ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷದ ಸಂಕಲ್ಪ.. ಇವರ ಈ ವರ್ಷದ ರೆಸೆಲ್ಯೂಷನ್ ಹೀಗೆ..

Published 29 ಡಿಸೆಂಬರ್ 2023, 23:39 IST
Last Updated 29 ಡಿಸೆಂಬರ್ 2023, 23:39 IST
ಅಕ್ಷರ ಗಾತ್ರ
ಹೊಸ ವರ್ಷದ ಹೊಸ್ತಿಲಿಗೆ ಬಂದಂತೆ ‘ಈ ವರ್ಷವಾದರೂ ಈ ಯೋಜನೆ’ ಪೂರ್ಣಗೊಳಿಸಬೇಕು ಎಂದು ಮನಸ್ಸು ಸಂಕಲ್ಪ ಮಾಡುತ್ತದೆ. ಯಾವೆಲ್ಲ ಹೊಸ ಹೊಸ ರೆಸಲ್ಯೂಷನ್‌ಗಳನ್ನು ಆಯ್ಕೆ ಮಾಡಿಕೊಂಡು, ಕಾರ್ಯಗತ ಮಾಡುವುದು ಎಂಬ ಪಟ್ಟಿ ಮಾಡಿಕೊಳ್ಳುತ್ತದೆ. ಈ ರೆಸಲ್ಯೂಷನ್‌ಗಳ ಬಗ್ಗೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವವರ ಅಭಿಪ್ರಾಯ ಹೀಗಿದೆ....
ಸಂಕಲ್ಪಗಳು, ದೃಢ ಸಂಕಲ್ಪವಾಗುವುದು ಹೇಗೆ?
ಅತ್ಯುತ್ಸಾಹವೂ ಕೆಲವೊಮ್ಮೆ ನಮ್ಮ ಸಂಕಲ್ಪಗಳು ಈಡೇರದಂತೆ ಮಾಡುತ್ತವೆ.ನಿತ್ಯ ವಾಕ್‌ ಹೋಗುವ ಸಂಕಲ್ಪ ಮಾಡುವವರು ಅದನ್ನು ಮುಂದುವರಿಸಲು ಆಗುವುದೇ ಇಲ್ಲ. ಮೊದಲ ದಿನವೇ ಕೈಲಾಗದಷ್ಟು ಅಥವಾ ಕಾಲಿಗಾಗದಷ್ಟು ನಡೆದು ದಣಿವು ಮಾಡಿಕೊಳ್ಳುತ್ತಾರೆ. ದೇಹದಂಡನೆಯಂಥ ಸಂಕಲ್ಪಗಳಿದ್ದರೆ ನಿಧಾನವಾಗಿ ತೆಗೆದುಕೊಂಡು ಹೋಗಬೇಕು. ಮೊದಲ ದಿನದಿಂದಲೇ ಸಂಯಮ ರೂಢಿಸಿಕೊಳ್ಳಬೇಕು. ಜಂಕ್‌ ತಿನ್ನುವುದಿಲ್ಲ ಎಂದು ಕೊಂಡವರು ತಿಂಗಳಿಗೆ ಒಂದು ದಿನವಾದರೂ ಜಂಕ್‌ ಡೇ ಇಟ್ಕೊಂಡಿರಬೇಕು. ಆಸೆಗಳನ್ನು ಅದುಮಿಟ್ಟಿಕೊಳ್ಳುವುದು, ನಾವೇ ನಮಗೆ ಮೋಸ ಮಾಡಿಕೊಳ್ಳಲು ಸುಲಭವಾಗುತ್ತದೆ. ಚೀಟ್‌ ಡೇ ಇದ್ದರೆ ಸಂಯಮ ಸಾಧಿಸುವುದು ಸರಳವಾದೀತು.

‘ಗುಲ್ಬರ್ಗದಾಕಿ’ ಆಗುವ ಹುಕಿ

ಜನರೊಟ್ಟಿಗೆ ಹೆಚ್ಚು ಬೆರೆತು, ಸಮುದಾಯಕ್ಕಾಗಿ ಕೆಲಸ ಮಾಡುವುದು 2024ರ ಗುರಿ. ಜತೆಗೆ ಕಲಾವಿದೆಯಾಗಿ ಆದಷ್ಟು ಆರ್ಥಿಕವಾಗಿ ಸದೃಢಳಾಗಬೇಕು. ಬೆಂಗಳೂರಿನಿಂದ ಗುಲ್ಬರ್ಗಕ್ಕೆ ತೆರಳಿದ್ದೀನಿ. ಇನ್ನು ಮುಂದೆ ‘ಗುಲ್ಬರ್ಗದಾಕಿ’ಯಾಗಲು ಏನೇಲ್ಲ ಕಲಿಯಬೇಕು ಎಂಬುದು ನನ್ನ ಮುಂದೆ ಇದೆ. ಭಾಷೆಯನ್ನು ಸಲೀಸಾಗಿ ಕಲಿಯಬೇಕು. ಭಾಷೆ ಚೆನ್ನಾಗಿದ್ದರೆ ಜನರೊಂದಿಗೆ ಬೆರೆಯಲು ಸಾಧ್ಯವಾಗುತ್ತದೆ. ಹಾಗಾಗಿ ಕನ್ನಡ ಓದಿನ ಬಗ್ಗೆ ಹೆಚ್ಚು ಗಂಭೀರವಾಗಿ ಆಲೋಚಿಸಿದ್ದೀನಿ. ಕಾರ್ಯಕ್ರಮ ನೀಡಲು ಹೋದ ಕಡೆಗಳಲ್ಲಿ ಹಲವು ಅಕಾಡೆಮಿಷಿಯನ್‌, ಕಲಾವಿದರು ಜನಪದ ಸಂಗೀತಕ್ಕೆ ಸಂಬಂಧಿಸಿದ ಕನ್ನಡ ಪುಸ್ತಕಗಳನ್ನು ನೀಡಿದ್ದಾರೆ. ಅವನ್ನೆಲ್ಲ ಒಂದಡೆ ಕುಳಿತು ಓದುವ ಹುಕಿ ಇದೆ. ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತ ಸಮುದಾಯದ ಜತೆ ಬೆರೆತರೆ ಬೇರಿನ ಬಂಧ ಗಟ್ಟಿಯಾಗುತ್ತದೆ. ಆ ನಿಟ್ಟಿನಲ್ಲಿ ಕೆಲಸ ಮಾಡುವ ಇರಾದೆಯಿದೆ. 

– ಶಿಲ್ಪಾ ಮುಡುಬಿ, ಜನಪದ ಗಾಯಕಿ

ಶಿಲ್ಪಾ ಮುಡುಬಿ

ಶಿಲ್ಪಾ ಮುಡುಬಿ

ನನ್ನನ್ನು ನಾನು ಕಂಡುಕೊಳ್ಳುವಿಕೆ

ನನಗೆ ‘ಗೋ ವಿಥ್‌ ದ ಫ್ಲೋ’ ಎನ್ನುವಲ್ಲಿ ಹೆಚ್ಚು ನಂಬಿಕೆ. ಆದರೂ  2023ರಲ್ಲಿ ಅಂದುಕೊಂಡಿದ್ದ ಎಲ್ಲ ಗುರಿಗಳನ್ನು ಸಾಧಿಸಿರುವ ಖುಷಿ ಇದೆ. 2024ಅನ್ನು ಸಂಪೂರ್ಣವಾಗಿ ‘ನನ್ನನ್ನು ನಾನು ಕಂಡುಕೊಳ್ಳುವಿಕೆ‘ಗೆ ಸಮರ್ಪಿಸಬೇಕು ಅಂದುಕೊಂಡಿದ್ದೀನಿ. ಮನಃಶಾಂತಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಈಗಾಗಲೇ ನಿತ್ಯ ಆಯಾ ದಿನದ ಗುರಿಯನ್ನು ಪುಸ್ತಕದಲ್ಲಿ ಬೆಳಿಗ್ಗೆ ರಾತ್ರಿ ಎರಡು ಹೊತ್ತು ಬರೆಯಲು ಆರಂಭಿಸಿದ್ದೇನೆ. ಇದು ಫಲದಾಯಕ ಎನಿಸಿದೆ. ನಾವು ಏನು ಯೋಚಿಸುತ್ತೇವೋ ಅದನ್ನು ಬರೆಯುವುದರಿಂದ ಇನ್ನಷ್ಟು ಸಾಧನೆಗೆ ಪ್ರೇರಣೆ ಸಿಗುತ್ತದೆ.  

  ಈ ವರ್ಷ ನನ್ನ ಮನಸ್ಸನ್ನು ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು, ಅದಕ್ಕಾಗಿಯೇ ಸಮಯ ಮೀಸಲಿಡಬೇಕು ಎನ್ನುವ ಗುರಿ ಹೊಂದಿದ್ದೇನೆ. ತುಂಬಾ ಬ್ಯುಸಿ ಆಗಿರೋದಷ್ಟೆ ಮುಖ್ಯ ಅಲ್ಲ, 20 ನಿಮಿಷ ಮೌನವಾಗಿದ್ದು ನಮಗಾಗಿ ನಾವು ‘ಸ್ಪೇಸ್‌’ ಮಾಡಿಕೊಳ್ಳುವುದು ಅಷ್ಟೆ ಮುಖ್ಯ. ಇದನ್ನು ಹೊರತುಪಡಿಸಿದರೆ ನನ್ನ ಆರಂಗ್ರೇಟ್ ಆಗಿ ಹತ್ತು ವರ್ಷ ಕಳೆದಿದೆ. ಈ ವರ್ಷ ‘ಕಥಕ್‌’ ಏಕವ್ಯಕ್ತಿ ಪ್ರದರ್ಶನ ನೀಡಬೇಕು ಅಂಥ ಮನಸ್ಸು ಮಾಡಿದ್ದೇನೆ. ಶಾನುಭೋಗರ ಮಗಳು ಸಿನಿಮಾವೂ ತೆರೆಗೆ ಬರುತ್ತಿದೆ.

– ರಾಗಿಣಿ ಪ್ರಜ್ವಲ್‌, ನಟಿ

ರಾಗಿಣಿ ಪ್ರಜ್ವಲ್‌

ರಾಗಿಣಿ ಪ್ರಜ್ವಲ್‌

ಥೀಮ್ ‌ಬೇಸ್ಡ್ ಶೂಟ್‌ನ ಗುರಿ

ಹೊಸ ವರ್ಷ ಎಂದರೆ ಹೊಸ ಹುಟ್ಟು ಇದ್ದ ಹಾಗೆ. ಇದ್ದಲ್ಲೇ ಎಲ್ಲ ಹೊಸತಾದ ಹಾಗೆ. ಅದಕ್ಕೇ ನಮಗೆಲ್ಲ ಈ ಬಗೆಯ ಸಂಭ್ರಮವೇನೋ! ಎಲ್ಲ ವರ್ಷಗಳಂತೆ ಈ ವರ್ಷವೂ ಹೊಸ ವಿಷಯಗಳ ಕಲಿಕೆಗೆ ಆದ್ಯತೆ ನೀಡುವುದು ನನ್ನ ರೆಸಲ್ಯೂಷನ್‌ಗಳಲ್ಲಿ ಒಂದು. ಕ್ಯಾಮೆರಾ ವಿಷಯದಲ್ಲಿನ ಕಲಿಕೆಗೆ ಮಿತಿಯೇ ಇಲ್ಲ. ಆ ಕಲಿಕೆಯ ಜೊತೆಗಿದ್ದಷ್ಟೂ ನನಗೆ ಹೆಚ್ಚೆಚ್ಚು ಖುಷಿ. ಈಗ ನನ್ನ ‘ಡಿಮ್ ಎನ್ ಡಿಪ್’ ತಂಡ ಪ್ರೊಡಕ್ಷನ್‌ ಹೌಸ್‌ ಆಗಿಯೂ ನೋಂದಣಿಗೊಂಡಿರುವುದರಿಂದ ಹೆಚ್ಚು ಹೆಚ್ಚು ಪ್ರಾಜೆಕ್ಟ್‌ಗಳನ್ನು ಕೈಗೊಂಡು ತಂಡದ ಬೆಳವಣಿಗೆಯ ಕಡೆ ಗಮನ ನೀಡಬೇಕು ಎಂಬ ಹಂಬಲವಿದೆ.

2024ರಲ್ಲಿ ಒಂದಿಷ್ಟು ಕಿರುಚಿತ್ರಗಳನ್ನು ನಿರ್ದೇಶಿಸುವ ಆಸೆಯಿದೆ. ಆ ಕುರಿತು ಮಾತುಕತೆಗಳೂ ನಡೆದಿವೆ. ಹಾಗೇ ಪೂರ್ಣ ಪ್ರಮಾಣದ ಫೀಚರ್ ಸಿನೆಮಾಗಳಿಗೆ ಕೆಲಸ ಮಾಡುವ ಆಸೆಯೂ ಇದೆ. ನಾನೊಬ್ಬ ಸಿನಿಮಾ ವಿದ್ಯಾರ್ಥಿ. ಹಾಗಾಗಿ ಸಿನಿಮಾಗಳನ್ನು ಕೇವಲ ಮನರಂಜನೆಗೋಸ್ಕರ ಮಾತ್ರ ನೋಡದೇ ಸಿನಿಮಾ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಆ ಕುರಿತು ಗಂಭೀರವಾಗಿ, ಆಳವಾಗಿ ಅಧ್ಯಯನ ಮಾಡಲು ಪ್ರಯತ್ನಿಸುವೆ. ಜತೆಗೆ ಸಾಹಿತ್ಯ ಹಾಗೂ ಸಿನಿಮಾದ ಓದು ಈ ವರ್ಷ ಹೆಚ್ಚಿಸಬೇಕು ಎಂಬ ಷರತ್ತನ್ನು ನನಗೆ ನಾನೇ ವಿಧಿಸಿಕೊಂಡಿದ್ದೇನೆ.

ಮುಖ್ಯವಾಗಿ ತಂಡದಲ್ಲಿ ಹೆಚ್ಚಾಗಿ ಹೆಣ್ಣು ಜೀವಗಳನ್ನು ಸೇರಿಸಿಕೊಂಡು ಕಳೆದ ವರ್ಷ ಕಲಿತ ಮಾಡೆಲಿಂಗ್- ಫುಡ್- ಕಿಡ್ಸ್ ಫೊಟೋಗ್ರಫಿಯನ್ನು ಗಮನದಲ್ಲಿಟ್ಟು, ಇತರ ಕಲಾವಿದರ ಜೊತೆ ಸೇರಿ ಥೀಮ್ ‌ಬೇಸ್ಡ್ ಶೂಟ್‌ಗಳನ್ನು ನಡೆಸುವ ಮಹಾದಾಸೆಯೂ ಇದೆ. ಹೊಚ್ಚ ಹೊಸ ಪುಟವನ್ನು ಅಕ್ಕರೆಯಿಂದ ತೆರೆದು ಕೊಡುತ್ತಿರುವ ಈ ಹೊಸ ವರ್ಷವನ್ನು ಈ ರೀತಿ ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದೇನೆ.

– ನವ್ಯಾ ಕಡಮೆ, ಛಾಯಾಗ್ರಾಹಕಿ

ನವ್ಯಾ ಕಡಮೆ

ನವ್ಯಾ ಕಡಮೆ

ಕಾದಂಬರಿ ಬರೆಯುವಾಸೆ

ದೈಹಿಕ ಚಟುವಟಿಕೆಗಳಾದ ಜಿಮ್, ಯೋಗ ಇಂಥವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕು ಅಂತ ಪ್ರತಿವರ್ಷದಂತೆ ಈ ವರ್ಷವೂ ಅಂದುಕೊಂಡಿದ್ದೇನೆ. ತುಂಬಾ ಓದಬೇಕು. ನನಗೆ ಸಣ್ಣ ಕತೆಗಳು ಇಷ್ಟವಾಗುವುದರಿಂದ ಮಾಸ್ತಿ ಹಾಗೂ ಚಿತ್ತಾಲರ ಸಮಗ್ರ ಕಥೆಗಳನ್ನು ಈ ವರ್ಷವಾದರೂ ಓದಿ ಮುಗಿಸಬೇಕು. ‘ಬೈಕಿಂಗ್‌’ ಬಗ್ಗೆ ಕಾದಂಬರಿ ಬರೆಯಬೇಕು ಅಂದುಕೊಂಡಿದ್ದೀನಿ. 

– ಪೂರ್ಣಿಮಾ ಮಾಳಗಿಮನಿ, ಕಥೆಗಾರ್ತಿ

ಪೂರ್ಣಿಮಾ ಮಾಳಗಿಮನಿ

ಪೂರ್ಣಿಮಾ ಮಾಳಗಿಮನಿ

ನನ್ನದೇ ಬ್ಯಾಂಡ್ ಕಟ್ಟುವ ಇರಾದೆ

2023ರಲ್ಲಿ ಅಂದುಕೊಂಡಿದ್ದಕ್ಕಿಂತ ಜಾಸ್ತಿ ಕೆಲಸ ಮಾಡಿದ್ದೀನಿ ಎನ್ನುವುದರ ಬಗ್ಗೆ ಖುಷಿ ಇದೆ. ಹೊಸದನ್ನು ಕಲಿತೆ. ಸಿನಿಮಾ ಅಂದರೆ ಸಿಕ್ಕಾಪಟ್ಟೆ ಪ್ರೀತಿ. ಹಾಗಾಗಿ ‘ಮೆಟ್ರೊ ಸಾಗ’ಗೆ ಒಂದಷ್ಟು ಸಿನಿಮಾ ತಂಡಗಳ ಸಂದರ್ಶನ  ಮಾಡಿದೆ. ಸಪ್ತಸಾಗರ ತಂಡ, ಟೋಬಿ ತಂಡ,  ಶಿವರಾಜ್‌ಕುಮಾರ್‌, ಯೋಗರಾಜ್‌ ಭಟ್‌, ಪವನ್‌ಕುಮಾರ್‌ ಹೀಗೆ ನನ್ನಿಷ್ಟದ ನಟರನ್ನು, ತಂಡಗಳನ್ನು ಸಂದರ್ಶನ ಮಾಡಿದೆ. ಜತೆಗೆ ಹಲವು ಕಡೆಗಳಲ್ಲಿ ಸಂಗೀತ ಕಾರ್ಯಕ್ರಮ ಕೊಟ್ಟೆ. ಮೈಸೂರು ಅರಮನೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದು ನನಗೆ ನೆನಪಿನಲ್ಲಿಟ್ಟುಕೊಳ್ಳುವಂಥದ್ದು. ಜತೆಗೆ ಒಂದಷ್ಟು ವೆಬ್‌ಸಿರೀಸ್‌ಗೂ ಕೆಲಸ ಮಾಡಿದ್ದೀನಿ. 

2024ರ ರೆಸಲ್ಯೂಷನ್‌ ಅಂದರೆ ನಂದೇ ಒಂದು ಸಂಗೀತ ತಂಡ (ಬ್ಯಾಂಡ್‌) ಕಟ್ಟಬೇಕು ಅಂತ ಅಂದುಕೊಂಡಿದ್ದೀನಿ. ಕರ್ನಾಟಕ, ದೇಶ ಹಾಗೂ ವಿದೇಶಗಳಲ್ಲಿಯೂ ಈ ತಂಡದಿಂದ ಸಂಗೀತ ಕಾರ್ಯಕ್ರಮ ನೀಡಬೇಕು ಅನ್ನುವ ಆಸೆಯಿದೆ. ಸಂಗೀತ ಸಂಯೋಜನೆ ಮಾಡಬೇಕು, ಆಲ್ಬಂ ಬಿಡುಗಡೆ ಮಾಡಬೇಕು ಅಂತನೂ ಅಂದುಕೊಂಡಿದ್ದೀನಿ. ಅಮ್ಮ ಎಂ.ಆರ್‌. ಕಮಲಾ ಅವರು ಹೊರ ತಂದಿರುವ ‘ಕಾಳನಾಮ ಚರಿತೆ’ ಪುಸ್ತಕವನ್ನು ಆ್ಯನಿಮೇಷನ್‌ ರೂಪಕ್ಕೆ ತರಬೇಕು. ಇವೆಲ್ಲವೂ ವೃತ್ತಿಗೆ ಸಂಬಂಧಪಟ್ಟಿದ್ದು. ವೈಯಕ್ತಿಕವಾಗಿ ಹೆಚ್ಚು ಸೋಲೋ ಟ್ರಿಪ್‌ ಮಾಡಬೇಕು ಮತ್ತು ಫ್ರೆಂಡ್ಸ್‌ ಜತೆ ಟ್ರಿಪ್ ಮಾಡಬೇಕು ಎನ್ನುವ ಆಸೆಯಿದೆ. ಯಾವುದಾದರೂ ಹೊಸ ಭಾಷೆ ಕಲಿಯಬೇಕು ಅಂತ ಅಂದುಕೊಂಡಿದ್ದೀನಿ. 

– ಸ್ಪರ್ಶಾ ಆರ್‌.ಕೆ. ,ಗಾಯಕಿ/ ಕಂಠದಾನ ಕಲಾವಿದೆ

– ಸ್ಪರ್ಶಾ ಆರ್‌.ಕೆ

– ಸ್ಪರ್ಶಾ ಆರ್‌.ಕೆ

ಹೊಸವರ್ಷಕ್ಕೆ ದಿನದರ್ಶಿ ಬದಲಾಗುವುದಷ್ಟೇ ಅಲ್ಲ, ದಿನಚರಿಯೂ ಬದಲಾಗಲಿ ಎಂದು ಬಯಸುತ್ತೇವೆ. ಇದು ದಿನಗಳೆದಂತೆ ನಾವು ನಾವಾಗುವ, ಮಾಗುವ ಪ್ರಕ್ರಿಯೆ. ಸಂಕಲ್ಪಗಳು ಈ ಪ್ರಕ್ರಿಯೆಯಲ್ಲಿ ನಿಮಿತ್ತ ಮಾತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT