ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಕ್ಕಿ ಮಾತೆಯರ ತರಕಾರಿ ಮಾಯೆ

Last Updated 3 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಮಧ್ಯರಾತ್ರಿ ಗೋಕರ್ಣ ಬಸ್ ನಿಲ್ದಾಣ ಸನಿಹ ಸಣ್ಣ ಗಜಿಬಿಜಿ ಶುರುವಾಗುತ್ತದೆ. ನಿಧಾನಕ್ಕೆ ಹತ್ತಿಪ್ಪತ್ತು ಸರಕು ಸಾಗಣೆಯ ವಾಹನಗಳು ಬಂದು ನಿಲ್ಲುತ್ತವೆ. ಗೂಡಂಗಡಿಯವರು ಚಹಾ ತಯಾರಿಗೆ ಸ್ಟೌ ಹಚ್ಚುತ್ತಿದ್ದಂತೆ ನಾಲ್ಕಾರು ಕಿಲೋ ಮೀಟರ್ ದೂರದಿಂದ ತಲೆಹೊರೆ ಹೊತ್ತು ಗುನುಗುನು ಮಾತಾಡುತ್ತಾ ತರಕಾರಿ ಬುಟ್ಟಿ, ಚೀಲ ಹೊತ್ತ ಜನರು ಜಮಾಯಿಸುತ್ತಾರೆ. ಬಂದವರೆಲ್ಲ ಮಹಿಳೆಯರು ! ಸಂಖ್ಯೆ 200-300ಕ್ಕೂ ಮೀರಬಹುದು.

ತರಕಾರಿ ತೂಕ ಮಾಡಿಸಿ ಸಣ್ಣ ಕೈಚೀಟಿ ಹಿಡಿದು ವ್ಯಾಪಾರಕ್ಕೆ ನಿಲ್ಲುತ್ತಾರೆ. ಸಗಟು ಖರೀದಿಸುವ ವ್ಯಾಪಾರಿ, ವ್ಯವಹಾರ ಕುದುರಿಸುವ ಮಧ್ಯವರ್ತಿಗಳಿಂದ ಸಂತೆ ಶುರು. ಇಲ್ಲಿ ತರಕಾರಿ ಮಾರುವವರು, ಖರೀದಿಸಿ ಸುತ್ತಲಿನ ಸಂತೆಗೆ ತರಕಾರಿ ವ್ಯಾಪಾರಕ್ಕೆ ಒಯ್ಯುವವರೆಲ್ಲ ಹಲವರು ಮಹಿಳೆಯರು. ಭಾರದ ಮೂಟೆ ಹೊತ್ತು ಆಟೊಗೆ ಸಾಗಿಸುವುದು, ಬೆಳಗು ಹರಿಯುವ ಮುಂಚೆ 40-50 ಕಿಲೋ ಮೀಟರ್ ದೂರ ಮಾರುಕಟ್ಟೆಗೆ ಒಯ್ಯುವ ಗಡಿಬಿಡಿ. ‘ಬಷ್ಲೆ ಷೊಪ್ಪು ಇನ್ನೇಗಿಂತ ಇಂದು ಜೈಸ್ತಿ ಬಂದೀದು , ಬದ್ನಿಕಾಯಿ ಮುಟ್ಟಿಗೆ ಐವತ್ತೂ ರೂಪಾಯ್ಗೂ ಕೇಲೂದಿಲ್ಲ ಷಾವೂಕೆ ! ಪೊಟ್ಲಿಕಾಯಿ ಎಳೀದಿತು ತಗಳೆ, ಹರಬಿ ಷೊಪ್ಪು ಹತ್ತು ರೂಪಾಯ್ಗೆ ನಾಲ್ಕು ಕಟ್ಟು ಕೊಟ್ಟೀಯೇ ನಾನು, ನಿಂಗೆ ಏಸ್ತ ಬೇಕಾತಿದು ?’– ಮಾರುಕಟ್ಟೆಯಲ್ಲಿ ಕೇಳಬಹುದಾದ ಚೆಂದದ ಹಾಲಕ್ಕಿ ಕನ್ನಡ, ಗೋಕರ್ಣ ತರಕಾರಿ ಬಜಾರಿನ ಅಧಿಕೃತ ಆಡಳಿತ ಭಾಷೆ.

ತರಕಾರಿ ಮಾರಿದವರು ಕೊಪ್ಪದ ದಾರಿ ಹಿಡಿಯುತ್ತಾರೆ, ಮಂಜಿನ ಉಪ್ಪು ನೀರು ಎಲೆಗಳ ಮೇಲೆ ಒಣಗುವ ಮುಂಚೆ ಇವರಿಗೆಲ್ಲ ನೀರುಣಿಸುವ ಕೆಲಸವಿದೆ. ದಿನದ 14-15 ತಾಸು ದುಡಿಮೆ. ಪ್ರತಿ ದಿನ ತರಕಾರಿ ಕೊಯ್ದು ಮಾರಾಟ ಮಾಡಿ, ಬಂದ ಅಷ್ಟಷ್ಟು ಹಣವನ್ನು ಕುಟುಂಬ ನಿರ್ವಹಣೆಗೆ ಒಯ್ಯುವ ತುರ್ತು, ನಿಂತಲ್ಲಿ ಬೆಳೆಯಲ್ಲಿ ಬದುಕುವ ಜಾಣ್ಮೆ.

ಉತ್ತರ ಕನ್ನಡದ ಗೋಕರ್ಣಕ್ಕೆ ಹೋಗುವ ದಾರಿಯಲ್ಲಿ ಮಾದನಗೇರಿಯಿದೆ. ರಸ್ತೆ ಬದಿಗೆ ತಾಜಾ ತರಕಾರಿ ಸಾಲೊಂದು ಕಾಣಿಸುತ್ತದೆ. ಇಲ್ಲಿನ ಮಹಿಳಾ ವ್ಯಾಪಾರಿ ಗಳೆಲ್ಲ ತರಕಾರಿಯಲ್ಲಿ ಬದುಕು ಕಂಡವರು. ಗೋಕರ್ಣದ ಸಮುದ್ರತೀರದ ಬೇಲೆಹಿತ್ಲು, ರುದ್ರಪಾದ, ಬಿಜ್ಜೂರು, ಹುಣಸೆಕೇರಿ, ಸಣ್ಣಬಿಜ್ಜೂರು, ಬಾವಿಕೊಡ್ಲು, ಬೇಲೆಗದ್ದೆ, ಬಿದ್ರಕೇರಿ, ನಾಡಮಾಸ್ಕೇರಿ, ಬಂಕಿಕೊಡ್ಲು, ಹನೇಹಳ್ಳಿ, ಹಾರುಮಾಸ್ಕೇರಿ, ಕಡಮೆ, ಹೊಸ್ಕೇರಿ, ಬೋಳ್‌ತಿಪ್ಪೆ ಮುಂತಾದ ಪ್ರದೇಶ ಬೆಳೆಯ ನೆಲೆ. ಅಂದಾಜಿನ ಪ್ರಕಾರ 4000-5000 ಕುಟುಂಬಗಳು ತರಕಾರಿ ಬೆಳೆಯುವರು. ಎರಡು ಕಿಲೋ ಮೀಟರ್ ಅಗಲ, 18 ರಿಂದ 20 ಕಿಲೋ ಮೀಟರ್ ಉದ್ದದ ಮರಳು ಮಿಶ್ರಿತ ಭತ್ತದ ಗದ್ದೆಯ ಪಟ್ಟಿಯ 1500-1700 ಎಕರೆ ಕ್ಷೇತ್ರದಲ್ಲಿ ಹಾಲಕ್ಕಿ ಸಮುದಾಯದ ತರಕಾರಿಯಿದೆ.

ಕಡಲಂಚಿನ ಮರಳು ಗದ್ದೆಗೆ ದೊಡ್ಡಿಗೊಬ್ಬರ, ಸೊಪ್ಪು, ತೆರಕು ಹಾಕಿ ಮಣ್ಣು ಹದಗೊಳಿಸುತ್ತ ಕಾಯಿಪಲ್ಲೆಯ ಪ್ರಪಂಚ ಕಟ್ಟಿದವರು. ತರಕಾರಿ ಬೇಲಿಯೋ ಒಳಗಡೆ ಏನಿದೆಯೆಂದು ಕಾಣಿಸದಷ್ಟು ಎತ್ತರ, ಕಲಾತ್ಮಕ. ಗದ್ದೆಯ ಮಣ್ಣು, ಮರಳು ಸೇರಿಸಿ ಬೇಸಿಗೆ ತರಕಾರಿಯ ರಕ್ಷಣಾ ಕಂಟವಾಗಿದೆ. ದನಕರು, ನಾಯಿಗಳು ಒಳ ನುಗ್ಗಿ ಕುಣಿದಾಡಿ ಗಿಡ ನಾಶಪಡಿಸದಂತೆ ನಿರ್ಮಿಸಿದ ಈ ಗೋಡೆಗೆ ಎರಡು ತಿಂಗಳ ಪರಿಶ್ರಮ ಮೀಸಲು. ಮರಳಿನ ಹೊಂಡ ತೆಗೆದು ಬಿಂದಿಗೆ ಮುಳುಗುವಷ್ಟೇ ನೀರು ನಿಲ್ಲುವ ಆಳ ಮಾಡುತ್ತ ನೀರಾವರಿ ಪಡೆಯುವ ಜಾಣ್ಮೆ, ಬೇಸಿಗೆಯ ಅಂತರ್ಜಲ ಕುಸಿದಂತೆ ಮರಳ ಬಾವಿಗಳೂ ಆಳವಾಗುತ್ತಾ ಕೊನೆಗೆ ತರಕಾರಿ ಬೆಳೆ ಮುಗಿದ ಮೇಲೆ ಮುಚ್ಚಲ್ಪಡುತ್ತವೆ. ಕೆಲವರು ಕೊಳವೆ ಬಾವಿ ಕೊರೆಸಿದ್ದಾರೆ.

ಉತ್ತರ ಕನ್ನಡ, ಉಡುಪಿ, ಮಂಗಳೂರು, ಬೆಳಗಾವಿ, ಮುಂಬೈಗಳಲ್ಲಿ ‘ಗೋಕರ್ಣ ತರಕಾರಿ’ ಮಾರುಕಟ್ಟೆಯಲ್ಲಿ ಸಲೀಸಾಗಿ ವಿಜಯ ಸಾಧಿಸಿದ ಹಾಲಕ್ಕಿ ಬುಡಕಟ್ಟಿನ ಉತ್ಪನ್ನ! ಊಟಕ್ಕೆ ರುಚಿಕೊಟ್ಟ ಗೋಕರ್ಣ ಸಾಣಿಕಟ್ಟೆಯ ಅಗೇರ ಮಕ್ಕಳು ತಯಾರಿಸುವ ಉಪ್ಪು, ಸ್ವಾದಿಷ್ಟ ಅಡುಗೆಗೆ ತರಕಾರಿ ಕೊಟ್ಟ ಹಾಲಕ್ಕಿ ಜನಾಂಗದವರು ಊಟಕ್ಕೆ ಮುಂಚೆ ಎಲ್ಲರಿಗೂ ನೆನಪಾಗಬೇಕು. ಕೆಂಪು ಹರಿವೆ, ಬಿಳಿಹರಿವೆ, ಈರುಳ್ಳಿ, ಬದನೆ, ಬಸಳೆ, ಗೋಳಿ, ಬೆಂಡೆ, ತೊಂಡೆ, ಕುಂಬಳ, ಮೊಗೆ, ಹಾಗಲ, ಪಡುವಲ, ಸೋಡಿಗೆ, ಕೆಂಪುಗೆಣಸು, ಬಿಳಿಗೆಣಸು, ಮೆಣಸು, ಬೆಂಡೆ, ಹೀರೆ, ಹಾಗಲ, ಹಾಲುಗುಂಬಳಗಳ ಕಾಯಿಪಲ್ಲೆಗಳ ಬಣ್ಣದ ಚಿತ್ತಾರ. ಅಂಗಳಕ್ಕೆ ರಂಗವಲ್ಲಿ ಹಾಕಿದಷ್ಟು ಒನಪು!

ನೀರು ನೀಡುವ ಮರಳಿನ ಹೊಂಡಕ್ಕೆ ಪಡುವಲ, ಹಾಲುಗುಂಬಳದ ತಣ್ಣನೆಯ ಹಸಿರು ಚಪ್ಪರದ ಜಾಗ. ಬದುವಿನ ಅಂಚಿನಲ್ಲಿ ಗೂಟದ ಸಾಲು ನಿಲ್ಲಿಸಿ ಹೀರೆ, ಹಾಗಲು, ಸೋಡಿಗೆ ಬಳ್ಳಿ ಹಬ್ಬಿಸುವ ತಂತ್ರಗಳಿವೆ. ಬೆಳೆ ಸುಲಭವಲ್ಲ, ಎಳೆ ಗಿಡದ ಮೇಲಿನ ಚುಕ್ಕೆ ಗುರುತು ಒಂದು ದಿನ ನೋಡದಿದ್ದರೂ ಬೆಳೆಗೆಲ್ಲ ರೋಗ ಹಬ್ಬುತ್ತದೆ. ಕೀಟ, ರೋಗದ ತೀವ್ರತೆ ಗುರುತಿಸಿ ನಿಯಂತ್ರಣಕ್ಕೆ ತಕ್ಷಣಕ್ಕೆ ಮದ್ದು ಅರೆಯುವ ಪ್ರಾವಿಣ್ಯವಿದ್ದರೆ ಬೆಳೆ ಸಾಧ್ಯ. ಈ ವರ್ಷದ ಮಳೆ ವ್ಯತ್ಯಾಸ ಇಲ್ಲಿನ ಮೆಣಸಿಗೆ ಹೊಡೆತ ನೀಡಿತು. ಹಸಿ ಮೆಣಸಿನ ಬೆಲೆ ಕಿಲೋ 150 ರೂಪಾಯಿ ಏರಿತು. ‘ಗಿಡ ನೆಟ್ಟು ಹೊರ್ಸ(ಗೊಬ್ಬರ,ಮಣ್ಣು,ಕಳೆ,ಮುಚ್ಚಿಗೆಯ ಎಲ್ಲ ಕೆಲಸ ಮುಗಿಯುವುದು)ಮಾಡಿದ ನಂತರ ಗಿಡಗಳು ಸೊರಟಿ ಹೋದವು, ಒಂಬತ್ತು ಸಾವಿರ ಖರ್ಚು ಮಾಡಿ 500 ರೂಪಾಯಿ ದೊರೆಯಿತೆಂದು ಬಿದ್ರಕೇರಿಯ ಲಕ್ಷ್ಮಿ ಮಂಕಾಳಿ ಗೌಡ ನೋವು ತೋಡಿಕೊಳ್ಳುತ್ತಾರೆ. ‘ನಾವು ಹೆಚ್ಚು ಪರಿಶ್ರಮ ಪಟ್ಟು ಬೆಳೆಯುತ್ತೇವೆಂದು ಹೆಚ್ಚು ಬೆಲೆ ಹೇಳಿದರೆ ಕೊಯ್ದ ತರಕಾರಿ ಮಾರಾಟವೇ ಆಗದಿದ್ದರೆ ಏನು ಮಾಡಬೇಕು ?’ ಬೇಲೆಕೇರಿಯ ಸರೋಜ ಗೌಡರ ಪ್ರಶ್ನೆಯಿದೆ. ‌

ಪ್ರತಿ ದಿನ ಸ್ವಲ್ಪ ಸ್ವಲ್ಪ ಕೊಯ್ದು ಮಾರಾಟ ಮಾಡುವ ಬಡ ಕುಟುಂಬಗಳಿಗೆ ಇವುಗಳನ್ನು ಸಂಸ್ಕರಿಸುವ ತಂತ್ರಜ್ಞಾನ ಕೈಗೆಟುಕುವುದಿಲ್ಲ. ತೊಂಡೆ, ಬದನೆ, ಹಾಗಲ, ಗೆಣಸು, ಮೆಣಸು ಎಲ್ಲವನ್ನೂ ಒಣಗಿಸಿ ಬಳಸುವ ಸಾಧ್ಯತೆಯೇನೋ ಇದೆ. ಮಾರುಕಟ್ಟೆಯಲ್ಲಿ ಮಾರಾಟವಾಗದ, ಬೆಲೆ ಕುಸಿದ ಹೊತ್ತಿನಲ್ಲಿ ಇವರಿಗೆ ನೆರವಾಗಲು ಯೋಜನೆಗಳು ಅಗತ್ಯ. ಪ್ರವಾಸಿ ನಕ್ಷೆಯಲ್ಲಿ ಗುರುತಿಸಿಕೊಂಡ ಗೋಕರ್ಣದ ಹಾಲಕ್ಕಿಗರ ತರಕಾರಿ ನೆಲೆಗಳನ್ನು ಪರಿಚಯಿಸಿ ಮಾರುಕಟ್ಟೆ ವಿಸ್ತರಿಸಿ ಮೂಲ ಕೃಷಿಕರಿಗೆ ಲಾಭವಾಗುವಂತೆ ಯೋಚಿಸುವ ಅಗತ್ಯವಿದೆ. ಅಜ್ಜಿ, ಮುತ್ತಜ್ಜಿಯರ ಕೃಷಿ ಅನುಭವಗಳು ತಲೆಮಾರಿನಿಂದ ತಲೆಮಾರಿಗೆ ಸಾಗಿ ಈಗಲೂ ಉಳಿದಿರುವ ಇಂಥ ವಿಶೇಷಗಳ ಬಗ್ಗೆ ಆಡಳಿತ ಗಮನ ಬೇಕು.

ಹಾಲಕ್ಕಿಗರ ಸಾವಿರ ಎಕರೆ ಕೃಷಿ ಭೂಮಿ ಅಲೆದು ಪಟ್ಟಿ ಮಾಡುವ ಎಲ್ಲ ಬೆಳೆಗಳೂ ಪ್ರತಿ ಕುಟುಂಬದ 10-20 ಗುಂಟೆಯಲ್ಲೂ ದೊರೆಯುತ್ತವೆ ! ‘ಪ್ರತಿ’ಫಲದ ಹಿಂದೆ ಪರಿಣಿತಿಯಿದೆ. ನಾಟಿ ತರಕಾರಿಯ ಈ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಬೆಳೆ, ರೋಗ, ಕೀಟ, ಬಯೋಟೆಕ್ನಾಲಜಿ ಪ್ರತ್ಯೇಕ ವಿಭಾಗಗಳಿಲ್ಲ, ಕುಟುಂಬದ ಮಹಿಳೆಯೇ ಕುಲಪತಿಯಾಗಿ ಎಲ್ಲವನ್ನೂ ಪತಿಯ ಜೊತೆಗೆ ನಿಭಾಯಿಸುತ್ತಾಳೆ. ಹಾಲಕ್ಕಿ ಮಹಿಳೆಯರ ಶತಮಾನಗಳ ಪರಂಪರೆಯ ‘ಗೋಕರ್ಣ ತರಕಾರಿ ಕ್ಷೇತ್ರ’ ಅಂತರಾಷ್ಟ್ರೀಯ ಮನ್ನಣೆ ಪಡೆಯುವಷ್ಟು ಯೋಗ್ಯವಿದೆ. ಕೃಷಿ ಸಂರಕ್ಷಣೆಗೆ ಬೆಳೆಯುವವರ ಆರ್ಥಿಕ ಚೇತನಕ್ಕೆ ಸಮುದಾಯ ಪ್ರೀತಿಯ ನೀತಿ ಬೇಕು.

(ಚಿತ್ರಗಳು: ಲೇಖಕರವು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT