ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಆತ್ಮಗೌರವಕ್ಕೆ ಧಕ್ಕೆಯಾದರೆ...

ರಶ್ಮಿ ಎಸ್‌
Published 25 ಮೇ 2024, 0:32 IST
Last Updated 25 ಮೇ 2024, 0:32 IST
ಅಕ್ಷರ ಗಾತ್ರ
ಕೌಟುಂಬಿಕ ದೌರ್ಜನ್ಯವನ್ನು ಸಂಸಾರದೊಳಗಿನ ಸಹಜ ಜಗಳಗಳು ಅಂದುಕೊಳ್ಳುವುದೇ ಮಹಿಳೆಯರು ಶೋಷಣೆಯ ಕೂಪದೊಳಗೆ ಉಳಿಯುವಂತೆ ಮಾಡುತ್ತಿವೆ. ಸಹನಾಮಯಿ ಮತ್ತು ಕ್ಷಮಯಾಧರಿತ್ರಿ ಎಂಬ ಎರಡು ಅತಿಶಯೋಕ್ತಿಯ ಮಾತುಗಳ ಹಿಂದೆ ದೌರ್ಜನ್ಯವೂ ಅಡಗಿದೆ..

‘ಬಹುತೇಕ ಹೆಣ್ಣುಮಕ್ಕಳಿಗೆ ಇದು ಕೌಟುಂಬಿಕ ದೌರ್ಜನ್ಯ ಎನ್ನುವ ಪರಿಕಲ್ಪನೆಯೇ ಇರುವುದಿಲ್ಲ, ಮೊದಲು ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ‘ ಎಂದು ನಿವೃತ್ತ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್‌ ಹೇಗೆ ಮಹಿಳೆಯರು ಈಗಲೂ ಸಾಮಾಜಿಕವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬುದನ್ನು ಬಿಡಿಸಿ ಹೇಳಿದರು.

ಪ್ರಜಾವಾಣಿಯೊಂದಿಗೆ ಮಾತಿಗಿಳಿದ ಅವರು ಭಾರತೀಯ ಮಹಿಳೆಯರು ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸದೇ ಇರುವ ಕುರಿತು ವಿಶ್ಲೇಷಿಸಿದರು. ಯಾಕೆ ಹೀಗೆ ಎಂಬುದನ್ನು ಅವರ ಮಾತಿನಲ್ಲಿಯೇ ಕೇಳಿ..

.ನಮ್ಮ ಭಾರತೀಯ ಕುಟುಂಬದ ಚೌಕಟ್ಟೇ ಹಂಗಿದೆ. ಗಂಡ ಹೊಡೆದರು, ಬೈದರೂ, ಹೀಗಳೆದರೂ ಅದು ಸಹಜ ಎನ್ನುವ ಸ್ಥಿತಯಲ್ಲಿಯೇ ಇದೆ. ಬಹುತೇಕ ಮಹಿಳೆಯರಿಗೆ ಇದು ಸಹ ಗಂಡನ ’ಕರ್ತವ್ಯ‘ ಎಂತಲೇ ಭಾವಿಸಿರುತ್ತಾರೆ. ಸಂಸಾರದಲ್ಲಿ ಹೊಡೆತ ಬಡಿತ ಇದ್ದದ್ದೇ ಎಂದೇ ನಂಬಿರುತ್ತಾರೆ. ಅದೇ ಕಾರಣಕ್ಕೆ ದೌರ್ಜನ್ಯವನ್ನೂ ಒಪ್ಪಿಕೊಳ್ಳುತ್ತಾರೆ. ದೂರಬೇಕು ಎನ್ನುವುದೂ ಅವರ ಪ್ರಜ್ಞೆಗೆ ಬರುವುದಿಲ್ಲ‘ ಇದೇ ನಮ್ಮ ಮಹಿಳೆಯರು ಶೋಷಣೆಗೆ ಒಳಗಾಗುವ ಮೂಲ ಕಾರಣ.

ದೈಹಿಕ ಹಲ್ಲೆ ಮಾತ್ರವಲ್ಲ, ಮಾನಸಿಕ ಕ್ಷೋಭೆಯನ್ನೂ ದೌರ್ಜನ್ಯವೆಂದೇ ಪರಿಗಣಿಸಲಾಗುತ್ತದೆ. ನಿಮ್ಮನ್ನು ಹೀಗಳೆಯುವ, ನಿಮ್ಮನ್ನು ಕ್ಷೋಭೆಗೆ ಒಳಪಡಿಸುವ, ಅವಮಾನಿಸುವ, ಅನುಮಾನಿಸುವ ಯಾವುದೇ ವರ್ತನೆಯನ್ನೂ ಕೌಟುಂಬಿಕ ದೌರ್ಜನ್ಯಕ್ಕೆ ತರಬಹುದಾಗಿದೆ.

ಶೋಚನೀಯ ಸ್ಥಿತಿ ಎಂದರೆ ಈಗಲೂ ಹೆಣ್ಣುಮಕ್ಕಳು ತಮ್ಮ ಮೇಲೆ ಆಗುವ ಹಲ್ಲೆಯನ್ನು ಕಾಲು ಜಾರಿ ಬಿದ್ದೆವೆಂದೋ, ತಲೆಸುತ್ತಿ ಬಿದ್ದು ಗಾಯವಾಯಿತೆಂದೋ ಹೇಳುತ್ತಾರೆ. ಸುಟ್ಟ ಬರೆಗಳ ಗಾಯಗಳಿದ್ದಾಗಲೂ ಕಾವಲಿ ಕೈಜಾರಿತೆಂದು ಹೇಳುವವರಿದ್ದಾರೆ. 

ಹೀಗೆ ವೈದ್ಯರ ಬಳಿ ಹೋಗುವ ಪ್ರಸಂಗ ಬಂದಾಗಲಂತೂ ಮಹಿಳೆಯರು ವೈದ್ಯಕೀಯ ದಾಖಲಾತಿಯನ್ನು ಪಡೆಯಬೇಕು. ಪ್ರಕರಣ ದಾಖಲಿಸದಿದ್ದರೂ ಈ ವೈದ್ಯಕೀಯ ದಾಖಲಾತಿ ಇದ್ದಾಗ ಹಲ್ಲೆ ಮಾಡಿದ ಪುರುಷರು ಚೂರು ಹದ್ದುಬಸ್ತಿನಲ್ಲಿರುತ್ತಾರೆ. ಯಾವುದಕ್ಕೂ ಇನ್ನೊಮ್ಮೆ ಯೋಚಿಸತೊಡಗುತ್ತಾರೆ. ಮಹಿಳೆಯರು ಜಾಗೃತರಾಗಿದ್ದಾರೆ. ಅವರನ್ನು ಇನ್ನು ಬಲದಿಂದ ಹಣಿಯಲಾಗುವುದಿಲ್ಲ ಎಂಬ ಸಂದೇಶ ಒಂದು ಹರಡಿದರೂ ಸಾಕು, ಬಹುತೇಕ ಜನರು ಹಿಮ್ಮೆಟ್ಟುತ್ತಾರೆ. ಆದರೆ ನಮ್ಮಲ್ಲಿ ವೈದ್ಯರ ಬಳಿಯೂ ಅಷ್ಟೇ ಏಕೆ, ಅಮ್ಮ ಸಹೋದದರ ಬಳಿಯೂ ಸುಳ್ಳು ಹೇಳುತ್ತಾರೆ. ಗಂಡನ ಹಿಂಸೆಯ ಕುರಿತು ಮಾತಾಡುವುದೇ ಹೆಣ್ಣುಮಕ್ಕಳು ತಮಗೆ ಅವಮಾನ ಎಂದುಕೊಳ್ಳುತ್ತಾರೆ. ಈ ಯೋಚನಾ ಸರಣಿ ಬದಲಾಗಬೇಕಿದೆ. ಇದು ಗಂಡುಮಕ್ಕಳ ಅವಮಾನ. ಹೆಣ್ಣುಮಕ್ಕಳನ್ನು ಗೌರವಿಸದ ಪುರುಷರಿಗೆ ಆಗುವ ಅವಮಾನ ಎಂದುಕೊಳ್ಳಬೇಕು.

ದುಃಖದ ಸಂಗತಿಯೆಂದರೆ ಬಹುತೇಕ ಓದು ಬರೆಹ ಬಲ್ಲ ಮಹಿಳೆಯರೇ, ಮನೆಯಲ್ಲಿ ಶಾಂತಿ ಇರಲೆಂಬ ವಾದಿಂದ ಹಿಂಜರಿಯತ್ತಾರೆ. ಮತ್ತೆ ಮತ್ತೆ ಇಂಥ ದಬ್ಬಾಳಿಕೆಗೆ ಒಳಗಾಗುತ್ತಾರೆ. ದಬ್ಬಾಳಿಕೆ ಮಾಡುವ ಗಂಡುಮಕ್ಕಳಿಗೆ ಚಿಕಿತ್ಸೆಯ ಅಥವಾ ಸಮಾಲೋಚನೆಯ ಅಗತ್ಯವಿದ್ದಾಗಲೂ ಅವರ ಪುರುಷ ಅಹಮಿಕೆ ಬೆಳೆಯಲು ಆಸ್ಪದ ನೀಡುತ್ತಾರೆ. ಪುರುಷಾಹಂಕಾರದ ಅತಿದೊಡ್ಡ ಸಂಕೇತವೆಂದರೆ ಮಹಿಳೆಯರ ಮೇಲೆ ಕೈ ಮಾಡುವುದು, ನಿಯಂತ್ರಿಸಲು ಯತ್ನಿಸುವುದು. 

ಮಹಿಳೆಯರ ಸಂಬಳದ ಮೇಲೆ ನಿಯಂತ್ರಣ, ಸಾಲ, ಖರ್ಚು, ವೆಚ್ಚಗಳನ್ನು ನಿಯಂತ್ರಿಸುವುದು, ಅವಳ ಚಾರಿತ್ರ್ಯವನ್ನು ಪ್ರಶ್ನಿಸುವುದು, ಎದೆಗುಂದುವಂತೆ ಮಾಡುವುದು, ಹೆತ್ತವರೊಂದಿಗೆ ಮಾತಾಡದಂತೆ, ಸ್ನೇಹಿತರೊಂದಿಗೆ ಬೆರೆಯದಂತೆ ತಡೆಯುವುದು, ಇವೆಲ್ಲವೂ ಕೌಟುಂಬಿಕ ದೌರ್ಜನ್ಯಗಳೇ ಆಗಿವೆ.  

ಸ್ವಭಾವತಃ ಗಂಡುಮಕ್ಕಳು ದಬ್ಬಾಳಿಕೆ ಮಾಡುವವರೇ ಆಗಿದ್ದರೆ ಎಚ್ಚರದಿಂದ ನಿಭಾಯಿಸಬೇಕು. ಆಗಾಗ ದೌರ್ಜನ್ಯವೆಸಗುತ್ತಿದ್ದರೆ, ಮತ್ತೆ ಮತ್ತೆ ಪ್ರೀತಿಸುತ್ತ, ಮತ್ತೆ ಯಾವಾಗಲಾದರೂ ದೌರ್ಜನ್ಯ ಎಸಗುತ್ತಿದ್ದರೆ, ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂಬುದನ್ನು ಮನಗಾಣಬೇಕು. 

ಮಹಿಳೆಯರೆಲ್ಲ ನೆನಪಿಟ್ಟುಕೊಳ್ಳಬೇಕಿರುವುದು ಒಂದೇ ಮಾತು, ನಮ್ಮ ಆತ್ಮಗೌರವಕ್ಕೆ ಧಕ್ಕೆಯಾದರೆ, ದೈಹಿಕವಾಗಿ ಹಲ್ಲೆ ಮಾಡಿದರೆ ಅದು ದೌರ್ಜನ್ಯವೇ. ಅದು ಗಂಡ, ಸಹೋದರ ಅಥವಾ ತಂದೆಯೂ ಆಗಿರಬಹುದು. ತಾಯಿ, ಅತ್ತೆ ಅಥವಾ ಇನ್ನಾರಾದರೂ ಆಗಿರಬಹುದು. ಮೊದಲು ಆ ಬಗ್ಗೆ ಮಾತನಾಡುವುದು ಕಲಿಯಿರಿ. ಹಿಂಸೆಯನುಭವಿಸಿ ಎಂದು ಯಾವ ಸಮಾಜವೂ ಹೇಳುವುದಿಲ್ಲ. ಹಿಂಸೆಯನುಭವಿಸಲೆಂದು ಯಾರೂ ಹುಟ್ಟಿರುವುದಿಲ್ಲ. ಮಾತಾಡಿ ಅಗತ್ಯವಿದ್ದಾಗ ದೂರು ದಾಖಲಿಸಲೂ ಹಿಂಜರಿಯದಿರಿ‘ ಎಂದು ಹೇಳುತ್ತ ಮಾತು ಮುಗಿಸಿದರು. ಕೊನೆಯ ಎರಡು ವಾಕ್ಯಗಳು ನೆನಪಿನಲ್ಲಿ ಉಳಿದರೆ ಈ ಕೌಟುಂಬಿಕ ಹಿಂಸೆಯಿಂದ ದೂರ ಇರಬಹುದು ಎನ್ನುತ್ತ ನಕ್ಕರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT