ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆಯತ್ತ ಇನ್ನೊಂದು ಹೆಜ್ಜೆ

ರಾತ್ರಿ ಪಾಳಿ ಕೆಲಸ
Last Updated 3 ಜನವರಿ 2020, 19:30 IST
ಅಕ್ಷರ ಗಾತ್ರ

ಬಹುರಾಷ್ಟ್ರೀಯ ಕಂಪನಿಗಳು, ಮಾಧ್ಯಮಸಂಸ್ಥೆಗಳು, ಕಾಲ್‌ಸೆಂಟರ್‌ನಂತಹ ವೃತ್ತಿಗಳಲ್ಲಿ ಪುರುಷರು ಹಾಗೂ ಮಹಿಳೆಯರು ಸಮಾನವಾಗಿ ಶಿಫ್ಟ್‌ಗಳಲ್ಲಿ ದುಡಿಯುವುದು ಅನಿವಾರ್ಯ. ಆದರೆ ಕೆಲವು ವರ್ಷಗಳಿಂದ ಗಾರ್ಮೆಂಟ್, ಕಾರ್ಖಾನೆಗಳಂತಹ ಕೆಲವು ಉದ್ಯಮಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಮಹಿಳೆಯರಿಗೆ ರಾತ್ರಿಪಾಳಿಯನ್ನು ನಿಲ್ಲಿಸಲಾಗಿತ್ತು. ದೇಶದಲ್ಲಿ ನಡೆದ ಅತ್ಯಾಚಾರ, ಹಲ್ಲೆಯಂತಹ ಘಟನೆಗಳು ಇದಕ್ಕೆ ಕಾರಣವಿರಬಹುದು. ಇದರಿಂದ ಹೆಣ್ಣುಮಕ್ಕಳು ರಾತ್ರಿಪಾಳಿಯಲ್ಲಿ ದುಡಿಯಬೇಕೇ ಬೇಡವೇ ಎಂಬ ಗೊಂದಲವಿತ್ತು. ಆದರೆ ಈ ಗೊಂದಲಕ್ಕೆ ತೆರೆ ಎಳೆದ ಸರ್ಕಾರ ಇತ್ತೀಚೆಗೆ ಕೆಲವು ಷರತ್ತುಗಳೊಂದಿಗೆ ಮಹಿಳೆಯರು ರಾತ್ರಿಪಾಳಿಯಲ್ಲಿ ದುಡಿಯಲು ಸಮರ್ಥರು; ಅವರು ಮನಸಾರೆ ರಾತ್ರಿಪಾಳಿಯಲ್ಲಿ ದುಡಿಯಲು ಬಯಸಿದರೆ ಅವಕಾಶ ನೀಡಬೇಕು ಎಂದಿದೆ. ರಾತ್ರಿ 7 ರಿಂದ ಬೆಳಗಿನ 6ರ ತನಕ ದುಡಿಯಲು ಮಹಿಳೆಯರಿಗೆ ಸೂಕ್ತ ಸೌಕರ್ಯ ಒದಗಿಸುವ ಮೂಲಕ ಅವಕಾಶ ನೀಡಬೇಕು ಎನ್ನುವ ಮೂಲಕ ಮಹಿಳೆಯರು ಪುರುಷರಷ್ಟೇ ಸಮಾನರು ಎಂದು ಹೇಳಿದೆ.

1948ರ ಫ್ಯಾಕ್ಟರಿ ಆ್ಯಕ್ಟ್‌ನಲ್ಲಿ ತಿದ್ದುಪಡಿ ಮಾಡಿದ ಮದ್ರಾಸ್ ಹೈಕೋರ್ಟ್ ಮಹಿಳೆಯರಿಗೆ ರಾತ್ರಿಪಾಳಿಯಲ್ಲಿ ದುಡಿಯಲು ಅವಕಾಶ ನೀಡಬೇಕು ಎಂದಿತ್ತು. ಆ ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾತ್ರಿಪಾಳಿಯಲ್ಲಿ ಮಹಿಳೆಯರು ಕೆಲಸ ಮಾಡಲು ಅವಕಾಶ ನೀಡುವ ಜೊತೆಗೆ ಕೆಲವು ನಿಬಂಧನೆಗಳನ್ನು ಹೇಳಿವೆ.

2014ರಲ್ಲಿ ಅಮೆರಿಕದಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ ರಾತ್ರಿಪಾಳಿಯಲ್ಲಿ ದುಡಿಯುವ ಗಂಡಸರ ಮೆದುಳಿಗಿಂತ ಹೆಣ್ಣುಮಕ್ಕಳ ಮೆದುಳು ಹೆಚ್ಚು ಚುರುಕಾಗಿ ಕೆಲಸ ಮಾಡುತ್ತದೆಯಂತೆ. ಆ ಕಾರಣಕ್ಕೆ ರಾತ್ರಿಪಾಳಿಯಲ್ಲಿ ದುಡಿಯುವ ಹೆಣ್ಣುಮಕ್ಕಳಲ್ಲಿ ಉತ್ಪಾದಕ ಮನೋಭಾವ ಹೆಚ್ಚಿದೆ ಎನ್ನುತ್ತದೆ ಆ ಅಧ್ಯಯನ.

ಹಾಗಾದರೆ ರಾತ್ರಿಪಾಳಿಯಲ್ಲಿ ದುಡಿಯುವುದರಿಂದ ಹೆಣ್ಣುಮಕ್ಕಳಿಗೆ ಆಗುವ ಲಾಭಗಳೇನು?

ರಾತ್ರಿಪಾಳಿಯಲ್ಲಿ ಹೆಣ್ಣುಮಕ್ಕಳು ದುಡಿಯುವುದರಿಂದ ಅವರಿಗೆ ಕೆಲಸದಲ್ಲಿನ ಅವಕಾಶವೂ ಜಾಸ್ತಿಯಾಗುತ್ತದೆ. ಜೊತೆಗೆ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸಲು ಅವರು ಸಮರ್ಥರೆನ್ನಿಸಿಕೊಳ್ಳುತ್ತಾರೆ. ಕೆಲಸದಲ್ಲಿನ ವೈಯಕ್ತಿಕ ಬೆಳವಣಿಗೆಗೂ ರಾತ್ರಿಪಾಳಿ ಸೂಕ್ತ ಎನ್ನಿಸುತ್ತದೆ. ಜೊತೆಗೆ ಅವರಲ್ಲಿ ಉತ್ಪಾದಕತೆ ಹೆಚ್ಚಿ, ಕೆಲಸದ ಗುಣಮಟ್ಟದಲ್ಲೂ ಸುಧಾರಣೆ ಇರುತ್ತದೆ ಹಾಗೂ ಅಂತರರಾಷ್ಟ್ರೀಯ ಮಟ್ಟದವರೆಗೂ ಸ್ಪರ್ಧಿಸಲು ಮಹಿಳೆಯರಿಗೆ ರಾತ್ರಿಪಾಳಿ ಅವಶ್ಯ.

ಮಹಿಳೆಯರಿಗಾಗುವ ಲಾಭ

ಧೈರ್ಯಗೆಡಿಸುವ ಬದಲು ಸುರಕ್ಷತೆಯ ಕ್ರಮ ಕೈಗೊಳ್ಳಿ: ರಾತ್ರಿಪಾಳಿಯಲ್ಲಿ ಹೆಣ್ಣುಮಕ್ಕಳು ದುಡಿಯುವುದು ತಪ್ಪು, ಇದರಿಂದ ದೌರ್ಜನ್ಯಗಳು ಹೆಚ್ಚುತ್ತವೆ, ಇದು ಸುರಕ್ಷಿತವಲ್ಲ ಎಂದೆಲ್ಲಾ ಹೆದರಿಸುವುದಕ್ಕಿಂತ ರಾತ್ರಿಪಾಳಿಯಲ್ಲಿ ದುಡಿಯ ಬಯಸುವ ಹೆಣ್ಣುಮಕ್ಕಳಿಗೆ ಸೂಕ್ತ ಸುರಕ್ಷತೆಯ ವ್ಯವಸ್ಥೆ ಮಾಡಬೇಕು.

ಹೆಣ್ಣು ಹಾಗೂ ಗಂಡು ಇಬ್ಬರಿಗೂ ಸಮಾನ ಅವಕಾಶ: ಇದರಿಂದ ಹೆಣ್ಣು ಹಾಗೂ ಗಂಡು ಇಬ್ಬರಿಗೂ ಸಮಾನ ಅವಕಾಶ ನೀಡಿದಂತಾಗುತ್ತದೆ. ಕೆಲಸದಲ್ಲಿನ ಎಲ್ಲಾ ವಿಭಾಗಗಳ ಬಗ್ಗೆಯೂ ಹೆಣ್ಣುಮಕ್ಕಳು ಅರಿತಂತಾಗುತ್ತದೆ. ತಾವು ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡಲು ಸಮರ್ಥರು ಎಂಬುದನ್ನು ಸಾಧಿಸಿ ತೋರಿಸಲು ಹೆಣ್ಣುಮಕ್ಕಳಿಗೆ ಇದೊಂದು ಒಳ್ಳೆಯ ಅವಕಾಶ ಎಂದೇ ಹೇಳಬಹುದು.

ಲಿಂಗ ಭೇದ ಕಡಿಮೆಯಾಗುತ್ತದೆ: ಹಿಂದೆ ಹೆಣ್ಣುಮಕ್ಕಳೆಂದರೆ ನಾಲ್ಕು ಗೋಡೆಗಳ ಮಧ್ಯೆ ಇರುವವರು ಎಂಬ ಮಾತಿತ್ತು. ಅದನ್ನು ಸುಳ್ಳು ಮಾಡಿದ ಹೆಣ್ಣುಮಕ್ಕಳು ಬಾಹ್ಯಾಕಾಶದವರೆಗೂ ಹೋಗಿ ಬಂದು ತಾವು ನಾಲ್ಕು ಗೋಡೆಗಳಿಗಷ್ಟೇ ಸೀಮಿತವಲ್ಲ ಎಂಬುದನ್ನು ಸಾಬೀತುಮಾಡಿದ್ದಾರೆ. ರಾತ್ರಿಪಾಳಿಯಲ್ಲಿ ಹೆಣ್ಣುಮಕ್ಕಳಿಗೆ ದುಡಿಯಲು ಅವಕಾಶ ನೀಡುವುದರಿಂದ ಲಿಂಗ ಭೇದವನ್ನು ಕಡಿಮೆ ಮಾಡಬಹುದು. ಹೆಣ್ಣು ಗಂಡಿನ ಸಮಾನಕ್ಕೆ ದುಡಿಯುತ್ತಾಳೆ ಎಂಬುದನ್ನು ಸಾಬೀತು ಮಾಡಲು ಇದೊಂದು ಅವಕಾಶ.

ಗುಂಪಿನಲ್ಲಿ ದುಡಿಯುವುದರಿಂದ ಒಂಟಿ ಅನ್ನಿಸುವುದಿಲ್ಲ: ಸರ್ಕಾರದ ಷರತ್ತಿನ ಪ್ರಕಾರ ರಾತ್ರಿಪಾಳಿಯ ಒಂದು ತಂಡದಲ್ಲಿ 10 ಮಂದಿ ಇರಬೇಕು. ಆ ಕಾರಣಕ್ಕೆ ಹೆಣ್ಣುಮಕ್ಕಳಿಗೆ ತಾನು ಒಂಟಿ ಎನ್ನಿಸುವುದಿಲ್ಲ. ಗುಂಪಿನಲ್ಲಿ ಕೆಲಸ ಮಾಡುವ ಕಾರಣದಿಂದ ಉತ್ಸಾಹದ ಜೊತೆಗೆ ಧೈರ್ಯವೂ ಹೆಚ್ಚುತ್ತದೆ.

ಸ್ಪರ್ಧಾತ್ಮಕ ಯುಗದಲ್ಲಿ ಪುರುಷನಿಗೆ ಸಮಾನವಾಗಿ ಸ್ಪರ್ಧಿಸಬಹುದು: ಹೇಳಿ ಕೇಳಿ ಇದು ಇಪ್ಪತ್ತೊಂದನೇ ಶತಮಾನ. ಈ ಯುಗದಲ್ಲಿ ಪ್ರತಿ ಕ್ಷೇತ್ರದಲ್ಲೂ ಕ್ಷಣ ಕ್ಷಣಕ್ಕೂ ಸ್ಪರ್ಧೆ ಏರ್ಪಡುತ್ತದೆ. ಕೆಲಸದ ವಿಷಯದಲ್ಲೂ ಮಹಿಳೆ ಪುರುಷನೊಂದಿಗೆ ಸರಿಸಮನಾಗಿ ಸ್ಪರ್ಧಿಸಲು ರಾತ್ರಿಪಾಳಿಯಲ್ಲೂ ಕೆಲಸ ಮಾಡುವುದರಿಂದ ಸಾಧ್ಯ.

ಹೆಚ್ಚು ಹೆಚ್ಚು ಕಾರ್ಮಿಕರಿಗೆ ಅವಕಾಶವನ್ನು ಕಲ್ಪಿಸುತ್ತದೆ: ಈ ಕ್ರಮದಿಂದ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಜೊತೆಗೆ ಮಹಿಳೆಯರಿಗೆ ಪುರುಷರಷ್ಟೇ ಅವಕಾಶಗಳು ಲಭ್ಯವಾಗುತ್ತವೆ. ಸಾಧನೆಗೆ ಇದೊಂದು ಮೆಟ್ಟಿಲಾಗುವುದರಲ್ಲಿ ಸಂಶಯವಿಲ್ಲ.

***

ಪ್ರಸ್ತುತ ಜಗತ್ತಿನಲ್ಲಿ ಸುರಕ್ಷತೆ ವಿಷಯವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹೊರಜಗತ್ತಿನಲ್ಲಿ ಎಲ್ಲಿ, ಯಾರು ಬೇಕಾದರೂ ಅಪಾಯ ತಂದೊಡ್ಡಬಹುದು. ಈ ಕಾರಣಕ್ಕೆ ರಾತ್ರಿಪಾಳಿಯಲ್ಲಿ ದುಡಿಯುವ ಮಹಿಳೆಯರು ತಮ್ಮ ಸುರಕ್ಷತೆಯಲ್ಲಿ ತಾವಿರಬೇಕು. ಜೊತೆಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬೇಕಾಗುವ ಸಾಮರ್ಥ್ಯವನ್ನು ಹೊಂದಿರಬೇಕು.

ರಾತ್ರಿಪಾಳಿಯಲ್ಲಿ ದುಡಿಯುವ ಹೆಣ್ಣುಮಕ್ಕಳಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇಂತಹವರಲ್ಲಿ ಸ್ತನಕ್ಯಾನ್ಸರ್ ಬರುವ ಸಾಧ್ಯತೆ ಶೇ 48ರಷ್ಟಿದೆ ಎಂಬುದನ್ನು ಅಧ್ಯಯನವೊಂದು ಸಾಬೀತುಪಡಿಸಿದೆ. ಇದರೊಂದಿಗೆ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳ ಹುಟ್ಟಿಗೂ ಇದು ಕಾರಣವಾಗಬಹುದು. ಹಾರ್ಮೋನ್‌ ವ್ಯತ್ಯಾಸದಿಂದ ಕಾಣಿಸಿಕೊಳ್ಳುವ ಸಮಸ್ಯೆಗಳಿಗೆ ಕೆಲವೊಂದು ಪರಿಹಾರಗಳನ್ನು ಹುಡುಕಿಕೊಳ್ಳಬೇಕು. ಸೂಕ್ತ ಆಹಾರಕ್ರಮ, ಸರಿಯಾದ ನಿದ್ದೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT