ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದಿಗೆ ಫ್ಯಾಷನ್‌ ಸ್ಪರ್ಶ

Last Updated 9 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಖಾದಿ ನಮ್ಮ ಪಾರಂಪರಿಕ ವಸ್ತ್ರ ವೈಭವದ ಸಂಕೇತ; ಭಾರತದ ರಾಷ್ಟ್ರೀಯ ಉಡುಪು. ಆದರೆ ಈಗ ಅದಕ್ಕೆ ಫ್ಯಾಷನ್‌ ಲೇಪ ನೀಡಿ ಬಹಳ ವರ್ಷಗಳಾದವು. ನಮ್ಮ ಫ್ಯಾಷನ್‌ ವಿನ್ಯಾಸಕರ ಕೈಚಳಕ, ಸರ್ಕಾರದ ಒತ್ತಾಸೆ ಎರಡೂ ಮಿಳಿತಗೊಂಡು ಒಂದು ಕಾಲದಲ್ಲಿ ಒರಟು ಬಟ್ಟೆ ಎನಿಸಿದ್ದ ಖಾದಿ ಈಗ ನವಿರಾಗಿ ಫ್ಯಾಷನ್‌ ಪ್ರಿಯರ ಮೈ ಸೋಕುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಅಪ್ಪಟ ಹತ್ತಿ ಬಟ್ಟೆಯ ಉಡುಪುಗಳು ಪ್ರಚಲಿತ ವಿನ್ಯಾಸದೊಂದಿಗೆ ಎಲ್ಲಾ ತಲೆಮಾರಿನವರ ಮನ ಸೆಳೆಯುತ್ತಿವೆ.

ಈ ಸುಸ್ಥಿರ ಬಟ್ಟೆಯಲ್ಲಾಗಿರುವ ರೂಪಾಂತರ ಒಂದೆರಡು ದಿನಗಳಲ್ಲಿ ಆಗಿದ್ದಲ್ಲ. ಹಲವಾರು ವರ್ಷಗಳಿಂದ ಜವಳಿ ಕ್ಷೇತ್ರದಲ್ಲಿನ ತಂತ್ರಜ್ಞರ ಶ್ರಮ, ವಿನ್ಯಾಸಕರ ಮುಂದಾಲೋಚನೆಗಳಿಂದ ರೂಪುಗೊಂಡಿದೆ. ಸದ್ಯಕ್ಕಂತೂ ಫ್ಯಾಷನ್‌ ಕ್ಷೇತ್ರದಲ್ಲಿ ಖಾದಿಯೆಂದರೆ ಮುಗಿಬೀಳುವ ಟ್ರೆಂಡ್‌ ಕಾಣುತ್ತಿದೆ.

ಸ್ವಾವಲಂಬನೆಯ ಸಂಕೇತ

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸ್ವದೇಶಿ ಚಳವಳಿಯ ಅಂಗವಾಗಿ ಚರಕದಿಂದ ನೂತ ಈ ಆರಾಮದಾಯಕ ಬಟ್ಟೆಗೆ ನಾಂದಿ ಹಾಡಿದ್ದು ಮಹಾತ್ಮ ಗಾಂಧಿ. ಆ ಚರಕ ಸ್ವಾಭಿಮಾನದ, ಸ್ವಾವಲಂಬನೆಯ ಸಂಕೇತವೂ ಹೌದು. ವಿದೇಶಿ ವಸ್ತುಗಳನ್ನು ವಿರೋಧಿಸುವ ಈ ಆಂದೋಲನದಲ್ಲಿ ಅರಳಿದ ಖಾದಿ ಆರಂಭದಲ್ಲಿ ಆರಾಮದಾಯಕ ಉಡುಪಾಗಿ ಹೊರಹೊಮ್ಮಿತು. ಸ್ವಾತಂತ್ರ್ಯ ಹೋರಾಟಗಾರರ, ರಾಜಕೀಯ ಧುರೀಣರ, ಗ್ರಾಮೀಣ ಭಾಗದವರ ಮೈಮೇಲೆ ಹೆಮ್ಮೆಯ ಸಂಕೇತವಾಗಿ ರಾರಾಜಿಸಿತು. ಖಾದಿ ಕುರ್ತಾ, ಖಾದಿ ಪಂಚೆ, ಖಾದಿ ರುಮಾಲು, ಖಾದಿ ಪೈಜಾಮ, ಖಾದಿ ಪೈರಣ್‌ (ಅರ್ಧ ತೋಳಿನ ಸಡಿಲ ಅಂಗಿ), ಖಾದಿ ಜಾಕೆಟ್‌ (ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರೂ ಈ ಜಾಕೆಟ್‌ ಅನ್ನು ಜನಪ್ರಿಯಗೊಳಿಸಿದರು), ಖಾದಿ ಟೋಪಿ... ಬಿಳಿ ಮತ್ತು ತಿಳಿ ವರ್ಣದ ಈ ಶುಭ್ರ ಬಟ್ಟೆ ಶಾಂತಿಯ ಪ್ರತಿಬಿಂಬವೂ ಹೌದು.

ಮಾರುಕಟ್ಟೆಗೆ ದಾಂಗುಡಿ

ಆದರೆ ಕಳೆದ 8-10 ವರ್ಷಗಳಿಂದ ಖಾದಿಯ ಮೇಲೆ ಫ್ಯಾಷನ್‌ ಲೋಕದವರ ಕಣ್ಣು ಬಿದ್ದಿದೆ. ಈ ಒರಟು ಬಟ್ಟೆಗೆ ನಯವಾದ ರೂಪು ಕೊಟ್ಟು, ವಿವಿಧ ಶೈಲಿಯಲ್ಲಿ ಆಕರ್ಷಕವಾಗಿ ತೋರ್ಪಡಿಸಿದ ಹಿರಿಮೆ ನಮ್ಮ ಫ್ಯಾಷನ್‌ ವಿನ್ಯಾಸಕಾರರಿಗೆ ಸಲ್ಲುತ್ತದೆ.

ನಯನಮನೋಹರವಾದ ವಿವಿಧ ರಂಗಿನಲ್ಲಿ, ವಿವಿಧ ಪ್ರಿಂಟ್‌ಗಳಲ್ಲಿ, ವಿವಿಧ ವಿನ್ಯಾಸಗಳಲ್ಲಿ, ವಿವಿಧ ಕಸೂತಿಯಲ್ಲಿ ದಾಂಗುಡಿ ಇಟ್ಟಿದೆ. ಕೈಮಗ್ಗದಲ್ಲಿ ನೇಯ್ದ ಅಪ್ಪಟ ಖಾದಿ ರೇಷ್ಮೆ, ಖಾದಿ ಉಣ್ಣೆಯ ಬಟ್ಟೆಗಳು ಕುರ್ತಾ, ಷರ್ಟ್‌, ಸೀರೆ, ಟಾಪ್‌, ಸ್ಟೋಲ್‌, ಪ್ಯಾಂಟ್‌, ಗೌನ್‌, ಫ್ಯೂಷನ್‌ ಡ್ರೆಸ್‌, ಕ್ರಾಪ್‌ ಟಾಪ್‌, ದುಪಟ್ಟಾ, ಬ್ಯಾಗ್‌ ಆಗಿ ಆಧುನಿಕ ಫ್ಯಾಷನ್‌ಗೆ ಬಣ್ಣ ಬಳಿದಿವೆ.

‘ಖಾದಿ ಈಗ ಯುವಜನರ ಜೀವನಶೈಲಿಯ ಅಂಗವಾಗಿದೆ ಎನ್ನಬಹುದು. ಗರಿಮುರಿ ಖಾದಿಯ ಉಡುಪು ಧರಿಸುವುದು ಮಿಲೆನಿಯಲ್‌ ತಲೆಮಾರಿನ ಯುವಕ/ ಯುವತಿಯರ ಜೀವನಶೈಲಿಯ ಸಂಕೇತ’ ಎನ್ನುತ್ತಾರೆ ಫ್ಯಾಷನ್‌ ವಿನ್ಯಾಸಕಿ ರಿತಿಕಾ ಪೊನ್ನಪ್ಪ.

ಸದ್ಯಕ್ಕಂತೂ ಭಾರತದ ಫ್ಯಾಷನ್‌ ಕ್ಷೇತ್ರದಲ್ಲಿ ಕೈಮಗ್ಗದ ಬಟ್ಟೆಗಳ ಉಡುಪುಗಳದ್ದೇ ಕಾರುಬಾರು. ಅದರಲ್ಲೂ ಖಾದಿಯ ಖದರು ಎಲ್ಲರ ಗಮನ ಸೆಳೆದಿದೆ. ಅಂದರೆ ಕೇವಲ ಫ್ಯಾಷನ್‌ಪ್ರಿಯರ ಗಮನವನ್ನಲ್ಲ, ವಿನ್ಯಾಸಕಾರರು ಇದಕ್ಕೆ ಮುಗಿಬಿದ್ದಿದ್ದಾರೆ ಎನ್ನಬಹುದು. ಖ್ಯಾತನಾಮರಾದ ರೋಹಿತ್‌ ಬಾಲ್‌, ರೀನಾ ದಾಕಾ, ಅಂಜು ಮೋದಿ, ಮನೀಷ್‌ ಮಲ್ಹೋತ್ರ, ರೀತು ಕುಮಾರ್‌ ಮೊದಲಾದವರು ಯಾವುದೇ ಬಗೆಯ ಉಡುಪಿಗೆ ಸೂಕ್ತವೆನಿಸುವ ಈ ವಸ್ತ್ರವನ್ನು ಪಳಗಿಸಿದ್ದಾರೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿ ನಡೆಯುವ ವಿವಿಧ ಫ್ಯಾಷನ್‌ ಷೋಗಳಲ್ಲಿ ಖಾದಿಯದ್ದೇ ದರ್ಬಾರು.

ಪರಿಸರ ಸ್ನೆಹಿ

‘ಖಾದಿಯನ್ನು ಕೈಮಗ್ಗದಲ್ಲಿ ಮಾಡುವುದರಿಂದ ಅದರದ್ದೇ ಆದ ಲುಕ್‌ ಇದೆ. ಇದು ಹತ್ತಿಯಂತಹ ಸಾವಯವ ವಸ್ತುವಿನಿಂದ ತಯಾರಾಗುವುದರಿಂದ ದೀರ್ಘಕಾಲ ಬಾಳುವಂತಹದ್ದು. ಭಾರತದ ಹವಾಮಾನಕ್ಕೆ ಆರಾಮದಾಯಕ ಕೂಡ. ಬೇಸಿಗೆಯಲ್ಲಿ ತಂಪಾದ ಅನುಭವ ನೀಡಿದರೆ, ಚಳಿಯಲ್ಲಿ ಬೆಚ್ಚಗೆ ನಮ್ಮ ಶರೀರವನ್ನು ಕಾಪಿಡುವಂತಹ ಗುಣ ಇದರದ್ದು’ ಎಂದು ವಿನ್ಯಾಸಕಾರ್ತಿ ರೀತು ಕುಮಾರ್‌ ಇತ್ತೀಚೆಗೆ ಫ್ಯಾಷನ್‌ ಷೋ ಒಂದರಲ್ಲಿ ಹೇಳಿದ್ದನ್ನು ಇಲ್ಲಿ ನೆನಪಿಸಬಹುದು.

ಜೊತೆಗೆ ಮಾಧ್ಯಮದ ಪ್ರಚಾರದಿಂದಾಗಿ ಹೆಚ್ಚಿನ ಮಂದಿಗೆ ಪರಿಸರದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಖಾದಿ ಸಹಜವಾಗಿ ಪರಿಸರ ಸ್ನೇಹಿ. ಹೀಗಾಗಿ ಈ ಸುಸ್ಥಿರ ಬಟ್ಟೆಗೆ ಬೇಡಿಕೆ ಹೆಚ್ಚಿರುವುದು ಸಹಜ. ಸಿಂಥೆಟಿಕ್‌ ಬಟ್ಟೆಯಿಂದಾಗುವ ಸಮಸ್ಯೆಯ ಕುರಿತು ಜನರಿಗೆ ಅರಿವು ಮೂಡಿರುವುದು ಇನ್ನೊಂದು ಕಾರಣ. ತಂತ್ರಜ್ಞಾನ ಸುಧಾರಿಸಿದ್ದು, ವಿನ್ಯಾಸ, ಬಟ್ಟೆಯ ಒರಟುತನ ಬದಲಾಗಿರುವುದರಿಂದ ಭವಿಷ್ಯದ ಉಡುಪಿನ ಮಾರುಕಟ್ಟೆಯಲ್ಲಿ ಖಾದಿ ಮುಂಚೂಣಿಯಲ್ಲಿ ನಿಲ್ಲುತ್ತದೆಂಬ ಭರವಸೆ ಫ್ಯಾಷನ್‌ ವಿನ್ಯಾಸಕಾರರದ್ದು.

ಈ ಅಪೂರ್ವವಾದ ವಸ್ತ್ರದಿಂದ ತಯಾರಾದ ಉಡುಪುಗಳನ್ನು ಹೇಗೆ ಬೇಕಾದರೂ ಧರಿಸಬಹುದು. ಕುರ್ತಾವನ್ನು ಜೀನ್ಸ್‌ ಮೇಲೆ ಧರಿಸಬಹುದು. ಸೀರೆಯನ್ನು ವಿವಿಧ ರೀತಿಯಲ್ಲಿ ಉಟ್ಟು, ಖಾದಿಯ ಸ್ಕಾರ್ಫ್‌ ಅನ್ನು ಕತ್ತಿಗೆ ಹೊಸ ಹೊಸ ಬಗೆಯಲ್ಲಿ ಧರಿಸಬಹುದು. ಸ್ಕರ್ಟ್‌ ಮೇಲೆ ಖಾದಿಯ ಟಾಪ್‌ ಹೊಸ ಲುಕ್‌ ನೀಡುತ್ತದೆ. ಗರಿಗರಿ ಷರ್ಟ್‌ ಅನ್ನು ಪ್ಯಾಂಟ್‌ ಮೇಲೆ ಮಾತ್ರವಲ್ಲ, ವಿಶೇಷ ಸಮಾರಂಭಗಳಲ್ಲಿ ರೇಷ್ಮೆ ಪಂಚೆಯ ಮೇಲೆ ಧರಿಸಿ ಖುಷಿಪಡಬಹುದು. ಕುರ್ತಾ– ಸಲ್ವಾರ್‌ ಅಂತೂ ನಿತ್ಯ ನೂತನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT