ಗುರುವಾರ , ಜೂನ್ 4, 2020
27 °C

ಗರ್ಭಿಣಿಯಲ್ಲಿರಲಿ ಮುನ್ನೆಚ್ಚರಿಕೆ

ಡಾ. ಉಷಾ ವಿಕ್ರಾಂತ್ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಸೋಂಕಿನ ಕುರಿತ ಅನೇಕ ಸಂಗತಿಗಳು ಇನ್ನೂ ಅಧ್ಯಯನ ಮತ್ತು ಸಂಶೋಧನೆಯ ಚೌಕಟ್ಟಿನಲ್ಲೇ ಇರಬಹುದು. ಗರ್ಭಾವಸ್ಥೆ, ಹೆರಿಗೆ, ನವಜಾತ ಶಿಶು, ಅದಕ್ಕೆ ಎದೆಹಾಲು ಕುಡಿಸುವುದು ಮುಂತಾದ ಹಂತಗಳಲ್ಲಿ ಸೋಂಕಿನ ಪರಿಣಾಮಗಳ ಬಗ್ಗೆ ವೈದ್ಯಲೋಕಕ್ಕೆ ತಿಳಿಯ ಬೇಕಾಗಿರುವುದೂ ಸಾಕಷ್ಟಿರಬಹುದು. ಹಾಗಾದರೆ ಗರ್ಭಿಣಿಯರು ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು?

ಜಗತ್ತನ್ನೇ ಆವರಿಸಿರುವ ಕೊರೊನಾ ಸೋಂಕು ಪ್ರತಿಯೊಬ್ಬರಲ್ಲೂ ಆತಂಕ ಹುಟ್ಟಿಸಿದೆ. ಆರೋಗ್ಯ ಮತ್ತು ಸ್ವಚ್ಛತೆಯ ಕ್ರಮ, ದೈಹಿಕ ಅಂತರ ಮುಂತಾದ ಸೂಚನೆಗಳನ್ನು ಎಲ್ಲರೂ ಅನುಸರಿಸುವುದು ರೋಗದ ವಿರುದ್ಧ ಹೋರಾಟವನ್ನು ಅರ್ಧ ಗೆದ್ದಂತೆ. ವಿಶೇಷ ಮತ್ತು ಸೂಕ್ಷ್ಮ ದೈಹಿಕ ಬದಲಾವಣೆಗಳ ಹಂತದಲ್ಲಿರುವ ಗರ್ಭಿಣಿಯರು ಕೂಡ ಈ ಎಲ್ಲ ವಿಚಾರಗಳಲ್ಲಿ ಮುನ್ನೆಚ್ಚರಿಕೆ ವಹಿಸುವುದು ಅವರ ನೆಮ್ಮದಿಗೆ ಬಹಳ ಮುಖ್ಯ.

ಈಗಾಗಲೇ ಗೊತ್ತಿರುವಂತೆ ಕೊರೊನಾ ಸೋಂಕಿನ ವಿಷಯದಲ್ಲಿ ‘ಸಂಪರ್ಕವೇ ಸೋಂಕಿಗೆ ಮೂಲ’ ಎನ್ನುವುದನ್ನು ಗರ್ಭಿಣಿಯರು ಮರೆಯಬಾರದು. ಎರಡು ಮೀಟರ್‌ಗಳಿಗಿಂತ ಕಡಿಮೆ ಅಂತರದಲ್ಲಿ ಸೋಂಕಿತರ ಹತ್ತಿರ ಸಂಪರ್ಕಕ್ಕೆ ಬಂದರೆ ಸೋಂಕು ಹರಡುವ ಸಾಧ್ಯತೆ ಇದ್ದೇ ಇರುತ್ತದೆ.

ಸಾಮಾನ್ಯವಾಗಿ ಸೋಂಕು ಮತ್ತು ಅದರ ಲಕ್ಷಣಗಳು ಇತರ ವ್ಯಕ್ತಿಗಳಿಗಿಂತ ಗರ್ಭಿಣಿಯರಿಗೆ ಭಿನ್ನವಾಗೇನೂ ಇರುವುದಿಲ್ಲ; ಅವರಲ್ಲಿ ಬಹುಪಾಲು ಜನರಲ್ಲಿ ಸ್ವಲ್ಪ ಹೆಚ್ಚು ಜ್ವರದಂತಹ ಲಕ್ಷಣ ತೋರಬಹುದು. ಆದರೆ ಗರ್ಭಧಾರಣೆ, ಗರ್ಭಾವಸ್ಥೆ ಎನ್ನುವುದೇ ಮಹಿಳೆಯರ ದೇಹದ ಸೋಂಕುನಿರೋಧಕ ವ್ಯವಸ್ಥೆಯನ್ನು ಬದಲಿಸುವುದರಿಂದ, ಕೆಲವೊಮ್ಮೆ ವೈರಾಣು ಸೋಂಕಿಗೆ ಅವರ ದೇಹ ಭಿನ್ನ ರೀತಿಯಲ್ಲಿ ಪ್ರತಿಕ್ರಿಯೆ ತೋರಿಸಬಹುದು, ತೀವ್ರ ಸೋಂಕು ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಭಯ ಬೇಡ

ಕೋವಿಡ್- 19 ಹೊಸದಾಗಿ ಕಂಡ ವೈರಾಣು ಆಗಿರುವುದರಿಂದ, ಗರ್ಭಾವಸ್ಥೆ, ಗರ್ಭಿಣಿ ಮಹಿಳೆ, ನವಜಾತ ಶಿಶು ಇವರ ಮೇಲೆ ವೈರಾಣು ಸೋಂಕಿನ ಪರಿಣಾಮ ಏನೇನು, ಎಷ್ಟೆಷ್ಟು ಎಂಬುದಕ್ಕೆ ತೀರಾ ಸೀಮಿತ ಸಾಕ್ಷ್ಯಗಳಿವೆ ಎನ್ನಬಹುದು. ಜಗತ್ತಿನ ವಿವಿಧ ದೇಶಗಳ ಪ್ರಸೂತಿ ವಿಭಾಗಗಳಲ್ಲಿ ಈ ಬಗ್ಗೆ ಇದೀಗ ಅಧ್ಯಯನಗಳು ನಡೆಯುತ್ತಿವೆ. ಚೀನಾ ದೇಶದಲ್ಲಿ ಒಂದು ಪ್ರಕರಣದ ವರದಿ ಹೇಳುವ ಹಾಗೆ, ಬಸಿರಿನ ಅವಧಿಯಲ್ಲಿ ತಾಯಿಯಿಂದ ಶಿಶುವಿಗೆ ಸೋಂಕು ಬಂದಿಲ್ಲ. ಗರ್ಭಕೋಶದ ದ್ರವ, ಗರ್ಭನಾಳದ ರಕ್ತ, ನವಜಾತ ಶಿಶುವಿನ ಗಂಟಲ ದ್ರವ, ಮಾಸು, ಯೋನಿ ದ್ರವ ಮತ್ತು ಎದೆ ಹಾಲು - ಇವು ಯಾವುದರಲ್ಲೂ ವೈರಾಣುವಿನ ಕುರುಹು ಇರಲಿಲ್ಲ. ಹಾಗೆಯೇ ಸೋಂಕು ಏನಾದರೂ ತಗುಲಿರುವ ಗರ್ಭಿಣಿಯರಿಗೆ ಸಂಬಂಧಿಸಿದಂತೆ ಗರ್ಭಪಾತದ ಪ್ರಮಾಣ, ಅವಧಿಗೆ ಮೊದಲೇ ಹೆರಿಗೆ ಅಥವಾ ಶಿಶುವಿನಲ್ಲಿ ಜನ್ಮದೋಷಗಳು - ಇವು ಯಾವುದರ ಪ್ರಮಾಣದಲ್ಲೂ ಹೆಚ್ಚಳ ಕಂಡುಬಂದಿಲ್ಲ.

ಆದರೆ ಒಂದೇ ಒಂದು ಪ್ರಕರಣದಲ್ಲಿ, ಸೋಂಕು ದೃಢಪಟ್ಟ ಗರ್ಭಿಣಿಗೆ ಹುಟ್ಟಿರುವ ಶಿಶುವಿಗೂ ಸೋಂಕು ಇದೆ ಎಂಬ ವರದಿ ಬಂದಿದೆ. ಸೋಂಕು ಇರುವ ಗರ್ಭಿಣಿಯ ಸಾವು ಕೂಡ ಇದುವರೆಗೆ ಸಂಭವಿಸಿಲ್ಲ. ಗರ್ಭಿಣಿಯರಿಗೆ ನ್ಯುಮೋನಿಯ ತಗುಲಿರುವ, ಆದರೆ ಅವರೆಲ್ಲ ಚೇತರಿಸಿಕೊಂಡ ಕೆಲವು ಪ್ರಕರಣಗಳು ಮಾತ್ರ ತಿಳಿದುಬಂದಿವೆ.

ಗರ್ಭಿಣಿಯರಿಗೆ ಸಲಹೆಗಳು

ಸೋಂಕಿನಿಂದ ಪಾರಾಗುವುದಕ್ಕೆ ಇತರರು ಮಾಡುವಂತೆ ಪದೇ ಪದೇ ಸಾಬೂನು ಬಳಸಿ ಕೈಗಳನ್ನು ತೊಳೆಯುವುದು, ಸೀನುವಾಗ, ಕೆಮ್ಮುವಾಗ ಕಾಗದದ ಟಿಶ್ಯು ಮುಖಕ್ಕೆ ಅಡ್ಡ ಹಿಡಿಯುವುದು, ಸಾರ್ವಜನಿಕ ಸಾರಿಗೆಯನ್ನು ಬಳಸದಿರುವುದು, ಹೆಚ್ಚು ಜನ ಸೇರುವ ಕಡೆ ಹೋಗದಿರುವುದು.

ಹಾಲೂಡುತ್ತಿರುವ ತಾಯಂದಿರಿಗೆ ಸಲಹೆಗಳು

*ನವಜಾತ ಶಿಶುವಿಗೆ ವೈರಾಣು ಸೋಂಕು ಆಗುವ ಸಾಧ್ಯತೆಗೆ ಹೆದರದಿರಿ, ಅದಕ್ಕಿಂತ ಎದೆಹಾಲು ಕೊಡುವುದರ ಪ್ರಯೋಜನಗಳೇ ಅಧಿಕ.

*ಮಗುವನ್ನು ಮುಟ್ಟುವ ಮೊದಲು, ಹಾಲಿನ ಶೀಷೆ, ಬ್ರೆಸ್ಟ್ ಪಂಪ್ ಇತ್ಯಾದಿ ಮುಟ್ಟುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆಯಿರಿ.

*ಮಗುವಿಗೆ ಹಾಲೂಡುವ ಮೊದಲು ನಿಮ್ಮ ಎದೆ, ಕೈಗಳು ಮತ್ತು ಹೊಟ್ಟೆಯನ್ನು ತೊಳೆದುಕೊಳ್ಳಿ.

*ಮಗುವಿಗೆ ಹಾಲೂಡುವಾಗ ಮುಖಕ್ಕೆ ಮಾಸ್ಕ್ ಕಟ್ಟಿಕೊಳ್ಳಿ.

*ನಿಮಗೇನಾದರೂ ಸೋಂಕು ಇದ್ದ ಪಕ್ಷದಲ್ಲಿ, ನೀವು ನಿಮ್ಮ ಎದೆಹಾಲನ್ನು ಹಿಂಡಿ ತೆಗೆದು ಶೀಷೆಯಲ್ಲಿ ಹಾಕಿ ಮಗುವಿಗೆ ಕುಡಿಸುವ ಆಯ್ಕೆಯನ್ನೂ ಮಾಡಬಹುದು.

*ಹಿಂಡಿ ತೆಗೆದ ಎದೆಹಾಲನ್ನು ಮಗುವಿಗೆ ಕುಡಿಸಲು, ಸೋಂಕು ಇಲ್ಲದ ನಿಮ್ಮ ಕುಟುಂಬದ ಒಬ್ಬ ಸದಸ್ಯರ ಸಹಾಯ ಪಡೆಯಿರಿ.

(ಲೇಖಕಿ ಬೆಂಗಳೂರಿನಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು