ಮಂಗಳವಾರ, ಮಾರ್ಚ್ 21, 2023
29 °C

ಒತ್ತಡದಿಂದ ಮುಟ್ಟಿನಲ್ಲಿ ಏರುಪೇರು

ಎಸ್ಸೆಚ್‌ Updated:

ಅಕ್ಷರ ಗಾತ್ರ : | |

prajavani

ಕೋವಿಡ್‌–19 ಹಿನ್ನೆಲೆಯಲ್ಲಿ ಋತುಸ್ರಾವದ ಕುರಿತಂತೆ ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲ, ನಗರಗಳಲ್ಲೂ ಕೂಡ ಹಲವರಲ್ಲಿ ಅನುಮಾನಗಳು ಮೂಡಿವೆ. ಅಂದರೆ ಋತುಸ್ರಾವವಾದ ಮಹಿಳೆಯರು ಕೊರೊನಾ ಸೋಂಕಿಗೆ ಬಹುಬೇಗ ಒಳಗಾಗುತ್ತಾರೆ ಎಂಬ ಊಹಾಪೋಹ ಕೆಲವರಲ್ಲಿ ಆತಂಕ ಮೂಡಿಸಿದೆ. ಆದರೆ ಇಂತಹ ಊಹಾಪೋಹಗಳಿಗೆ ಯಾವುದೇ ಆಧಾರವಿಲ್ಲ.

ಆದರೆ ಸ್ಯಾನಿಟರಿ ಪ್ಯಾಡ್‌ಗಳು, ಕಪ್‌ಗಳ ಪೂರೈಕೆಯಲ್ಲೂ ಸಮಸ್ಯೆಗಳು ತಲೆದೋರಿವೆ. ಋತುಸ್ರಾವದ ಸಂದರ್ಭದಲ್ಲಿ ಕೆಲವು ಯುವತಿಯರಲ್ಲಿ ಕಂಡುಬರುವ ಎಂಡೊಮೆಟ್ರಿಯೋಸಿಸ್‌, ಅರೆದಲೆಶೂಲೆ, ಪಿಎಂಎಸ್‌ (ಪ್ರಿ ಮೆನುಸ್ಟ್ರಿಯಲ್‌ ಸಿಂಡ್ರೋಮ್‌)ನಂತಹ ಆರೋಗ್ಯ ತೊಂದರೆಗಳಿಗೆ ಲಾಕ್‌ಡೌನ್‌ನಿಂದಾಗಿ ಪರಿಹಾರವೂ ಲಭ್ಯವಾಗುತ್ತಿಲ್ಲ. ಕೊರೊನಾ ಸೋಂಕು ತಂದ ಸಮಸ್ಯೆಗಳಿಂದ ಒತ್ತಡವೂ ಜಾಸ್ತಿಯಾಗಿದ್ದು, ಇದು ಋತುಚಕ್ರ ಏರುಪೇರಾಗಲು ಕಾರಣವಾಗುತ್ತಿದೆ.

ಪೂರೈಕೆ ಸರಪಣಿಯಲ್ಲಿ ಸಮಸ್ಯೆ ತಲೆದೋರಿರುವುದರಿಂದ ಸ್ಯಾನಿಟರಿ ಪ್ಯಾಡ್‌, ಟ್ಯಾಂಪನ್‌, ಮೆನುಸ್ಟ್ರುಯೆಲ್‌ ಕಪ್‌, ಪುನರ್ಬಳಸಬಹುದಾದ ನ್ಯಾಪ್‌ಕಿನ್‌, ಋತುಸ್ರಾವದ ಹೊಟ್ಟೆನೋವಿಗೆ ಬಳಸುವ ಔಷಧ ಮೊದಲಾದವುಗಳ ಕೊರತೆ ಕೆಲವು ದೇಶಗಳಲ್ಲಿ ಉಂಟಾಗಿದೆ. ಆರೋಗ್ಯ ಕಾರ್ಯಕರ್ತೆಯರಿಗಂತೂ ಇದರ ಕೊರತೆಯುಂಟಾಗದಂತೆ ನೋಡಿಕೊಳ್ಳಬೇಕಿದೆ. ಭಾರತದಲ್ಲಿ ಈಗಾಗಲೇ ಬಡ ಮಹಿಳೆಯರ ಕೈಗೆ ನಿಲುಕದಂತಹ ಈ ಪ್ಯಾಡ್‌ಗಳು ಲಾಕ್‌ಡೌನ್‌ ಸಂದರ್ಭದಲ್ಲಿ ಅಂಗಡಿಗಳು ಬಂದ್‌ ಆಗಿದ್ದರಿಂದ, ಸಾಗಣೆ ಸ್ಥಗಿತಗೊಂಡಿದ್ದರಿಂದ ಬಹುತೇಕರಿಗೆ ಸಿಗದೆ ಪರದಾಡುವಂತಾಗಿದೆ.

ಪ್ಯಾಡ್‌ಗಳ ಕೊರತೆಯಿಂದಾಗಿ ಹಲವರು ಬಟ್ಟೆಯ ಮೊರೆ ಹೋಗುತ್ತಿದ್ದಾರೆ ಎಂಬುದು ಆತಂಕಕಾರಿ ಸಂಗತಿ. ಈ ಬಟ್ಟೆಗಳನ್ನು ಸರಿಯಾದ ಸೋಪ್‌ ಬಳಸಿ ತೊಳೆಯಬೇಕು. ಸೂರ್ಯನ ಬಿಸಿಲಿಗೆ ಒಣ ಹಾಕಬೇಕು. ಇಲ್ಲದಿದ್ದರೆ ಜನನಾಂಗ ವ್ಯೂಹ ಮತ್ತು ಮೂತ್ರ ವಿಸರ್ಜನೆ ಮಾರ್ಗದಲ್ಲಿ ಸೋಂಕು ತಗುಲುವ ಸಾಧ್ಯತೆ ಹೆಚ್ಚು. ಅಂದರೆ ಈ ವಿಷಯದಲ್ಲಿ ಕೂಡ ಸೋಪ್‌, ಸ್ಯಾನಿಟೈಜರ್‌ ಮತ್ತು ನೀರಿನ ಬಳಕೆ ಅವಶ್ಯಕ.

ಅನಿಯಮಿತ ಋತುಸ್ರಾವ

ಈ ಸಂದರ್ಭದಲ್ಲಿ ಅನಿಯಮಿತ ಮುಟ್ಟು ಹಲವು ಯುವತಿಯರನ್ನು ಕಂಗೆಡಿಸಿದೆ. ಇದಕ್ಕೆ ಕಾರಣ ಜೀವನಶೈಲಿಯಲ್ಲಾದ ಬದಲಾವಣೆ ಎನ್ನುತ್ತಾರೆ ತಜ್ಞ ವೈದ್ಯೆ ಡಾ.ಸರಸ್ವತಿ ಎನ್‌.ಭಟ್‌. ಊಟ, ನಿದ್ರೆ, ವ್ಯಾಯಾಮದಲ್ಲಿ ಶಿಸ್ತು ಇಲ್ಲದಿರುವುದು, ಅತಿಯಾದ ಒತ್ತಡದಿಂದ ಕೆಲವರಿಗೆ ಮುಟ್ಟು ಮುಂದೆ ಹೋಗುವುದು, ಹೆಚ್ಚು ಸ್ರಾವವಾಗುವುದು ಸಾಮಾನ್ಯ. ಒತ್ತಡದಿಂದ ಕಾರ್ಟಿಸೋಲ್‌ ಹಾರ್ಮೋನ್‌ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗಿ ಮುಟ್ಟನ್ನು ನಿಯಂತ್ರಿಸುವ ಇತರ ಹಾರ್ಮೋನ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಒತ್ತಡ ನಿಯತ್ರಿಸುವುದು, ವ್ಯಾಯಾಮ ಮಾಡುವುದು ಮುಖ್ಯ ಎನ್ನುತ್ತಾರೆ ಅವರು. ಆಹಾರದಲ್ಲೂ ಕೂಡ ಪೌಷ್ಟಿಕಾಂಶ ಹೆಚ್ಚಿರುವ ಪದಾರ್ಥಗಳನ್ನು ಬಳಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು