಳ್ಳು ಆರೋಪಗಳಿಂದ ಅನೇಕ ಗಂಡಸರು, ಅವರ ಮನೆಯವರು ಸಾಮಾಜಿಕ ಕಳಂಕವನ್ನು ಹೊತ್ತು ತಿರುಗುವ ಪರಿಸ್ಥಿತಿ ಉಂಟಾಗಿದೆ. ಮಾತ್ರವಲ್ಲ ಇವು ಮಾನಸಿಕ ಆರೋಗ್ಯದ ಮೇಲೆ ತೀವ್ರವಾದಂತಹ ಪರಿಣಾಮವನ್ನು ಬೀರುತ್ತವೆ.

ಪ್ರಶ್ನೆಯಲ್ಲಿ ತಿಳಿಸಿದ ಸಮಸ್ಯೆಗಳನ್ನು ಎದುರಿಸಲು ಮೊದಲಿಗೆ ಮಾನಸಿಕವಾಗಿ ಆರೋಗ್ಯವಾಗಿರುವುದು ಬಹಳ ಮುಖ್ಯ. ಯಾಕೆಂದರೆ, ದಾಂಪತ್ಯ ದ್ರೋಹ ಅನ್ನುವುದು ಬಹಳ ತೀವ್ರವಾದಂತಹ ಮಾನಸಿಕ ನೋವನ್ನು ಕೊಡುತ್ತದೆ. (ಈ ಕುರಿತು ಹಿಂದಿನ ಅಂಕಣದಲ್ಲಿ ವಿಸ್ತಾರವಾಗಿ ವಿವರಿಸಿದ್ದೆ). ಆ ನೋವನ್ನು ತಾಳಿಕೊಳ್ಳುವುದಕ್ಕೆ ಅಷ್ಟು ಸುಲಭವಿಲ್ಲ. ಕೌನ್ಸೆಲಿಂಗ್ ಮೂಲಕ ತಮ್ಮ ನೋವಿನ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಆಮೇಲೆ, ನಿಮ್ಮ ಜೀವನವನ್ನು ಹೇಗೆ ಸಾಗಿಸಬೇಕು ಎಂಬುವುದನ್ನು ನಿರ್ಧರಿಸಿ. ಯಾಕೆಂದರೆ, ಒಂದು ವೇಳೆ ನಿಮ್ಮ ಪತ್ನಿ ಮೋಸ ಮಾಡುತ್ತಿರುವುದು ಸತ್ಯವೇ ಆದರೆ, ಅಂತಹವರೊಡನೆ ಜೀವನ ಮಾಡುವುದು ಕಠಿಣವಾಗಬಹುದು. ಅಂತಹ ಸಂದರ್ಭದಲ್ಲಿ ನಿಮಗೋಸ್ಕರ ನೀವು ನಿಲುವನ್ನು ತಳೆಯುವುದು ಬಹಳ ಮುಖ್ಯ. ಹಾಗಂತ ಆ ದಾರಿಯೂ ಸುಲಭದ್ದಾಗಿರುವುದಿಲ್ಲ. ಸತ್ಯದ ಮಾರ್ಗ ಕಠಿಣವಾಗಿರುತ್ತದೆ. ಮಾತ್ರವಲ್ಲ, ಸತ್ಯವನ್ನು ಎತ್ತಿ ಹಿಡಿಯಬೇಕಾದರೆ, ಅನೇಕ ರೀತಿಯ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಮಾನಸಿಕ ಸದೃಢತೆ ಬಹಳ ಮುಖ್ಯ. ಯಾಕೆಂದರೆ ಆರಂಭದಲ್ಲಿ ಯಾರೂ ಕೂಡಾ ಸಹೄದಯತೆಯನ್ನು ತೋರ್ಪಡಿಸುವುದಿಲ್ಲ. ಪೋಲಿಸ್ ಠಾಣೆಯಲ್ಲೂ ಕೂಡಾ ಆರಂಭದಲ್ಲಿ ನಿಮ್ಮ ಪ್ರಾಮಾಣಿಕತೆಯ ಪರೀಕ್ಷೆ ಆಗುತ್ತದೆ. ಸಮಾಜದಲ್ಲಿ ಗೌರವಯುತವಾಗಿಯೇ ಜೀವನ ಮಾಡುವುದು ನಮ್ಮ ಮೂಲಧರ್ಮವೆಂಬ ಮೌಲ್ಯಾಧಾರಿತ ಪಾಠವಾದಂತಹವರಿಗೆ ಇಂತಹ ಅವಮಾನಗಳನ್ನು ಸಹಿಸಿಕೊಳ್ಳಲು ಮೊದಲು ತಮ್ಮ ಮನಸ್ಸಿನಲ್ಲಿರುವಂತಹ ಭಾವನಾತ್ಮಕ ತಳಮಳಗಳನ್ನು ಸರಿಪಡಿಸಿಕೊಳ್ಳಬೇಕು. ಇದಕ್ಕೆ ಮನಃಶ್ಶಾಸ್ತ್ರಜ್ಞರ ಚಿಕಿತ್ಸೆ ಅನಿವಾರ್ಯವಾಗಿರುತ್ತದೆ. ಮನಃಶ್ಶಾಸ್ತ್ರೀಯ ಚಿಕಿತ್ಸೆಯ ಸಂದರ್ಭದಲ್ಲಿ ತಮ್ಮ ಅಳಲುಗಳನ್ನು ಹಂಚಿಕೊಳ್ಳುವುದಲ್ಲದೇ, ಮಾನಸಿಕ ಸ್ಥಿತಿಸ್ಥಾಪಕತ್ವವನ್ನು (mental resilience) ಗಳಿಸುವ ಕುರಿತು ತರಬೇತಿಯನ್ನು ಪಡೆದುಕೊಳ್ಳಬೇಕು. ತಮಗೆ ಮಾತ್ರವಲ್ಲದೇ, ತಮ್ಮ ಮನೆಯವರನ್ನೂ ಮಾನಸಿಕವಾಗಿ ಸದೃಢರನ್ನಾಗಿಸುವುದು ಪ್ರಮುಖವಾದ ವಿಷಯ. ಯಾಕೆಂದರೆ ಇಂತಹ ಹೋರಾಟಗಳನ್ನು ಏಕಾಂಗಿಯಾಗಿ ಹೋರಾಡುವುದು ಬಹಳ ಕಷ್ಟ.

ಇನ್ನು ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ, ಸಾಮಾಜಿಕವಾಗಿ ನಾವು ಈ ಸಮಸ್ಯೆಯನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕು. ತಪ್ಪು ಯಾರೇ ಮಾಡಿರಲಿ, ಅದನ್ನು ಯಾವುದೇ ಭೇದವಿಲ್ಲದೆ ತಪ್ಪು ಎಂದು ಹೇಳುವುದಕ್ಕೆ ಆರಂಭಿಸಬೇಕು. ಅಳಲು ಯಾರದ್ದೇ ಇರಲಿ, ಅದಕ್ಕೆ ಸಮಾಧಾನವನ್ನು ಕಲ್ಪಿಸಲು ಅವಕಾಶವನ್ನು ಕೊಡಬೇಕು. ಯಾವುದೇ ಪೂರ್ವಾಗ್ರಹಗಳನ್ನಿಟ್ಟುಕೊಂಡು ನಿರ್ಧರಿಸಬಾರದು.

ಈ ಜಟಿಲ ಸಮಸ್ಯೆಯನ್ನು ಬಗೆ ಹರಿಸಲು ನ್ಯಾಯಾಂಗದ ದೃಷ್ಟಿಯಿಂದಲೂ ಅನೇಕ ಸುಧಾರಣೆಗಳು ಆಗಬೇಕಿವೆ. ಇತ್ತೀಚೆಗೆ ದೇಶದಲ್ಲಿ ನೂತನವಾಗಿ ಜಾರಿಯಾಗಿರುವ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ ೮೫ ಹಾಗೂ ೮೬ನ್ನು ಲಿಂಗಭೇದವಿಲ್ಲದೇ ಪರಿಗಣಿಸಬೇಕು. ಕೌಟುಂಬಿಕ ನ್ಯಾಯಾಲಯಗಳಲ್ಲಿನ ಪ್ರಕ್ರಿಯೆಗಳನ್ನು ತ್ವರಿತಗೊಳಿಸಬೇಕು. ಕೌಟುಂಬಿಕ ದೌರ್ಜನ್ಯ ಕಾಯಿದೆಯನ್ನು ಲಿಂಗ ತಟಸ್ಥವಾಗಿ ನೋಡಬೇಕು. ಗಂಡಸರ ಮೇಲೆ ಸುಳ್ಳು ಆರೋಪ ಮಾಡಿದಂತಹ ಮಹಿಳೆಯರಿಗೆ ಶಿಕ್ಷೆಯನ್ನು ವಿಧಿಸುವ ನಿಯಮವನ್ನೂ ಕೂಡಾ ಜಾರಿಗೊಳಿಸಬೇಕು. ಹಾಗಾದಾಗ ಸುಳ್ಳು ಆರೋಪಗಳ ಸಂಖ್ಯೆ ಕಡಮೆ ಆಗಬಹುದು.

ಹೀಗೆ ನನ್ನ ಅಭಿಪ್ರಾಯದಲ್ಲಿ ಈ ಸಮಸ್ಯೆಯನ್ನು ನಾವು ಸಮಗ್ರವಾಗಿ ಚಿಂತಿಸಿ ಪರಿಹಾರವನ್ನು ಕಂಡುಕೊಳ್ಳಬೇಕು.

ಕೊನೆಯದಾಗಿ ಪುರಂದರದಾಸರು ಒಂದು ಮಾತು ಹೇಳಿದ್ದಾರೆ, ‘ಸತ್ಯವಂತರಿಗಿದು ಕಾಲವಲ್ಲ, ದುಷ್ಟ ಜನರಿಗಿದು ಸುಭಿಕ್ಷ ಕಾಲ’ ಎಂದು. ಅವರು 15ನೇ ಶತಮಾನದಲ್ಲಿ ಹೇಳಿದ ಮಾತು ಇಂದಿಗೂ ಸತ್ಯವೇ ಆಗಿದೆ. ಆದರೆ, ನಾವು ಸರಿಯಾದ, ನೈತಿಕ ಮತ್ತು ಮೌಲ್ಯಯುತವಾದಂತಹ ಮಾರ್ಗವನ್ನು ಅನುಸರಿಸಿದಾಗ, ನಮ್ಮೊಳಗೆ ಯಾವುದೇ ಅಳುಕು ಅಥವಾ ಅಂಜಿಕೆ ಇರುವುದಿಲ್ಲ. ಮಾತ್ರವಲ್ಲ, ಕೊನೆಗೆ ಸತ್ಯಕ್ಕೇ ಜಯಸಿಗುತ್ತದೆ. ಆದರೆ ಆ ಜಯ ಸಿಗುವಲ್ಲಿವರೆಗೆ ನಾವು ತಾಳ್ಮೆ ಕಳೆದುಕೊಳ್ಳಬಾರದು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT