ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಫೂರ್ತಿಯ ಉದ್ಯಮಿ: ಪಾಕತಜ್ಞೆಯ ಯಶಸ್ವಿ ಉದ್ಯಮ ಯಾನ

Last Updated 16 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

‘ಮಹಿಳಾ ಉದ್ಯಮಿಯು ಮಾನಸಿಕವಾಗಿ ದೃಢವಾಗಿರಬೇಕು. ತನ್ನ ಕೌಶಲದಲ್ಲಿ ನಂಬಿಕೆ ಹೊಂದಿರಬೇಕು. ಆಕೆ ಇತರರನ್ನೂ ಸಬಲರನ್ನಾಗಿಸುವ ಸಾಮರ್ಥ್ಯ ಹೊಂದಿರಬೇಕು. ತನ್ನ ಕೌಶಲಗಳ ಮೂಲಕ ಸಮಾಜದ ಉನ್ನತಿಗೆ ಶ್ರಮಿಸುವ ಸಾಮರ್ಥ್ಯವನ್ನು ಮಹಿಳೆ ಹೊಂದಿದ್ದಾಳೆ’ ಎನ್ನುವುದು ಬೆಂಗಳೂರಿನ ಉದ್ಯಮಿ ಅಂಶು ಅರ್ಚಿತ್ ಝಂಜನ್‌ವಾಲಾ ಅವರ ನಿಲುವು.

ಅಂಶು ಅವರು ತಮ್ಮ ಔದ್ಯಮಿಕ ಪ್ರಯಾಣ ಆರಂಭಿಸಿದ್ದು 16ರ ಎಳೆಯ ವಯಸ್ಸಿನಲ್ಲಿ. ಅಲ್ಲಿಂದ ಅವರು ಹಿಂದಿರುಗಿ ನೋಡಿದ್ದೇಇಲ್ಲ. ಗಾರ್ಮೆಂಟ್ ಉದ್ಯಮದ ಮೂಲಕ ತಮ್ಮ ಪಯಣ ಪ್ರಾರಂಭಿಸಿದ ಅಂಶು, 15 ವರ್ಷಗಳ ಕಾಲ ಅದನ್ನು ಯಶಸ್ವಿಯಾಗಿ ಮುನ್ನಡೆಸಿದರು. ತಮ್ಮ ಜೀವನೋಪಾಯ ನೋಡಿಕೊಳ್ಳುವುದು ಮಾತ್ರವಲ್ಲದೆ, ಇತರ ಹಲವರ ಜೀವನೋಪಾಯ ನೋಡಿಕೊಳ್ಳುವ ಹೊಣೆಯೂ ತಮ್ಮ ಮೇಲಿದೆ ಎಂಬುದನ್ನುಈ ಸಂದರ್ಭದಲ್ಲಿ ಅವರು ಅರಿತರು. ತಾಯಿಯಾದ ಸಂದರ್ಭವು ಅಂಶು ಅವರ ಜೀವನವನ್ನು ಬದಲಿಸಿತು. ಆಗ ತಾವು ನಡೆಸುತ್ತಿದ್ದ ವ್ಯವಹಾರ ನಿಲ್ಲಿಸಿ, ಹೊಸ ವೃತ್ತಿಯನ್ನು ಆರಂಭಿಸಿದರು. ಅವರು ಪರಿಣತ ಪಾಕತಜ್ಞೆಯಾಗಿ ‘ಫುಡ್ ಫಾರ್ ಥಾಟ್’ (www.foodforthought.co.in) ಎಂಬ ಹೆಸರಿನಲ್ಲಿ ಕೇಟರಿಂಗ್ ಸಂಸ್ಥೆ ಹುಟ್ಟುಹಾಕಿದರು. ಈ ಸಂಸ್ಥೆ ವಿಶ್ವದ ಬಗೆಬಗೆಯ ರುಚಿಕರ ಖಾದ್ಯಗಳನ್ನು ಸವಿಯುವ ಆಯ್ಕೆಯನ್ನು ಗ್ರಾಹಕರ ಎದುರು ಇರಿಸುತ್ತದೆ.

ಮೊದಲು ಅಂಶು ಕಾರ್ಯಾಗಾರಗಳನ್ನು, ಅಡುಗೆ ತರಗತಿಗಳನ್ನು ಪ್ರಾರಂಭಿಸಿದರು. ‘ಫುಡ್ ಹ್ಯಾಂಪರ್’ಗಳ ಪರಿಕಲ್ಪನೆಯನ್ನು ಜಾರಿಗೆ ತಂದರು. ಇವೆಲ್ಲವನ್ನೂ ನಿಭಾಯಿಸುವುದು ಸುಲಭದ ಕೆಲಸವೇನೂ ಆಗಿರಲಿಲ್ಲ. ಅವರು ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು. ಮನೆಯಿಂದ ಕೆಲಸ ಮಾಡುತ್ತಿದ್ದ ಅಂಶು ತಮ್ಮ ಕೌಟುಂಬಿಕ ಜವಾಬ್ದಾರಿಗಳನ್ನು ನಿಭಾಯಿಸುವುದಲ್ಲದೇ ವೃತ್ತಿಯ ಕರೆಗೂ ಓಗೊಡಬೇಕಾಗುತ್ತಿತ್ತು. ಕುಟುಂಬಕ್ಕಾಗಿ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಅಡುಗೆ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಪ್ರಾರಂಭದಲ್ಲಿ ಸರಳ ಮೆನುವಿನೊಂದಿಗೆ ಅಡುಗೆಮನೆಯನ್ನು ಚೊಕ್ಕವಾಗಿ ನಿರ್ವಹಿಸುವುದನ್ನು ಕಲಿಯಲು ಪ್ರಾರಂಭಿಸಿದರು. ಹೆಚ್ಚು ಮಂದಿಗೆ ಕೆಲಸ ನೀಡಲು ಶುರು ಮಾಡಿದರು. ಅಶಿಕ್ಷಿತ ವರ್ಗದ ಸಿಬ್ಬಂದಿ ಮತ್ತು ಪದೇ ಪದೇ ಕೆಲಸ ತೊರೆಯುವ ಕೆಲಸಗಾರರ ಕಾರಣದಿಂದ ಅಂಶು ಅವರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆದರೆ ‘ಪುಡ್ ಫಾರ್ ಥಾಟ್’ ಕುರಿತ ಅವರ ದೃಷ್ಟಿಕೋನ ಬೇರೆಯದೇ ಆಗಿತ್ತು. ಅವರು ಜನರನ್ನು ಸಶಕ್ತರನ್ನಾಗಿಸುವ ಉದ್ದೇಶ ಹೊಂದಿದ್ದರು. ಸಿಬ್ಬಂದಿ ಪೈಕಿ ಹಲವರು ಕೆಲಸ ತೊರೆಯುತ್ತಾರೆ ಎಂದು ತಿಳಿದಿದ್ದರೂ ಅಂಶು ಅವರು ಶಿಕ್ಷಕಿಯಂತೆ ನಿಂತುಕೊಂಡರು. ತಮ್ಮ ಮಾರ್ಗದರ್ಶನದ ಕಾರಣದಿಂದಾಗಿ, ಸಿಬ್ಬಂದಿಗೆ ಇನ್ನೂ ಉತ್ತಮ ಅವಕಾಶಗಳನ್ನು ಪಡೆಯವ ತಾಕತ್ತು ಬರಬಹುದು ಎಂದು ಅವರು ಭಾವಿಸಿದರು.

ಅವರ ಉದ್ಯಮ ಹೆಚ್ಚು ಜನಪ್ರಿಯವಾದಂತೆ, ಮನೆಗಳಲ್ಲೇ ನಡೆಯುವ ಅದ್ದೂರಿ ಪಾರ್ಟಿಗಳಿಗೆ, ಕಾರ್ಪೊರೇಟ್ ಕಾರ್ಯಕ್ರಮಗಳಿಗೆ ಆಹಾರ ಸರಬರಾಜು ಮಾಡುವ ಲಾಭದಾಯಕ ಅವಕಾಶಗಳನ್ನು ಹುಡುಕಿಕೊಂಡರು. ಇಂತಹ ಸಮಾರಂಭಗಳಲ್ಲಿ, ಗ್ರಾಹಕರು ವಿದೇಶಿ ತಿನಿಸುಗಳ ಬಗ್ಗೆ ಒಲವು ಹೊಂದಿರುವುದನ್ನು ಅಂಶು ಗಮನಿಸಿದರು. ಇಂತಹ ತಿನಿಸುಗಳನ್ನು ಪೂರೈಸುವ ಉದ್ದೇಶಕ್ಕಾಗಿಯೇ ‘ಪಾಕೆಟ್ಸ್ ಆ್ಯಂಡ್ ಬೌಲ್ಸ್’ ಎಂಬ ಸಂಸ್ಥೆಯನ್ನು ‘ಪುಡ್ ಫಾರ್ ಥಾಟ್’ನ ಅಂಗ ಸಂಸ್ಥೆಯಾಗಿ 2016ರಲ್ಲಿ ಸ್ಥಾಪಿಸಿದರು.

ಕೋವಿಡ್-19 ಸಾಂಕ್ರಾಮಿಕದಿಂದಾಗಿ ಅಂಶು ಅವರ ಕೇಟರಿಂಗ್ ವ್ಯವಹಾರಕ್ಕೆ ಭಾರೀ ಹೊಡೆತ ಬಿತ್ತು. ದೊಡ್ಡ ಪಾರ್ಟಿಗಳನ್ನು ಆಯೋಜಿಸುವುದನ್ನು ಜನ ನಿಲ್ಲಿಸಿದ್ದರಿಂದ ಕೇಟರಿಂಗ್ ಅವಕಾಶಗಳು ಕಡಿಮೆಯಾದವು. ಆದರೆ ಪ್ರತಿ ಬಿಕ್ಕಟ್ಟಿನಲ್ಲಿಯೂ ಒಂದು ಅವಕಾಶ ಅಡಗಿರುತ್ತದೆ ಎಂಬ ಮಾತಿದೆ. ಅಂಶು ಅವರು ಆನ್‌ಲೈನ್ ಮೂಲಕ ಆಹಾರ ಮಾರಾಟ ಪ್ರಾರಂಭಿಸಿದರು. ಇದರಿಂದಾಗಿ ‘ಪಾಕೆಟ್ಸ್ ಆ್ಯಂಡ್‌ ಬೌಲ್ಸ್’ಗೆ ಹೊಸ ಜೀವ ಬಂದಂತೆ ಆಯಿತು. ಸಣ್ಣ ಸಣ್ಣ ಪಾರ್ಟಿಗಳಿಗೆ ಆಹಾರ ಒದಗಿಸುವ ಅವಕಾಶ ಅಂಶು ಅವರಿಗೆ ದೊರೆಯಿತು. ‘ಪಾಕೆಟ್ಸ್ ಆ್ಯಂಡ್‌ ಬೌಲ್ಸ್’ ಈಗ ಸ್ವಿಗ್ಗಿಯಲ್ಲೂ ಲಭ್ಯವಿದ್ದು, ತನ್ನ ಪರಿಧಿಯನ್ನು ಹಿಗ್ಗಿಸಿಕೊಂಡಿದೆ.

ಅಂಶು ಅವರು ‘ಪುಡ್ ಫಾರ್ ಥಾಟ್ ರಿಟೇಲ್ ಸೇವೆ’ಯನ್ನೂ ಪ್ರಾರಂಭಿಸಿದರು. ಇದರಲ್ಲಿ ಹರ್ಬ್ ಸಾಲ್ಟ್ಸ್, ಜೇನು, ನೇರವಾಗಿ ಸೇವಿಸಬಹುದಾದ ಮಿಲೆಟ್ ಖಾದ್ಯ ಇತ್ಯಾದಿಗಳ ಮಾರಾಟ ವ್ಯವಸ್ಥೆ ಇದೆ. ಒಬ್ಬರಿಂದ ಒಬ್ಬರಿಗೆ, ಆನ್‌ಲೈನ್ ಮೂಲಕ ಈ ಬ್ರ್ಯಾಂಡ್‌ನ ಬಗ್ಗೆ ಒಳ್ಳೆಯ ಮಾತುಗಳು ಹರಿದಾಡಿವೆ. ‘ಪುಡ್ ಫಾರ್ ಥಾಟ್’ ಈಗ ಕೋವಿಡ್–19 ರೋಗಿಗಳಿಗೆ, ಹಿರಿಯ ನಾಗರಿಕರಿಗೆ ಪ್ಯಾಕೇಜ್ ಮಾಡಿರುವ ಆಹಾರ ಸರಬರಾಜು ಮಾಡುತ್ತಿದೆ. ‘ನನ್ನ ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ನಾನು ನನ್ನ ಉದ್ಯಮದ ರೂಪು ರೇಷೆಯನ್ನು ಬದಲಾಯಿಸಿದ್ದೇನೆ. ಗ್ರಾಹಕರ ಆದ್ಯತೆಗನುಸಾರ ಸೇವೆಗಳನ್ನು ಒದಗಿಸುವುದು ನನ್ನ ವೈಶಿಷ್ಟ್ಯ’ ಎಂದು ಅಂಶು ಅವರು ಹೆಮ್ಮೆ ಯಿಂದ ಹೇಳಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT