ಮಂಗಳವಾರ, ಆಗಸ್ಟ್ 16, 2022
30 °C

PV Web Exclusive: ಕೋವಿಡ್‌ ಆರೈಕೆ ಕೇಂದ್ರ: ಮಹಿಳೆಯರಿಗಿಲ್ಲ ಸುರಕ್ಷತೆ?

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

Prajavani

‘ಯಪ್ಪಾ, ಸಾಕೇ ಸಾಕು. ಕೋವಿಡ್‌ ಆರೈಕೆ ಕೇಂದ್ರಗಳ ಸಹವಾಸ ಸಾಕು. 6 ದಿನ ಇದ್ದು ನರಕ ದರ್ಶನವಾಯಿತು. ಸ್ವಚ್ಛತೆ ಎಂಬ ಪದವನ್ನು ಬಹುಶಃ ಆ ಕೇಂದ್ರದಲ್ಲಿ ಯಾರೂ ಕೇಳಿರಲಿಲ್ಲ ಎನ್ನಿಸಿತು. ಮೂರು ದಿನ ನೀರಿರಲಿಲ್ಲ. ನಮ್ಮ ಕಷ್ಟ ಸುಖ ವಿಚಾರಿಸಲು ಯಾವೊಬ್ಬ ಸಿಬ್ಬಂದಿಯೂ ಇರಲಿಲ್ಲ. ಕೇಂದ್ರದಿಂದ ದೂರ ಎಲ್ಲೋ ಒಂದಿಬ್ಬರು ಕೂರುತ್ತಿದ್ದರು ಅಷ್ಟೆ. ನಾನು ನನ್ನ ಮಗಳು ಆರು ದಿನ ಭೂಲೋಕದ ನರಕವನ್ನು ಅನುಭವಿಸಿ ಬಂದೆವು’ ಎಂದು ಶಿವಮೊಗ್ಗದ ಮಹಿಳೆಯೊಬ್ಬರು ತಮ್ಮೊಳಗಿದ್ದ ವಿಪರಿಮಿತ ಸಿಟ್ಟನ್ನು ಹೀಗೆ ಹೊರಹಾಕಿದರು.

ಅವರ ಮಾತು ಇಷ್ಟಕ್ಕೆ ಮುಗಿಯಲಿಲ್ಲ. ಮುಂದುವರೆದು, ‘ನಾವು ಇದ್ದ ಕೇಂದ್ರದಲ್ಲಿ ಹಲವು ಗಂಡಸರೂ ಇದ್ದರು. ಮನೆಯ ಜವಾಬ್ದಾರಿ ಇಲ್ಲ. ಹೆಂಡತಿ ಮಕ್ಕಳ ಯೋಚನೆ ಇಲ್ಲದೆ, ಗುಂಡು (ಮದ್ಯ) ಹಾಕಿಕೊಂಡು, ಸಿಗರೇಟು ಸೇದಿಕೊಂಡು ಆರಾಮಾಗಿ ದಿನಕಳೆಯುತ್ತಿದ್ದರು. ನೋಡಿ, ಇದು ಅವರ ಸ್ವರ್ಗ! ನಾವಂತು ನಮ್ಮ ರೂಮಿನಿಂದ ಹೊರಗೇ ಬರುತ್ತಿರಲಿಲ್ಲ. ರಾತ್ರಿಯ ವೇಳೆಯಲ್ಲಿ ಬಾತ್‌ರೂಮಿಗೆ ಹೋಗಲೂ ನಮಗೆ ಭಯವಾಗುತ್ತಿತ್ತು. ನಾನು ಮತ್ತು ನನ್ನ ಮಗಳು ಇಬ್ಬರು ಒಂದೇ ರೂಮಿನಲ್ಲಿ ಇದ್ದಿದ್ದರಿಂದ ಸ್ವಲ್ಪ ಧೈರ್ಯವಷ್ಟೆ. ಪಾಪ, ಒಬ್ಬಂಟಿಯಾಗಿ ಯಾರೊ ಹೆಣ್ಣುಮಗಳು ಇಲ್ಲಿಗೆ ಬಂದಿದ್ದರೆ ಹೇಗೆ?’ ಎಂದು ಇಂಥ ಕೇಂದ್ರಗಳಲ್ಲಿ, ಕೋವಿಡ್‌ ತಡೆಗಟ್ಟುವ ಸಲುವಾಗಿ ನಿರ್ಮಾಣವಾಗಿರುವ ಇಡೀ ವ್ಯವಸ್ಥೆಯಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಇರುವ ಅಸಡ್ಡೆಯನ್ನು ತೆರೆದಿಟ್ಟರು.

ಮಡಿಕೇರಿಯ ಕೋವಿಡ್‌ ಕೇಂದ್ರವೊಂದರಲ್ಲಿ ಇದ್ದು ಬಂದಿದ್ದ ಮಹಿಳೆಯೊಬ್ಬರೂ ತಮ್ಮ ಅನುಭವ ಹಂಚಿಕೊಂಡರು. ಅವರು ಕೇಳಿದ್ದು ಒಂದೇ ಪ್ರಶ್ನೆ. ಕೇಂದ್ರದಲ್ಲಿ ಓಡಾಡುವ ಆರೋಗ್ಯ ಸಿಬ್ಬಂದಿ ಎಲ್ಲರೂ ‍ಪಿಪಿಇ ಕಿಟ್‌ ಧರಿಸಿರುತ್ತಾರೆ. ನಮಗೆ ಚಿಕಿತ್ಸೆ ನೀಡಲು ಬಂದಿರುವವರು ಹೆಣ್ಣೊ ಗಂಡೊ ಎಂದು ಹೇಗೆ ತಿಳಿಯುವುದು?

ಕೊರೊನಾ ಸೋಂಕಿತರಿಗಾಗಿ, ಕ್ವಾರಂಟೈನ್‌ನಲ್ಲಿ ಇಡಲು ದೇಶದಾದ್ಯಂತ ನಿರ್ಮಿಸಲಾಗಿರುವ ವಿಶ್ವದ ಅತ್ಯಂತ ದೊಡ್ಡ ಕೇಂದ್ರಗಳೂ ಸೇರಿದಂತೆ ಹಲವು ಕೋವಿಡ್‌ ಕೇಂದ್ರಗಳಲ್ಲಿ 14 ವರ್ಷದ ಮಕ್ಕಳಿಂದ ಹಿಡಿದು 40– 50 ವರ್ಷದ ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗಿದಂತಹ ಘಟನೆಗಳು ನಡೆದಿವೆ. ಮೂರು ನಾಲ್ಕು ದಿನಗಳ ಹಿಂದೆಯಷ್ಟೆ ಕೇರಳದಲ್ಲಿ ಕೋವಿಡ್‌ ಕೇಂದ್ರಕ್ಕೆ ತೆರಳುವಾಗ ಆ್ಯಂಬುಲೆನ್ಸ್‌ನ ಚಾಲಕ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ವರದಿಯಾಗಿದೆ.

ದೆಹಲಿಯ ಸರ್ದಾರ್‌ ಪಟೇಲ್‌ ಕೋವಿಡ್‌ ಆರೈಕೆ ಕೇಂದ್ರದಲ್ಲಿ 14 ವರ್ಷದ ಹುಡುಗಿಯ ಮೇಲೆ 19 ವರ್ಷದ ಹುಡುಗನೊಬ್ಬ ಬಾತ್‌ರೂಮ್‌ನಲ್ಲಿ ಅತ್ಯಾಚಾರ ಎಸಗಿದ್ದಾನೆ. ತನ್ನ 20 ವರ್ಷದ ಸ್ನೇಹಿತನಿಗೆ ಅತ್ಯಾಚಾರದ ವಿಡಿಯೊವನ್ನು ಚಿತ್ರೀಕರಿಸಲು ಹೇಳಿದ್ದಾನೆ. ಇದು ದೇಶದಲ್ಲಿ ತಕ್ಕ ಮಟ್ಟಿಗೆ ದೊಡ್ಡ ಸುದ್ದಿಯಾಯಿತು. ಪೊಲೀಸ್‌ ಕೇಸ್‌ ಕೂಡ ಆಯಿತು.

ಬಿಹಾರದಲ್ಲಿ 25 ವರ್ಷದ ಯವತಿಯೊಬ್ಬರು ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದ ಕಾರಣ ಆರೈಕೆ ಕೇಂದ್ರದಲ್ಲಿದ್ದರು. ಎರಡು ರಾತ್ರಿ ಇಬ್ಬರು ಡಾಕ್ಟರ್‌ಗಳು ಆಕೆಯ ಮೇಲೆ ದೌರ್ಜನ್ಯ ನಡೆಸಿದ್ದಾರೆ. ನಂತರ ಆಕೆ, ಗುಣಮುಖಳಾಗಿ ಮನೆಗೆ ಬಂದಿದ್ದಾರೆ. ಆದರೆ, ಮನೆಯಲ್ಲಿ ಆಕೆ ನಡೆದುಕೊಳ್ಳುತ್ತಿದ್ದ ರೀತಿ ಪೋಷಕರಲ್ಲಿ ಅನುಮಾನ ಮೂಡಿಸಿತು. ನಂತರ ತೀವ್ರ ರಕ್ತಸ್ರಾವದಿಂದ ಆಕೆ ಮೃತಪಟ್ಟರು. ಡಾಕ್ಟರ್‌ ವೇಷ ಧರಿಸಿ ಈಕೆಯ ಮೇಲೆ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ಅಲ್ಲಿಗೆ, ಒಂದು ಕೋವಿಡ್‌ ಆರೈಕೆ ಕೇಂದ್ರದ ಒಳಗೆ ಯಾರು ಬೇಕಾದರೂ ಬಂದು ಏನೂ ಮಾಡಬಹುದು ಎಂದಾಯಿತು.

20 ವರ್ಷದ ಮಹಿಳೆಯೊಬ್ಬರು ಕೆಲವು ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದಾರೆ. ಕೊರೊನಾ ಪಾಸಿಟಿವ್‌ ಕೂಡ ಬಂದಿದೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸ್ಯಾಂಪಲ್ಸ್‌ ತೆಗೆದುಕೊಳ್ಳುವ ನೆಪ ಮಾಡಿಕೊಂಡು ಆಸ್ಪತ್ರೆಯ ಇಬ್ಬರು ಸಿಬ್ಬಂದಿ ದೌರ್ಜನ್ಯ ಎಸಗಿದ್ದಾರೆ. ಇದು ನಡೆದಿದ್ದು ಉತ್ತರ ಪ್ರದೇಶದಲ್ಲಿ.

ಇನ್ನೊಂದು ಘಟನೆಯಲ್ಲಿ, ಮುಂಬೈನ ಪಾನಿವಲ್‌ನ ಕ್ವಾರಂಟೈನ್‌ ಕೇಂದ್ರವೊಂದರಲ್ಲಿ 40 ವರ್ಷದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ನಂತರ ಅಲ್ಲಿನ ಪಾನಿವಲ್‌ ಸಿಟಿ ಮುನಿಸಿಪಾಲಿಟಿ ಕಾರ್ಪೋರೇಶನ್‌, ಮಹಿಳೆ ಹಾಗೂ ಪುರುಷರಿಗಾಗಿ ಬೇರೆ ಬೇರೆ ಕೇಂದ್ರಗಳನ್ನು ಮಾಡಿತು. ಈ ಕೇಂದ್ರಕ್ಕೆ ಕೇವಲ ಮಹಿಳಾ ಪೊಲೀಸರು ಮತ್ತು ಮಹಿಳಾ ಸೆಕ್ಯುರಿಟಿ ಗಾರ್ಡ್ಸ್‌ಗಳನ್ನು ನಿಯೋಜಿಸಿತು.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಇಂಥ ಘಟನೆ ನಡೆದಿದೆ. ಮಹಿಳಾ ರೋಗಿಯ ಮೇಲೆ ವೈದ್ಯನಿಂದ ದೌರ್ಜನ್ಯ ಆಗಿದೆ ಎಂಬ ಆರೋಪ ಕೇಳಿಬಂದಿತ್ತು. ನಂತರ ಆಸ್ಪತ್ರೆಯವರೇ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದ್ದು. ಪೊಲೀಸರಿಗೆ ದೂರು ಸಹ ನೀಡಲಾಗಿದೆ.

ಇಲ್ಲಿ ಕೆಲವೇ ಕೆಲವು ಘಟನೆಗಳನ್ನು ಹೇಳಲಾಗಿದೆ. ಇನ್ನೂ ಹಲವು ಪ್ರಕರಣಗಳು ಮಹಿಳೆಯ ಸುರಕ್ಷತೆ ಬಗ್ಗೆ ಅಸಡ್ಡೆ ತೋರಿದ ಕಾರಣದಿಂದ ನಡೆದಿದೆ. ಅವರುಗಳ ಮೇಲೆ ಪ್ರಕರಣ ದಾಖಲಾಗಿರಬಹುದು. ಬಂಧನವೂ ಆಗಿರಬಹುದು, ಆದರೆ, ಹೀಗಾಗದಂರೆ ತಡೆಗಟ್ಟುವ ಮುಂದಾಲೋಚನೆ ಮಾಡಬಹುದಿತ್ತು.

ಕೋವಿಡ್‌ ಆರೈಕೆ ಕೇಂದ್ರದ ಕಾರ್ಯವೈಖರಿಗಳ ಬಗ್ಗೆ ಭಾರತೀಯ ವೈದ್ಯಕೀಯ ಪರಿಷತ್ (ಐಸಿಎಂಆರ್) ಹಲವು ಮಾರ್ಗಸೂಚಿಗಳನ್ನು ನೀಡಿದೆ. ಆದರೆ, ಅದು ಮಹಿಳೆಯ ಸುರಕ್ಷತೆಯ ಬಗ್ಗೆ ಏನನ್ನೂ ಹೇಳಿಲ್ಲ. ಹಲವು ಪರಿಷ್ಕೃತ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಲಾಯಿತು. ಆದರೂ, ಈ ಬಗ್ಗೆ ಗಮನ ಹರಿಸಿಲ್ಲ. ಕರ್ನಾಟಕ ಸರ್ಕಾರ ಕೂಡ ಯಾವುದೇ ಸುರಕ್ಷಾ ಕ್ರಮಗಳನ್ನು ಈ ಕುರಿತು ನೀಡಿರುವುದರ ಬಗ್ಗೆ ವರದಿಯಾಗಿಲ್ಲ.

ಸಾಹಿತ್ಯ ಸಮ್ಮೇಳನಗಳಲ್ಲಿ, ವಿಚಾರ ಗೋಷ್ಠಿಗಳಲ್ಲಿ ಮಹಿಳೆಗೆ ಸಂಬಂಧಿಸಿದ ವಿಚಾರಗಳನ್ನು ಹೆಚ್ಚು ಬಾರಿ ಮಹಿಳೆಯರಿಗೇ ನೀಡಲಾಗುತ್ತದೆ. ಇದೊಂದು ಸಂಪ್ರದಾಯವೇನೋ ಎಂಬಂತೆ ಬಂದುಬಿಟ್ಟಿದೆ. ಇನ್ನು, ಸರ್ಕಾರದ ಮಟ್ಟದಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ಹೆಚ್ಚಿನ ಪಾಲು ಮಹಿಳೆಯರಿಗೆ ನೀಡಲಾಗುತ್ತದೆ. ಎರಡೂ ಹಂಚಿಕೆಯ ಹಿಂದೆ ಒಳ್ಳೆಯ ಉದ್ದೇಶವೇ ಇರಬಹುದು. ಮಹಿಳೆಯ ಬಗ್ಗೆ ಇನ್ನೊಬ್ಬ ಮಹಿಳೆಗೆ ಹೆಚ್ಚು ಗೊತ್ತಿರಲು ಸಾಧ್ಯ ಎಂಬಂತಹ ಹಲವು ಕಾರಣ ಇರಬಹುದು. ಆದರೆ, ಸಚಿವರಾಗಿ ಅಧಿಕಾರ ಸ್ವೀಕರಿಸುವವರು ಮಹಿಳಾ ದೃಷ್ಟಿಕೋನವನ್ನು ಕುರುಡು ಮಾಡಿಕೊಳ್ಳುವುದು ಯಾಕೆ ಎನ್ನುವುದು ಕೌತುಕವೇ ಸರಿ.

ಸರ್ಕಾರದ ಮಟ್ಟದಲ್ಲಿ ಒಂದು ಮಾರ್ಗಸೂಚಿ ಸಿದ್ಧವಾಗುತ್ತದೆ ಎಂದಾದರೆ, ಮಹಿಳೆಯ ಅಭಿವೃದ್ಧಿಯ ಅಧಿಕಾರ ಹೊತ್ತ ಮಂತ್ರಿಗಳು ಮಹಿಳೆಯ ಕುರಿತು ಧ್ವನಿ ಎತ್ತುವುದಿಲ್ಲವೇ. ಕೋವಿಡ್‌ ಕೇಂದ್ರ ಮಾಡಬೇಕು ಎಂದಾದ ಮೇಲೆ, ಮಹಿಳೆ ಸುರಕ್ಷತೆ ಕುರಿತು ಇವರುಗಳಿಗೆ ಪ್ರಶ್ನೆಗಳೇ ಏಳುವುದಿಲ್ಲವೇ?

ಆನ್‌ಲೈನ್‌ನಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ಕುರಿತು ವರದಿ ಬರೆದೆ. ವರದಿ ಪ್ರಕಟವಾದ ದಿನ ಒಬ್ಬರು ಮಹಿಳಾ ಪರ ಹೋರಾಟದಲ್ಲಿ ಗುರುತಿಸಿಕೊಂಡವರು, ರಂಗಭೂಮಿಯೊಂದಿಗೆ ಒಡನಾಟ ಇರುವವರು ಕರೆ ಮಾಡಿ, ‘ಹೀಗೆಲ್ಲಾ ಆಗುವುದಕ್ಕೆ ಹೇಗೆ ಸಾಧ್ಯ. ನನಗೆ ಗೊತ್ತಿರುವ ಹಲವರು ಮನೆಯಿಂದಲೇ ಕೆಲಸ ಮಾಡುತ್ತಾರೆ. ಅವರ ಪ್ರಕಾರ ಹೀಗೆಲ್ಲಾ ಆಗುವುದಕ್ಕೆ ಸಾಧ್ಯವೇ ಇಲ್ಲವಂತೆ’ ಎಂದು ಹೇಳಿದರು. ನಂತರ ಅವರಿಗೆ ಮನವರಿಕೆ ಆಯಿತು, ಬಿಡಿ.

ಬದಲಾದ ಕಾಲಘಟ್ಟದಲ್ಲಿ, ಬಗೆಬಗೆಯಲ್ಲಿ ತೆರೆದ ಅವಕಾಶಗಳಲ್ಲಿ, ಬದಲಾದ ಜೀವನ ಶೈಲಿಗೆ ಹೊಂದಿಕೊಳ್ಳುವ, ಹೊಂದಿಕೊಳ್ಳುತ್ತಿರುವ ಈ ಕಾಲದಲ್ಲಿ ಮಹಿಳೆಗೆ ಅನೇಕ ರೀತಿಯ ಸವಾಲುಗಳು ಎದುರಾಗಲಿವೆ. ಹಾಗೆಯೆ ಈ ಸಂದರ್ಭದಲ್ಲಿ  ರೋಗಿಗಳ ಆರೈಕೆಗಾಗಿ ಮಾಡಿದ ವ್ಯವಸ್ಥೆಯಲ್ಲಿ ಪುರುಷ ಮತ್ತು ಮಹಿಳೆಯರನ್ನು ಒಟ್ಟಿಗೆ ಇಡುವುದು ಸರಿಯೇ? ಕೇಂದ್ರದಲ್ಲಿನ ರೋಗಿಗಳು, ಸಿಬ್ಬಂದಿಗಳೇ ದೌರ್ಜನ್ಯ ಎಸಗುತ್ತಿದ್ದಾರೆ; ಇಲ್ಲವೇ ವೇಷ ಧರಿಸಿ ಬಂದು ಕಿರುಕುಳ ನೀಡುತ್ತಿದ್ದಾರೆ. ಹಾಗಾದರೆ, ನಿಯಮ ರೂಪಿಸುವವರಿಗೆ, ಮಹಿಳಾ ಅಭಿವೃದ್ಧಿ ಖಾತೆ ನಿಭಾಯಿಸುವ ಮಂತ್ರಿಗಳಿಗೆ, ಮಹಿಳಾ ಪರ ಹೋರಾಟ ಮಾಡುವವರಿಗೆ ಹೊಸ ಸವಾಲುಗಳ ಬಗ್ಗೆ ಮುಂದಾಗಿ ಯೋಚನೆ ಯಾಕೆ ಮೂಡುವುದಿಲ್ಲ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು