ಗುರುವಾರ , ಜೂನ್ 24, 2021
23 °C

ಕೋವಿಡ್‌: ಭಾರತಕ್ಕೆ ಹೆಚ್ಚಿನ ನೆರವು, ಬೈಡನ್‌ಗೆ 57 ಸಂಸದರಿಂದ ಪತ್ರ

ಪಿಟಿಐ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌–ಪ್ರಾತಿನಿಧಿಕ ಚಿತ್ರ

ವಾಷಿಂಗ್ಟನ್: ಕೋವಿಡ್‌–19ರ ವಿರುದ್ಧ ಹೋರಾಡಲು ಭಾರತಕ್ಕೆ ಹೆಚ್ಚಿನ ನೆರವು ಒದಗಿಸುವಂತೆ ಒತ್ತಾಯಿಸಿ ಅಮೆರಿಕದ 57 ಸಂಸದರು ಅಧ್ಯಕ್ಷ ಜೋ ಬೈಡನ್ ಅವರಿಗೆ ಪತ್ರ ಬರೆದಿದ್ದಾರೆ.

‘ಭಾರತದಲ್ಲಿ ಕೋವಿಡ್‌–19ರ ಪ್ರಕರಣಗಳ ಹೆಚ್ಚಳವು, ಅಲ್ಲಿನ ಆರೋಗ್ಯ ವ್ಯವಸ್ಥೆಯನ್ನು ಮುಳುಗಿಸಿದೆ. ವೈರಸ್‌ ಹರಡುತ್ತಿರುವ ಎಲ್ಲೆಡೆಯೂ ಅದನ್ನು ತಣಿಸಲು ನಾವು ಅಗತ್ಯ ನೆರವು ನೀಡಬೇಕು’ ಎಂದು ಸಂಸದರು ಬುಧವಾರ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಕೋವಿಡ್‌ ಎರಡನೇ ಅಲೆಯು ಭಾರತಕ್ಕೆ ಮಾರಕವಾಗಿ ಪರಿಣಮಿಸಿದೆ. ಇದೀಗ ಭಾರತವು ಕೋವಿಡ್‌–19ರ ಸಾಂಕ್ರಾಮಿಕ ರೋಗದ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ. ಇಲ್ಲಿಯವರೆಗೆ 2.50 ಲಕ್ಷಕ್ಕೂ ಹೆಚ್ಚು ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ಸಂಸದ ಬ್ರಾಡ್‌ ಶೆರ್ಮನ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಭಾರತದಲ್ಲಿ ಸೋಂಕಿನಿಂದ ಎದುರಾಗಿರುವ ಮಾನವೀಯ ಬಿಕ್ಕಟ್ಟಿನ ಶಮನಕ್ಕೆ ಅಮೆರಿಕದ ನೆರವಿನ ಅಗತ್ಯವಿದೆ. ಒಂದು ವೇಳೆ ಭಾರತದಲ್ಲಿ ಹೀಗೇ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಾ ಹೋದರೆ, ಹೆಚ್ಚುವರಿ ರೂಪಾಂತರಿಕ ವೈರಸ್‌ಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಅದು ಈಗಾಗಲೇ ಲಸಿಕೆ ಪಡೆದಿರುವ ಅಮೆರಿಕಕ್ಕೂ ಗಂಭೀರ ಅಪಾಯ ತರಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಈ ಬಿಕ್ಕಟ್ಟಿನಿಂದ ಹೊರಬರಲು ಭಾರತಕ್ಕೆ ಹೆಚ್ಚುವರಿ ವೈದ್ಯಕೀಯ ಉಪಕರಣಗಳು, ಇತರ ಪ್ರಮುಖ ಸಂಪನ್ಮೂಲಗಳನ್ನು ಪೂರೈಸಬೇಕಾದ ಅವಶ್ಯಕತೆಯಿದೆ ಎಂದು ಸಂಸದರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಆಮ್ಲಜನಕ ಸಿಲಿಂಡರ್‌ಗಳು, ಆಮ್ಲಜನಕ ಸಾಂದ್ರಕಗಳು, ಆಮ್ಲಜನಕ ಉತ್ಪಾದಕ ಘಟಕಗಳು, ಕ್ರಯೋಜೆನಿಕ್ ಆಮ್ಲಜನಕ ಟ್ಯಾಂಕರ್, ರೆಮ್‌ಡಿಸಿವಿರ್, ಟೊಸಿಲಿಜುಮಾಬ್ ಮತ್ತು ವೆಂಟಿಲೇಟರ್‌ಗಳನ್ನು ಭಾರತಕ್ಕೆ ಒದಗಿಸುವಂತೆ ಅವರು ಅಧ್ಯಕ್ಷರನ್ನು ಕೋರಿದ್ದಾರೆ.

ಭಾರತದಲ್ಲಿ ಪ್ರತಿಯೊಬ್ಬರೂ ಲಸಿಕೆ ಪಡೆಯುವಂತಾಗಬೇಕು. ಇದು ಅಮೆರಿಕದ ಹಿತದೃಷ್ಟಿಯಿಂದಲೂ ಒಳ್ಳೆಯದು. ಹಾಗಾಗಿ ಸಾಧ್ಯವಾದಷ್ಟು ಲಸಿಕೆಗಳನ್ನು ಭಾರತಕ್ಕೆ ನೀಡಲು ಕಾರ್ಯೋನ್ಮುಖರಾಗುತ್ತೀರಿ ಎಂದು ಭಾವಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಭಾರತಕ್ಕೆ ಹೆಚ್ಚಿನ ಲಸಿಕೆ ತಯಾರಿಸಲು ಪೂರಕವಾಗಿ ಕಚ್ಚಾ ವಸ್ತುಗಳು ದೊರೆಯುವಂತೆ ಮಾಡಲು ಇತ್ತೀಚೆಗೆ ಘೋಷಿಸಿದ ಯೋಜನೆಗಳನ್ನು ನಾವು ಸ್ವಾಗತಿಸುತ್ತೇವೆ ಎಂದಿರುವ ಸಂಸದರು, ಹೆಚ್ಚುವರಿ ಅಸ್ಟ್ರಾಜೆನೆಕಾ ಲಸಿಕೆಯನ್ನು ಭಾರತಕ್ಕೆ ಹಂಚಬೇಕು ಎಂದು ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು