ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಲಿಕ ಋತುಬಂಧ ಬೇಡ ಆತಂಕ

ಅಂಕುರ
Last Updated 27 ಜುಲೈ 2019, 9:14 IST
ಅಕ್ಷರ ಗಾತ್ರ

40ರ ನಂತರ ಮಹಿಳೆ ಋತುಬಂಧ ತಲುಪುತ್ತಾಳೆ. ಈ ಹಂತವನ್ನು ಒಂದು ಸಹಜ ಪ್ರಕ್ರಿಯೆ ಎಂದು ಪರಿಗಣಿಸಲಾಗುತ್ತದೆ. ಆದರೆ ಕೆಲವು ಮಹಿಳೆಯರು ಬಹಳ ಬೇಗ ಈ ಬದಲಾವಣೆಗೆ ಒಳಗಾಗುತ್ತಾರೆ. ಅದು ಸಾಮಾನ್ಯ ಋತುಬಂಧಕ್ಕಿಂತ 10 ವರ್ಷ ಮುಂಚೆಯೇ ಆಗಿರಬಹುದು ಅಥವಾ ಮುಟ್ಟು ಆರಂಭವಾಗುವುದರ ಜೊತೆಗೇ ಕೆಲವರು ಈ ಹಂತ ತಲುಪಲೂಬಹುದು. ಇದನ್ನು ಪ್ರಿಮೆಚ್ಯೂರ್ ಒವೇರಿಯನ್ ಇನ್‌ಸಫಿಶಿಯೆನ್ಸಿ (ಪಿಒಐ), ಅಂದರೆ ಅಕಾಲಿಕ ಅಂಡಾಶಯ ಕೊರತೆ ಎಂದು ಕರೆಯಲಾಗುತ್ತದೆ. ಅವಧಿಗೆ ಮುನ್ನವೇ ಅಂಡಾಶಯ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುವ ಪ್ರಕ್ರಿಯೆಯನ್ನು ಇದು ಸೂಚಿಸುತ್ತದೆ.

ಪಿಒಐ ಸುಮಾರು ಶೇ 1ರಷ್ಟು ಮಹಿಳೆಯರನ್ನು ಬಾಧಿಸುತ್ತದೆ ಎಂದು ಅಂದಾಜಿಲಾಗಿದೆ.ಈ ಸ್ಥಿತಿ ಯಾವುದೆ ವಯಸ್ಸಿನಲ್ಲೂ ಕಾಣಿಸಿಕೊಳ್ಳಬಹುದು.ಮುಟ್ಟಿನ ಆರಂಭದಲ್ಲಿಯೇ ಈ ತೊಡಕು ಎದುರಾದಲ್ಲಿ, ಅಂತಹ ಯುವತಿಯರ ಅಂಡಾಶಯ ಎಂದಿಗೂ ಸಾಮಾನ್ಯವಾಗಿ ಕಾರ್ಯನಿರ್ವಹಿಸುವುದಿಲ್ಲ ಮತ್ತು ಅವರು ಅಕಾಲಿಕ ಅಂಡಾಶಯದ ವೈಫಲ್ಯವನ್ನು ಮುಂದೆಯೂ ಅನುಭವಿಸುತ್ತಾರೆ. ಇನ್ನೂ ಕೆಲ ಮಹಿಳೆಯರಲ್ಲಿ ಮೊದಲು ಸಾಮಾನ್ಯವಾಗಿ ಕಾರ್ಯನಿರ್ವಹಿಸುವ ಅಂಡಾಶಯ ಕೆಲ ವರ್ಷಗಳ ನಂತರ ಸಮಸ್ಯಾತ್ಮಕ ಬದಲಾವಣೆಗಳಿಗೆ ಒಳಗಾಗುತ್ತ ಹೋಗುತ್ತದೆ.

ಗುರುತಿಸುವುದು ಹೇಗೆ?

ಅಕಾಲ ಋತುಬಂಧವನ್ನು (ಅಕಾಲಿಕ ಅಂಡಾಶಯ ಕೊರತೆಯನ್ನು)ಗುರುತಿಸುವುದು ಸುಲಭ. ಮೇಲ್ನೋಟಕ್ಕೆ ಋತುಬಂಧದ ಎಲ್ಲಾ ಲಕ್ಷಣಗಳೂ ಇಲ್ಲಿ ಕಂಡುಬರುತ್ತವೆ. ಮೊದಲು ಋತುಚಕ್ರಗಳು ಅನಿಯಮಿತವಾಗುತ್ತ ಹೋಗಬಹುದು. ಇದು ಹಂತಹಂತವಾಗಿ ಕಾಣಿಸಿಕೊಳ್ಳಬಹುದು ಅಥವಾ ಹಠಾತ್‌ಆಗಿಯೂ ಎದುರಾಗಬಹುದು. ಅಂಡಾಶಯಗಳು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಎನ್ನುವಂತಹ ಹಾರ್ಮೋನುಗಳ ಸ್ರವಿಸುವಿಕೆಯನ್ನು ನಿಲ್ಲಿಸಬಹುದು. ತಕ್ಷಣ ಅನುಭವಕ್ಕೆ ಬರುವ ಲಕ್ಷಣಗಳೆಂದರೆ:

* ದೇಹ ಬಿಸಿಯಾಗುವುದು, ಬೆವರು

* ಮೂತ್ರ ವಿಸರ್ಜನೆ ಮಾಡುವಾಗ ಉರಿಯ ಅನುಭವ

* ಯೋನಿಯಲ್ಲಿ ಶುಷ್ಕತೆ

* ಮಾನಸಿಕ ತುಮುಲ, ಖಿನ್ನತೆ, ಆತಂಕ, ಗಾಬರಿ

* ಮೈಕೈ ನೋವು, ಆಯಾಸ

* ನಿದ್ರಾಹೀನತೆ, ರಾತ್ರಿ ಪದೆ ಪದೆ ಎಚ್ಚರವಾಗುವುದು

* ಮೂಳೆಗಳ ಸಾಂದ್ರತೆ ಕಡಿಮೆಯಾಗುವುದು

* ಇನ್ನೂ ಕೆಲವರಿಗೆ, ಗರ್ಭ ಧರಿಸುವಲ್ಲಿ ಉಂಟಾಗುವ ಅಡೆತಡೆಗಳೇ ಅಕಾಲಿಕ ಅಂಡಾಶಯದವೈಫಲ್ಯದ ಆರಂಭಿಕ ಮತ್ತು ಏಕೈಕ ಚಿಹ್ನೆಯಾಗಿರಬಹುದು.

ರೋಗಲಕ್ಷಣಗಳು ಕಂಡುಬಂದ ನಂತರ, ಸಾಮಾನ್ಯವಾಗಿ ಅಂಡಾಶಯದ ವೈಫಲ್ಯ ಅಥವಾ ಕಡಿಮೆ ಪ್ರಮಾಣದ ಈಸ್ಟ್ರೊಜೆನ್ ಬಿಡುಗಡೆಯನ್ನು ಗುರುತಿಸಬಹುದು. ಆಗ ಅಂಡಾಣುಗಳ ಬಿಡುಗಡೆಯೂ ನಿಂತು ಹೋಗುತ್ತದೆ. ಅಂಡೋತ್ಪತ್ತಿ ಕ್ರಿಯೆ ನಿಂತ ಮೇಲೆ ಸ್ವಾಭಾವಿಕವಾಗಿ ಗರ್ಭಧರಿಸುವ ಅವಕಾಶವೂ ಇಲ್ಲದಾಗುತ್ತದೆ.

ಇಲ್ಲಿವೆ ಕಾರಣಗಳು...

ಈ ಸ್ಥಿತಿಗೆ ಒಳಗಾದ ಸುಮಾರು ಅರ್ಧದಷ್ಟು ಮಹಿಳೆಯರಲ್ಲಿ ನಿಖರವಾದ ಕಾರಣಗಳು ತಿಳಿದು ಬರುವುದಿಲ್ಲ. ಇನ್ನೂ ಕೆಲವರಲ್ಲಿ ‌‌ಕೆಲವು ಸಾಮಾನ್ಯ ಕಾರಣಗಳು ಕಂಡುಬರುತ್ತವೆ, ಅಂಥವುಗಳೆಂದರೆ:

ಕುಟುಂಬ ಇತಿಹಾಸ: ನಿಕಟ ಕುಟುಂಬದ ಸದಸ್ಯರಲ್ಲಿ, ಅಂದರೆ ತಾಯಿ, ಸಹೋದರಿಯರು ಈ ಸಮಸ್ಯೆಯನ್ನು ಎದುರಿಸಿದ್ದರೆ.

ಆಟೋ ಇಮ್ಯೂನ್ ರೋಗಗಳು: ಥೈರಾಯ್ಡ್‌ಸಮಸ್ಯೆ ಹಾಗೂಮೂತ್ರಜನಕಾಂಗದ (ಅಡ್ರೆನಲ್) ಗ್ರಂಥಿಯ ಮೇಲೆ ಪ್ರಭಾವ ಬೀರುವ ಆಟೋ ಇಮ್ಯೂನ್ ರೋಗಗಳಿಂದ ಅಂಡಾಶಯ ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ.

ವೈದ್ಯಕೀಯ ಚಿಕಿತ್ಸೆಗಳು: ಕಿಮೊಥೆರಪಿ ಮತ್ತು ವಿಕಿರಣ ಚಿಕಿತ್ಸೆಯಂತಹ ವೈದ್ಯಕೀಯ ಚಿಕಿತ್ಸೆಗಳು ಸಹ ಕಾರಣವಾಗಬಹುದು.

ಜೀವನಶೈಲಿ: ಧೂಮಪಾನ ಮದ್ಯಪಾನದಂತಹ ಚಟಗಳಿಗೂ ಅಂಡಾಶಯದ ಅಕಾಲಿಕ ವೈಫಲ್ಯಕ್ಕೂ ಸಂಬಂಧವಿದೆ.

ಅಪಾಯಗಳೇನು?

ಮಾನಸಿಕ ತುಮುಲ, ಖಿನ್ನತೆ, ಮೈಕೈ ನೋವು, ಗಾಬರಿ, ಕೋಪ, ನಿದ್ರಾಹೀನತೆಯಂತಹ ಮನೋದೈಹಿಕ ಸಮಸ್ಯೆಗಳು ಸಾಮಾನ್ಯ. ಇದರ ಹೊರತಾಗಿ, ಕಡಿಮೆ ಈಸ್ಟ್ರೊಜೆನ್ ಮಟ್ಟದಿಂದಾಗಿ ಆಸ್ಟಿಯೊಪೊರೋಸಿಸ್ ಮತ್ತು ಆರಂಭಿಕ ಹೃದ್ರೋಗದಂತಹ ಗಂಭೀರ ಆರೋಗ್ಯ ಸಮಸ್ಯೆಗಳ ಸಾಧ್ಯತೆಯೂ ಹೆಚ್ಚು. ಅವಧಿಗೆ ಮುನ್ನವೇ ಅಂಡಾಶಯ ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಸಹಜವಾಗಿಯೆ ಖಿನ್ನತೆಯ ಸಂಭಾವ್ಯ ಹೆಚ್ಚು ಮತ್ತು ತೀವ್ರವಾಗುತ್ತದೆ.

ಮಕ್ಕಳನ್ನು ಪಡೆಯುವ ಮುನ್ನವೇ ಅಕಾಲ ರಜೋನಿವೃತ್ತಿ ಕಾಣಿಸಿಕೊಂಡರೆ ಗರ್ಭಧಾರಣೆಯ ಅಡಚಣೆಗಳು ಹೆಚ್ಚು. ಅವರಲ್ಲಿ ಸುಮಾರು ಶೇ 10ರಷ್ಟು ಮಹಿಳೆಯರು ತಮ್ಮ ಅಂಡಾಣುಗಳನ್ನು ಬಳಸಿ ಗರ್ಭಿಣಿಯಾಗಲು ಸಾಧ್ಯವಾಗಬಹುದಷ್ಟೆ. ಈ ಸ್ಥಿತಿಯಲ್ಲಿರುವ ಮಹಿಳೆಯರು ಸ್ವಂತ ಅಂಡಾಣುಗಳಿಂದ ಗರ್ಭಧರಿಸಬೇಕೆಂದರೆ ಯಶಸ್ಸಿನ ಪ್ರಮಾಣ ಬಹಳ ಕಡಿಮೆ ಮತ್ತು ಅಪಾಯಗಳೂ ಹೆಚ್ಚು. ಹಾಗೆಂದು ಆತಂಕ–ಅನುಮಾನಗಳಿಂದ ನರಳುವುದು ಸಲ್ಲ. ಅಕಾಲ ಋತುಬಂಧದ ಅಡ್ಡ ಪರಿಣಾಮಗಳನ್ನು ಎದುರಿಸುವ ಬಗೆ, ಮಕ್ಕಳನ್ನು ಪಡೆಯಬಯಸುವವರು ಅದಕ್ಕಿರುವ ಅಕಾಶಗಳ ಕುರಿತು ತಮ್ಮ ವೈದ್ಯರೊಂದಿಗೆ ಚರ್ಚಿಸಬೇಕು.

(ಮುಂದುವರೆಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT