ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಸೈಬರ್‌ಲೋಕದಲ್ಲಿ ಮಹಿಳೆ ಎಷ್ಟು ಸುರಕ್ಷಿತಳು?

Last Updated 11 ಅಕ್ಟೋಬರ್ 2020, 13:19 IST
ಅಕ್ಷರ ಗಾತ್ರ

ಇವತ್ತು 'ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನ', ಈ ಸಂದರ್ಭದಲ್ಲಿ 'ಹುಡುಗಿಯರನ್ನು ಬೆಂಬಲಿಸಿ. ಹುಡುಗಿಯರ ಮಾತುಗಳನ್ನು ಕೇಳಿ. ಹುಡುಗಿಯರಿಗೆ ತಮ್ಮ ಕನಸುಗಳನ್ನು ನನಸು ಮಾಡಲು ಸಹಾಯ ಮಾಡಿ' ಎಂದು ಯುನಿಸೆಫ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಟ್ವೀಟ್ ಮಾಡಿದ್ದಾರೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಸಚಿವೆ ಸ್ಮೃತಿ ಇರಾನಿ 'ನಮ್ಮ ಸಮಾಜದಲ್ಲಿ ಲಿಂಗ ಸಮಾನತೆಯನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡೋಣ ಮತ್ತು ‘ಬೇಟಿ ಬಚಾವೊ ಬೇಟಿ ಪಡಾವೊ’ ಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ ಎಂದು ಟ್ವೀಟಿಸಿದ್ದಾರೆ. ಹೆಣ್ಣನ್ನು ಗೌರವಿಸುವ, ಆಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಪೋಸ್ಟ್‌ಗಳು #DayoftheGirl ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ರೆಂಡ್ ಆಗುತ್ತಿವೆ.

ಹಾಥರಸ್‌ ಅತ್ಯಾಚಾರ ಪ್ರಕರಣ ಸುದ್ದಿಯಾದಾಗ ದೇಶದ ಹಲವಾರು ಮಂದಿ ಅತ್ಯಾಚಾರದ ವಿರುದ್ಧ ದನಿಯೆತ್ತಿದ್ದರು. ಆಕ್ರೋಶದ ದನಿ, ಪ್ರತಿಭಟನೆಗಳು ಇನ್ನೂ ಸಕ್ರಿಯವಾಗಿರುವ ಹೊತ್ತಿನಲ್ಲಿಯೇ ರೇಪ್ ಬೆದರಿಕೆಯ ಕಾಮೆಂಟ್‌ಗಳು ಸುದ್ದಿಯಾಗಿವೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದನಾಯಕ ಮಹೇಂದ್ರ ಸಿಂಗ್ ಧೋನಿ ಮಗಳಿಗೆ ರೇಪ್ ಬೆದರಿಕೆ!.ಬುಧವಾರ ಐಪಿಎಲ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಪಂದ್ಯ ಸೋತಿದ್ದಕ್ಕೆ ಸೋ ಕಾಲ್ಡ್ ಅಭಿಮಾನಿ ಇನ್‌ಸ್ಟಾಗ್ರಾಂನಲ್ಲಿ ಕಾಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ರೀತಿ ಇದಾಗಿತ್ತು.ಮಗಳ ದಿನ, ಅಮ್ಮನ ದಿನ, ಮಹಿಳಾ ದಿನ ಹೀಗೆ ಹೆಣ್ಣುಮಕ್ಕಳಿಗೆ ಸಂಬಂಧಿಸಿದ ದಿನಾಚರಣೆ ವೇಳೆ ಆಕೆಯನ್ನು ಗೌರವಿಸುವ ವಿವಿಧ ರೀತಿಯ ಪೋಸ್ಟ್, ನುಡಿ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸುತ್ತವೆ. ಆದರೆ ಇತರ ದಿನಗಳಲ್ಲಿ? .

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುವ ಕುಹಕ, ಲೇವಡಿ, ಬೆದರಿಕೆ ಪೋಸ್ಟ್‌ಗಳು ಮಿತಿ ಮೀರುತ್ತಿವೆ. ಯಾವುದೇ ಹೆಣ್ಣುಮಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ ಅದನ್ನು ವಿರೋಧಿಸುವರು ಆಕೆಯನ್ನು ಕೆಟ್ಟದಾಗಿ ಹಂಗಿಸುವ ಮೂಲಕ ದಾಳಿಮಾಡುತ್ತಾರೆ. ಪರ ವಿರೋಧ ಚರ್ಚೆಗಳಲ್ಲಿ ವಿಷಯದ ಮಂಡನೆ, ತರ್ಕ ನಗಣ್ಯವಾಗಿ ವೈಯುಕ್ತಿಕ ಮಟ್ಟದ ದಾಳಿ ಮುಂದುವರಿಯುತ್ತದೆ. ಇಲ್ಲಿ ಅಭಿಪ್ರಾಯಗಳಿಗಿಂತ ಅದನ್ನು ವ್ಯಕ್ತಪಡಿಸಿದ ವ್ಯಕ್ತಿಯ ಲಿಂಗ ಪ್ರಧಾನ ಪಾತ್ರ ವಹಿಸುವುದು ದುರದೃಷ್ಟಕರ.

ಜಗತ್ತಿನಾದ್ಯಂತ ಜನರು ಇಂಟರ್ನೆಟ್ ಬಳಸಲು, ಮಾಹಿತಿ ಹುಡುಕಲು, ಪ್ರಕಟಿಸಲು ಹೀಗೆ ಹಲವಾರು ಕಾರ್ಯಗಳಿಗೆ ಮೂಲವಾದ ವೆರ್ಲ್ಡ್ ವೈಡ್ ವೆಬ್ (www) ಜಾಲತಾಣ 31 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ, ಆ ಜಾಲತಾಣದ ರೂವಾರಿ ಬ್ರಿಟಿಷ್ ವಿಜ್ಞಾನಿ ಬರ್ನರ್ಸ್- ಲೀ- ಈ ವೆಬ್, ಮಹಿಳೆ ಮತ್ತು ಹೆಣ್ಣುಮಕ್ಕಳಿಗೆ ಸೂಕ್ತ ಜಾಗವಲ್ಲ ಎಂದು ಅಭಿಪ್ರಾಯಪಟ್ಟಿದ್ದರು.

ಪ್ರಸ್ತುತದಲ್ಲಿರುವ ಸೈಬರ್ ಅಪರಾಧಗಳ ಸಂಖ್ಯೆ ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಲೈಂಗಿಕ ದೌರ್ಜನ್ಯ, ಟ್ರೋಲ್, ಅತ್ಯಾಚಾರ ಮತ್ತು ಕೊಲೆ ಬೆದರಿಕೆ, ಖಾಸಗಿ ಚಿತ್ರಗಳನ್ನು ಬಹಿರಂಗಪಡಿಸುವ ಬೆದರಿಕೆ ಹೀಗೆ ಲಿಂಗ ಆಧಾರಿತ ಬೆದರಿಕೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಪ್ಲಾನ್ ಇಂಟರ್‌ನ್ಯಾಷನಲ್ ಜಾಗತಿಕ ಮಟ್ಟದಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಶೇ 58 ಮಂದಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟರ್, ವಾಟ್ಸ್‌ಆ್ಯಪ್, ಟಿಕ್‌ಟಾಕ್ ಮೊದಲಾದ ಸಾಮಾಜಿಕ ತಾಣಗಳಲ್ಲಿ ಆನ್‌ಲೈನ್ ಕಿರುಕುಳಕ್ಕೊಳಗಾಗುತ್ತಾರೆ.

ಯುರೋಪ್‌ನಲ್ಲಿ ಶೇಕಡಾ 63, ಲ್ಯಾಟಿನ್ ಅಮೆರಿಕ -60%. ಏಷ್ಯಾ-ಪೆಸಿಫಿಕ್‌ವಲಯದಲ್ಲಿ ಶೇ 58, ಆಫ್ರಿಕಾದಲ್ಲಿ ಶೇ 54 ಉತ್ತರ ಅಮೆರಿಕದಲ್ಲಿ ಶೇ 52 ರಷ್ಟು ಮಹಿಳೆಯರು ಆನ್‌ಲೈನ್ ಕಿರುಕುಳಕ್ಕೊಳಗಾಗುತ್ತಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.
ದೈಹಿಕ ಅಥವಾ ಲೈಂಗಿಕ ಕಿರುಕುಳ ಬೆದರಿಕೆಗೊಳಗಾದವರ ಸಂಖ್ಯೆ ಶೇ 47, ಅದೇ ವೇಳೆ ಶೇ 57ರಷ್ಟು ಮಂದಿ ಆನ್‌ಲೈನ್‌ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆಗೊಳಗಾಗುತ್ತಾರೆ. ಎಲ್‌ಜಿಬಿಟಿ ಸಮುದಾಯದವರಿಗೂ ಈ ಲಿಂಗ ಆಧಾರಿತ ನಿಂದನೆ ತಪ್ಪಿದ್ದಲ್ಲ.

ಈ ರೀತಿಯ ನಿಂದನೆ ಹೆಚ್ಚಾಗಿ ಕಂಡುಬರುವುದು ಫೇಸ್‌ಬುಕ್‌ನಲ್ಲಿ. ಇಲ್ಲಿ ಹೆಣ್ಣು ಮಕ್ಕಳ ಮೇಲಿನ ಆನ್‌ಲೈನ್ ಕಿರುಕುಳ ಪ್ರಮಾಣ ಶೇ 39 ಆಗಿದೆ. ಅದೇ ವೇಳೆ ಇನ್‌ಸ್ಟಾಗ್ರಾಂನಲ್ಲಿ ಶೇ 23, ವಾಟ್ಸಾಪ್‌ನಲ್ಲಿ ಶೇ 14, ಸ್ನ್ಯಾಪ್ ಚಾಟ್‌ನಲ್ಲಿ ಶೇ 10, ಟ್ವಿಟರ್‌ನಲ್ಲಿ ಶೇ 9 ಮತ್ತು ಟಿಕ್‌ಟಾಕ್‌ನಲ್ಲಿ ಶೇ 6 ರಷ್ಟಿದೆ.

ಎನ್‌ಸಿಆರ್‌ಬಿ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಮಹಿಳೆಯರ ವಿರುದ್ಧದ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ. 2017ರಲ್ಲಿ 4,242 ಸೈಬರ್ ಅಪರಾಧಗಳು ದಾಖಲಾಗಿದ್ದು 2018ರಲ್ಲಿ ಇದು 6,030ಕ್ಕೆ ಏರಿಕೆ ಆಗಿದೆ.

ಏತನ್ಮಧ್ಯೆ ಕೊರೊನಾವೈರಸ್ - ಲಾಕ್‍ಡೌನ್ ಅವಧಿಯಲ್ಲಿ ಸೈಬರ್‌ ಅಪರಾಧಗಳ ಸಂಖ್ಯೆ ಮತ್ತಷ್ಟು ಏರಿಕೆ ಆಗಿದೆ.ಫೆಬ್ರುವರಿಯಲ್ಲಿ 27, ಮಾರ್ಚ್‌ನಲ್ಲಿ 37, ಏಪ್ರಿಲ್‌ನಲ್ಲಿ 54 ಪ್ರಕರಣಗಳು ವರದಿ ಆಗಿದ್ದು, ಜೂನ್ ತಿಂಗಳ ಹೊತ್ತಿಗೆ ಪ್ರಕರಣಗಳ ಸಂಖ್ಯೆ 100ಕ್ಕೇರಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ.

25 ಕೋಟಿ ಮಹಿಳೆಯರಲ್ಲಿ ಶೇ 80 ರಷ್ಟು ಜನರು ಸೈಬರ್ ಅಪರಾಧಗಳಾದ ಬ್ಲ್ಯಾಕ್‌ಮೇಲಿಂಗ್, ಖಾಸಗಿ ಚಿತ್ರಗಳ ಬಹಿರಂಗದ ಬೆದರಿಕೆ, ತಿರುಚಲ್ಪಟ್ಟ ಚಿತ್ರ (ಮಾರ್ಫಿಂಗ್), ಮಾನಹಾನಿ, ಸೈಬರ್ ಸ್ಟಾಕಿಂಗ್‌ನ ಸಂತ್ರಸ್ತರಾಗಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಯಾರಿಗೆ ಯಾರನ್ನು ಬೇಕಾದರೂ ಲೇವಡಿ ಮಾಡುವ, ವೈಯಕ್ತಿಕ ಬದುಕಿನ ಬಗ್ಗೆ ದಾಳಿ ಮಾಡುವ ಹಕ್ಕು ಇದೆ ಎಂದು ನಂಬಿರುವ ಸಮಾಜದಲ್ಲಿ ನಾವಿಂದು ಬದುಕುತ್ತಿದ್ದೇವೆ. ಟ್ರೋಲ್, ಬೆದರಿಕೆ ಮೂಲಕ ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಸಾಮಾಜಿಕ ಮಾಧ್ಯಮಗಳಲ್ಲಿ ಎಗ್ಗಿಲ್ಲದೆ ಸಾಗುತ್ತಿದೆ. ಬ್ಲಾಕ್ ಮಾಡಿ, ರಿಪೋರ್ಟ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾ ಖಾತೆಗಳನ್ನು ಬಂದ್ ಮಾಡಬಹುದು, ಆದರೆ ಕೆಟ್ಟ ಮನಸ್ಥಿತಿಗಳಿಗೆ ಕಡಿವಾಣ ಹಾಕಲು ವರ್ಚುವಲ್ ಲೋಕದಲ್ಲಿ ಸಾಧ್ಯವಾಗುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT