ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಯಾನ್ಸರ್: ಮಹಿಳೆಯರಿಗೆ ಮುನ್ನೆಚ್ಚರಿಕೆ ಇರಲಿ

Published 25 ಮೇ 2024, 0:40 IST
Last Updated 25 ಮೇ 2024, 0:40 IST
ಅಕ್ಷರ ಗಾತ್ರ

ಭಾರತದಲ್ಲಿ ಪ್ರತಿ ವರ್ಷ 7 ಲಕ್ಷ ಮಹಿಳೆಯರಲ್ಲಿ ಕ್ಯಾನ್ಸರ್ ರೋಗ ಪತ್ತೆಯಾಗುತ್ತಿದೆ. ಈ ಪೈಕಿ ಶೇ 28.8ರಷ್ಟು ಸ್ತನ ಕ್ಯಾನ್ಸರ್, ಶೇ 10.6ರಷ್ಟು ಗರ್ಭಕಂಠ, ಶೇ 6.2ರಷ್ಟು ಅಂಡಾಶಯ, ಶೇ 3.7 ರಷ್ಟು ಗರ್ಭಾಶಯ ಮತ್ತು ಶೇ 3.7ರಷ್ಟು ಶ್ವಾಸಕೋಶ ಕ್ಯಾನ್ಸರ್ ರೋಗಗಳು ಸೇರಿವೆ.

ವಿಶ್ವದಾದ್ಯಂತ ಮಹಿಳೆಯರು ಅಕಾಲಿಕವಾಗಿ ಮರಣ ಹೊಂದಲು ಇರುವ ಪ್ರಮುಖ ಮೂರು ಕಾರಣಗಳಲ್ಲಿ ಕ್ಯಾನ್ಸರ್ ಮೊದಲ ಸ್ಥಾನದಲ್ಲಿದೆ. 

 ಪುರುಷರಿಗೆ ಹೋಲಿಸಿದರೆ ಈ ಮಾರಕ ರೋಗವನ್ನು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವುದು ಮಹಿಳೆಯರಲ್ಲಿ ಕಡಿಮೆ ಇದೆ.  

ಬೆಂಗಳೂರಿನ ಸಂಪ್ರದ ಆಸ್ಪತ್ರೆಯ ಕನ್ಸಲ್ಟೆಂಟ್ ಮೆಡಿಕಲ್ ಆಂಕಾಲಾಜಿಸ್ಟ್‌   ಡಾ.ರಾಧೇಶ್ಯಾಮ್ ನಾಯಕ್, ಪ್ರತಿವರ್ಷ ಭಾರತದಲ್ಲಿ 1.23 ಲಕ್ಷ ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಮತ್ತು 1.44 ಲಕ್ಷ ಜನರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ಇದು ಜಾಗತಿಕವಾಗಿ ಗರ್ಭಕಂಠ  ಕ್ಯಾನ್ಸರ್ ಮರಣದ ಶೇಕಡ ಮೂರನೇ ಒಂದರಷ್ಟಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಪ್ರಕರಣಗಳು ಮತ್ತು ಮರಣಕ್ಕೆ ಕಾರಣಗಳ ವಿಚಾರದಲ್ಲಿ ಸ್ತನ ಕ್ಯಾನ್ಸರ್ ಗರ್ಭಕಂಠ ಕ್ಯಾನ್ಸರ್ ಅನ್ನು ಹಿಂದಿಕ್ಕಿದೆ ಎನ್ನುತ್ತಾರೆ. 

ರೋಗನಿರ್ಣಯದ ಹಂತವನ್ನು ಸುಲಭವಾಗಿ ಕಂಡುಹಿಡಿಯಲು ಸಾಧ್ಯವಾಗಬೇಕು. ದುರದೃಷ್ಟವಶಾತ್, ಶೇ 57ರಷ್ಟು ಸ್ತನ ಕ್ಯಾನ್ಸರ್, ಶೇ 40.6ರಷ್ಟು ಅಂಡಾಶಯ ಕ್ಯಾನ್ಸರ್ ಮತ್ತು ಶೇ 60 ರಷ್ಟು ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳನ್ನು ದುಗ್ದರಸ ಗ್ರಂಥಿಗಳು, ಅಂಗಾಂಶಗಳು ಅಥವಾ ಇತರ ಅಂಗಗಳಿಗೆ ಹರಡಿಕೊಂಡಿರುವ ಹಂತದಲ್ಲಿ ರೋಗನಿರ್ಣಯವನ್ನು ಮಾಡಲಾಗುತ್ತಿದೆ.

 ಮಹಿಳೆಯರು ಪ್ರತಿ ವರ್ಷ ಸ್ತನ, ಗರ್ಭಕಂಠ, ಓರಲ್ ಕ್ಯಾವಿಟಿ, ಹೊಟ್ಟೆ, ಶ್ವಾಸಕೋಶ ಮತ್ತು ಇತರ ಅಂಗಗಳ ತಪಾಸಣೆ ಮಾಡಿಸಿಕೊಳ್ಳಬೇಕು. 9 ರಿಂದ 15 ವರ್ಷ ವಯೋಮಾನದ ಹೆಣ್ಣು ಮಕ್ಕಳು HPV ಲಸಿಕೆ ಹಾಕಿಸಿಕೊಳ್ಳುವುದು ಮತ್ತು ವಯಸ್ಕ ಮಹಿಳೆಯರು ಹೆಪಟೈಟಿಸ್ ಬಿ ವೈರಸ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಹೆಲಿಕೋಬ್ಯಾಕ್ಟರ್ ಪೈಲೋರಿ, ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿಯಂಥ ಸೋಂಕುಗಳ ಬಗ್ಗೆ ಜಾಗ್ರತರಾಗಿರಬೇಕು. ಹೈಡ್ರೋಕ್ವಿನೋನ್ ಹೊಂದಿರುವ ಚರ್ಮಕ್ಕೆ ಸಂಬಂಧಿಸಿದ ಕ್ರೀಂಗಳನ್ನು ಹಾಗೂ ಪ್ಯಾರಾಬೆನ್‌ಗಳನ್ನು ಹೊಂದಿರುವ ಕಾಸ್ಮೆಟಿಕ್ ಉತ್ಪನ್ನಗಳನ್ನು ಬಳಸಬಾರದು.

ಭಾರತದಲ್ಲಿ ಶೇ 60ರಷ್ಟು ಸ್ತನ ಕ್ಯಾನ್ಸರ್ ಪ್ರಕರಣಗಳನ್ನು ಮೂರು ಅಥವಾ ನಾಲ್ಕನೇ ಹಂತದಲ್ಲಿದ್ದಾಗ ಪತ್ತೆ ಮಾಡಲಾಗುತ್ತಿದೆ. ಇದರ ಪರಿಣಾಮ ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಸ್ತನ ಕ್ಯಾನ್ಸರ್‌ ರೋಗಿಗಳು ಬದುಕುಳಿಯುವ ಪ್ರಮಾಣ ಕಡಿಮೆ ಇದೆ. ಜಾಗತಿಕವಾಗಿರುವ ಒಟ್ಟು ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳಲ್ಲಿ ಮೂರನೇ ಒಂದು ಭಾಗದಷ್ಟು ಭಾರತದ್ದಾಗಿವೆ.

ವಿಶ್ವದ ಅಭಿವೃದ್ಧಿಶೀಲ ದೇಶಗಳಲ್ಲಿ ಪ್ರತಿ 100 ಮಹಿಳೆಯರ ಪೈಕಿ ಒಬ್ಬರಿಗೆ ಈ ಗರ್ಭಕಂಠ ಕ್ಯಾನ್ಸರ್ ಕಂಡುಬಂದರೆ, ಭಾರತದಲ್ಲಿ ಪ್ರತಿ 53 ಮಹಿಳೆಯರಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತಿದೆ. ಭಾರತದಲ್ಲಿನ 15 ರಿಂದ 41 ವರ್ಷ ವಯೋಮಾನದ ಮಹಿಳೆಯರಲ್ಲಿ ಅತಿ ಹೆಚ್ಚಾಗಿ ಕಂಡು ಬರುವ ಎರಡನೇ ಸಾಮಾನ್ಯ ಕ್ಯಾನ್ಸರ್ ಇದಾಗಿದೆ. ಮುಕ್ಕಾಲು ಭಾಗದಷ್ಟು ಪ್ರಕರಣಗಳನ್ನು ಅವುಗಳು ಅಂತಿಮ ಹಂತಕ್ಕೆ ತಲುಪಿದಾಗ ಪತ್ತೆ ಮಾಡಲಾಗುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT