ಪ್ರೀತಿಗೆ ಸಮಯ ನೀಡಿದಷ್ಟೂ ಸದೃಢವಾಗುತ್ತದೆ. ಆನ್ಲೈನ್ನಲ್ಲಿ ತೋರುವುದಕ್ಕಿಂತಲೂ ಆಫ್ಲೈನ್ನಲ್ಲಿ ಕಾಣುವುದಕ್ಕಿಂತಲೂ ಒಲವು ಬಲವಾಗುವುದು ವಿಶ್ವಾಸದಿಂದ. ವಿಶ್ವಾಸ ಹುಟ್ಟಲು ಎಚ್ಚರದಿಂದಿರುವುದು ಹೇಗೆ?

ಕೆಲವು ವರ್ಷಗಳಿಂದೀಚೆಗೆ ಕಿರುತೆರೆಯ ನಟರೊಬ್ಬರು ಆನ್ಲೈನ್ನಲ್ಲಿ ಹಲವು ಹುಡುಗಿಯರೊಂದಿಗೆ ಪ್ರೀತಿ ಸಂಬಂಧ ಬೆಳೆಸಿದ್ದ ಪ್ರಕರಣ ಸುದ್ದಿ ಮಾಡಿತ್ತು. ಈ ಸಂಬಂಧ ಹಲವು ಠಾಣೆಗಳಲ್ಲಿ ವಂಚನೆ ಪ್ರಕರಣದಡಿ ದೂರು ದಾಖಲಾಯಿತು. ಕೊನೆಗೆ ಖುದ್ದು ಆ ನಟರೇ ಮರು ದೂರು ನೀಡಿದರು. ಪೊಲೀಸರ ತನಿಖೆಯಿಂದ ಬಯಲಾದ ಅಚ್ಚರಿ ಸಂಗತಿಯೆಂದರೆ ಕಿರುತೆರೆಯ ನಟನ ಆಪ್ತನೇ ನಟನ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆದು ಹಲವು ಹೆಣ್ಣುಮಕ್ಕಳೊಂದಿಗೆ ಪ್ರೀತಿಯ ನಾಟಕವಾಡಿ, ಸಲುಗೆ ಬೆಳೆಸಿದ್ದ.

ಇದೊಂದು ಪ್ರಕರಣವಷ್ಟೆ. ಇದಾದ ಮೇಲೂ ಇಂಥದ್ದೇ ಹತ್ತು ಹಲವು ಪ್ರಕರಣಗಳು ದಾಖಲಾಗಿವೆ. ಅನಾಮಿಕ ಹಾಗೂ ಅಪರಿಚಿತ ಎನಿಸುವ ಆನ್ಲೈನ್ ಜಗತ್ತು ಹೇಗೆ ಸ್ನೇಹ, ಸಲುಗೆ, ಪ್ರೀತಿಯ ಸೆಳೆತವನ್ನು ಬಗಲಿನಲ್ಲಿ ಇಟ್ಟುಕೊಂಡಿದೆಯೋ ಅಷ್ಟೇ ಸುಲಭದಲ್ಲಿ ವಂಚನೆ, ಆಮಿಷಗಳ ಕೆಂಡವನ್ನು ಕಟ್ಟಿಕೊಂಡಿದೆ. ಎಲ್ಲೇ ಆಗಲಿ, ಆನ್ಲೈನ್ ಅಥವಾ ಆಫ್ಲೈನ್ಗಳಲ್ಲಿ ಆಪ್ತವಾಗಿ ಮಾತಿಗಿಳಿದವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಹಂಬಲ ಮನುಷ್ಯನ ಸಹಜ ಗುಣ. ಒಂದು ಸಣ್ಣ ಆಕರ್ಷಣೆಯೂ ಕುತೂಹಲಗಳಿಗೆ ದಾರಿ ಮಾಡಿಕೊಡಬಲ್ಲದು. ಅದಕ್ಕೆ ಆನ್ಲೈನ್ ಜಗತ್ತು ಹಲವು ಒಳ ದಾರಿಗಳನ್ನೇ ಸೃಷ್ಟಿ ಮಾಡಿಟ್ಟಿದೆ.

ಕ್ಷಣಾರ್ಧದಲ್ಲಿ ನೀವು ಇಷ್ಟಪಡುವ ವ್ಯಕ್ತಿಗೆ ಸ್ನೇಹದ ಹಸ್ತ ಚಾಚಬಹುದು. ಅವರೂ ಇಷ್ಟಪಟ್ಟು ಮುಂದುವರಿಯಬಹುದು. ಅಷ್ಟೇ ಸುಲಭದಲ್ಲಿ ಸ್ನೇಹ ಕಡಿದೂ ಹೋಗಬಹುದು. ವರ್ಚುವಲ್ ಜಗತ್ತಿನಲ್ಲಿ ಕ್ಷಣಾರ್ಧದಲ್ಲಿ ಪ್ರೀತಿ ಹುಟ್ಟಬಹುದು. ಸ್ನೇಹಿತರಾಗಲು ಹೇಗೆ ಸಮಯ ಹಿಡಿಯುವುದಿಲ್ಲವೋ, ಪ್ರೇಮಕ್ಕೂ ಆಕರ್ಷಣೆಗೂ ಅಷ್ಟೆ; ಸಮಯದ ಹಂಗಿಲ್ಲ. ದಿನಗಟ್ಟಲೇ ಮೊಬೈಲ್ ಪರದೆಯ ಮೇಲೆ ತನ್ನಿಷ್ಟದ ಹೆಸರನ್ನು ಎರಡು ದಿನಗಳವರೆಗೆ ಜಪಿಸಿದರೂ ಸಾಕು, ಮೂರನೇ ದಿನಕ್ಕೆ ಪ್ರೀತಿ ಹುಟ್ಟಬಹುದು.

ಪ್ರೀತಿ ಹಾಗೇ ಅಲ್ಲವೇ. ಎಲ್ಲಿಯಾದರೂ, ಯಾರನ್ನೂ ಬೇಕಾದರೂ ತನ್ನೆಡೆಗೆ ಸೆಳೆದುಕೊಳ್ಳುವಷ್ಟು ಶಕ್ತಿಯಿದೆ. ಪ್ರೀತಿ ಎನ್ನುವುದು ಭಾವನೆಗಳ ಸಮ್ಮಿಲನ, ‘ನೀನು ನನ್ನೊಂದಿಗಿದ್ದರೆ ಜಗತ್ತನ್ನೇ ಗೆಲ್ಲುವೆ’ ಎಂಬ ನವಿರಾದ ಭಾವ. ಇದಕ್ಕೆ ವಯಸ್ಸಿನ ಮಿತಿಯಿಲ್ಲ. ಜಾತಿ, ಬಣ್ಣ, ಸಂಪತ್ತಿನ ಚೌಕಟ್ಟಿಲ್ಲ. ಯಾವ ಚೌಕಟ್ಟಿಗೂ ಅಷ್ಟು ಸುಲಭವಾಗಿ ಒದಗದ ಆನ್ಲೈನ್ ಪ್ಲಾಟ್ಫಾರಂಗಳಲ್ಲಿ ಹಾಗೂ ತರಹೇವಾರಿ ಆ್ಯಪ್ಗಳಲ್ಲಿ ಎಲ್ಲ ಚೌಕಟ್ಟನ್ನು ಮೀರಿ ಪ್ರೀತಿಯೊಂದು ಕುಡಿಯೊಡೆಯಬಹುದು. ಹರೆಯಕ್ಕೆ ಬಂದವರಷ್ಟೆ ಅಲ್ಲ ಮಧ್ಯವಯಸ್ಕರೂ ಆನ್ಲೈನ್ನಲ್ಲಿ ಸಿಕ್ಕ ಹೊಸ ಸಂಗಾತಿಯ ಬಗ್ಗೆಯೂ ಧೇನಿಸಬಹುದು.

ಹಾಗೆಂದು ಆನ್ಲೈನ್ನಲ್ಲಿಯೇ ಸ್ನೇಹಿತರಾಗಿ, ಪ್ರೇಮಿಗಳಾದವರೆಲ್ಲ ಮೋಸ ಹೋದವರು ಎಂದು ಹೇಳಲಿಕ್ಕೆ ಆಗದು. ಸಮಾನ ಆಸಕ್ತರನ್ನು ಆನ್ಲೈನ್ ಪ್ಲಾಟ್ಫಾರಂಗಳು ಒಂದುಗೂಡಿಸಿದಷ್ಟು ಬೇರೆ ಯಾವ ಪ್ಲಾಟ್ಫಾರಂಗಳು ಒಂದುಗೂಡಿಸಿಲ್ಲ. ಹಾಗಾಗಿ ಕಲೆ, ಸಾಹಿತ್ಯ, ಸಂಗೀತ, ಪ್ರವಾಸ ಹೀಗೆ ನಾನಾ ಆಸಕ್ತಿ ಇಟ್ಟುಕೊಂಡಿರುವ ಸಮಾನ ಆಸಕ್ತರು ಸೇರಲು, ಅಲ್ಲಿಯೇ ತಮಗಿಷ್ಟವಾದವರನ್ನು ಆಯ್ಕೆ ಮಾಡಿಕೊಳ್ಳಲು ಹಲವು ರೀತಿಯಲ್ಲಿ ಆನ್ಲೈನ್ ಪ್ಲಾಟ್ಫಾರಂಗಳು ಸಹಾಯ ಮಾಡಿವೆ.

ಜೀವನಾಸಕ್ತಿಗೆ ಹೊಂದಿಕೊಳ್ಳುವ ವ್ಯಕ್ತಿ ಸಿಕ್ಕರೆ ಒಪ್ಪದಿರಲು ಹೇಗೆ ಸಾಧ್ಯ? ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿ, ಪ್ರೀತಿಯಾಗಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾದವರೂ ಇದ್ದಾರೆ. ಅಷ್ಟೇ ಯಾಕೆ, ಸಂಸಾರವಿರುವ ಹೆಣ್ಣೊಬ್ಬಳು ಪ್ರೀತಿಯಲ್ಲಿ ಬಿದ್ದು, ಪ್ರೀತಿಸಿದವನಿಗಾಗಿ ತನ್ನವರನ್ನು ಮಾತ್ರವಲ್ಲದೆ ದೇಶವನ್ನೇ ಬಿಟ್ಟು ಬಂದ ವರದಿಗಳನ್ನೂ ನೋಡಿದ್ದೇವೆ.

ಇಂಟರ್ನೆಟ್ನಲ್ಲಿ ಹುಡುಕಿದರೆ ‘ದೇವರೂ’ ಸಿಗುತ್ತಾನೆ ಎಂಬ ವ್ಯಾಖ್ಯಾನವಿದೆ. ಪ್ರೀತಿ ನೀಡಲು ಹೇರಳವಾದ ಹಸ್ತಗಳು ಚಾಚಿಕೊಂಡಿರುತ್ತವೆ. ಅದನ್ನು ವಿವೇಚನೆಯಿಂದ ಆಯ್ಕೆ ಮಾಡುವ ಜವಾಬ್ದಾರಿ ಮಾತ್ರ ನಮ್ಮದಾಗಿರುತ್ತದೆ. ಇದಕ್ಕೆ ಪುಷ್ಟಿ ನೀಡುವಂತೆ ಡೇಟಿಂಗ್ ಆ್ಯಪ್, ಮ್ಯಾಟ್ರಿಮೊನಿಯಲ್ ಅಪ್ಲಿಕೇಷನ್ಗಳು ಜೀವನ ಸಂಗಾತಿಯನ್ನು ಹುಡುಕಿಕೊಡುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯೂ ಆಗಿವೆ.

ನಮ್ಮನ್ನು ಪ್ರೀತಿಸುವವರು, ನಾವಿದ್ದ ಹಾಗೇ ನಮ್ಮನ್ನು ಒಪ್ಪಿಕೊಳ್ಳುವವರು ಸಿಗಬೇಕು ಎನ್ನುವುದು ಎಲ್ಲರ ಆಸೆ. ಸಾಮಾಜಿಕ ಜಾಲತಾಣ ಅಥವಾ ಇಂತಹ ಆ್ಯಪ್ಗಳಲ್ಲಿ ಮುಖ ಪರಿಚಯ ಇಲ್ಲದೇ ಇರುವವರು ಮನಸ್ಸಿನ ಭಾವನೆಗೆ ಸ್ಪಂದಿಸಿದಾಗ, ಇಷ್ಟ-ಕಷ್ಟ, ನೋವು, ನಲಿವು ಎಲ್ಲವನ್ನೂ ಹಂಚಿಕೊಂಡಾಗ ಆಗುವ ಆನಂದವೇ ಬೇರೆ. ಅಪರಿಚಿತ ಮುಖಗಳು ನಿಧಾನಕ್ಕೆ ಪರಿಚಿತ ವ್ಯಕ್ತಿಯಾಗಿ, ಅವರನ್ನೇ ಅರ್ಥ ಮಾಡಿಕೊಂಡು, ಪ್ರೀತಿಸಿ, ಜೀವನ ಕಟ್ಟಿಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ, ಯಶಸ್ವಿಯಾಗುವವರು ಬೆರಳೆಣಿಕೆಯಷ್ಟು ಜನರು ಮಾತ್ರ.

ವಿವೇಚನೆ ಇರಲಿ: ಆನ್ಲೈನ್ ಪ್ಲಾಟ್ಫಾರಂಗಳಲ್ಲಿ ನೂರಕ್ಕೆ ನೂರರಷ್ಟು ಎಚ್ಚರಿಕೆಯಿಂದಿರುವುದು ಅಗತ್ಯ. ಪ್ರೀತಿಯಲ್ಲಿರುವಾಗ ಭಾವನೆಗಳು ಜಿದ್ದಾಜಿದ್ದಿಯನ್ನೇ ನಡೆಸಿಬಿಡಬಲ್ಲವು. ಎಲ್ಲೋ ಕುಳಿತು ಮೆಸೇಜ್ ಮಾಡುತ್ತಿರುವ ವ್ಯಕ್ತಿಯೆಡೆಗಿನ ಆಕರ್ಷಣೆಯ ಹುಮ್ಮಸ್ಸಿನಲ್ಲಿ ಸಂಭಾಷಣೆ ನಡೆಸುವಾಗ ಬದುಕಿನಲ್ಲಿ ಇರುವುದು, ಇಲ್ಲದಿರುವುದು ಎಲ್ಲವನ್ನೂ ಸಂವಾದಿಸಿ ಕನಸಿನ ಆಶಾ ಗೋಪುರವನ್ನೇ ಕಟ್ಟಬಲ್ಲದು. ಅಷ್ಟೇ ವೇಗವಾಗಿ ವಾಸ್ತವಕ್ಕೆ ಬರುವುದರೊಳಗೆ ಅನಾಹುತವನ್ನೂ ಮಾಡಿಬಿಡಬಹುದು. ಪ್ರೀತಿಯಲ್ಲಿ ಇದ್ದಾಗ ಪ್ರತೀ ಕ್ಷಣವೂ ಸುಂದರ ಎನಿಸುತ್ತದೆ. ಆದರೆ, ಅದೇ ಪ್ರೀತಿ ಮುಗ್ಗರಿಸಿ ಬಿದ್ದಾಗ ಅದನ್ನು ಸಹಿಸುವ ಶಕ್ತಿ ಇಲ್ಲವಾಗುತ್ತದೆ. ಇದೇ ಆನ್ಲೈನ್ನಲ್ಲಿ ಉಂಟಾದ ಪ್ರೀತಿಯು ಹಣ, ಆಸ್ತಿಗೆ ಕನ್ನಹಾಕಿ ವ್ಯಕ್ತಿತ್ವಕ್ಕೇ ಧಕ್ಕೆ ತರಬಹುದು. ಮಾನಸಿಕ ಆರೋಗ್ಯಕ್ಕೆ ಕುತ್ತು ತರಬಹುದು. ಇಂಥವುಗಳ ಬಗ್ಗೆ ಅರಿವು ಇರಲಿ. ಹಿಡಿ ಪ್ರೀತಿಯ ಬಳ್ಳಿಗೆ ವಿವೇಚನೆಯ ಮಣ್ಣು ಸಶಕ್ತವಾಗಿ ಸಿಕ್ಕರೆ, ಅದು ಸಮೃದ್ಧವಾಗಿ ಹಬ್ಬಬಹುದು.

ಪ್ರೀತಿಯಲ್ಲಿ ಮುಗ್ಗರಿಸಿದಾಗ ಅದನ್ನು ಎದುರಿಸುವಷ್ಟು ಮನೋಸ್ಥೈರ್ಯವನ್ನೂ ಬೆಳೆಸಿಕೊಳ್ಳಬೇಕು. ಪ್ರೀತಿಗೆ ಮನಸ್ಸು ಮಾಗುವ ಮುನ್ನ ಭವಿಷ್ಯದ ಸಣ್ಣ ಯೋಚನೆ, ಯೋಜನೆಯತ್ತಲೂ ಚಿತ್ತವಿರಲಿ.

ಕಾಲಕಾಲಕ್ಕೂ ಪ್ರೀತಿಯ ವ್ಯಾಖ್ಯಾನ–ಆಖ್ಯಾನಗಳು ಬದಲಾಗುತ್ತಲೇ ಇರುತ್ತವೆ. ಜಾತ್ರೆಯಲ್ಲಿ ಮಿನುಗಿದ ಕಣ್ಣುಗಳ ಸೆಳೆತವೂ ಅದೆಷ್ಟು ಮುದ ನೀಡಬಲ್ಲದೋ, ಅನಾಮಿಕತೆಯ ಚೌಕಟ್ಟಿನಲ್ಲಿ ಆನ್ಲೈನ್ ಪ್ಲಾಟ್ಫಾರಂಗಳಲ್ಲಿ ಉಂಟಾದ ಆಕರ್ಷಣೆಯೂ ಅಷ್ಟೆ ಸಹಜವಾಗಿರುತ್ತದೆ. ಸಣ್ಣ ಆಕರ್ಷಣೆಯೇ ಗೆಳೆತನವಾಗಿ, ಪ್ರೀತಿಯಾಗಿ, ಬದುಕೇ ಆಗುವ ಹೊತ್ತಿನಲ್ಲಿ ಕ್ಷಣ ಕಾಲ ವಿವೇಕಕ್ಕೂ ಕೆಲಸ ಸಿಗಲಿ. ಮನುಷ್ಯ ಲೋಕದ ಎಲ್ಲ ವಿಕಾರಗಳಿಗೂ ಮದ್ದೆರೆಯಬಲ್ಲ ‘ಪ್ರೀತಿ’ಯನ್ನು ಆತುಕೊಳ್ಳುವಾಗ ಪರಸ್ಪರ ವ್ಯಕ್ತಿತ್ವದ ಸಾಮರ್ಥ್ಯ ಹಾಗೂ ದೌರ್ಬಲ್ಯಗಳ ಅರಿವಿದ್ದರೆ, ಬದುಕಿನ ಬಂಡಿ ಹಳಿ ತಪ್ಪದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.