ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಲಿಟರಿಯಲ್ಲಿ ವೀರ ವನಿತೆಯರು

ಭಾರತೀಯ ಸೇನಾಪಡೆಯಲ್ಲಿ ಹೊಸ ಶಕೆ ಆರಂಭ
Last Updated 1 ಏಪ್ರಿಲ್ 2021, 15:29 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಸೇನೆಯು ಇನ್ನು ಒಂದೂವರೆ ತಿಂಗಳಲ್ಲಿ ಐತಿಹಾಸಿಕ ಕ್ಷಣವೊಂದಕ್ಕೆ ಸಾಕ್ಷಿಯಾಗಲಿದೆ. ಇದೇ ಮೊದಲ ಬಾರಿಗೆ ಮಹಿಳಾ ಯೋಧರು ಸೇನೆಗೆ ಸೇರ್ಪಡೆಯಾಗಲಿದ್ದಾರೆ. 61 ವಾರಗಳ ತರಬೇತಿ ಮುಗಿಸಿ ಮೇ 8ರಂದು 100 ಯುವತಿಯರು ದೇಶ ಸೇವೆಗೆ ಅಡಿ ಇಡಲಿದ್ದಾರೆ.

ಎಸ್ಸೆಸ್ಸೆಲ್ಸಿಯಲ್ಲಿ ಶೇ 86ಕ್ಕಿಂತ ಹೆಚ್ಚು ಅಂಕ ಗಳಿಸಿದ ಯುವತಿಯರು ಮಹಿಳಾ ಯೋಧರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಮೊದಲ ಬ್ಯಾಚ್‌ನಲ್ಲಿ ಆಯ್ಕೆಯಾದವರಲ್ಲಿ ಎಸ್ಸೆಸ್ಸೆಲ್ಸಿ ಮಾತ್ರವಲ್ಲದೆ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರೂ ಇದ್ದಾರೆ.

'ಬೆಂಗಳೂರಿನ ಕಾರ್ಪ್ಸ್ ಆಫ್ ಮಿಲಿಟರಿ ಪೊಲೀಸ್ ಸೆಂಟರ್'ನಲ್ಲಿ ತರಬೇತಿ ಪಡೆದಿದೆ ಮೊದಲ ಮಹಿಳಾ ಮಿಲಿಟರಿ ಪೋಲಿಸ್‌ ತಂಡ-ಪ್ರಜಾವಾಣಿ ಚಿತ್ರ/ ಪುಷ್ಕರ್.ವಿ
'ಬೆಂಗಳೂರಿನ ಕಾರ್ಪ್ಸ್ ಆಫ್ ಮಿಲಿಟರಿ ಪೊಲೀಸ್ ಸೆಂಟರ್'ನಲ್ಲಿ ತರಬೇತಿ ಪಡೆದಿದೆ ಮೊದಲ ಮಹಿಳಾ ಮಿಲಿಟರಿ ಪೋಲಿಸ್‌ ತಂಡ-ಪ್ರಜಾವಾಣಿ ಚಿತ್ರ/ ಪುಷ್ಕರ್.ವಿ

ಪುರುಷ ಯೋಧರಿಗೆ ಸಮನಾದ ಸಮರಾಭ್ಯಾಸಗಳ ತರಬೇತಿಯನ್ನೂ ಈ ಯುವತಿಯರು ಪಡೆದಿದ್ದಾರೆ. ಗುಂಪು ಘರ್ಷಣೆ, ಪ್ರಾಕೃತಿಕ ವಿಕೋಪ ನಿರ್ವಹಣೆಯಂತಹ ಕಾರ್ಯಗಳ ಜೊತೆಗೆ ಯಾವುದೇ ಗಡಿಯಲ್ಲಿ, ಯುದ್ಧಗಳಲ್ಲಿ ಕಾರ್ಯನಿರ್ವಹಿಸುವಲ್ಲಿ ಸಮರ್ಥರಾಗಿರುವಂತೆ ಇವರಿಗೆ ಟ್ರೈನಿಂಗ್‌ ಕೊಡಲಾಗಿದೆ. ಸಂಚಾರ ದಟ್ಟಣೆ ನಿರ್ವಹಣೆಯ ಕಾರ್ಯವನ್ನೂ ಈ ವನಿತೆಯರು ಮಾಡಲಿದ್ದಾರೆ.

ದೈಹಿಕ ಕ್ಷಮತೆಯ ತರಬೇತಿ ಅಲ್ಲದೆ, ಶಸ್ತ್ರಾಸ್ತ್ರ ಬಳಕೆಯ ತರಬೇತಿ, ಸಮರಾಭ್ಯಾಸ, ಈಜು, ಚಾಲನಾ ತರಬೇತಿಯನ್ನೂ ನೀಡಲಾಗುತ್ತದೆ. ಅತ್ಯಾಚಾರ, ಆತ್ಮಹತ್ಯೆ, ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳ ತನಿಖೆ ನಡೆಸುವ, ನಿಯಂತ್ರಣ ಕೊಠಡಿ ನಿರ್ವಹಿಸುವ, ತುರ್ತು ಸಂದರ್ಭದಲ್ಲಿ ಸರ್ಕಾರಿ ಸಂಸ್ಥೆಗಳ ನೆರವು ನೀಡುವ, ವಿಶಾಖ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವ ಕುರಿತೂ ಈ ಯುವತಿಯರು ತರಬೇತಿ ಪಡೆದಿದ್ದಾರೆ.

ತಂಡದಲ್ಲಿರುವ ಎಂಟು ಕನ್ನಡತಿಯರ ಪೈಕಿ, ಏಳು ಜನ ಬೆಳಗಾವಿ ಜಿಲ್ಲೆಯರಾಗಿದ್ದರೆ, ಒಬ್ಬರು ಧಾರವಾಡ ಜಿಲ್ಲೆಯವರು. ಅಪ್ಪ–ಅಮ್ಮನ ಆಸೆ ಈಡೇರಿಸಲು ಕೆಲವು ಈ ಕ್ಷೇತ್ರಕ್ಕೆ ಬಂದಿದ್ದರೆ, ದೇಶ ಸೇವೆಯ ಮಹೋನ್ನತ ಉದ್ದೇಶ ಇಟ್ಟುಕೊಂಡು ಬಂದವರು ಅನೇಕ.

ಊರಿನವರ ಖುಷಿ ಕಂಡು ಹೆಮ್ಮೆ

‘ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಕಾಮಸಿನಕೊಪ್ಪ ನಮ್ಮೂರು. ಆ ಊರಿನಲ್ಲಿ ಹೈಸ್ಕೂಲ್ ಇರಲಿಲ್ಲ. 3 ಕಿ.ಮೀ. ದೂರ ಹೋಗಬೇಕಾಗಿತ್ತು. ಎಸ್ಸೆಸ್ಸೆಲ್ಸಿಯಲ್ಲಿ ಶೇ 98 ಅಂಕ ತೆಗೆದುಕೊಂಡು ಉತ್ತೀರ್ಣಳಾದೆ. ಚಿಕ್ಕಪ್ಪ ಆರ್ಮಿಯಲ್ಲಿದ್ದುದರಿಂದ ನನಗೂ ಸೇನೆ ಸೇರಬೇಕೆನಿಸಿತು. ಭಾರತೀಯ ಸೇನೆಯಲ್ಲಿಯೇ ನಮ್ಮದು ಮೊದಲ ಬ್ಯಾಚ್‌ ಎಂಬುದನ್ನು ಕೇಳಿದಾಗ ಹೆಮ್ಮೆ ಎನಿಸುತ್ತೆ. ನಿನ್ನಿಂದ ನಮ್ಮೂರಿಗೆ ಹೆಸರು ಬಂತು ಎಂದು ಊರಿನವರು ಹೇಳಿದಾಗ ಖುಷಿಯಾಗುತ್ತದೆ. ಈಗ ಬಿಎಸ್‌ಸಿ ನರ್ಸಿಂಗ್‌ ಓದುತ್ತಿದ್ದೇನೆ. ತರಬೇತಿ ಮುಗಿದ ನಂತರ ಯಾವುದೇ ಸ್ಥಳದಲ್ಲಿ ನಿಯೋಜಿಸಿದರೂ ಕೆಲಸ ಮಾಡಲು ಸಿದ್ಧಳಿದ್ದೇನೆ’ ಎಂದು ಜ್ಯೋತಿ ಬಸಪ್ಪ ಚವಳಗಿ ಹೇಳುತ್ತಾರೆ.

ಸೈನ್ಯ ಸೇರಲು ತಂದೆಯೇ ಪ್ರೇರಣೆ

‘ನಮ್ಮದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ. ತಂದೆ ಸೈನ್ಯದಲ್ಲೇ ಇದ್ದರು. ಮಿಲಿಟರಿ ಸೇರಲು ಅವರೇ ನನಗೆ ಪ್ರೇರಣೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 89ರಷ್ಟು ಅಂಕ ತೆಗೆದಿದ್ದೆ. ಎನ್‌ಸಿಸಿಗೂ ಸೇರಿದ್ದೆ. ಇಲ್ಲಿ ದೈಹಿಕ ಮತ್ತು ಲಿಖಿತ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರಿಂದ ಆಯ್ಕೆಯಾಗಿದ್ದೇನೆ. ದೇಶದ ಯಾವುದೇ ಸ್ಥಳದಲ್ಲಿ ನಿಯೋಜಿಸಿದರೂ ಕೆಲಸ ಮಾಡಲು ಸಿದ್ಧಳಿದ್ದೇನೆ. ತನಿಖಾ ವಿಭಾಗದಲ್ಲಿ ಕೆಲಸ ಮಾಡಲು ಹೆಚ್ಚು ಇಷ್ಟ’ ಎಂಬುದು ಜ್ಯೋತಿ ಎಂ. ಹಂಚಿನಮನಿ ಅವರ ಮಾತು.

ರೈತನ ಮಗಳ ಸಾಹಸ ಯಾನ

‘ಬೆಳಗಾವಿಯ ಕಾಗವಾಡ ನಮ್ಮೂರು. ಈಗ ಬಿ.ಕಾಂ. ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 94 ಅಂಕ ತೆಗೆದಿದ್ದೇನೆ. ಎನ್‌ಸಿಸಿ ತರಬೇತಿ ಪಡೆದಿದ್ದರಿಂದ ಇಲ್ಲಿ ಸುಲಭವಾಯಿತು. ಅಪ್ಪ ರೈತ. ಈ ಕೆಲಸಕ್ಕೆ ಬಂದಿರುವುದು ಅವರಿಗೆ ಹೆಮ್ಮೆ ತಂದಿದೆ. ಪುರುಷರಂತೆ ತಲೆಗೂದಲು ಕತ್ತರಿಸಿಕೊಂಡು ನಮ್ಮೂರಿಗೆ ಹೋದಾಗ ನಾಚಿಕೆಯಾಗುತ್ತಿತ್ತು. ಆದರೆ, ನಮ್ಮ ಹಳ್ಳಿ ಜನ ನನ್ನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಖುಷಿಯಿಂದ ಸ್ವಾಗತಿಸಿದರು’ ಎಂದು ಸಂತಸದಿಂದ ಹೇಳಿದರು ಆರತಿ ತಳವಾರ.

ಅಗಾಧ ನಿರೀಕ್ಷೆಯೊಂದಿಗೆ, ಅಪರಿಮಿತ ಹೆಮ್ಮೆಯೊಂದಿಗೆ ‘ಜೈ ಹಿಂದ್’ ಹೇಳುತ್ತಾ ಮುನ್ನುಗ್ಗುತ್ತಿರುವ ಈ ಯುವತಿಯರು, ಸೇನೆಯಲ್ಲಿ ಮಹಿಳಾ ಯೋಧರ ಪ್ರವೇಶಕ್ಕೆ ಮುನ್ನುಡಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT