ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

International Womens Day | ಸಾಬೀತುಗೊಳಿಸುವುದೇ ಸವಾಲು

Last Updated 7 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಸಾಧನೆಯ ಹಾದಿ ಮಹಿಳೆಯರಿಗೆ ಸಹಜ, ಸರಳವಾಗಿರುವುದೇ ಇಲ್ಲ. ಸಾಮಾಜಿಕ ಸಿದ್ಧಚೌಕಟ್ಟನ್ನು ಮೀರುತ್ತ ತಮ್ಮದೊಂದು ಅಸ್ಮಿತೆಯನ್ನು ಸ್ಥಾಪಿಸಬೇಕಾಗುತ್ತದೆ. ಅವಳಿ ದೋಣಿಗಳಲ್ಲಿ ಯಾನ ಮಾಡಿದಂತೆ ಈ ಮಾರ್ಗ ಕಸರತ್ತಿನಿಂದ ಕೂಡಿರುತ್ತದೆ. ಸಮತೋಲನ ತಪ್ಪಿದರೆ ತಾನು ಕಳೆದುಹೋಗುವುದಲ್ಲದೇ ತನ್ನವರನ್ನೂ ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಇಂಥ ಸಂದರ್ಭಗಳಲ್ಲಿಯೂ ತನ್ನ ಹೃದಯದ ಮಾತನ್ನು ಕೇಳುತ್ತ, ತಾನೂ ಬೆಳೆದು, ಉಳಿದವರಿಗೂ ಬೆಳೆಯುವ ಅವಕಾಶ ಮಾಡಿಕೊಟ್ಟ ಹಲವಾರು ಉದಾಹರಣೆಗಳು ನಮ್ಮಲ್ಲಿವೆ. ಸಾಧನೆಯ ಕನಸುಗಳಿಗೆ ಪ್ರೋತ್ಸಾಹ ನೀಡುತ್ತ, ಸಮಾನತೆಗಿಂತಲೂ ಹೆಚ್ಚಾಗಿ ಅವಶ್ಯವಿದ್ದಷ್ಟು ಕಸುವು ತುಂಬುವ ಕೆಲಸ ಅವಕಾಶಗಳನ್ನು ನೀಡುತ್ತ, ಪ್ರೋತ್ಸಾಹಿಸುತ್ತ, ಸಹಭಾಗಿತ್ವವನ್ನು ನೀಡುತ್ತ ಹೋಗಬೇಕಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನವೂ ಪೂರಕವಾಗಿ ನಿಲ್ಲಲಿದೆ. ಲಿಂಗ ತಾರತಮ್ಯ ತಡೆಯುವುದೇ ಈ ವರ್ಷದ ಆಶಯ.

**

ಧಾರಾವಾಡದಲ್ಲಿದ್ದ ‘ಆವಿಷ್ಕಾರ ಫಿಲ್ಮ್ ಸೊಸೈಟಿ’ಯ ಮೂಲಕ ಗಿರೀಶ್ ಕಾಸರವಳ್ಳಿ ಹಾಗೂ ಜಗತ್ತಿನ ಶ್ರೇಷ್ಠ ನಿರ್ದೇಶಕರ ಸಿನಿಮಾಗಳನ್ನು ವೀಕ್ಷಿಸುವ ಅವಕಾಶ ಸಿಕ್ಕಿತು. ಆಗಲೂ ನನ್ನ ಯೋಚನೆ ಸಿನಿಮಾದಲ್ಲಿರುವ ಪ್ರತಿ ದೃಶ್ಯ ಸೆರೆ ಹಿಡಿದ ವೈಖರಿಯ ಬಗೆಗೇ ಇರುತ್ತಿತ್ತು. ನಂತರ ಏಳನೇ ಕ್ಲಾಸಿನಲ್ಲಿ ಪಕ್ಷಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಆಸಕ್ತಿ ತೋರಿಸಿದ್ದೆ. ‘ನಾರ್ತ್‌ ಕರ್ನಾಟಕ ಬರ್ಡರ್ಸ್‌ ನೆಟ್‌ವರ್ಕ್‌‘ ಎನ್ನುವ ತಂಡವು ನನ್ನ ಛಾಯಾಗ್ರಹಣದ ಆಸಕ್ತಿಗೆ ಪ್ರೋತ್ಸಾಹ ನೀಡಿತ್ತು. ನನ್ನೂರು ಗೋಕರ್ಣ. ಬೇಸಿಗೆಯ ಭರಪೂರ ರಜೆಗಳನ್ನು ಅಲ್ಲಿಯೇ ಕಳೆದಿದ್ದೇನೆ. ಚಂದದ ಊರನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಬೇಕು ಅಂತ ಚಿಕ್ಕವಳಿದ್ದಾಗೆಲ್ಲ ತೀವ್ರವಾಗಿ ಅನಿಸಿತ್ತು. ಇವೆಲ್ಲವೂ ನನ್ನನ್ನು ಸ್ಥಿರಚಿತ್ರ ಛಾಯಾಗ್ರಾಹಕಿ ಆಗುವಂತೆ ಪ್ರೇರೇಪಿಸಿದವು.

‘ಸೂಜಿದಾರ’, ‘ಅಮೃತ ಅಪಾರ್ಟ್‌ಮೆಂಟ್ಸ್‌ ’ ಹಾಗೂ ‘ಆ್ಯಕ್ಟ್‌ 1978’ ಸಿನಿಮಾಗಳಿಗೆ ಸ್ಥಿರಚಿತ್ರ ಛಾಯಾಗ್ರಾಹಕಿಯಾಗಿ ಕೆಲಸ ಮಾಡಿದ್ದೇನೆ. ಒಂದಷ್ಟು ಯೂಟ್ಯೂಬ್‌ ಚಾನೆಲ್‌ಗಳಿಗೆ ಹಾಗೂ ಕಿರುಚಿತ್ರಗಳಿಗೆ ಕ್ಯಾಮೆರಾವುಮೆನ್‌ ಆಗಿಯೂ ಕೆಲಸ ಮಾಡಿದ್ದೇನೆ. ಹೆಣ್ಣುಮಕ್ಕಳು ಪ್ರತಿ ಕ್ಷಣವೂ ತಮಗಿರುವ ವೃತ್ತಿಬದ್ಧತೆ, ಕೌಶಲವನ್ನು ಸಾಬೀತು ಮಾಡಬೇಕು ಅನ್ನೋದೇ ನಿಜವಾದ ಸವಾಲು. ‘ಹೆಣ್ಣುಮಕ್ಕಳಲ್ವ, ಸೆಲ್ಫಿ ತೆಗೆದುಕೊಂಡು ಇರ್ತಾರೆ ಅಂತ ಹೇಳಿದವರೇ ‘ಈ ಕೊಡಿ ಪ್ರಾಜೆಕ್ಟ್‌, ಮುಗಿಸಿಕೊಂಡು ಬರ್ತಾರೆ’ ಅಂತ ಹೇಳುವ ಮಟ್ಟಕ್ಕೆ ಕೆಲಸ ಮಾಡಿ ತೋರಿಸಬೇಕು.

ಇರುವ ಸಾಮರ್ಥ್ಯವನ್ನು ಕಡೆಗಣ್ಣಲ್ಲಿ ಕಂಡಾಗ, ತಾಂತ್ರಿಕವಾಗಿ ಅಸಾಧ್ಯವಾದದ್ದನ್ನು ಕೇಳಿ ಕೌಶಲಕ್ಕೆ ಸವಾಲು ಎಸೆದಾಗ, ಮಾಡಿದ ಕೆಲಸಕ್ಕೆ ದುಡ್ಡು ಕೊಡಲು ಸತಾಯಿಸಿದಾಗೆಲ್ಲ ಬೇಜಾರಾಗಿದ್ದಿದೆ. ಆದರೆ, ಅದರಿಂದ ಕ್ಯಾಮೆರಾದೆಡೆಗೆ ಇರುವ ಪ್ರೀತಿ ಎಳ್ಳಷ್ಟು ಕಡಿಮೆಯಾಗಿಲ್ಲ.

ಎಲೆಕ್ಟ್ರಾನಿಕ್ಸ್‌ ಮಾಧ್ಯಮದಲ್ಲಿ ಎಂ.ಎಸ್ಸಿ ಮಾಡಿದ್ದೇನೆ. ಕಲಿಯುವಾಗಲೂ ನನ್ನ ತಲೆಯಲ್ಲಿ ಇದ್ದಿದ್ದು ಕ್ಯಾಮೆರಾ ಹಿಡಿಯುವ ಕಾಯಕವೇ. ಹಾಗಾಗಿ ಬೇರೆ ಯಾವ ವೃತ್ತಿಯ ಬಗ್ಗೆಯೂ ಯೋಚನೆಯನ್ನೂ ಮಾಡಿಲ್ಲ. ಸದ್ಯಕ್ಕೆ ‘ಡಿಮ್‌ ಎನ್‌ ಡಿಪ್‌‘ ಎಂಬ ಪ್ರೊಡಕ್ಷನ್‌ ಹೌಸ್‌ ಮಾಡಿಕೊಂಡಿದ್ದೀನಿ. ಮುಂದೆ ಸಾಕ್ಷ್ಯಚಿತ್ರ, ಸಿನಿಮಾ ಮಾಡುವ ಯೋಚನೆಯೂ ಇದೆ. ಸಿನಿಮಾಟೋಗ್ರಾಫರ್‌ ಆಗುವ ಪ್ರಕ್ರಿಯೆಯಲ್ಲಿದ್ದೇನೆ ಮತ್ತು ಆಗಿಯೇ ತೀರುತ್ತೇನೆ.

-ನಿರೂಪಣೆ: ರೂಪಾ ಕೆ.ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT