ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಋತು ಸಂಭ್ರಮ

ಅಕ್ಷರ ಗಾತ್ರ

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಏನೋ ಒಂದು ರೀತಿಯ ತಳಮಳ. ಎಲ್ಲರ ಬಾಯಿಯಿಂದಲೂ ಇದೇ ಮಾತು ಕೇಳಿ ಕೇಳಿ ಮನಸ್ಸು ರೋಸಿ ಹೋಗಿತ್ತು. ಇದರದ್ದೇ ಗುಂಗಿನಲ್ಲಿ ಅಡುಗೆ ಮನೆಯ ಕಿಟಿಕಿ ಬಳಿ ನಿಂತಿದ್ದೆ.

ಎದುರುಮನೆಯ ಗೇಟಿನ ಮುಂದೆ ದೊಡ್ಡದಾದ ರಂಗೋಲಿ ಕಣ್ಣನ್ನು ಸೆಳೆದುಬಿಟ್ಟಿತು. ಎಂದಿಗಿಂತ ಅಂದು ಆ ರಂಗೋಲಿಯಲ್ಲಿ ವಿಶೇಷವಿತ್ತು. ಜತೆಗೆ ಸಣ್ಣದ್ದೊಂದು ಸಂಭ್ರಮ ಕೂಡ ಅವರ ಮನೆಯಲ್ಲಿ ಇಣುಕುತ್ತಿತ್ತು. ಅರೆ… ಇದೇನು ಜನ ಸೇರುವ ಹಾಗೇ ಇಲ್ಲ, ಲಾಕ್‌ಡೌನ್ ಎನ್ನುತ್ತಿದ್ದಾರೆ. ಆದರೆ ಇವರ ಮನೆಯಲ್ಲಿ ಯಾವುದೋ ಸಂಭ್ರಮ ಕಳೆಗಟ್ಟಿದೆ ಎಂದು ಕುತೂಹಲದಿಂದ ನೋಡುವಾಗಲೇ ರೇಷ್ಮೆ ಸೀರೆ ಉಟ್ಟ ಮಹಿಳೆಯರು ಬಂದು ಹೋಗುತ್ತಿದ್ದರು. ನಿಧಾನಕ್ಕೆ ಗೊತ್ತಾಯಿತು ಮೊನ್ನೆ ಮೊನ್ನೆಯವರೆಗೆ ಆಟವಾಡಿಕೊಂಡಿದ್ದ ಅವರ ಮನೆಯ 12ರ ಹರೆಯದ ಹುಡುಗಿ ಮೈನೆರೆದಿದ್ದಾಳೆ ಎಂದು. ಜನ ಸೇರಬಾರದು ಎಂಬ ಉದ್ದೇಶದಿಂದ ಬೆಳಿಗ್ಗೆ ಬೇಗನೆ ಕಾರ್ಯಕ್ರಮ ಶುರುಮಾಡಿಕೊಂಡಿದ್ದರು. ಹಾಗಾಗಿ ಒಂದಷ್ಟು ಸಂಬಂಧಿಕರು ಮಾತ್ರ ಬೇಗ ಬಂದು ಹೋಗುತ್ತಿದ್ದರು. ಏನೇ ಬರಲಿ, ಏನೇ ಹೋಗಲಿ ಮಾಡುವ ಸಂಪ್ರದಾಯ, ಆಚರಣೆಗೆ ಕೊರೊನಾ ಮಾತ್ರ ಬ್ರೇಕ್ ಹಾಕಿರಲಿಲ್ಲ. ನೂರಾರು ಮಂದಿ ಸೇರುವಲ್ಲಿ 10 ಜನ ಸೇರಿ ಆ ಸಂಭ್ರಮವನ್ನು ಆಚರಿಸಿದ್ದರು.

ಭಯವೇಕೆ?

ಒಂದಷ್ಟು ವರ್ಷಗಳ ಹಿಂದೆ ಹೆಣ್ಣು ಮೈ ನೆರೆದಿದ್ದಾಳೆ ಎಂದು ತಿಳಿದಾಕ್ಷಣ ಅಮ್ಮಂದಿರ ಎದೆಯಲ್ಲಿ ಸಂಭ್ರಮಕ್ಕಿಂತ ಹೆಚ್ಚಾಗಿ ತುಸು ಆತಂಕವೇ ಮನೆ ಮಾಡಿರುತ್ತಿತ್ತು. ಮೊನ್ನೆಯವರೆಗೆ ಓಣಿಯ ಹುಡುಗರ ಜತೆ ಜಿದ್ದಿಗೆ ಬಿದ್ದವಳಂತೆ ಕಿತ್ತಾಡುತ್ತಿದ್ದ ಹುಡುಗಿಯ ಮುಖದಲ್ಲಿ ಕೂಡ ಆ ಸ್ರಾವ ನೋಡಿ ಗಾಂಭೀರ್ಯ ಮೂಡುತ್ತದೆ. ಏನೋ ಆಗಬಾರದ್ದು ಆಗಿ ಹೋಗಿದೆ ಎಂಬಂತ ಚಿಂತೆ ಕಾಡುತ್ತದೆ. ಇನ್ನು ಮನೆಯಲ್ಲಿ ಅಜ್ಜಿಯಂದಿರು ಇದ್ದರಂತೂ ಮುಗಿದೇ ಬಿಡ್ತು. ‘ಆ ಕೋಣೆಗೆ ಕಾಲಿಡಬೇಡ, ಇಲ್ಲಿ ಮಲಗಬೇಡ, ಓಣಿಯ ಮಕ್ಕಳ ಜತೆ ಆಡುವುದು ನಿಲ್ಲಿಸಿ ಬಿಡು. ಇನ್ನು ನೀನು ಚಿಕ್ಕವಳಲ್ಲ. ಮಕ್ಕಳ ರೀತಿ ಆಡಬೇಡ’ ಎಂಬ ಉಪದೇಶ ಬೇರೆ. ಇದರ ಜೊತೆಗೆ ತಿಂಗಳು ತಿಂಗಳು ಕಾಡುವ ಆ ಮುಟ್ಟು, ಕಿಬ್ಬೊಟ್ಟೆಯ ಆಳದಿಂದ ಬರುವ ಆ ನೋವು, ಹೇಗೆ ನಡೆಯಲಿ, ಎಲ್ಲಿ ಕೂರಲಿ ಎಂಬ ಚಿಂತೆ. ‘ಇನ್ಮುಂದೆ ಸ್ವಲ್ಪ ಹಾರುವುದು– ಹತ್ತುವುದು ಕಡಿಮೆ ಮಾಡು, ಬಟ್ಟೆಯಲ್ಲಿ ಏನಾದರೂ ಕಲೆಯಾಗಿದೆಯಾ ಎಂದು ಆಗಾಗ ನೋಡುತ್ತಿರು, ಶಾಲೆಯಲ್ಲಿ ಸ್ಪೋರ್ಟ್ಸ್‌ಗೆಲ್ಲಾ ಸೇರಬೇಡ’ ಎಂಬ ಅಮ್ಮನ ಆತಂಕದ ನುಡಿ ಇವೆಲ್ಲವೂ ಈಗಷ್ಟೇ ಋತುಮತಿಯಾದ ಹೆಣ್ಣಿಗೆ ಒಂದು ರೀತಿಯ ಭಯದ ವಾತಾವರಣವನ್ನುಂಟು ಮಾಡುವುದರ ಜತೆಗೆ ಇದ್ಯಾಕಪ್ಪಾ ಆಯ್ತು ಎನ್ನುವಷ್ಟು ಕಿರಿಕಿರಿಯನ್ನುಂಟು ಮಾಡುತ್ತಿತ್ತು.

ಮೊದಲೆಲ್ಲಾ ಹುಡುಗಿ ಮೈನೆರೆದಿದ್ದಾಳೆ ಎಂದು ಗೊತ್ತಾದ ತಕ್ಷಣ ಒಂದಷ್ಟು ದಿನಗಳು ಕಳೆದ ನಂತರ ಕಾರ್ಯಕ್ರಮ ಇಟ್ಟುಕೊಳ್ಳುತ್ತಿದ್ದರು. ಸೀರೆ ಉಡಿಸಿ, ಹೂವು ಮುಡಿಸಿ, ಮುತ್ತೈದೆಯರು ಆರತಿ ಬೆಳಗಿ, ಸಿಹಿ ಊಟ ಹಾಕಿಸುವ ಪದ್ಧತಿ ಇರುತ್ತಿತ್ತು. ಮನೆಯ ಹುಡುಗಿ ವಯಸ್ಸಿಗೆ ಬಂದಿದ್ದಾಳೆ ಎಂದು ಈ ಮೂಲಕ ತಿಳಿಯುತ್ತಿತ್ತು. ಹತ್ತಿರದ ಸಂಬಂಧಿಗಳು ಬಂದು ಸೇರುತ್ತಿದ್ದರು. ಇದು ಹೆಣ್ಣುಮಕ್ಕಳಿಗೆ ತೀರಾ ಮುಜುಗರವನ್ನುಂಟು ಮಾಡುತ್ತಿದ್ದ ಸಂಪ್ರದಾಯವೆನ್ನಲಾಗುತ್ತಿತ್ತು. ಇದನ್ನು ಸಂಭ್ರಮಿಸುವ ಮನಸ್ಥಿತಿ ಅಷ್ಟಾಗಿ ಹುಡುಗಿಯರಿಗೆ ಇರುತ್ತಿರಲಿಲ್ಲ. ಆ ವಾತಾವರಣವನ್ನು ಮನೆಯವರು ಕೂಡ ಸೃಷ್ಟಿ ಮಾಡಿಕೊಡುತ್ತಿರಲಿಲ್ಲ. ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಇದನ್ನು ಆಚರಿಸುತ್ತಾರೆ. ಮೊದಲೆಲ್ಲಾ ಹೆಣ್ಣೊಬ್ಬಳು ಮೈ ನೆರೆದ ಮೇಲೆಯೇ ಲಂಗ ದಾವಣಿ ಹಾಕಿಕೊಳ್ಳಬಹುದಾಗಿತ್ತು. ಕೆಲವು ಕಡೆ ಇದು ಹೆಣ್ಣುಮಕ್ಕಳಿಗೆ ತೀರಾ ಮುಜುಗರವನ್ನುಂಟು ಮಾಡುತ್ತದೆ ಎಂದು ಇದಕ್ಕೆ ಸಂಬಂಧಪಟ್ಟ ಕಾರ್ಯಕ್ರಮವನ್ನು ಮಾಡುತ್ತಿರಲಿಲ್ಲ.

ದೂರವಾಗುವ ಮುಜುಗರ

ಆದರೆ ಈಗ ಕಾಲ ಬದಲಾಗಿದೆ. ಮಗಳು ಋತುಮತಿಯಾಗಿದ್ದಾಳೆ ಎಂದಾಗ ತಂದೆ-ತಾಯಿಯಂದಿರಲ್ಲಿ ಆತಂಕಕ್ಕಿಂತ ಸಂಭ್ರಮ ಮೂಡುತ್ತದೆ. ‘ಫ್ಯೂಬರ್ಟಿ ಸೆರೆಮನಿ, ಹಾಫ್ ಸಾರಿ ಸೆರೆಮನಿ’ ಎಂದೆಲ್ಲಾ ಮದುವೆಗಿಂತಲೂ ವಿಜೃಂಭಣೆಯಿಂದ ಇದನ್ನು ಮಾಡುವವರು ಇದ್ದಾರೆ. ಕೊಂಚ ಯೂಟ್ಯೂಬ್ ತಡಕಾಡಿದರೆ ಸಾಕಷ್ಟು ಫ್ಯೂಬರ್ಟಿ ಸೆಲೆಬ್ರೇಷನ್, ಹಾಫ್ ಸಾರಿ ಸೆಲೆಬ್ರೇಷನ್ ಕುರಿತ ವಿಡಿಯೊಗಳನ್ನು ಕಾಣಬಹುದು. ಅರೇ ಇದೇನು…? ಈ ಕಾರ್ಯಕ್ರಮವನ್ನೇ ಇಷ್ಟು ವಿಜೃಂಭಣೆಯಿಂದ ಮಾಡಿದವರು ಇನ್ನು ಮದುವೆ ಕಾರ್ಯಕ್ರಮವನ್ನು ಯಾವ ರೀತಿ ಮಾಡುತ್ತಾರಪ್ಪ ಎಂದು ಆಶ್ಚರ್ಯವನ್ನುಂಟು ಮಾಡುತ್ತದೆ. ಆರ್ಥಿಕವಾಗಿ ಸಬಲರಾಗಿದ್ದವರು ದೊಡ್ಡ ಛತ್ರದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿ ನೆಂಟರಿಷ್ಟರನ್ನು ಸೇರಿಸುವುದು, ನವವಧುವಿನಂತೆ ಹುಡುಗಿಯನ್ನು ಸಿಂಗರಿಸಿ ಪಲ್ಲಕ್ಕಿಯ ಮೇಲೆ ಕುಳ್ಳಿರಿಸಿಕೊಂಡು ಹೋಗುವುದು, ಕ್ಯಾಂಡಿಡ್ ಫೋಟೊಗ್ರಫಿ, ತರಾವರಿ ಅಡುಗೆ ಮಾಡಿ ಇದನ್ನು ಮುಜುಗರವೆಂದು ಮೂಗು ಮುರಿಯದೇ ಸಂಭ್ರಮವೆಂದು ಆಚರಿಸುತ್ತಾರೆ. ಇದರಿಂದ ಮೈ ನೆರೆದ ಹೆಣ್ಣುಮಕ್ಕಳಿಗೂ ಮುಟ್ಟು ಎನ್ನುವುದು ಮಡಿ ಅಲ್ಲ. ಹೆಣ್ಣಿನ ದೇಹಪ್ರಕೃತಿಯಲ್ಲಿ ಸಹಜವಾಗಿರುವಂತಹದ್ದು ಎಂಬ ಭಾವ ಮೂಡುತ್ತದೆ. ಅದರ ಕುರಿತ ಭಯ, ಆತಂಕಗಳು ದೂರವಾಗುತ್ತವೆ.

ಕೋವಿಡ್‌–19 ಮಧ್ಯೆಯೂ ಸಂಭ್ರಮ

ಹಿಂದೆಲ್ಲಾ ಇದನ್ನು ಒಂದು ರೀತಿ ಮಡಿವಂತಿಕೆಯಿಂದ ಮಾಡುತ್ತಿದ್ದವರು ಈಗ ಅದನ್ನು ಸಂಭ್ರಮದಿಂದ ಮಾಡುತ್ತಿದ್ದಾರೆ. ಹಣ ಇದ್ದವರು ವಿಜೃಂಭಣೆಯಿಂದ ಮಾಡಿದರೆ ಇಲ್ಲದವರು ತಮ್ಮ ಯಥಾನುಶಕ್ತಿಗನುಸಾರವಾಗಿ ಮನೆಯಲ್ಲಿ ನಾಲ್ಕು ಮಂದಿಯನ್ನು ಸೇರಿಸಿ ಮಾಡುತ್ತಿದ್ದಾರೆ. ಕೊರೊನಾದ ನಡುವೆಯೂ ಸಂಭ್ರಮ ಕಳೆಗುಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT