ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಸ್ಪಂದನ ಅಂಕಣ: ಗರ್ಭಧಾರಣೆಯಲ್ಲಿ ಮೈಕಡಿತ ಅಪಾಯವೇ?

Published : 9 ಮೇ 2025, 23:53 IST
Last Updated : 9 ಮೇ 2025, 23:53 IST
ಫಾಲೋ ಮಾಡಿ
Comments
ಪ್ರ

ನಾಲ್ಕು ವರ್ಷದ ಮಗಳಿದ್ದಾಳೆ. ಅವಳು ಗರ್ಭದಲ್ಲಿದ್ದಾಗಆರೂವರೆ ತಿಂಗಳಿಗೆ ಮೈಕಡಿತ ಉಂಟಾಯಿತು. ಹಲವು ಚಿಕಿತ್ಸೆ ನೀಡಿದ್ದರೂ ಕಡಿತ ಕಡಿಮೆಯಾಗಲಿಲ್ಲ. ಎಂಟೂವರೆ ತಿಂಗಳಿಗೆ ಮಗುವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಲಾಯಿತು. ಇದಾಗಿ ಸ್ವಲ್ಪ ದಿನಗಳಿಗೆ ಮೈಕಡಿತ ಕಡಿಮೆಯಾಯಿತು. ಮತ್ತೆ ಮರುಕಳಿಸಬಹುದೆಂಬ ಎಚ್ಚರಿಕೆ ನೀಡಿದ್ದರು. ಈಗ ಮತ್ತೊಂದು ಮಗು ಬೇಕು ಎನಿಸಿದೆ. ಆದರೆ, ಮೈ ಕಡಿತದ ಭಯಕ್ಕೆ ಹೆದರಿದ್ದೇನೆ. ಏನು ಮಾಡಲಿ  ಮೇಡಂ?

ಗರ್ಭಧಾರಣೆ ಸಂದರ್ಭದಲ್ಲಿ ಮೈ ಕಡಿತ ಉಂಟಾಗಲು ಹಲವಾರು ಕಾರಣಗಳಿವೆ. ಶೇಕಡ 20 ರಿಂದ 22ರಷ್ಟು  ಒಣಚರ್ಮದಿಂದ ಮೈ ಕಡಿತ ಉಂಟಾಗಬಹುದು. ಉಬ್ಬುತ್ತಿರುವ ಹೊಟ್ಟೆ ಹಾಗೂ ಸ್ತನಗಳ ಬೆಳವಣಿಗೆಯಿಂದಲೂ ಚರ್ಮ ಹಿಗ್ಗಿದಂತಾಗಿ ಸಹಜವಾಗಿ ಮೈಕಡಿಯಬಹುದು. ಹಾರ್ಮೋನ್‌ಗಳ ಸ್ರವಿಸುವಿಕೆಯಿಂದಲೂ ಹಸ್ತಪಾದಗಳು ಕೆಂಪಾಗಾಗಿ, ಮೈಕಡಿತ ಉಂಟಾಗಬಹುದು. ಈ ಮೊದಲೇ ಗರ್ಭಿಣಿಯರಲ್ಲಿ ಕಜ್ಜಿ (ಸೋರಿಯಾಸಿಸ್‌) ಇದ್ದರೆ, ಸಮಸ್ಯೆ ಉಲ್ಬಣಗೊಳ್ಳಬಹುದು. 

ಆಟೋಪಿಕ್ ಗರ್ಭಧಾರಣೆಯ ಗುಳ್ಳೆಗಳು ಚಿಕ್ಕಪ್ರಾಯದಲ್ಲೇ ಮೊದಲ ಬಾರಿಗೆ ಗರ್ಭ ಧರಿಸಿದವರಲ್ಲಿ ಹೆಚ್ಚು ಕಾಣಿಸಿಕೊಳ್ಳಬಹುದು. ಇದರಲ್ಲಿ ಸಣ್ಣದಾಗಿ ಗುಳ್ಳೆಗಳು ಉಬ್ಬಿದ ರೀತಿಯಲ್ಲಿ ಹುಳಕಡಿತದ ಹಾಗೆ ಕಾಣಿಸಿಕೊಂಡು ನಂತರ ಗಾಯವಾಗಿ ಮೇಲ್ಭಾಗ ಗಟ್ಟಿಯಾಗುತ್ತಾ ಹೋಗಬಹುದು. ಇದರಲ್ಲಿಯೂ ತಾಯಿ ಮಗುವಿಗೆ ಯಾವ ಸಮಸ್ಯೆಯೂ ಉಂಟಾಗಲಾರದು (ಕಡಿತದ ಹೊರತಾಗಿ). ಸೂಕ್ತ ಚಿಕಿತ್ಸೆಯಿಂದ ಇವುಗಳನ್ನು ನಿರ್ವಹಣೆ ಮಾಡಬಹುದು.

ಇನ್ನು ಗರ್ಭಿಣಿಯರ ಬಹುರೂಪಿ ಗುಳ್ಳೆಗಳು (ಪಿ.ಯು.ಪಿ.ಪಿ.ಪಿ) ಶೇಕಡ 11ಕ್ಕೂ ಹೆಚ್ಚು ಸಂದರ್ಭಗಳಲ್ಲಿ ಬಿಳಿ ಬಣ್ಣದವರಲ್ಲಿ, ಗರ್ಭಾವಸ್ಥೆಯಲ್ಲಿ ಹೆಚ್ಚು ತೂಕ ಗಳಿಸಿದವರಲ್ಲಿ, ಗಂಡು ಮಗುವಿದ್ದಾಗ ಹೆಚ್ಚು ಕಂಡುಬರುತ್ತದೆ. ಇದಕ್ಕೆ ಕಾರಣ ತೂಕ ಹೆಚ್ಚಾಗಿ ಹೊಟ್ಟೆಬಿರಿತ ಹೆಚ್ಚಾದಾಗ ಸಂಯೋಜಿತ ಅಂಗಾಂಶದ ಬಿರಿತ ಉಂಟಾಗಿ ಅಲರ್ಜಿ ಉಂಟಾಗಬಹುದು. ಹೆಚ್ಚಾಗಿ ಸ್ಟ್ರೆಚ್‌ಮಾರ್ಕ್‌ ಮೇಲೆ ಇವು ಆರಂಭವಾಗಿ ಸಣ್ಣ ಸಣ್ಣ ಗುಳ್ಳೆಗಳಾಗುತ್ತವೆ. ಇನ್ನೊಂದು ವಿಶೇಷತೆ ಏನೆಂದರೆ ಕುತ್ತಿಗೆ, ಮುಖ, ಕೈಕಾಲುಗಳಿಗೆ ಇವು ಹರಡುವುದಿಲ್ಲ. ಹೊಕ್ಕಳ ಸುತ್ತವು ಇರುವುದಿಲ್ಲ. ತಾಯಿ ಹಾಗೂ ಶಿಶುವಿಗೆ ಇದರಿಂದ ಯಾವ ತೊಂದರೆಯೂ ಉಂಟಾಗುವುದಿಲ್ಲ.  

ಕೆಲವು ಗರ್ಭಿಣಿಯರಲ್ಲಿ ಹೊಕ್ಕಳಸುತ್ತ ಜೇನುಗೂಡುಗಳ ಹಾಗೆ ನೀರು ತುಂಬಿದ ಗುಳ್ಳೆಗಳು ಕಾಣಿಸಿಕೊಂಡು, ಆಮೇಲೆ ಎಲ್ಲಾ ಕಡೆ ಕೈಕಾಲು ಪಾದ ಹಸ್ತಗಳಿಗೂ ಹರಡಬಹುದು ಮತ್ತು ಹೆರಿಗೆ ನಂತರವೂ ಹೆಚ್ಚಾಗಬಹುದು. ಮಗುವಿಗೂ ಗುಳ್ಳೆಗಳಾಗಬಹುದು ಇದನ್ನ ಗರ್ಭಧಾರಣೆಯ ಪೆಂಪಿಗಾಯಿಡ್ ಎನ್ನುತ್ತೇವೆ. ಈ ಸ್ಥಿತಿಯಲ್ಲೂ ಅತಿಯಾಗಿ ಕಾಳಜಿಯಿಂದ ಇರುವುದು ಮುಖ್ಯ. ಯಾಕೆಂದರೆ ಹೊಟ್ಟೆಯೊಳಗಿನ ಮಗುವಿನ ತೂಕ ಕಡಿಮೆಯಾಗಿ ಪ್ರಾಣಕ್ಕೆ ಅಪಾಯ ಎದುರಾಗಬಹುದು. 

ಗರ್ಭಧಾರಣೆಯ ಮೂರರಿಂದ ಆರು ತಿಂಗಳ ನಂತರ ಲಿವರ್‌ನಲ್ಲಿ ಸಣ್ಣ ನಾಳಗಳಲ್ಲಿ ಬೈಲ್‌ದ್ರವವು ಸರಿಯಾಗಿ ಪ್ರವಹಿಸದೆ ಬೈಲ್ ಆಮ್ಲಗಳು ಶೇಖರಣೆಯಾಗಿ ಕಡಿತ ಉಂಟಾಗಬಹುದು. ಇದು ಮೊದಲು ಪಾದ ಮತ್ತು ಹಸ್ತಗಳಲ್ಲಿ ಕಾಣಿಸಿಕೊಂಡು ನಂತರ ದೇಹದಲ್ಲೆಡೆ ಮೈಕಡಿತ ಹರಡುತ್ತದೆ. ರಾತ್ರಿ ಹೊತ್ತು ಹೆಚ್ಚಾಗುತ್ತದೆ. ಕೆಲವರಲ್ಲಿ ವಾಕರಿಕೆ, ಸುಸ್ತು, ಊಟ ಸೇರದೇ ಇರಬಹುದು. ಈ ಸ್ಥಿತಿಯಲ್ಲಿ ಬಹಳ ಜಾಗರೂಕರಾಗಿರುವುದು ಮುಖ್ಯ. ಯಾಕೆಂದರೆ ತಾಯಿ ಹಾಗೂ ಮಗು ಇಬ್ಬರಿಗೂ ಇದು ಅಪಾಯವನ್ನುಂಟು ಮಾಡಬಹುದು.

ಈ ಸ್ಥಿತಿ  ಮತ್ತೆ ಗರ್ಭಧಾರಣೆಯಾದಾಗ ಮರುಕಳಿಸುವ ಸಾಧ್ಯತೆ ಹೆಚ್ಚಿದೆ.  ಭಯಪಡಬೇಡಿ. ತಜ್ಞರ ಮೇಲ್ವಿಚಾರಣೆಯಲ್ಲಿರಿ. ಸಾಮಾನ್ಯ ಕಡಿತಕ್ಕೆ ಗರ್ಭಿಣಿಯರು ಪಾಲಿಸಬೇಕಾದ ಕಟ್ಟುನಿಟ್ಟಿನ ನಿಯಮಗಳೆಂದರೆ ಉಗುರುಗಳನ್ನ ಚಿಕ್ಕದಾಗಿ ಕತ್ತರಿಸಿಕೊಳ್ಳುವುದು, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು, ಸೋಪು ಮತ್ತೆ ಇತರ ರಾಸಾಯನಿಕಗಳನ್ನ ಕಡಿಮೆ ಮಾಡುವುದು. ಸ್ನಾನವಾದ ತಕ್ಷಣ ಮಾಯಿಶ್ಚರೈಸರ್ ಬಳಸುವುದು, ಸಡಿಲವಾದ ಹತ್ತಿ ಬಟ್ಟೆ ಧರಿಸುವುದು, ಅತಿಯಾದ ಬಿಸಿಲಿಗೆ ಮೈಒಡ್ಡದಿರುವುದು, ಆ್ಯಂಟಿಇನ್‌ಸ್ಟಮಿನ್‌, ಕೋಲ್ಡ್ ಕಂಪ್ರೆಸ್‌ಗಳನ್ನು ಗಾಯದ ಮೇಲೆ ಉಪಯೋಗಿಸಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT