ಮಂಗಳವಾರ, ಜನವರಿ 21, 2020
27 °C

ಮಗ– ಮಗಳೆಂಬ ಗೋಡೆಗಳ ನಡುವೆ..

ಪವಿತ್ರಾ ರಾಘವೇಂದ್ರ ಶೆಟ್ಟಿ Updated:

ಅಕ್ಷರ ಗಾತ್ರ : | |

ಹೆಣ್ಣುಮಕ್ಕಳಿಗೆ ಚಿಕ್ಕಂದಿನಿಂದಲೇ ಕಟ್ಟುಪಾಡು ವಿಧಿಸುವ ಪೋಷಕರು, ಗಂಡುಮಕ್ಕಳ ವಿಷಯದಲ್ಲಿ ಮೃದು ಧೋರಣೆ ತಾಳುತ್ತಾರೆ. ಇದು ಬದಲಾಗಬೇಕಿದೆ. ಮಹಿಳೆಯರನ್ನು ಗೌರವದಿಂದ ನೋಡಬೇಕು, ಆಕೆ ಕೇವಲ ಭೋಗದ ವಸ್ತುವಲ್ಲ ಎಂಬುದರ ಜೊತೆ ಲಿಂಗ ಸಮಾನತೆಯ ಪಾಠವೂ ಮನೆಯಿಂದಲೇ ಶುರುವಾಗಬೇಕಾದ ಜರೂರಿದೆ.

ಹೈದರಾಬಾದ್‌ನಲ್ಲಿ ಇತ್ತೀಚೆಗೆ ಪಶುವೈದ್ಯೆಯ ಮೇಲೆ ನಡೆದ ಅತ್ಯಾಚಾರ– ಹತ್ಯೆ ಪ್ರಕರಣದ ಕುರಿತು ಮಾತನಾಡುತ್ತಾ ಗೆಳತಿಯೊಬ್ಬಳು ‘ಅತ್ಯಾಚಾರ ಎಸಗಿದವರ ಅಪ್ಪ-ಅಮ್ಮ ಮಕ್ಕಳಿಗೆ ಸರಿಯಾಗಿ ಸಂಸ್ಕಾರ ನೀಡಿದ್ದರೆ ಈ ರೀತಿ ರಾಕ್ಷಸೀ ಕೃತ್ಯ ಎಸಗುತ್ತಿರಲಿಲ್ಲ. ಮನೆಯಲ್ಲಿ ಸರಿಯಾಗಿ ಬುದ್ಧಿ ಹೇಳುವವರೊಬ್ಬರು ಇರಬೇಕು. ಆಗ ಗಂಡುಮಕ್ಕಳು ಈ ರೀತಿ ದಾರಿ ತಪ್ಪುತ್ತಿರಲಿಲ್ಲ’ ಎಂದಳು.

ಒಂದು ರೀತಿಯಲ್ಲಿ ಅವಳು ಹೇಳಿದ ಮಾತು ನಿಜ ಅನಿಸಿತ್ತು. ಯಾಕೆಂದ್ರೆ ನಾವು ಬೆಳೆದು ಬಂದ ಪರಿಸರವೇ ಹಾಗೆ. ಯಾವಾಗಲೂ ‘ನೀನು ಇದನ್ನು ಮಾಡಬೇಡ, ಹೀಗೆ ಮಾತನಾಡಬೇಡ, ಈ ಡ್ರೆಸ್ ಹಾಕಬೇಡ, ಲೇಟಾಗಿ ಬರಬೇಡ, ಹುಡುಗರ ಜತೆ ಸಲುಗೆಯಿಂದ ಇರಬೇಡ’ ಎಂಬ ಮಾತುಗಳೇ ಮನೆಯವರಿಂದ ಬರುತ್ತಿರುತ್ತದೆ. ಈ ಎಲ್ಲಾ ‘ಬೇಡ’ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಾಗಿರುತ್ತದೆ. ಅಪ್ಪಿ ತಪ್ಪಿ ‘ಅಣ್ಣ/ ತಮ್ಮ ಮಾಡಿದ್ರೆ ಸರಿನಾ?’ ಎಂದು ವಾದಿಸಿಬಿಟ್ಟರೆ ‘ಅವನು ಗಂಡು, ನೀನೇನು ಗಂಡಾ?’ ಎಂಬ ಉತ್ತರ ಎದೆಯನ್ನು ನಾಟುತ್ತದೆ.

ಗಂಡಾದ್ರೆ ಕಟ್ಟುಪಾಡಿಲ್ಲ...!
ಗಂಡಾದ್ರೆ ಯಾವುದೇ ಕಟ್ಟುಪಾಡು, ಕಡಿವಾಣಗಳಿಲ್ಲದೇ ಇರಬಹುದು ಎಂಬ ಪಾಠವನ್ನು ಮೊದಲು ನಮ್ಮ ತಲೆಯೊಳಗೆ ತುಂಬುವುದೇ ಮನೆ ಮತ್ತು ಮನೆಯವರು. ಹುಟ್ಟಿದ ಎಳೆಕೂಸಿನಿಂದ ಈ ತಾರತಮ್ಯ ಶುರುವಾಗುತ್ತದೆ. ಗಂಡುಮಗು ಹುಟ್ಟಿದಾಗ ಬಟ್ಟೆ ಧರಿಸದೇ ಇಡೀ ಮನೆತುಂಬಾ ಓಡಾಡಿದಾಗ ಮುದ್ದಾಡುವ ಅಜ್ಜಿಯಂದಿರು ಅದೇ ಹೆಣ್ಣು ಮಗುವಿನ ವಿಷಯಕ್ಕೆ ಬಂದಾಗ ಮುಖ ಸಿಂಡರಿಸುತ್ತಾರೆ. ಈ ತಾರತಮ್ಯ, ಭೇದ– ಭಾವ ಕೆಲವೊಂದು ಮನೆಯಿಂದಲೇ ಶುರುವಾಗುತ್ತದೆ. ಆದರೆ ಅದೇ ಗಂಡುಮಕ್ಕಳಿಗೆ ಹೆಣ್ಣನ್ನು ಹೇಗೆ ಗೌರವಿಸಬೇಕು, ಅವಳನ್ನು ಭೋಗದ ವಸ್ತುವಿನ ಹೊರತಾಗಿ ಹೇಗೆ ನೋಡಬೇಕು ಎಂಬುದನ್ನು ಕಲಿಸಿಕೊಡಬೇಕಾದ ಅಗತ್ಯ ಮನೆಯಿಂದಲೇ ಜರೂರಾಗಿ ಶುರುವಾಗಬೇಕಿದೆ.

ಮನೆಯಲ್ಲಿ ಹೆಣ್ಣುಮಕ್ಕಳಿಗೆ ಹೇಳುವ ಮಾತನ್ನು ಗಂಡು ಮಕ್ಕಳಿಗೆ ಹೇಳುತ್ತೇವೆಯೇ..? ಮನೆಯೇ ಮೊದಲ ಪಾಠಶಾಲೆ ಎನ್ನುವಂತೆ, ಮಕ್ಕಳ ಮನದಲ್ಲಿ ಮೊದಲು ತಾರತಮ್ಯದ ಭಾವ ಮನೆಯಲ್ಲಿಯೇ ಮೂಡುತ್ತದೆ. ಮನೆ ಸ್ವಚ್ಛಗೊಳಿಸುವುದು, ಬಟ್ಟೆ ಒಗೆಯುವುದು, ಅಡುಗೆ, ಮಕ್ಕಳ ಲಾಲನೆ– ಪಾಲನೆ ಇವೆಲ್ಲವೂ ಹೆಣ್ಣುಮಕ್ಕಳದ್ದೇ ಕೆಲಸ ಎನ್ನುವಂತೆ ವರ್ತಿಸುತ್ತಾರೆ. ‘ಅಪ್ಪ ಬಟ್ಟೆ ಒಗೆಯಲ್ಲ, ಪಾತ್ರೆ ತೊಳೆಯಲ್ಲ. ನಾನ್ಯಾಕೆ ಈ ಕೆಲಸ ಮಾಡಬೇಕು?’ ಎಂಬ ಧೋರಣೆ ಗಂಡಿನದ್ದಾಗಿರುತ್ತದೆ. ಈಗ ಕಾಲ ಬದಲಾಗಿ ಹೆಣ್ಣು ಕೂಡ ಗಂಡಿನಷ್ಟೇ ಸ್ವತಂತ್ರಳು, ಹೊರಗಡೆಗೆ ಗಂಡಿನ ಸಮನಾಗಿ ದುಡಿಯುವವಳಾಗಿದ್ದರೂ ಈ ಮನೆಕೆಲಸದ ಹೊರೆ ಮಾತ್ರ ಅವಳ ಹೆಗಲಿನಿಂದ ಕೆಳಕ್ಕೆ ಇಳಿದಿಲ್ಲ. ಕಚೇರಿಗೆ ಹೋಗಿ ಗಂಡಿನ ಸಮನಾಗಿ ಕೆಲಸ ಮಾಡಿದರೂ ಮನೆಗೆ ಬಂದ ಕೂಡಲೇ ಕ್ಲೀನಿಂಗ್, ಅಡುಗೆ ಮಾಡುವ ಕಾಯಕಕ್ಕೆ ಅವಳನ್ನು ಸಜ್ಜುಗೊಳಿಸಿಕೊಳ್ಳಲೇಬೇಕಾದ ಅನಿವಾರ್ಯ! ವಾದಿಸುವುದಕ್ಕೆ ಹೋದರೆ ಪಾತ್ರೆ ತೊಳೆಯುವುದು, ಬಟ್ಟೆ ತೊಳೆಯುವುದು, ಕಸ ಗುಡಿಸುವುದು ಗಂಡಸರ ಕೆಲಸವಲ್ಲವೆಂದು ಮಾತು ತೇಲಿಬಿಡುತ್ತಾರೆ.

ಇನ್ನು ಮಗನಿಗಿಲ್ಲದ ಸಮಯದ ಹಂಗು ಮಗಳ ವಿಷಯಕ್ಕೆ ಬಂದಾಗ ಕಠಿಣವಾಗುತ್ತದೆ. ಮಗಳು ತಡರಾತ್ರಿಯಾದರೂ ಮನೆಗೆ ಬಂದಿಲ್ಲವಾದರೆ ಮನೆಯವರ ಎದೆಯಲ್ಲಿ ಭಯ ಶುರುವಾಗುತ್ತದೆ. ಏನಾಗಿರಬಹುದು, ಯಾರಾದರೂ ಏನಾದರೂ ಮಾಡಿರಬಹುದಾ? ಅವಳು ಈ ಉಡುಪು ಧರಿಸಿಕೊಂಡು ಹೊರಗಡೆ ಹೋದರೆ ಯಾರಾದರೂ ಚುಡಾಯಿಸಬಹುದು.. ಹೀಗೆ ಹೆಣ್ಣಿನ ವಿಷಯದಲ್ಲಿ ಹತ್ತಾರು ಚಿಂತೆಗಳು ಹೆತ್ತವರ ಮನದಲ್ಲಿ ಮೂಡುತ್ತವೆ. ಅವಳು ಯಾಕೆ ಇದನ್ನು ಧರಿಸಬಾರದು? ತಡರಾತ್ರಿ ಪಾರ್ಟಿ ಅವಳಿಗ್ಯಾಕೆ ಸುರಕ್ಷಿತವಲ್ಲ ಎಂಬ ಯೋಚನೆಗೆ ನಮ್ಮನ್ನು ಒಡ್ಡಿಕೊಳ್ಳಬೇಕಿದೆ. ನಾವ್ಯಾಕೆ ಈ ವಿಷಯವನ್ನು ಗಂಡಮಕ್ಕಳ ಜೀವನಕ್ಕೆ ಅನ್ವಯ ಮಾಡಲ್ಲ? ಹುಡುಗಿಯರನ್ನು ಗೌರವಿಸುವುದನ್ನು ಹೇಳಿಕೊಡುವುದಕ್ಕೆ ಯಾಕೆ ಸಾಧ್ಯವಾಗಲ್ಲ? ಹೆಣ್ಣುಮಕ್ಕಳಿಗೆ ‘ಹೊಂದಿಕೊಂಡು ಹೋಗು’ ಎಂದು ಹೇಳುವ ನಾವು ಗಂಡುಮಕ್ಕಳ ವಿಷಯಕ್ಕೆ ಬಂದಾಗ ಹೊಂದಾಣಿಕೆಯ ಮಾತ್ಯಾಕೆ ಆಡಲ್ಲ? ತಾಳ್ಮೆ, ಸಹನೆ ಹೆಣ್ಣಿನಷ್ಟೆ ಗಂಡಿಗೂ ಅಗತ್ಯವಾಗಿ ಇರಬೇಕು ಎಂಬುದನ್ನು ನಾವು ಮನೆಯಲ್ಲಿಯೇ ಹೇಳಿಕೊಟ್ಟರೆ ಸಮಾಜಕ್ಕೆ ಒಬ್ಬ ಒಳ್ಳೆಯ ಮಗನನ್ನು ಕೊಡಬಹುದು.

ಗಂಡಿಗೂ ಇರಲಿ ನೋವಿನ ಅರಿವು
ಹೆಣ್ಣುಮಗುವೊಂದು ಶಾಲೆಗೆ ಹೊರಟಾಗ ಅಮ್ಮಂದಿರು ಕೋಣೆಯೊಳಗೋ, ಬಚ್ಚಲಲ್ಲಿಯೋ ಅವಳನ್ನು ಕೂರಿಸಿಕೊಂಡು ‘ನೋಡು ನಿನ್ನ ಈ ಭಾಗವನ್ನು ಯಾರಿಗೂ ಮುಟ್ಟುವುದಕ್ಕೆ ಬಿಡಬೇಡ’ ಎಂದು ಹೇಳುತ್ತೇವೆ. ಅದೇ ಗಂಡುಮಗುವಿಗೆ ‘ನೀನು ಇನ್ಯಾರದ್ದೋ ಖಾಸಗಿ ಭಾಗವನ್ನು ಮುಟ್ಟಬೇಡ, ನಿನ್ನ ಭಾಗವನ್ನು ಮುಟ್ಟುವುದಕ್ಕೆ ಬಿಡಬೇಡ’ ಎಂಬ ವಿಷಯವನ್ನು ಅವರಿಗೂ ಮನದಟ್ಟು ಮಾಡುವ ಅಗತ್ಯ ಇದೆ. ಹಾಗೆಯೇ ಹೆಣ್ಣಿಗೆ ಕಿರುಕುಳ ನೀಡುವುದು ದುಷ್ಟ ಪ್ರವೃತ್ತಿ; ಅವಳ ಮೇಲೆ ಅತ್ಯಾಚಾರ ಎಸಗುವುದು ಕೆಟ್ಟ ಕೆಲಸ; ಅದಕ್ಕೆ ಶಿಕ್ಷೆಯಾಗುತ್ತದೆ.. ಹೀಗೆ ಮಕ್ಕಳ ಮನಸ್ಸಿನಲ್ಲಿ ಮೊದಲೇ ಕೆಟ್ಟದ್ದರ ಬಗ್ಗೆ ಅರಿವು ಮೂಡಿಸಿ ಕಿರುಕುಳ ಅನುಭವಿಸಿದವರ ನೋವಿನ ಬಗ್ಗೆ ಮನವರಿಕೆ ಮಾಡಿದರೆ ಅವರ ಮನಸ್ಸಿನಲ್ಲಿಯೂ ಬದಲಾವಣೆಯ ಗಾಳಿ ಬೀಸಬಹುದು. ಹೆಣ್ಣಿನಂತೆ ಗಂಡಿಗೂ ಸಹನೆ, ಸಹಾನುಭೂತಿಯ ಮೌಲ್ಯಗಳನ್ನು ಕಲಿಸಿ ಬೆಳೆಸುವುದು ತಂದೆ-ತಾಯಿಯರ ಕರ್ತವ್ಯ ಅಲ್ಲವೇ?

ಮಕ್ಕಳಿಗೆ ಹೇಳಿಕೊಡಬೇಕಾದ ವಿಷಯಗಳು

* ಆಯಾ ವಯಸ್ಸಿಗೆ ತಕ್ಕಂತೆ ಮಕ್ಕಳಿಗೆ ಮನೆಯಲ್ಲಿ ಲೈಂಗಿಕ ಶಿಕ್ಷಣದ ಕುರಿತು ಅರಿವು ಮೂಡಿಸಬೇಕು.

* ಮಕ್ಕಳು ತಮ್ಮ ದೈಹಿಕ ವಿಷಯಕ್ಕೆ ಸಂಬಂಧಿಸಿದಂತೆ ಏನಾದರೂ ಕೇಳಿದಾಗ ಪಾಲಕರು ಸೂಕ್ತ ರೀತಿಯಲ್ಲಿ ವಿವರಿಸುವ ತಾಳ್ಮೆ ಹೊಂದಿರಬೇಕು.

* ತಂದೆ-ತಾಯಿಯರು ಮನೆಯಲ್ಲಿ ಮೊದಲು ಸಭ್ಯವಾಗಿ ವರ್ತಿಸಬೇಕು.

* ಲೈಂಗಿಕ ಜೀವನ, ಅಸುರಕ್ಷಿತ ಸಂಭೋಗ, ಗರ್ಭಧಾರಣೆಯ ಕುರಿತು ಅವರ ವಯಸ್ಸಿಗನುಗುಣವಾಗಿ ತಿಳಿಸಿಕೊಡಬೇಕು.

***
ಗಂಡುಮಕ್ಕಳನ್ನು ಹೇಗೆ ಬೆಳೆಸಬೇಕು, ಭವಿಷ್ಯದಲ್ಲಿ ಅವರು ಯಾವ ರೀತಿ ಒಬ್ಬ ಒಳ್ಳೆಯ ವ್ಯಕ್ತಿ ಎನಿಸಿಕೊಳ್ಳಬೇಕು ಎಂಬುದರ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿರಲಿಲ್ಲ. ಆದರೆ ಹೆಣ್ಣುಮಕ್ಕಳಂತೆ ಗಂಡುಮಕ್ಕಳಿಗೂ ತಿಳಿವಳಿಕೆ ಹೇಳುವುದು ತಪ್ಪೇನಲ್ಲ. ಅವರ ಜೊತೆ ಕೇವಲ ಮಾತುಕತೆ ನಡೆಸಿದರೆ ಸಾಕು ಎನ್ನುವುದನ್ನು ಬಿಟ್ಟು, ಸಮಾಜದ ಬಗ್ಗೆ, ಸಾಮಾನ್ಯ ನಡವಳಿಕೆ ಬಗ್ಗೆ ಚಿಕ್ಕಂದಿನಿಂದಲೇ ಅರಿವು ಮೂಡಿಸಿ. ಅವರ ಮಾತುಗಳಿಗೂ ಕಿವಿಗೊಡಿ. ಇತರರ ಬಗ್ಗೆ, ವಿಶೇಷವಾಗಿ ಮಹಿಳೆಯರ ಬಗ್ಗೆ ಗೌರವ ಇಟ್ಟುಕೊಳ್ಳುವುದನ್ನು ಕಲಿಸಿ. ತಪ್ಪು ಮಾಡಿದರೆ ‘ಹುಡುಗರು ಎಷ್ಟೆಂದರೂ ಹುಡುಗರೇ’ ಎಂದು ಸಮರ್ಥಿಸಿಕೊಳ್ಳುವುದನ್ನು ಮೊದಲು ಬಿಡಿ.
–ಡಾ.ಪ್ರಮೀಳಾ ಎಸ್‌. ಆಪ್ತ ಸಮಾಲೋಚಕಿ 

ಪ್ರತಿಕ್ರಿಯಿಸಿ (+)