ಬುಧವಾರ, ಜನವರಿ 20, 2021
25 °C

ಸಾಂಗತ್ಯ ಗಟ್ಟಿಗೊಳಿಸಲು ಇರಲಿ ಸಂಕಲ್ಪ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

2020 ನೇ ವರ್ಷ ಸಂಭ್ರಮ, ಸಡಗರ ಹಾಗೂ ಅಪಾರ ನಿರೀಕ್ಷೆಗಳೊಂದಿಗೆ ಆರಂಭವಾಗಿತ್ತು. ಆದರೆ ಹೊಸವರ್ಷಕ್ಕೆ ಕಾಲಿಟ್ಟ ಕೆಲವೇ ಕೆಲವು ದಿನಗಳಲ್ಲಿ ಕೊರೊನಾ ಸೋಂಕು ನಮ್ಮೆಲ್ಲಾ ಸಂಭ್ರಮಕ್ಕೆ ಬ್ರೇಕ್‌ ಹಾಕಿತು. ಕೊರೊನಾ ಇಡೀ ಜಗತ್ತಿಗೆ ಆತಂಕ ಆವರಿಸುವಂತೆ ಮಾಡಿದ್ದು ಸುಳ್ಳಲ್ಲ. ಆದರೆ ಈ ಬೇಸರದ ನಡುವೆಯೂ ಸಂಬಂಧದ ಮೌಲ್ಯವನ್ನು ಜನರಿಗೆ ಅರ್ಥ ಮಾಡಿಸಿದೆ. ಇನ್ನೇನು 2020 ಮುಗಿದು 2021ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಈ ವರ್ಷದಲ್ಲಿ ನಿಮ್ಮ ಸಂಬಂಧದ ಬೇರನ್ನು ಇನ್ನಷ್ಟು ಗಟ್ಟಿಗೊಳಿಸುವ ಸಂಕಲ್ಪ ಮಾಡಿ. ಆ ಸಂಕಲ್ಪವನ್ನು ಚಾಚೂ ತಪ್ಪದೇ ಪಾಲಿಸಿ. ಇದರಿಂದ ಸಂಬಂಧ ಸದಾ ಹಸಿರಾಗಿರುವುದಲ್ಲದೇ ವರ್ಷಪೂರ್ತಿ ಸಂತಸ, ಸಂಭ್ರಮ ನಿಮ್ಮ ಪಾಲಿಗಿರುತ್ತದೆ. ಸಂಬಂಧವನ್ನು ಗಟ್ಟಿಗೊಳಿಸುವ ಸಂಕಲ್ಪ ಹಾಗೂ ಅಭಿಲಾಷೆಯೊಂದಿಗೆ ಈ ಹೊಸವರ್ಷವನ್ನು ಸ್ವಾಗತಿಸಿ.

ಸದಾ ಒಟ್ಟಾಗಿ, ಖುಷಿಯಿಂದ ಇರುವುದು

ಇಂದಿನ ಧಾವಂತದ ಜಮಾನದಲ್ಲಿ ಸಂಗಾತಿಗಳು ಒಟ್ಟಾಗಿ ಒಂದು ವಾರ ಕೂಡ ಕಾಲ ಕಳೆಯುವುದು ಅಸಾಧ್ಯ ಎನ್ನುವ ಪರಿಸ್ಥಿತಿ ಇದೆ. ಆದರೆ ಈ ವರ್ಷದಿಂದ ಪ್ರತಿ ವಾರಾಂತ್ಯದಲ್ಲಿ ನಿಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ಸಂಗಾತಿಯೊಂದಿಗೆ ಸಮಯ ಕಳೆಯುತ್ತೇನೆ ಎಂಬ ನಿರ್ಧಾರ ಮಾಡಿ. ಧಾರ್ಮಿಕ ಸ್ಥಳಗಳಿಗೆ ಹೋಗುವುದು, ರೆಸ್ಟೋರೆಂಟ್‌ಗೆ ಊಟಕ್ಕೆ ಹೋಗುವುದು, ಪಿಕ್‌ನಿಕ್‌... ಹೀಗೆ ನಿಮ್ಮ ನೆಚ್ಚಿನ ಹವ್ಯಾಸಗಳನ್ನು ಒಟ್ಟಿಗೆ ಮಾಡಿ. ಸಂಗಾತಿಯ ಯಾವುದೇ ಒಳ್ಳೆಯ ಕೆಲಸದಲ್ಲಿ ನಿಮ್ಮ ಪಾಲಿರುವಂತೆ ನೋಡಿಕೊಳ್ಳಿ ಎನ್ನುತ್ತಾರೆ ಆಪ್ತಸಮಾಲೋಚಕಿ ಆಯೇಷಾ ಬಾನು.

ಒಟ್ಟಿಗೆ ಕುಳಿತು ತಿನ್ನುವುದು

ಇದು ದಂಪತಿ ಒಟ್ಟಾಗಿ ಕುಳಿತು ತಿನ್ನಲು ಕೂಡ ಸಾಧ್ಯವಾಗದಂತಹ ಯುಗ. ಹಾಗಾಗಿ ವಾರಾಂತ್ಯದಲ್ಲಿ ನಿಮ್ಮ ಮನೆಯ ಕೆಲಸದವರಿಗೆ ರಜೆ ನೀಡಿ. ಇಬ್ಬರೂ ಒಟ್ಟಾಗಿ ಸೇರಿ ಅಡುಗೆ ಮಾಡಿ, ಒಟ್ಟಿಗೆ ಕುಳಿತು ಖುಷಿಯಿಂದ ತಿನ್ನಿ. ಆರೋಗ್ಯಕರ ಖಾದ್ಯಗಳನ್ನು ತಯಾರಿಸುವುದನ್ನು ಕಲಿಯಿರಿ. ಪ್ರತಿದಿನ ರೆಸ್ಟೋರೆಂಟ್ ಅಥವಾ ಕೆಲಸದವರು ಮಾಡಿದ ಅಡುಗೆ ತಿಂದು ಬೇಸರವಾದ ನಿಮಗೆ ನಿಮ್ಮ ಅಡುಗೆ ಖುಷಿ ನೀಡುತ್ತದೆ. ಜೊತೆಗೆ ಸಂಗಾತಿಯ ಸಾನಿಧ್ಯವೂ ದೊರೆತಂತಾಗುತ್ತದೆ.

ವ್ಯಾಯಾಮದಲ್ಲೂ ಜೊತೆಯಾಗಿರಿ

ಕೊರೊನಾ ಬಂದ ನಂತರ ಆರೋಗ್ಯ, ಆಹಾರ, ಫಿಟ್‌ನೆಸ್‌ ಬಗ್ಗೆ ಜನರಲ್ಲಿ ತಿಳಿವಳಿಕೆ ಹೆಚ್ಚಿದೆ. ಅದರಲ್ಲೂ ಯುವಜನರು ಯೋಗ, ವ್ಯಾಯಾಮದ ಮೂಲಕ ದೇಹ ದಂಡಿಸುವ ಕೆಲಸ ಮಾಡುತ್ತಿದ್ದಾರೆ. ಜಿಮ್‌ ಅಥವಾ ಯೋಗ ತರಗತಿಗೆ ಇಬ್ಬರೂ ಒಟ್ಟಿಗೆ ಸೇರಿ. ಒಂದೇ ಸಮಯ ನಿಗದಿ ಪಡಿಸಿಕೊಂಡು ದೇಹ ದಂಡಿಸಿ. ಒಂದು ವೇಳೆ ನಿಮ್ಮ ಸಂಗಾತಿ ತೂಕ ಇಳಿಸಲು ವ್ಯಾಯಾಮದ ಮೊರೆ ಹೋದರೆ, ನೀವು ಅವರೊಂದಿಗೆ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ವ್ಯಾಯಾಮ ಮಾಡಿ.

ಸಣ್ಣಪುಟ್ಟ ವಿಷಯಗಳಿಗೂ ಜಗಳ ಮಾಡುವುದು ನಿಲ್ಲಿಸಿ

ಈಗಿನವರಲ್ಲಿ ತಾನು, ತನ್ನದೇ ಆಗಬೇಕು ಎಂಬ ಮನೋಭಾವ ಸಹಜ. ಇದು ಸಂಬಂಧವನ್ನು ಕೆಡಿಸುತ್ತದೆ. ಆ ಕಾರಣಕ್ಕೆ ಸಣ್ಣಪುಟ್ಟ ವಿಷಯಗಳಿಗೂ ವಾದ ಮಾಡುವುದು, ಸಂಗಾತಿಯ ಮನಸ್ಸು ನೋಯಿಸುವುದು ಮಾಡಬೇಡಿ. ಜಗಳ ಮಾಡುವುದು ದೊಡ್ಡ ಸಂಗತಿಯಲ್ಲ. ಆದರೆ ಜಗಳವಾದ ಮೇಲೆ ಸಂಬಂಧವನ್ನು ಸರಿದೂಗಿಸಿಕೊಂಡು ಹೋಗುವುದು ಮುಖ್ಯ. ಒಂದು ವೇಳೆ ಮಾತಿಗೆ ಮಾತು ಬೆಳೆಯಲು ಆರಂಭಿಸಿದರೆ ನೀವೇ ಸುಮ್ಮನಾಗಿ, ಶಾಂತಮನಃಸ್ಥಿತಿಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕು ಎನ್ನುವುದು ಆಯೇಷಾ ಅವರ ಅಭಿಪ್ರಾಯ.

ಗ್ಯಾಜೆಟ್‌ಗಳಿಂದ ದೂರವಿರಿ

ಸಂಗಾತಿಯೊಂದಿಗೆ ಕಾಲ ಕಳೆಯುವಾಗ ಮೊಬೈಲ್‌ನಲ್ಲಿ ತಡಕಾಡುವುದು, ಲ್ಯಾಪ್‌ಟಾಪ್‌ನ ಸರ್ಚ್‌ ಎಂಜಿನ್‌ನಲ್ಲಿ ಹುಡುಕಾಟ ನಡೆಸುವುದು ಮಾಡಬೇಡಿ. ಸಂಗಾತಿಯೊಂದಿಗಿರುವಾಗ ಮೊಬೈಲ್‌ ಸಂದೇಶ ನೋಡುವುದು, ವಾಟ್ಸ್‌ಆ್ಯಪ್‌ ಗುಂಪಿನಲ್ಲಿ ಹರಟೆ ಹೊಡೆಯುವುದು ಮಾಡಬೇಡಿ. ಸಂಗಾತಿಗೆಂದು ಮೀಸಲಿರಿಸಿದ ಸಮಯದಲ್ಲಿ ಕೇವಲ ಸಂಗಾತಿಗಷ್ಟೇ ಸಮಯ ನೀಡಿ.

ಚಟಗಳನ್ನು ಒಟ್ಟಾಗಿ ತ್ಯಜಿಸಿ

ಕುಡಿಯುವುದು, ಧೂಮಪಾನ ಮಾಡುವುದು ಹೀಗೆ ಯಾವುದೇ ರೀತಿಯ ಕೆಟ್ಟ ಅಭ್ಯಾಸವಿರಲಿ. ಅದನ್ನು ಒಟ್ಟಾಗಿ ತ್ಯಜಿಸುತ್ತೇವೆ ಎಂದು ಸಂಕಲ್ಪ ಮಾಡಿ. ಒಳ್ಳೆಯ ವಿಷಯಗಳನ್ನು ಒಟ್ಟಾಗಿ ಸ್ವೀಕರಿಸುವ ಯೋಚನೆ ಮಾಡಿ. ಸಂಗಾತಿ ಕೆಟ್ಟ ಚಟಗಳನ್ನು ಪ್ರೀತಿಯಿಂದ ಬಿಡಿಸಲು ಪ್ರಯತ್ನಿಸಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.