ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಂಎಸ್‌: ಅರಿವಿದ್ದರೆ ನಿಭಾಯಿಸುವುದು ಸುಲಭ

Last Updated 21 ಮೇ 2021, 19:30 IST
ಅಕ್ಷರ ಗಾತ್ರ

ಋತುಸ್ರಾವಕ್ಕಿಂತ ಮುಂಚಿನ ಕೆಲವು ಲಕ್ಷಣ (ಪ್ರೀಮೆನುಸ್ಟ್ರುಯೆಲ್‌ ಸಿಂಡ್ರೋಮ್‌– ಪಿಎಂಎಸ್‌)ಗಳು ಬಹುತೇಕ ಮಹಿಳೆಯರು ಅನುಭವಿಸುವ ಸಮಸ್ಯೆ ಎನ್ನಬಹುದು. ಇದು ಕೆಲವೊಮ್ಮೆ ಮಹಿಳೆಯರ ಗುಣಮಟ್ಟದ ಬದುಕಿನ ಮೇಲೆ ಪರಿಣಾಮ ಬೀರಬಹುದು. ಮಾನಸಿಕ ಆರೋಗ್ಯದ ಏರುಪೇರಿಗೆ ಕಾರಣವಾಗುವ ಇದನ್ನು ಸರಿಯಾಗಿ ಅರಿತುಕೊಂಡರೆ ಸಮರ್ಥವಾಗಿ ನಿಭಾಯಿಸಬಹುದು; ಯಾವಾಗ ತಜ್ಞರ ನೆರವು ಪಡೆಯಬಹುದು ಎಂಬುದೂ ಇದರಿಂದ ಸುಲಭ.

ಶೇ 75ರಷ್ಟು ಮಹಿಳೆಯರಲ್ಲಿ ಮಕ್ಕಳಾಗುವಂತಹ ವಯಸ್ಸಿನಲ್ಲಿ ಅಂದರೆ ಮೊದಲ ಋತುಸ್ರಾವದಿಂದ ಹಿಡಿದು 40–45 ವರ್ಷದವರೆಗೂ ಈ ಪಿಎಂಎಸ್‌ ಎಂಬುದು ಕಾಡುತ್ತಿರುತ್ತದೆ. ಪ್ರತಿ 20 ಮಹಿಳೆಯರಲ್ಲಿ ಒಬ್ಬರಿಗೆ ಇದು ಗುಣಮಟ್ಟದ ಬದುಕನ್ನೇ ಕಸಿದುಕೊಂಡುಬಿಡುತ್ತದೆ. ಹಾಗೆಯೇ ಕುಟುಂಬದ ಇತರ ಸದಸ್ಯರಲ್ಲೂ ಆತಂಕ ಸೃಷ್ಟಿಸಿಬಿಡುತ್ತದೆ.

ಕೋವಿಡ್‌ನಿಂದ ಜಾಸ್ತಿಯೇ?: ಈ ಕೋವಿಡ್‌ ಸಂದರ್ಭದಲ್ಲಿ ಬಹಳಷ್ಟು ಮಹಿಳೆಯರು ತಮ್ಮ ಮುಟ್ಟಿನಲ್ಲಿ ಏರುಪೇರಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಅನಿಯಮಿತ ಮುಟ್ಟು, ಅಧಿಕ ಸ್ರಾವ ಅಥವಾ ಕಡಿಮೆ ಸ್ರಾವ, ದೀರ್ಘಕಾಲದವರೆಗೆ ಸ್ರಾವ ಕಾಣಿಸಿಕೊಳ್ಳುವುದು ಅಥವಾ ಮುಟ್ಟೇ ಆಗದಿರುವಂತಹ ಸಮಸ್ಯೆಗಳು ಕಾಣಿಸಿಕೊಂಡಿವೆ. ಒತ್ತಡ ಜಾಸ್ತಿಯಾಗಿರುವುದು, ಕಾರ್ಟಿಸಾಲ್‌ ಎಂಬ ಹಾರ್ಮೋನ್‌ ಮಟ್ಟದಲ್ಲಿ ಬದಲಾವಣೆ ಇದಕ್ಕೆ ಕಾರಣಗಳು. ಕೋವಿಡ್‌ನಿಂದಾಗಿ ಅಥವಾ ಲಸಿಕೆಯಿಂದಾಗಿ ಈ ಪಿಎಂಎಸ್‌ ಲಕ್ಷಣಗಳು ಜಾಸ್ತಿಯಾಗಿವೆ ಎಂದು ಹೇಳಲು ಸಾಧ್ಯವಿಲ್ಲದಿದ್ದರೂ ಈಗಾಗಲೇ ಇರುವ ಮಾನಸಿಕ ಆರೋಗ್ಯದ ಸಮಸ್ಯೆಗಳು ಈ ದುರಿತ ಕಾಲದಲ್ಲಿ ಜಾಸ್ತಿಯಾಗಿರಬಹುದು.

ಲಕ್ಷಣಗಳು: ಪಿಎಂಎಸ್‌ ಪತ್ತೆ ಮಾಡುವಂತಹ ಯಾವುದೇ ಪರೀಕ್ಷೆಗಳಿಲ್ಲ. ವಿವರಗಳನ್ನು ಸಂಪೂರ್ಣ ಪರಿಶೀಲಿಸಿ ಇದನ್ನು ಪತ್ತೆ ಮಾಡಬಹುದಷ್ಟೆ. ಕೆಲವು ಲಕ್ಷಣಗಳು ಪ್ರತಿ ಬಾರಿ ಋತುಸ್ರಾವಕ್ಕಿಂತ 10–15 ದಿನಗಳ ಮುಂಚೆ ಕಾಣಿಸಿಕೊಂಡರೆ, ಕನಿಷ್ಠ 6 ತಿಂಗಳ ಕಾಲ ಇದು ಮುಂದುವರಿದರೆ ಪಿಎಂಎಸ್‌ ಇದೆ ಎನ್ನಬಹುದು. ಇಂತಹ ಲಕ್ಷಣಗಳು ಋತುಸ್ರಾವದ ನಂತರ ಕಡಿಮೆಯಾಗುತ್ತವೆ. ಮಾನಸಿಕ ಲಕ್ಷಣಗಳಲ್ಲಿ ಉದ್ವೇಗ, ಕಿರಿಕಿರಿ, ಆಯಾಸ, ಆತಂಕ, ಆತ್ಮವಿಶ್ವಾಸ ಕಡಿಮೆಯಾಗುವುದು, ಸಣ್ಣ ಸಣ್ಣ ವಿಷಯಕ್ಕೂ ಹೆಚ್ಚು ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದು ಸೇರಿವೆ. ನಿದ್ರೆಯ ಸಮಸ್ಯೆ, ಲೈಂಗಿಕ ಆಸಕ್ತಿಯಲ್ಲಿ ಬದಲಾವಣೆ ಕಾಣಿಸಿಕೊಳ್ಳಬಹುದು. ಸ್ತನದಲ್ಲಿ ಊತ, ಬಿಗಿತ, ನೋವು, ಹೊಟ್ಟೆಯುಬ್ಬರ, ಕೈ– ಕಾಲುಗಳಲ್ಲಿ ಊತ, ತೂಕದಲ್ಲಿ ಹೆಚ್ಚಳ ಮೊದಲಾದವು ದೈಹಿಕ ಲಕ್ಷಣಗಳು. ಆಸ್ತಮ, ಮೂರ್ಛೆ ರೋಗ ಮೊದಲಾದ ಸಮಸ್ಯೆಗಳಿದ್ದರೆ ತೀವ್ರವಾಗಬಹುದು. ಪಿಎಂಎಸ್‌ಗೆ ಕಾರಣಗಳು ಸಂಪೂರ್ಣವಾಗಿ ಇನ್ನೂ ಗೊತ್ತಾಗಿಲ್ಲ. ಆದರೆ ಹಾರ್ಮೋನ್‌ ಅಸಮತೋಲನ ಅಥವಾ ಪ್ರೊಜೆಸ್ಟಿರಾನ್‌ ಹಾರ್ಮೋನ್‌ಗೆ ದೇಹ ಹೆಚ್ಚು ಸ್ಪಂದಿಸಿದರೆ ಕಾಣಿಸಿಕೊಳ್ಳಬಹುದು.

ಪರಿಹಾರ ಇದೆಯೇ?
ಪಿಎಂಎಸ್‌ ಬಗ್ಗೆ ಅರಿವಿದ್ದರೆ ಲಕ್ಷಣಗಳ ಜೊತೆ ಹೊಂದಿಕೊಂಡು ಆರಾಮವಾಗಿರಬಹುದು. ಋತುಚಕ್ರ ಮತ್ತು ಪಿಎಂಎಸ್‌ ಲಕ್ಷಣಗಳ ಬಗ್ಗೆ ಡೈರಿ ಅಥವಾ ಆ್ಯಪ್‌ನಲ್ಲಿ ವಿವರ ದಾಖಲಿಸಿಕೊಂಡರೆ ಬೇರೆ ದಿನಗಳಲ್ಲಿ ಮಹತ್ವದ ಸಭೆ– ಸಮಾರಂಭಗಳನ್ನು ನಿಗದಿಪಡಿಸಿಕೊಳ್ಳಲು ನೆರವಾಗುತ್ತದೆ. ಸಂಗಾತಿ/ ಪತಿ, ಸ್ನೇಹಿತರು ಮತ್ತು ವೈದ್ಯರ ಜೊತೆ ಈ ಬಗ್ಗೆ ಮಾತನಾಡಿದರೆ ಅವರು ಕೂಡ ಅರ್ಥ ಮಾಡಿಕೊಳ್ಳಬಲ್ಲರು. ನಿಯಮಿತವಾದ ವ್ಯಾಯಾಮ, ಯೋಗ ಮೊದಲಾದವುಗಳಿಂದ ಇದನ್ನು ಕಡಿಮೆ ಮಾಡಿಕೊಳ್ಳಬಹುದು. ಹೆಚ್ಚು ಸಕ್ಕರೆ ಇರುವ ತಿನಿಸು, ಸಂಸ್ಕರಿಸಿದ ಕಾರ್ಬೊಹೈಡ್ರೇಟ್‌, ಹೆಚ್ಚು ಕೊಬ್ಬಿರುವ ತಿನಿಸು, ಕೆಫೈನ್‌, ಪಾನೀಯಗಳನ್ನು ಈ ಸಂದರ್ಭದಲ್ಲಿ ಸೇವಿಸದಿರುವುದು ಸೂಕ್ತ.

ವೈದ್ಯರ ಬಳಿ ಈ ಬಗ್ಗೆ ಮಾತನಾಡಿ. ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆಯಿಲ್ಲ. ಅವರವರ ಸಮಸ್ಯೆಗಳನ್ನು ನೋಡಿಕೊಂಡು ಚಿಕಿತ್ಸೆ ನೀಡಬೇಕಾಗುತ್ತದೆ.

ಡಾ. ಅರುಣ ಮುರಳೀಧರ, ಸೀನಿಯರ್‌ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ, ಫೋರ್ಟಿಸ್‌ ಲಾ ಫೆಮ್ಮೆ ಆಸ್ಪತ್ರೆ, ಬೆಂಗಳೂರು
ಡಾ. ಅರುಣ ಮುರಳೀಧರ, ಸೀನಿಯರ್‌ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ, ಫೋರ್ಟಿಸ್‌ ಲಾ ಫೆಮ್ಮೆ ಆಸ್ಪತ್ರೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT