ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಗರ್ಭಪಾತ ಮಹಿಳೆಯರಿಗೆ ಎಷ್ಟು ಪ್ರಯೋಜನ?

Last Updated 16 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಐದು ತಿಂಗಳ ಗರ್ಭಿಣಿ ಲಕ್ಷ್ಮಿ ತಪಾಸಣೆಗೆಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದಾಗ ವೈದ್ಯರು ಸ್ಕ್ಯಾನ್‌ ಮಾಡಿಸಿಕೊಳ್ಳಲು ಸಲಹೆ ನೀಡಿದರು. ಸ್ಕ್ಯಾನ್‌ ಮಾಡಿಸಿದಾಗ 26 ವಾರಗಳ ಭ್ರೂಣದಲ್ಲಿ ಅನನ್‌ಸೆಫೆಲಿ (ಮಿದುಳು ಬೆಳವಣಿಗೆಯಾಗದೇ ಇರುವ) ನೂನ್ಯತೆ ಇದೆಯೆಂದು ವರದಿ ಬಂತು. ಅನನ್‌ಸೆಫೆಲಿ ನೂನ್ಯತೆ ಹೊಂದಿದ ಮಗು ಜೀವಂತವಾಗಿರುವುದಿಲ್ಲ ಮತ್ತು 20 ವಾರದ ಅವಧಿ ಮೀರಿರುವುದರಿಂದ ಇದನ್ನು ಗರ್ಭಪಾತ ಕೂಡ ಮಾಡಲು ಸಾಧ್ಯವಿಲ್ಲ ಎಂದು ಸ್ತ್ರೀ ರೋಗ ಹಾಗೂ ಪ್ರಸೂತಿ ವೈದ್ಯರು ಹೇಳಿದಾಗ ಹಳ್ಳಿಯವಳಾದ ಲಕ್ಷ್ಮಿಗೆ ಆಘಾತವಾಯಿತು. ಆದರೆ ಕಳೆದ ಮಾರ್ಚ್‌ನಲ್ಲಿ ಅಂಗೀಕರಿಸಲಾಗಿರುವ ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದಾಗಿ ಇಂತಹ ನೂನ್ಯತೆ ಹೊಂದಿದ ಭ್ರೂಣವನ್ನು ತೆಗೆಸಲು ಯಾವುದೇ ನಿರ್ಬಂಧ ಇಲ್ಲ. ಆದರೆ ರಾಜ್ಯ ವೈದ್ಯಕೀಯ ಮಂಡಳಿ ಈ ಗರ್ಭಪಾತ ಮಾಡುವ ಅಗತ್ಯವಿದೆ ಎಂದು ದೃಢಿಕರಿಸಬೇಕಾಗುತ್ತದೆ.

***

ರಿಯಾ ತನ್ನ ಸ್ನೇಹಿತನೊಂದಿಗೆ ಲಿವ್‌–ಇನ್‌ ಸಂಬಂಧದಲ್ಲಿರುವ ಯುವತಿ. ಮುನ್ನೆಚ್ಚರಿಕೆ ವಹಿಸಿದರೂ ಗರ್ಭ ನಿರೋಧಕದ ವೈಫಲ್ಯದಿಂದ ಆಕೆಗೆ ಗರ್ಭ ನಿಂತಿತು. ಆದರೆ ಅವಳು ಅವಿವಾಹಿತಳಾಗಿರುವುದರಿಂದ ವೈದ್ಯಕೀಯ ಗರ್ಭಪಾತ ಕಾಯ್ದೆಯ ಪ್ರಕಾರ ಗರ್ಭಪಾತಕ್ಕೆ ಅರ್ಹಳಲ್ಲ ಎಂದು ವೈದ್ಯರು ಹೇಳಿ ಕಳಿಸಿದ್ದರು. ಈಗ ಹೊಸ ಕಾಯ್ದೆ ತಿದ್ದುಪಡೆಯಲ್ಲಿ ‘ವಿವಾಹಿತ ಮಹಿಳೆ’ ಎಂಬ ಕರಾರನ್ನು ತೆಗೆದು ಹಾಕಲಾಗಿದೆ. ಹೀಗಾಗಿ ಗರ್ಭನಿರೋಧಕ ವೈಫಲ್ಯದಿಂದ ಗರ್ಭಿಣಿಯಾದ ಯಾವುದೇ ಮಹಿಳೆ ಕಾನೂನುಬದ್ಧವಾಗಿ ಗರ್ಭಪಾತ ಮಾಡಿಸಿಕೊಳ್ಳಬಹುದು.

***

16 ವರ್ಷದ ಹುಡುಗಿಯೊಬ್ಬಳು ಅತ್ಯಾಚಾರಕ್ಕೆ ಒಳಗಾದಳು. ಹೆದರಿಕೆಯಿಂದ ಈ ವಿಷಯವನ್ನು ತನ್ನ ತಾಯಿಗೆ ಹೇಳದೆ ಮುಚ್ಚಿಟ್ಟಳು. ಕೆಲವು ತಿಂಗಳುಗಳ ನಂತರ ತಾಯಿ ಮಗಳಲ್ಲಾದ ದೈಹಿಕ ಬದಲಾವಣೆಗಳನ್ನು ಗಮನಿಸಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದಳು. ತಪಾಸಣೆ ಮಾಡಿದಾಗ ಆವಳು 22 ವಾರ ತುಂಬಿದ ಗರ್ಭಿಣಿ ಎಂದು ಗೊತ್ತಾಯಿತು. 1971ರ ವೈದ್ಯಕೀಯ ಗರ್ಭಪಾತ ಕಾಯ್ದೆ ಅಡಿ ಗರ್ಭಧಾರಣೆ 20 ವಾರಕ್ಕಿಂತ ಹೆಚ್ಚಿದ್ದರೆ ಗರ್ಭಪಾತ ಮಾಡಲು ಸಾಧ್ಯವಿಲ್ಲ. ಆದರೆ ಹೊಸ ತಿದ್ದುಪಡಿಯಿಂದ ಇಂಥವರು ಕಾನೂನುಬದ್ಧವಾಗಿ ಸುರಕ್ಷಿತ ಗರ್ಭಪಾತ ಸೇವೆಯನ್ನು ಪಡೆಯಬಹುದು. ಅತ್ಯಾಚಾರಕ್ಕೆ ಒಳಗಾದವರು, ನಿಷಿದ್ಧವಾದ ರಕ್ತಸಂಬಂಧಿಗಳೊಡನೆ ಸಂಭೋಗಕ್ಕೆ ಬಲಿಪಶುವಾದವರು ಮತ್ತು ಇತರ ದುರ್ಬಲ ಮಹಿಳೆಯರು (ವಿಭಿನ್ನ ಸಾಮರ್ಥ್ಯವುಳ್ಳ ಮಹಿಳೆಯರು) ಮೊದಲಾದವರಿಗೆ ಈ ತಿದ್ದುಪಡಿ ಕಾಯ್ದೆಯಲ್ಲಿ 20 ವಾರದಿಂದ 24 ವಾರದವರೆಗೆ ಗರ್ಭಪಾತ ಅವಧಿ ಹೆಚ್ಚಿಸಲಾಗಿದೆ.

***

1971 ರಲ್ಲಿ ಜಾರಿಯಾದವೈದ್ಯಕೀಯ ಗರ್ಭಪಾತ ಕಾಯ್ದೆಯು ಭಾರತದಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸಿತು. ಈ ಕಾಯ್ದೆ ಬರುವ ಮೊದಲು ಎಲ್ಲ ಮಹಿಳೆಯರು ಯೋಜಿತವಲ್ಲದ/ ಬೇಡವಾದ ಗರ್ಭಧಾರಣೆಯನ್ನು ತೆಗೆಸಲು ಅಸುರಕ್ಷಿತವಾಗಿ ಕಾನೂನು ಬಾಹಿರ ಗರ್ಭಪಾತಕ್ಕೆ ಒಳಗಾಗುತ್ತಿದ್ದರು. ಇದರಿಂದ ಸೋಂಕು, ತೀವ್ರವಾದ ಅಸ್ವಸ್ಥತೆ ಮತ್ತು ಇನ್ನು ಕೆಲವೊಮ್ಮೆ ಜೀವವನ್ನೇ ಕಳೆದುಕೊಳ್ಳುತ್ತಿದ್ದರು. ತಾಯಿ ಜೀವಕ್ಕೆ ಅಪಾಯವಿದ್ದರೆ; ಇದರಿಂದ ತಾಯಿಗೆ ದೈಹಿಕ ಅಥವಾ ಮಾನಸಿಕ ಆರೊಗ್ಯಕ್ಕೆ ತೀವ್ರವಾದ ಧಕ್ಕೆ ಉಂಟಾಗುತ್ತಿದ್ದರೆ; ಇದರಿಂದ ಹುಟ್ಟಿದ ಮಗು ತೊಂದರೆಗಳಿಂದ ಮುಂದೆ ದೈಹಿಕ ಅಥವಾ ಮಾನಸಿಕ ನೂನ್ಯತೆಗಳಿಗೆ ಒಳಗಾಗಿ ವಿಕಲತೆ ಹೊಂದುವುದಿದ್ದರೆ; ಅತ್ಯಾಚಾರಕ್ಕೆ ಒಳಗಾಗಿ ಗರ್ಭಣಿಯಾಗಿದ್ದರೆ ಮತ್ತು ಗರ್ಭನಿರೋಧಕ ವೈಫಲ್ಯದಿಂದ ವಿವಾಹಿತ ಮಹಿಳೆ ಗರ್ಭಿಣಿಯಾದರೆ ವೈದ್ಯಕೀಯ ಗರ್ಭಪಾತಕ್ಕೆ ಅನುಮತಿ ಇತ್ತು.

ಕಳೆದ ಮಾರ್ಚ್‌ 16ರಂದು ಈ ಕಾಯ್ದೆಗೆ ತಂದ ತಿದ್ದುಪಡಿಗಳಿಗೆ ಅಂಕಿತ ದೊರಕಿದ್ದು, ಗರ್ಭಪಾತ ಅವಶ್ಯವಿರುವ ಮಹಿಳೆಯರಿಗೆ ಸುರಕ್ಷಿತ ಗರ್ಭಪಾತಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಇದಕ್ಕೆ ರಾಜ್ಯ ವೈದ್ಯಕೀಯ ಮಂಡಳಿಯ ಅನುಮತಿ ಅವಶ್ಯ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

(ಎಲ್ಲ ಹೆಸರುಗಳನ್ನು ಬದಲಾಯಿಸಲಾಗಿದೆ)

(ಡಾ. ರತ್ನಮಾಲಾ ಎಮ್. ದೇಸಾಯಿ: ಅಧ್ಯಕ್ಷರು, ಫ್ಯಾಮಿಲಿ ಪ್ಲ್ಯಾನಿಂಗ್‌ ಅಸೋಸಿಯೇಶನ್‌ ಆಫ್ ಇಂಡಿಯಾ ಮತ್ತು
ಪ್ರಾಂಶುಪಾಲರು, ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯ, ಧಾರವಾಡ

ಸುಜಾತ ಎಸ್. ಆನಿಶೆಟ್ಟರ: ಶಾಖಾ ವ್ಯವಸ್ಥಾಪಕರು, ಫ್ಯಾಮಿಲಿ ಪ್ಲ್ಯಾನಿಂಗ್‌ ಅಸೋಸಿಯೇಶನ್‌ ಆಫ್ ಇಂಡಿಯಾ, ಧಾರವಾಡ ಶಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT