ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂ‍ಪರ್ ಬಾಡಿ ಇಮೇಜ್ ಗೀಳು: ಎಳವೆಯಲ್ಲೇ ನಿಯಂತ್ರಿಸಿ

Last Updated 10 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಸೂಪರ್ ಬಾಡಿ ಹೊಂದುವ ಗೀಳು ಮಕ್ಕಳಲ್ಲಿ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಪ್ರಭಾವವೂ ಇದಕ್ಕೆ ಕಾರಣ. ಆದರೆ ಆರಂಭದಲ್ಲೇ ಮಕ್ಕಳ ಮನಸ್ಸನ್ನು ನಿಯಂತ್ರಿಸದಿದ್ದರೆ ಅಪಾಯ ತಪ್ಪಿದ್ದಲ್ಲ.

ಸ ದ್ಯಕ್ಕಂತೂ ಗ್ಲಾಮರ್‌ ಎಂಬ ಗೀಳು ಬಹುತೇಕರನ್ನು ಆವರಿಸಿದೆ ಎನ್ನಬಹುದು. ಇದು ಮಕ್ಕಳನ್ನೂ ಬಿಟ್ಟಿಲ್ಲ. ದೈಹಿಕ ಸೌಂದರ್ಯ ಹೆಚ್ಚಿಸಿಕೊಳ್ಳುವುದು, ಸದೃಢವಾದ ದೇಹವನ್ನು ಹೊಂದುವುದು.. ಹದಿಹರೆಯದವರ ಕನಸು. ಸಾಮಾಜಿಕ ಜಾಲತಾಣ, ಜಾಹೀರಾತುಗಳು, ಸಿನಿಮಾ ನಾಯಕ– ನಾಯಕಿಯರ ಸುಂದರವಾದ ಚಿತ್ರಗಳು ಮಕ್ಕಳ ಮನಸ್ಸನ್ನು ಕೆರಳಿಸುತ್ತಿವೆ. ಇದರಿಂದ ಚಿಕ್ಕ ವಯಸ್ಸಿನಲ್ಲೇ ಅಪಾಯಕಾರಿ ಎನಿಸುವಂತಹ ಡಯಟ್‌ ಮಾಡುವುದು, ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡುವುದು.. ಇದೆಲ್ಲ ವೈಪರೀತ್ಯಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಕಾರಣ ಇಷ್ಟೇ– ಸೂಪರ್‌ ಬಾಡಿ ಇಮೇಜ್‌ ಗೀಳು.

ಗಂಡುಮಕ್ಕಳು ಹೆಚ್ಚು ಎತ್ತರವಾಗಿ ಬೆಳೆಯಬೇಕು, ಕಟ್ಟುಮಸ್ತಾದ ದೇಹ ಹೊಂದಬೇಕು, ಸಿಕ್ಸ್‌ ಪ್ಯಾಕ್‌.. ಏಯ್ಟ್‌ ಪ್ಯಾಕ್ಸ್‌ ಎಂದೆಲ್ಲ ಎದೆಯುಬ್ಬಿಸಿ ನಡೆಯಬೇಕು ಎಂಬ ಕನಸು ಕಂಡರೆ, ಹೆಣ್ಣುಮಕ್ಕಳು ತೆಳ್ಳನೆ ಬಳುಕುವ ಶರೀರ, ಕುಂದಿಲ್ಲದ ತ್ವಚೆ, ರೂಪದರ್ಶಿಯಂತಹ ಅಂಗಸೌಷ್ಟವ.. ಹೀಗೆ ಅಪರೂಪದ ಸೌಂದರ್ಯ ತಮ್ಮದಾಗಬೇಕು ಎಂದು ಬಯಕೆ ಇಟ್ಟುಕೊಂಡಿರುತ್ತಾರೆ. ಆ ಕನಸನ್ನು ನನಸು ಮಾಡಿಕೊಳ್ಳಲು ಏನೆಲ್ಲಾ ಕಸರತ್ತು ಮಾಡಿ ಅಪಾಯಕ್ಕೆ ಒಡ್ಡಿಕೊಳ್ಳುತ್ತಾರೆ.

ಇದಕ್ಕೆ ಕಾರಣಗಳೂ ಹಲವು. ಒಂದು ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳಾದರೆ, ಇನ್ನೊಂದು ಶಾಲೆಗಳಲ್ಲಿ ಇತರ ವಿದ್ಯಾರ್ಥಿಗಳು ಮಾಡುವ ಅಣಕ, ಟೀಕೆಗಳು. ಸಹಪಾಠಿಗಳ ಅಣಕದಿಂದ ಹಲವರು ತಮ್ಮ ದೇಹದ ಬಗ್ಗೆ ನಕಾರಾತ್ಮಕ ಧೋರಣೆ ಬೆಳೆಸಿಕೊಂಡಿರುತ್ತಾರೆ. ಇದರಿಂದ ಖಿನ್ನತೆ, ಆತಂಕ, ವಿನಾಕಾರಣ ಕೋಪೋದ್ರೇಕಗಳಂತಹ ಸಮಸ್ಯೆಗಳು ಶುರುವಾಗಬಹುದು. ಜೊತೆಗೆ ಹೆಚ್ಚು ಅಥವಾ ಕಡಿಮೆ ತಿನ್ನುವುದು, ದೇಹವನ್ನು ವ್ಯಾಯಾಮದ ಹೆಸರಿನಲ್ಲಿ ವಿಪರೀತ ದಂಡಿಸುವುದು ಕೂಡ ಶುರುವಾಗುತ್ತದೆ.

ಸಹಪಾಠಿಗಳು ಅಷ್ಟೇ ಅಲ್ಲ, ಮನೆಯವರು, ಸಂಬಂಧಿಕರೂ ಕೂಡ ದಪ್ಪ ಇರುವ ಹೆಣ್ಣುಮಕ್ಕಳನ್ನು ಅಣಕಿಸುವುದು, ಅಡ್ಡ ಹೆಸರು ಇಟ್ಟು ಕರೆಯುವುದು, ಬೇರೆ ಹುಡುಗಿಯರಿಗೆ ಹೋಲಿಸಿ ಅವಮಾನ ಮಾಡುವುದಿದೆ. ಇದರಿಂದ ಹದಿಹರೆಯದ ಹುಡುಗಿಯರು ಒಳಗೊಳಗೇ ನೊಂದುಕೊಳ್ಳುವುದು ಸಹಜ. ಅವರ ಮಾತನ್ನೆಲ್ಲ ಎದುರಿಸುವಷ್ಟು ಮಾನಸಿಕವಾಗಿ ಬೆಳೆದಿರುವುದಿಲ್ಲ. ಸಹಜವಾಗಿಯೇ ತೂಕ ಕಳೆದುಕೊಳ್ಳುವ ಸಾಹಸಕ್ಕೆ ಕೈ ಹಾಕುತ್ತಾರೆ. ಒಮ್ಮೆಲೇ ಡಯಟ್‌ ಮಾಡಲು ಹೋಗಿ ಅಪಾಯಕಾರಿ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವುದು ಸಾಮಾನ್ಯ.

ಇಲ್ಲಿ ಕೆಲವೊಮ್ಮೆ ಪೋಷಕರದ್ದೂ ತಪ್ಪಿರುತ್ತದೆ. ತಮ್ಮ ಮಗನೋ, ಮಗಳೋ ದಪ್ಪ ಇದ್ದರೆ ಆರೋಗ್ಯಕರ ಡಯಟ್‌, ಫಿಟ್‌ನೆಸ್‌ ಬಗ್ಗೆ ಸಲಹೆ ಕೊಡುವುದನ್ನು ಬಿಟ್ಟು ಅಣಕಿಸುವುದು, ಅವಮಾನಿಸುವುದು ಮಾಡುತ್ತಾರೆ. ಇದರಿಂದ ಕೆಲವೊಮ್ಮೆ ಉಪವಾಸ ಬಿದ್ದಾದರೂ ತೂಕ ಇಳಿಸಿಕೊಳ್ಳಲು ಹೋಗುವ ಮಕ್ಕಳ ಸಮಸ್ಯೆ ಆರಂಭದಲ್ಲಿ ಪೋಷಕರಿಗೂ ಅರ್ಥವಾಗುವುದಿಲ್ಲ. ಅಂತರ್ಜಾಲದಲ್ಲಿ ತಡಕಾಡಿ ಯಾವ್ಯಾವುದೋ ಡಯಟ್ ಅನ್ನು ಅನುಸರಿಸಲು ಹೋಗಿ ಎಡವಿ ಬೀಳುತ್ತಾರೆ. ಎನರ್ಜಿ ಡ್ರಿಂಕ್‌ ಕುಡಿಯುವುದೂ ಇದೆ. ಸ್ನಾಯುಗಳನ್ನು ಬೆಳೆಸಲು ಅಗತ್ಯಕ್ಕಿಂತ ಜಾಸ್ತಿ ಪ್ರೊಟೀನ್‌ ಸೇವಿಸಿ ಸಮಸ್ಯೆಗೆ ಒಡ್ಡಿಕೊಳ್ಳುವುದೂ ಇದೆ.ಇದು ಕಡಿಮೆ ತಿನ್ನುವ ಅನರೋಕ್ಸಿಯ ಅಥವಾ ಹೆಚ್ಚು ತಿಂದಾಗ ವಾಂತಿ ಮಾಡಿ ಹೊರಹಾಕುವ ಬುಲಿಮಿಯ ಸಮಸ್ಯೆಗೂ ಕಾರಣವಾಗಬಹುದು.

ಹಾಗೆಯೇ ಹದಿಹರೆಯದವರು ಸೌಂದರ್ಯದ ಕಾಳಜಿ ಹೆಚ್ಚು ವಹಿಸುವುದು ಸಹಜ. ಮುಖದ ಮೇಲೆ ಮೂಡಿದ ಮೊಡವೆಗೆ ಸಹಪಾಠಿಗಳು ಹೇಳಿದ ಔಷಧಿಯನ್ನೋ ಅಥವಾ ಅಂತರ್ಜಾಲದಲ್ಲಿ ಓದಿದ ಯಾವುದೋ ಮದ್ದನ್ನೋ ಮಾಡಿಕೊಂಡು ಅಡ್ಡ ಪರಿಣಾಮಗಳಿಗೆ ಒಡ್ಡಿಕೊಂಡ ಹಲವು ಪ್ರಕರಣಗಳಿವೆ.

* ಮಕ್ಕಳ ಮೆಲೆ ನಿಗಾ ಇಡಿ.

*ಅವರು ಕಡಿಮೆ ಅಥವಾ ಹೆಚ್ಚು ಊಟ ಮಾಡುತ್ತಿದ್ದರೆ ಗಮನಿಸಿ.

*ಊಟದ ಸಮಯದಲ್ಲಿ ಅಸಹಜ ನಡವಳಿಕೆ ಕಂಡು ಬಂದರೆ ಎಚ್ಚರಿಕೆ ವಹಿಸಿ.

*ಮನೆಯಲ್ಲಿ ತಯಾರಿಸಿದ ಆಹಾರ ಬಿಟ್ಟು ಬೇರೆ ಡಯಟ್‌ ಆರಂಭಿಸಿದರೆ ಅವರ ಜೊತೆ ಮಾತನಾಡಿ.

*ಮಕ್ಕಳ ಜೊತೆ ಫಿಟ್‌ನೆಸ್‌ ಮತ್ತು ಆರೋಗ್ಯದ ಬಗ್ಗೆ ಚರ್ಚೆ ಮಾಡಿ.

*ಸಿನಿಮಾ ಅಥವಾ ಕ್ರೀಡಾ ಕ್ಷೇತ್ರದ ತಾರೆಯರು, ರೂಪದರ್ಶಿಗಳನ್ನು ಆದರ್ಶವಾಗಿ ಇಟ್ಟುಕೊಂಡರೆ ಓಕೆ. ಆದರೆ ಅವರಂತೆ ದೇಹ, ಸೌಂದರ್ಯ ಪಡೆದುಕೊಳ್ಳಲು ಹಾತೊರೆದಾಗ ಎಚ್ಚರಿಕೆ ವಹಿಸಿ.

*ಕ್ರೀಡೆ, ವ್ಯಾಯಾಮದ ಅಗತ್ಯವನ್ನು ವಿವರಿಸಿ.

*ಅಸಹಜ ನಡವಳಿಕೆ, ಖಿನ್ನತೆ ಇದ್ದರೆ ಆಪ್ತ ಸಮಾಲೋಚಕರನ್ನು ಭೇಟಿ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT