ಬುಧವಾರ, ಮಾರ್ಚ್ 29, 2023
27 °C

International Womens Day | ಕಲೆಗೆ ಲಿಂಗ ಭಾಷೆಯ ಹಂಗಿಲ್ಲ...

ವಾರಿಜಾಶ್ರೀ ವೇಣುಗೋಪಾಲ್ Updated:

ಅಕ್ಷರ ಗಾತ್ರ : | |

ಸಾಧನೆಯ ಹಾದಿ ಮಹಿಳೆಯರಿಗೆ ಸಹಜ, ಸರಳವಾಗಿರುವುದೇ ಇಲ್ಲ. ಸಾಮಾಜಿಕ ಸಿದ್ಧಚೌಕಟ್ಟನ್ನು ಮೀರುತ್ತ ತಮ್ಮದೊಂದು ಅಸ್ಮಿತೆಯನ್ನು ಸ್ಥಾಪಿಸಬೇಕಾಗುತ್ತದೆ. ಅವಳಿ ದೋಣಿಗಳಲ್ಲಿ ಯಾನ ಮಾಡಿದಂತೆ ಈ ಮಾರ್ಗ ಕಸರತ್ತಿನಿಂದ ಕೂಡಿರುತ್ತದೆ. ಸಮತೋಲನ ತಪ್ಪಿದರೆ ತಾನು ಕಳೆದುಹೋಗುವುದಲ್ಲದೇ ತನ್ನವರನ್ನೂ ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಇಂಥ ಸಂದರ್ಭಗಳಲ್ಲಿಯೂ ತನ್ನ ಹೃದಯದ ಮಾತನ್ನು ಕೇಳುತ್ತ, ತಾನೂ ಬೆಳೆದು, ಉಳಿದವರಿಗೂ ಬೆಳೆಯುವ ಅವಕಾಶ ಮಾಡಿಕೊಟ್ಟ ಹಲವಾರು ಉದಾಹರಣೆಗಳು ನಮ್ಮಲ್ಲಿವೆ. ಸಾಧನೆಯ ಕನಸುಗಳಿಗೆ ಪ್ರೋತ್ಸಾಹ ನೀಡುತ್ತ, ಸಮಾನತೆಗಿಂತಲೂ ಹೆಚ್ಚಾಗಿ ಅವಶ್ಯವಿದ್ದಷ್ಟು ಕಸುವು ತುಂಬುವ ಕೆಲಸ ಅವಕಾಶಗಳನ್ನು ನೀಡುತ್ತ, ಪ್ರೋತ್ಸಾಹಿಸುತ್ತ, ಸಹಭಾಗಿತ್ವವನ್ನು ನೀಡುತ್ತ ಹೋಗಬೇಕಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನವೂ ಪೂರಕವಾಗಿ ನಿಲ್ಲಲಿದೆ. ಲಿಂಗ ತಾರತಮ್ಯ ತಡೆಯುವುದೇ ಈ ವರ್ಷದ ಆಶಯ.

**

ಕಾಲ ಬದಲಾಗಿದೆ. ಕಲೆ ವಿಷಯಕ್ಕೆ ಬಂದರೆ ಇಲ್ಲಿ ಲಿಂಗ ತಾರತಮ್ಯ ಇಲ್ಲ. ಹೆಣ್ಣುಮಕ್ಕಳು ವೇದಿಕೆ ಹತ್ತುವುದೇ ನಿಷಿದ್ಧ ಎಂಬ ಕಾಲವೊಂದಿತ್ತು. ಈಗ ಯಾವ ಕ್ಷೇತ್ರದಲ್ಲಿ ಮಹಿಳೆ ಇಲ್ಲ ಹೇಳಿ? ಮಹಿಳೆಗೆ ದೈಹಿಕ ತಾಕತ್ತು ಪುರುಷರಿಗಿಂತ ಕಡಿಮೆ ಇರಬಹುದು. ಆದರೆ ಪ್ರತಿಭೆ, ಅರ್ಹತೆ, ಸಾಧನೆ ಸಿದ್ಧಿ.. ಯಾವುದರಲ್ಲಿ ಕಮ್ಮಿ ಹೇಳಿ?

ವೃತ್ತಿ, ಪ್ರವೃತ್ತಿ ಏನೇ ಇರಲಿ, ಈಗ ಎಲ್ಲರಿಗೂ ಅವಕಾಶ ಇದೆ. ಇದನ್ನು ನನ್ನ ವೃತ್ತಿಯಲ್ಲಿ ಹಲವು ಸಂದರ್ಭಗಳಲ್ಲಿ ಗುರುತಿಸಿದ್ದೇನೆ. ಸಂಗೀತ ಕಛೇರಿ ಸಂಬಂಧ ನಾನು ಎಷ್ಟೋ ಸಲ ಒಬ್ಬಳೇ ಹೋಗಬೇಕಾಗುತ್ತೆ. ಶೇ 90ರಷ್ಟು ಪ್ರವಾಸಗಳಲ್ಲಿ ನಾನು ಯಾರ ಜೊತೆಗೆ ಹೋಗ್ತೀನಿ ಅನ್ನೋದೇ ಗೊತ್ತಿರಲ್ಲ. ಅಲ್ಲಿ ಹೋಗಿ ಭೇಟಿಯಾಗುವ ಸಂಘಟಕರ ಪರಿಚಯ ಇರಲ್ಲ. ಸಮಯದ ಪರಿವೇ ಇಲ್ಲದೆ ನಮ್ಮ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ವಿದೇಶಗಳಿಗೆ ಹೋದಾಗಲೂ ಅಷ್ಟೆ. ಹೊಸ ಜಾಗ, ಹೊಸ ಜನ, ಹೊಸ ಅನುಭವ ಆಗುತ್ತೆ. ಎಲ್ಲೂ ನನಗೆ ಲಿಂಗ ತಾರತಮ್ಯದ ಅರಿವೇ ಆಗಿಲ್ಲ. ಸಂಗೀತಕ್ಕೆ ಲಿಂಗ, ಭಾಷೆ, ಕಾಲ, ದೇಶದ ಹಂಗಿಲ್ಲ. ಸಂಗೀತಕ್ಕಿರುವುದು ಒಂದೇ ಭಾಷೆ. ಅದು ಹೃದಯದ ಭಾಷೆ. ಜನರ ನಡುವೆ ಸೌಹಾರ್ದ ಸಂಬಂಧ ಏರ್ಪಡಿಸುವ ವಿಶ್ವ ಭಾಷೆ.

ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬೇಕಾದರೆ ನಾವು ಸಾಹಸ, ಸಾಧನೆ ಮಾಡಲೇಬೇಕಾಗುತ್ತದೆ. ಇಷ್ಟೆಲ್ಲ ಇದ್ದರೂ ಒಬ್ಬ ಹೆಣ್ಣಾಗಿ, ನಾವು ಮಧ್ಯರಾತ್ರಿ ಒಬ್ಬರೇ ಕ್ಯಾಬ್‌ ಮಾಡಿಕೊಂಡು ಹೋಗುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ನಮ್ಮ ಬಯಲಾಜಿಕಲ್‌ ಸಿಸ್ಟಮ್‌ ಹಾಗೇ ಇದೆ. ನನಗೆ ಒಳ್ಳೆಯ ಅವಕಾಶ ಸಿಕ್ಕಿದೆ ಎಂದಾದರೆ ನಾನು ಹುಷಾರಿಲ್ಲ, ಪೀರಿಯಡ್ಸ್‌ ಆಗಿದೆ.. ಈ ಎಲ್ಲ ಮಹಿಳಾ ಸಂವೇದನೆಯ ವಿಚಾರವನ್ನು ಲೆಕ್ಕಕ್ಕೇ ಇಟ್ಟುಕೊಳ್ಳಲ್ಲ. ಗುರಿ ಸಾಧನೆಯತ್ತ ಮುನ್ನುಗ್ಗುತ್ತಲೇ ಇರುತ್ತೇನೆ. ಸಂಗೀತ ಎಂದರೆ ದೇವರ ಸಮಾನ ಎಂಬುದು ನನ್ನ ಭಾವನೆ. 

ಸಂಗೀತ ಕಛೇರಿಗಳಿಗೆ ಅವಕಾಶ ಸಿಗೋ ವಿಚಾರ ಬಂದರೆ ಸಂಘಟಕರು ನಮ್ಮ ಪ್ರತಿಭೆ ಆಧರಿಸಿ ಅವಕಾಶ ಕೊಡಬೇಕು. I am a strong advocate for equality. ಇಲ್ಲಿ ಪುರುಷ–ಮಹಿಳೆ ಎಂಬ ಭೇದ ಸಲ್ಲದು. ನನ್ನ ತಂದೆ–ತಾಯಿ ಇಬ್ಬರೂ ಕಲಾವಿದರಾಗಿರುವುದರಿಂದ ಮನೆಯಲ್ಲೂ ನನಗೆ ಯಾವುದೇ ನಿರ್ಬಂಧ ಇಲ್ಲ. ಕಲೆಯ ವಿಚಾರದಲ್ಲಿ ಮಹಿಳೆ–ಪುರುಷ ಎಂಬ ಭೇದಭಾವ ಸಲ್ಲದು. 

–ನಿರೂಪಣೆ: ಉಮಾ ಅನಂತ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು