ಭಾನುವಾರ, ಆಗಸ್ಟ್ 14, 2022
22 °C
ಅಪ್ಪಿಕೋ ಅಮ್ಮಾ ಪ್ಲೀಸ್...

Pv Web Exclusive | ಕೋವಿಡ್ ಕಾಲದಲ್ಲಿ ಅಮ್ಮಂದಿರ ದುಗುಡ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ದುಡಿಮೆಯ ಅನಿವಾರ್ಯತೆ, ಕರುಳಿನ ಕುಡಿಯ ಕಾಳಜಿ, ಸಾಂಕ್ರಾಮಿಕ ಕಾಯಿಲೆಯಿಂದ ಸ್ವಯಂ ರಕ್ಷಣೆ ಹೀಗೆ ತೊಳಲಾಟದಲ್ಲೇ ಹಗಲು–ರಾತ್ರಿಗಳು ಉರುಳುತ್ತಿವೆ. ಉತ್ತರ ಕಾಣದ ಸಮಸ್ಯೆಗಳಿಂದ ನೆಮ್ಮದಿ ಕಳೆದುಕೊಂಡ ಹಲವರು ಮಾನಸಿಕ ತಜ್ಞರನ್ನು ಭೇಟಿ ಮಾಡುತ್ತಿದ್ದಾರೆ.

---

ಅಮ್ಮನ ಅಳಲು–1

‘ನಮ್ಮನೆ ಗೇಟಿನ ಚಿಲಕ ವಿಪರೀತ ಗದ್ದಲ ಮಾಡುವ ಸ್ವಭಾವದ್ದಲ್ಲ. ಆಲಿಸಿದರಷ್ಟೇ ಅದರ ಸದ್ದು ಕಿವಿಗೆ ತಟ್ಟುತ್ತದೆ. ಬೆಳಗಿಂದ ರಾತ್ರಿವರೆಗೆ ಹತ್ತಾರು ಬಾರಿ ಚಿಲಕ ತೆಗೆಯುವ, ಹಾಕುವ ಪ್ರಕ್ರಿಯೆಗೆ ಯಾರೂ ಕಿವಿಗೊಡುವುದಿಲ್ಲ. ಆದರೆ, ಆದ್ಯಾ ಮಾತ್ರ ಅಮ್ಮನ ಕೈಚಳಕ ಪತ್ತೆ ಮಾಡ್ತಾಳೆ. ಗಡಿಯಾರದ ಮುಳ್ಳು ನೋಡಲು ಬಾರದಿದ್ದರೂ, ಬಂದಿದ್ದು ಅಮ್ಮನೇ ಎಂಬುದು ಅವಳಿಗೆ ಖಾತ್ರಿ. ಹಿಗ್ಗಿನಿಂದ ದಿಗ್ಗನೆ ಎದ್ದು ಬಂದು ಬಾಗಿಲ ಬಳಿ ನಿಲ್ಲುತ್ತಾಳೆ. ನಾನು, ‘ಹಾಯ್sss ಕಂದಾ’ ಎಂದು ನಸುನಕ್ಕು ಬಾತ್‌ರೂಮ್ ಕಡೆಗೆ ಹೋದರೆ, ಪೆಚ್ಚುಮುಖ ಮಾಡಿ ಮತ್ತದೇ ಗೊಂಬೆಗಳ ನಡುವೆ ಇಣುಕುತ್ತಾಳೆ. ಇದು ಒಂದು ದಿನದ ಕತೆಯಲ್ಲ, ಐದು ತಿಂಗಳುಗಳಿಂದ ಅನುಭವಿಸುತ್ತಿರುವ ಸಂಕಟ. ಈ ಹಾಳು ಕೊರೊನಾ ಕಳ್ಳುಬಳ್ಳಿಯ ಬಂಧಕ್ಕೇ ಕತ್ತರಿ ಹಾಕುತ್ತಿದೆ’ ಎಂದು ಬ್ಯಾಂಕ್ ಉದ್ಯೋಗಿ ರಶ್ಮಿ ಹೇಳುವಾಗ ಆಕೆಯ ದನಿ ಕುಸಿದಿತ್ತು.

ಅಮ್ಮನ ಅಳಲು–2

‘ಹೈಸ್ಕೂಲ್ ಓದೋ ಹುಡುಗಿ. ಆದ್ರೂ ಶಾಲೆ ಹೊರಡೋವಾಗ ಒಮ್ಮೆ ನನ್ನ ತಬ್ಕೊಂಡು ಹಣೆಗೊಂದು ಮುತ್ತಿಟ್ಟೇ ಹೋಗ್ಬೇಕು. ಶಾಲೆಯಿಂದ ಬಂದ್ಮೇಲೆ ಅಮ್ಮನಿಗೆ ಆತುಕೊಂಡು ಕೂತು ಹರಟಬೇಕು. ರಾತ್ರಿಯಂತೂ ‘ಅಮ್ಮನ್ ತೊಡೆ ಅಂದ್ರೆ ಪ್ರೊ ಪಿಲ್ಲೊ ತರಹ. ಈ ತೊಡೆಯ ಮೇಲೆ ಮಲಗದಿದ್ರೆ ಸಮಾಧಾನವೇ ಇಲ್ಲ’ ಎನ್ನುತ್ತ ಬಂದು ಮೈಚಾಚುವ ಮಗಳು, ನಾಲ್ಕೈದು ತಿಂಗಳುಗಳಿಂದ ಈ ಸುಖವನ್ನೆಲ್ಲ ಕಳೆದುಕೊಂಡಿದ್ದಾಳೆ. ಟೀನೇಜ್ ಮಕ್ಕಳು, ಮನಸ್ಸು ಎತ್ತ ಜಾರುತ್ತೋ ಅನ್ನೊ ಭಯ ನನ್ನನ್ನ ಸುಡುತ್ತಿದೆ. ಆಕೆಗೆ ಕೊಂಚ ಉಸಿರಾಟದ ಸಮಸ್ಯೆ ಬೇರೆ. ನಿತ್ಯ ಡ್ಯೂಟಿಗೆ ಹೋಗೋಳು ನಾನು, ಹೀಗಾಗಿ, ಮನೆಯಲ್ಲೇ ಪ್ರತ್ಯೇಕ ರೂಮಿನಲ್ಲಿರುತ್ತೇನೆ. ಮಗಳೊಬ್ಬಳೇ ಪಕ್ಕದ ರೂಮಿನಲ್ಲಿ ಮಲಗುತ್ತಾಳೆ’ ಎಂದು ಕಳವಳದಿಂದ ಗುನುಗಿದಳು ಸ್ನೇಹಿತೆ ಸುಧಾ.

ಅಮ್ಮನ ಅಳಲು–3

‘ಭಾನುವಾರ ಬಂತೆಂದರೆ, ತನ್ವಿ–ತನಯ್‌ಗೆ ಎಲ್ಲಿಲ್ಲದ ಖುಷಿ. ಬೆಳಿಗ್ಗೆ ಹಾಸಿಗೆಯಲ್ಲೇ ಅಪ್ಪನ ಜತೆ ಮಸ್ತಿ ಶುರುವಾದರೆ, ಇಡೀ ದಿನ ಅಪ್ಪನ ಮೈದಂದುತ್ತಲೇ ಇರುವವರು. ಕೊರೊನಾ ಶುರುವಾದ ಮೇಲೆ ಮಕ್ಕಳ ಕಾರಣಕ್ಕಾಗೇ ನವೀನ್, ಡ್ಯೂಟಿ ಶಿಫ್ಟ್ ಬದಲಾಯಿಸಿಕೊಂಡಿದ್ದಾರೆ. ಮಧ್ಯಾಹ್ನದ ಶಿಫ್ಟ್‌ನಲ್ಲಾದರೆ ಜನರ ಸಂಪರ್ಕ ಕಡಿಮೆ. ರಾತ್ರಿ ಅಪ್ಪ ಬರುವುದರೊಳಗೆ ತನ್ವಿಯನ್ನ ಮಲಗಿಸಲೇ ಬೇಕು, ಇಲ್ಲದಿದ್ದರೆ ಅಪ್ಪನ ಕಂಡಿದ್ದೇ ಕುತ್ತಿಗೆಗೆ ಜೋತು ಬೀಳುತ್ತಾಳೆ.

‘ನವೀನ್ ಮಲಗುವ ರೂಮ್ ಬದಲಾಗಿದೆ. ರಾತ್ರಿಯಿಂದ ಬೆಳಿಗ್ಗೆವರೆಗೆ ಎಂಟು ತಾಸು ಕ್ವಾರಂಟೈನ್ ಮುಗಿಸಿ, ನವೀನ್ ದೂರ ಕುಳಿತು ಮಕ್ಕಳ ಜೊತೆ ಮಾತಾಡುತ್ತಾರೆ. ನವೀನ್ ಡ್ಯೂಟಿಗೆ ಹೋಗುವ ಕಾರಣಕ್ಕೆ, ತನಯ್–ತನ್ವಿ ಫ್ಲಾಟ್‌ನ ಉಳಿದ ಮಕ್ಕಳ ಜೊತೆ ಆಟಕ್ಕೂ ಹೋಗುವುದಿಲ್ಲ. ಎಷ್ಟು ದಿನ ಹೀಗೆ ಶಿಫ್ಟ್ ಬದಲಾಯಿಸಿಕೊಳ್ಳಲು ಸಾಧ್ಯ? ಮಕ್ಕಳ ಸುರಕ್ಷತೆ ಮುಖ್ಯ ಅಲ್ಲವಾ ? ಅದಕ್ಕೆ ನಾವು ಬೆಂಗಳೂರು ಬಿಟ್ಟು ಊರಿಗೆ ಬಂದಿದ್ದೇವೆ. ಅಪ್ಪ–ಮಕ್ಕಳು ಮತ್ತೆ ಮೊದಲಿನಂತೆ ಮಸ್ತಿ ಮಾಡುವ ದಿನಗಳು ಯಾವಾಗ ಬರುತ್ತವೋ’ ಎಂದು ಸುಮ್ಮನಾದಳು ಚಿಕ್ಕ ಮಕ್ಕಳ ಜತೆ ಶಿರಸಿಗೆ ಬಂದಿರುವ ದೀಪ್ತಿ.

ಅಪ್ಪನ ಸಂಕಟ–1

‘ಎಷ್ಟಂದರೂ ದುಡಿದು ತಿನ್ನುವವರು ನಾವು. ಬಂದ ಗಿರಾಕಿಗಳನ್ನು ರಿಕ್ಷಾದಲ್ಲಿ ಕರೆದೊಯ್ಯಲೇ ಬೇಕು. ರೋಗಿಗಳನ್ನೂ ಆಸ್ಪತ್ರೆಗೆ ಕರೆದೊಯ್ಯುಬೇಕಾಗುತ್ತದೆ. ಮನೆ ಸೇರಿದ ಮೇಲೆ ಮೊದಲು ಸ್ನಾನ, ಆಮೇಲೆ ಊಟ. ಮಗನಿಗೆ ಒಂದು ವರ್ಷ ಆಯಿತಷ್ಟೇ. ಊರು ತಿರುಗುವ ನನಗೆ ಅವನ ಎತ್ತಿ ಮುದ್ದಾಡಲು ಆತಂಕ. ಅಮ್ಮನ ಮಡಿಲಿನಲ್ಲಿರುವ ಮಗುವನ್ನು ನೋಡುವ ಆನಂದವೇ ನನ್ನ ಭಾಗ್ಯ ಎಂದುಕೊಂಡಿದ್ದೇನೆ’ ಎಂದು ಮುಗುಳ್ನಕ್ಕರು ರಿಕ್ಷಾ ಚಾಲಕ ಚಂದ್ರಹಾಸ.

‘ಡ್ಯೂಟಿ ಮುಗಿಸಿ ಮನೆಗೆ ಬಂದಿದ್ದೇ ಮಗುವನ್ನು ಎತ್ತಿ ಆಡಿಸುವುದು ರೂಢಿ. ಆದರೆ, ಕೊರೊನಾ ನಮ್ಮ ದೈನಂದಿನ ರೂಢಿಗೆ ಭಂಗವೊಡ್ಡಿದೆ. ಡ್ಯೂಟಿಗೆ ಹೋಗುವ ನಾವಿಬ್ಬರೂ ಮನೆಗೆ ಬಂದ ಮೇಲೆ ಸ್ನಾನ ಮುಗಿಸಿ, ಕೆಲ ಸಮಯ ಬಿಡುವುಕೊಟ್ಟು ಮಗುವನ್ನು ಎತ್ತಿಕೊಳ್ಳುತ್ತೇವೆ. ಪುಟ್ಟನಿಗೆ ಈಗ ಅದೇ ಬೇಸರ’ ಎಂಬುದು ವಿಜಯಾ ಬ್ಯಾಂಕ್ ಉದ್ಯೋಗಿ ಲಕ್ಷ್ಮೀಕಾಂತ ನಾಯ್ಕ ಅಳಲು.

ಈಗ ನಾನೇಕೆ ಈ ನಾಲ್ವರ ಕಥೆಗಳನ್ನು ಹೇಳುತ್ತಿದ್ದೇನೆ ಎಂಬ ಪ್ರಶ್ನೆ ಮೂಡಿತೆ?

ರಶ್ಮಿ, ಸುಧಾ, ದೀಪ್ತಿ–ನವೀನ್, ಚಂದ್ರಹಾಸ ನನಗೆ ಮಾತಿಗೆ ಸಿಕ್ಕವರು. ಉದ್ಯೋಗಕ್ಕೆ ತೆರಳುವ ಸಾವಿರಾರು ಕುಟುಂಬಗಳು ಇದೇ ಸಂಕಟದಲ್ಲಿ ಬೇಯುತ್ತಿವೆ. ಕೋವಿಡ್–19 ಉದ್ಯೋಗಿಗಳ ಜೀವನ ಕ್ರಮವನ್ನೇ ಬದಲಾಗಿದೆ. ಅಮ್ಮನ ವಾತ್ಸಲ್ಯ, ಅಪ್ಪನ ಬಿಗಿ ಹಿಡಿತ, ಆ ಸ್ಪರ್ಶ ಸುಖಸಿಗದ ಮಗುವಿಗೆ ಆಟಿಕೆಯೇ ಜೊತೆಗಾತಿಯಾಗಿದೆ, ಎದೆಗಾನಿಸಿ ಅಪ್ಪಿಕೊಳ್ಳುವ ಟೆಡ್ಡಿಬೇರ್‌ನಲ್ಲಿ ಅಮ್ಮನ ಅಪ್ಪುಗೆಯ ಹಿತ ಅರಸುತ್ತಿದೆ.

ದುಡಿಮೆಯ ಅನಿವಾರ್ಯತೆ, ಕರುಳಿನ ಕುಡಿಯ ಕಾಳಜಿ, ಸಾಂಕ್ರಾಮಿಕ ಕಾಯಿಲೆಯಿಂದ ಸ್ವಯಂ ರಕ್ಷಣೆ ಹೀಗೆ ತೊಳಲಾಟದಲ್ಲೇ ಹಗಲು–ರಾತ್ರಿಗಳು ಉರುಳುತ್ತಿವೆ. ಉತ್ತರ ಕಾಣದ ಸಮಸ್ಯೆಗಳಿಂದ ನೆಮ್ಮದಿ ಕಳೆದುಕೊಂಡ ಹಲವರು ಮಾನಸಿಕ ತಜ್ಞರನ್ನು ಭೇಟಿ ಮಾಡುತ್ತಿದ್ದಾರೆ.

‘ಕೋವಿಡ್–19 ಸಾಂಕ್ರಾಮಿಕ ಕಾಯಿಲೆ ಬಂದ ಮೇಲೆ ಮಾನಸಿಕ ತಜ್ಞರನ್ನು ಭೇಟಿ ಮಾಡುವವರ ಪ್ರಮಾಣ ಹೆಚ್ಚಿದೆ. ಎಲ್ಲಿ ನನಗೆ ಕೊರೊನಾ ಬರುತ್ತದೆಯೋ, ನನ್ನ ಮಗುವಿಗೆ ಕೊರೊನಾ ಸೋಂಕು ತಗುಲಿದರೆ ಏನು ಮಾಡುವುದು ಎನ್ನುವ ಕಳವಳದಲ್ಲಿ ಹಲವರು, ಮಾನಸಿಕ ಖಿನ್ನತೆಗೆ ಜಾರುತ್ತಿದ್ದಾರೆ. ಈ ರೀತಿ ಒತ್ತಡದಿಂದ ಹೊರಬರಲು ಸಾಧ್ಯದಷ್ಟು ಮನಸ್ಸನ್ನು ಬೇರೆಡೆ ಕೇಂದ್ರೀಕರಿಸಬೇಕು. ಆಸಕ್ತಿಯ ಕ್ಷೇತ್ರದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಬೇಕು’ ಎನ್ನುತ್ತಾರೆ ಕೌನ್ಸೆಲರ್ ಮಾಲಾ ಗಿರಿಧರ.

‘ಇದು ಸಂದಿಗ್ಧ ಸಂದರ್ಭ. ಸ್ವಯಂ ರಕ್ಷಣೆಯಷ್ಟೇ ಮಗುವಿನ ಕಾಳಜಿಯೂ ಮುಖ್ಯ. ಮಕ್ಕಳದು ಹೂವಿನಂಥ ಕೋಮಲ ಹೃದಯ. ಅಪ್ಪ–ಅಮ್ಮನ ಪ್ರೀತಿಯ ನೇವರಿಕೆಯೇ ಮಗುವಿಗೆ ಜೀವದುಸಿರು. ಹೀಗಾಗಿ, ಉದ್ಯೋಗಕ್ಕೆ ತೆರಳುವ ಗಂಡ–ಹೆಂಡತಿಯರಲ್ಲಿ ಯಾರಾದರೊಬ್ಬರು ಕೆಲ ಸಮಯ ತ್ಯಾಗ ಮಾಡಬೇಕು. ಇಬ್ಬರಲ್ಲಿ ಯಾರಿಗೆ ಹೆಚ್ಚು ಅನುಕೂಲವಿದೆಯೋ ಅವರು, ದೀರ್ಘ ರಜೆ ಪಡೆದು ಮಗುವಿನ ಆರೈಕೆ ಮಾಡಬೇಕು. ಸಾಧ್ಯವಾದಷ್ಟು ಮನೆಯಿಂದ ಹೊರ ಹೋಗುವುದನ್ನು ಕಡಿಮೆ ಮಾಡಬೇಕು. ಉದ್ಯೋಗಕ್ಕಾಗಿ ಹೊರ ಹೋಗುವವರು ಪ್ರತ್ಯೇಕ ವಾಸವಿರಬೇಕು’ ಎಂಬುದು ಅವರ ಸಲಹೆ.

‘ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಹಲವರು ಈಗಾಗಲೇ ಈ ಕ್ರಮವನ್ನು ಅನುಸರಿಸುತ್ತಿದ್ದಾರೆ. ಒಬ್ಬರು ಮಗುವನ್ನು ನೋಡಿಕೊಂಡರೆ, ಇನ್ನೊಬ್ಬರು ಕರ್ತವ್ಯಕ್ಕೆ ತೆರಳುತ್ತಾರೆ’ ಎಂದು ಅವರ ತಮ್ಮ ಸ್ನೇಹಿತರ ದಿನಚರಿಯನ್ನು ತಿಳಿಸಿದರು.

ಲಿಂಕ್ಡ್‌ ಇನ್ ಸಮೀಕ್ಷೆ: ಲಿಂಕ್ಡ್‌ ಇನ್ ವೆಬ್‌ಸೈಟ್ ಇತ್ತೀಚೆಗೆ ಸಮೀಕ್ಷೆಯೊಂದನ್ನು ನಡೆಸಿದೆ. ಈ ಸಮೀಕ್ಷೆಯ ಪ್ರಕಾರ ಶೇ 50ರಷ್ಟು ಉದ್ಯೋಗಸ್ಥ ಮಹಿಳೆಯರು ಮೊದಲಿಗಿಂತ ಹೆಚ್ಚು ಆತಂಕ ಹಾಗೂ ಒತ್ತಡದಲ್ಲಿ ಸಿಲುಕಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು