ಗುರುವಾರ , ಮಾರ್ಚ್ 23, 2023
23 °C

2 ಅಡಿ 1.6 ಇಂಚು ಉದ್ದದ ಅಫ್ಶಿನ್‌ ಈಗ ಜಗತ್ತಿನ ಅತೀ ಕುಳ್ಳಗಿನ ವ್ಯಕ್ತಿ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ದುಬೈ: 65.24 ಸೆಂ (2 ಅಡಿ 1.6 ಇಂಚು) ಉದ್ದದ ಅಫ್ಶಿನ್ ಎಸ್ಮೈಲ್ ಘದರ್ಜಾಡೆಹ್ ಅವರು ಸದ್ಯ ವಿಶ್ಯದಲ್ಲೇ ಅತ್ಯಂತ ಕುಳ್ಳಗಿರುವ ವ್ಯಕ್ತಿ ಎನಿಸಿಕೊಂಡಿದ್ದಾರೆ. 20 ವರ್ಷ ಪ್ರಾಯದ ಅಫ್ಶಿನ್‌ ಇರಾನ್‌ನವರು.

ಈ ಹಿಂದೆ ಅತ್ಯಂತ ಕುಳ್ಳಗಿನ ವ್ಯಕ್ತಿ ಎನಿಸಿಕೊಂಡಿದ್ದ, 36 ವರ್ಷದ ಎಡ್ವರ್ಡ್ ನಿನೊ ಹೆರ್ನಾಂಡೆಜ್‌ಗಿಂತ ಅಫ್ಶಿನ್‌ ಅವರು ಸುಮಾರು 7 ಸೆಂ.ಮೀ (2.7 ಇಂಚು) ಕುಳ್ಳಗಿದ್ದಾರೆ.

‘ನಾವು ಪತ್ತೆ ಹಚ್ಚಿದ ನಾಲ್ಕನೇ ಕುಳ್ಳಗಿನ ವ್ಯಕ್ತಿ ಅಫ್ಶಿನ್‌. ಸಂಸ್ಥೆಯ ದುಬೈ ಕಚೇರಿಗೆ ಅಫ್ಶಿನ್‌ರನ್ನು ಕರೆಸಿಕೊಂಡು, 24 ಗಂಟೆಗಳ ಅವಧಿಯಲ್ಲಿ ಮೂರು ಬಾರಿ ಅವರನ್ನು ಅಳತೆ ಮಾಡಲಾಯಿತು. ಈ ಮೂಲಕ ಅವರ ನಿಖರ ಎತ್ತರವನ್ನು ಖಚಿತಪಡಿಸಿಕೊಳ್ಳಲಾಯಿತು’ ಎಂದು ಗಿನ್ನಿಸ್‌ ವಿಶ್ವ ದಾಖಲೆ ಸಂಸ್ಥೆ ಹೇಳಿದೆ.

ಅಫ್ಶಿನ್ 2002ರ ಜುಲೈ 13ರಂದು ಜನಿಸಿದ್ದರು. ಆಗ ಅವರು 700 ಗ್ರಾಂ ತೂಕ ಹೊಂದಿದ್ದರು. ಈಗ ಅವರು ಸುಮಾರು 6.5 ಕೆಜಿಯಷ್ಟಿದ್ದಾರೆ.

ಇರಾನ್‌ನ ಪಶ್ಚಿಮ ಅಜರ್‌ಬೈಜಾನ್ ಪ್ರಾಂತ್ಯದ ಬುಕಾನ್ ಪ್ರದೇಶದಲ್ಲಿರುವ ಹಳ್ಳಿಯೊಂದರಲ್ಲಿ ಅಫ್ಶಿನ್ ಅವರು ತಂದೆ ತಾಯಿಯೊಂದಿಗೆ ನೆಲೆಸಿದ್ದಾರೆ. ಅವರು ಕುರ್ದಿಷ್ ಮತ್ತು ಪರ್ಷಿಯನ್ ಎರಡನ್ನೂ ಮಾತನಾಡಬಲ್ಲರು.

‘ಕುಳ್ಳಗಿರುವ ಕಾರಣದಿಂದಾಗಿ ಅಫ್ಶಿನ್‌ ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ. ಆತ ಸಾಕ್ಷರನೂ ಅಲ್ಲ. ಆದಾಗ್ಯೂ, ಆತ ಇತ್ತೀಚೆಗೆ ತನ್ನು ಹೆಸರನ್ನು ಬರೆಯಲು ಕಲಿತಿದ್ದಾನೆ ಎಂದು ಮಗನ ಕುರಿತು ಸಂತೋಷಪಡುತ್ತಾರೆ ಅವರ ತಂದೆ ಎಸ್ಮೈಲ್ ಘದರ್ಜಾಡೆಹ್.

‘ನಿರಂತರ ಚಿಕಿತ್ಸೆ ಮತ್ತು ದೈಹಿಕ ದೌರ್ಬಲ್ಯದ ಕಾರಣದಿಂದಾಗಿ ಆತನಿಗೆ ಶಿಕ್ಷಣ ದೊರೆಯಲಿಲ್ಲ. ಇದನ್ನು ಹೊರತುಪಡಿಸಿ ಅಫ್ಶಿನ್‌ಗೆ ಯಾವುದ ಮಾನಸಿಕ ಸಮಸ್ಯೆಗಳಿಲ್ಲ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು